Menu
12

ಮದುವೆ ನಿರಾಕರಿಸಿದ ಪ್ರಿಯಕರ: ಪ್ರೇಯಸಿ ಆತ್ಮಹತ್ಯೆ, ನೊಂದ ತಾಯಿ ಕೂಡ ಆತ್ಮಹತ್ಯೆ!

mandya

ಮದುವೆಯಾಗಲು ಪ್ರಿಯಕರ ನಿರಾಕರಿಸಿದ್ದರಿಂದ ನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡರೆ, ಮಗಳ ಸಾವಿನ ದುಃಖ ಭರಿಸಲಾಗದೆ 20 ದಿನದ ಬಳಿಕ ತಾಯಿಯೂ ನೇಣಿಗೆ ಶರಣಾಗಿರುವ ದಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.

ಹೆಬ್ಬಕವಾಡಿ ಗ್ರಾಮದ ವಿಜಯಲಕ್ಷ್ಮಿ (21) ಹಾಗೂ ತಾಯಿ ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.

ಕೆಲವು ವರ್ಷಗಳಿಂದ ಮಾರಸಿಂಗನಹಳ್ಳಿಯ ಹರಿಕೃಷ್ಣ ಹಾಗೂ ವಿಜಯಲಕ್ಷ್ಮಿ ಪ್ರೀತಿಸುತ್ತಿದ್ದರು. ಪ್ರೀತಿಸುವ ನೆಪದಲ್ಲಿ ಕಳೆದ ಒಂದೂವರೆ ವರ್ಷದಿಂದ ಇಬ್ಬರ ನಡುವೆ ದೈಹಿಕ ಸಂಪರ್ಕ ಬೆಳೆದಿತ್ತು. ಆದರೆ ಇತ್ತೀಚಿಗೆ ಬೇರೆ ಹುಡುಗಿಯರ ಜೊತೆ ಹರಿಕೃಷ್ಣ ಓಡಾಡಲು ಶುರುಮಾಡಿದ್ದ.

ಈ ಬಗ್ಗೆ ಪ್ರಶ್ನಿಸಿದ್ದ ಯುವತಿ, ಮದುವೆ ಮಾಡಿಕೊಳ್ಳುವಂತೆ ಪಟ್ಟು ಹಿಡಿದಿದ್ದಳು. ಆಗ ಮದುವೆಗೆ ನಿರಾಕರಿಸಿ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಸಿದ್ದ. ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದು ವಿಜಯಲಕ್ಷ್ಮಿ ಕಳೆದ 20 ದಿನಗಳ ಹಿಂದೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಳು.

ಮಗಳ ಸಾವಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ತಂದೆ ನಂಜುಂಡೇಗೌಡ ಮಂಡ್ಯ ಗ್ರಾಮಾಂತರ ಠಾಣೆಗೆ ತೆರಳಿದ್ದರು. ಈ ವೇಳೆ ದೂರು ಕೊಟ್ಟು ನ್ಯಾಯ ಕೋರಲು ಹೋಗಿದ್ದವರ ಮೇಲೆಯೇ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಇತ್ತ ಮಗಳ ಸಾವಿಗೆ ನ್ಯಾಯವೂ ಇಲ್ಲ, ನಮಗೆ ನೆಮ್ಮದಿಯೂ ಇಲ್ಲ ಎಂದು ನೊಂದ ತಾಯಿ ಲಕ್ಷ್ಮಿ ಗುರುವಾರ ಸಂಜೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತದೇಹವನ್ನು ಸಾಗಿಸಲು ಬಿಡದೇ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರ ವಿರುದ್ಧ ಘೋಷಣೆ ಕೂಗಿ ಕಿಡಿಕಾರಿದ್ದಾರೆ. ಆರೋಪಿಯನ್ನು ಬಂಧಿಸುವಂತೆ ಪಟ್ಟು ಹಿಡಿದಿದ್ದು, ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published. Required fields are marked *