ಉತ್ತರ ಕರ್ನಾಟಕದ ಖ್ಯಾತ ಯುಟ್ಯೂಬರ್ ಮುಕಳೆಪ್ಪ ಅಲಿಯಾಸ್ ಕ್ವಾಜಾ ಶಿರಹಟ್ಟಿ ವಿರುದ್ಧ ಲವ್ ಜಿಹಾದ್ ಪ್ರಕರಣ ಒಂದಿಲ್ಲೊಂದು ಕಾರಣಕ್ಕೆ ಚರ್ಚೆಯಲ್ಲಿದೆ. ಇದೀಗ ಮುಕಳೆಪ್ಪ ಪತ್ನಿ ಗಾಯಿತ್ರಿ ಜಾಲಿಹಾಳ್ ತಾಯಿ ಶಿವಕ್ಕ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ನನ್ನ ಮಗಳನ್ನು ಮೋಸದಿಂದ ಮುಸ್ಲಿಂ ಧರ್ಮಕ್ಕೆ ಮಾತಾಂತರಿಸಲಾಗಿದೆ ಎಂದು ದೂರಿದ್ದಾರೆ.
ಮುಕಳೆಪ್ಪ ಮೋಸ ಮಾಡಿ ನನ್ನ ಮಗಳನ್ನು ಮದುವೆ ಆಗಿದ್ದಾನೆ. ಆತನ ಮೇಲೆ ನಮಗೆ ನಂಬಿಕೆ ಇಲ್ಲ. ಗಾಯತ್ರಿಯನ್ನು ಮತಾಂತರ ಮಾಡಲ್ಲ ಎಂದು ಮುಕಳೆಪ್ಪ ಹೇಳುತ್ತಾನೆ. ಆದರೆ, ನನ್ನ ಮಗಳ ಕೊರಳಲ್ಲಿ ತಾಳಿ ಇಲ್ಲ, ಹಣೆಯಲ್ಲಿ ಕುಂಕುಮವಿಲ್ಲ. ಕೈಯಲ್ಲಿ ಉರ್ದುವಿನಲ್ಲಿ ಖ್ವಾಜಾನ ಹೆಸರು ಬರೆದುಕೊಂಡಿದ್ದಾಳೆ. ಕೇಳಿದರೆ ತಾಳಿ ಮನೆಯಲ್ಲಿದೆ ಎಂದು ಹೇಳುತ್ತಾಳೆ. ನಮ್ಮ ಹಿಂದೂ ಧರ್ಮದಲ್ಲಿ ಇದಕ್ಕೆ ಅವಕಾಶವಿಲ್ಲ. ನನ್ನ ಮಗಳ ಮೇಲೆ ಪ್ರೀತಿ ಇದ್ದರೆ ಆತನೇ ನಮ್ಮ ಧರ್ಮಕ್ಕೆ ಬಂದು ಬಿಡಲಿ. ನಾವು ಇಬ್ಬರನ್ನೂ ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಖ್ವಾಜಾನ ಬಳಿ ನಮ್ಮ ಮಗಳು ಚೆನ್ನಾಗಿ ಇರಲು ಸಾದ್ಯವಿಲ್ಲ. ಆತ ಮುಂದೊಂದು ದಿನ ನಮ್ಮ ಮಗಳನ್ನು ತಂಡು ಮಾಡಿ ಫ್ರಿಡ್ಜ್ನಲ್ಲಿ ಇಡುತ್ತಾನೆ ಎಂದು ಶಿವಕ್ಕ ಕಣ್ಣೀರು ಹಾಕಿದರು.
ಯೂಟ್ಯೂಬರ್ ಮುಕಳೆಪ್ಪ ದಂಪತಿ ತಮ್ಮ ಪ್ರೇಮ ವಿವಾಹದ ಕುರಿತು ರಿಯಾಕ್ಷನ್ ನೀಡಿದ್ದು ‘ಲವ್ ಜಿಹಾದ್’ ಆರೋಪವನ್ನು ತಳ್ಳಿಹಾಕಿದ್ದಾರೆ.
‘ನನ್ನ ಮದುವೆಯನ್ನು ಕೆಲವರು ‘ಲವ್ ಜಿಹಾದ್’ ಎಂದು ಬಿಂಬಿಸುತ್ತಿದ್ದಾರೆ. ಆದರೆ ಇದು ಸಂಪೂರ್ಣ ಸುಳ್ಳು. ನಾವು ಇಬ್ಬರೂ ಪರಸ್ಪರ ಇಷ್ಟಪಟ್ಟು 3 ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದೇವೆ’ ಎಂದು ಹೇಳಿದ್ದಾರೆ. ಅಲ್ಲದೆ, ನಾವಿಬ್ಬರೂ ನಮ್ಮ ನಮ್ಮ ಧರ್ಮವನ್ನು ಪಾಲಿಸುತ್ತೇವೆ. ನಾನು ಹುಟ್ಟಿದ ಧರ್ಮದಲ್ಲೇ ಇರುತ್ತೇನೆ, ನನ್ನ ಪತ್ನಿ ಹುಟ್ಟಿದ ಧರ್ಮದಲ್ಲೇ ಇರುತ್ತಾಳೆ. ನಾವು ಯಾರೂ ಮತಾಂತರಗೊಂಡಿಲ್ಲ ಎಂದು ಮುಕಳೆಪ್ಪ ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದಾರೆ.
‘ನಾನು ಯಾವಾಗಲೂ ಹಿಂದೂ ಆಗಿಯೇ ಇದ್ದೇನೆ. ನನ್ನ ಗಂಡ ಮುಕಳೆಪ್ಪ ನನ್ನನ್ನು ಬಲವಂತವಾಗಿ ಮತಾಂತರ ಮಾಡಿಸುತ್ತಿದ್ದಾರೆ ಎಂಬ ಸುದ್ದಿ ಸಂಪೂರ್ಣ ಸುಳ್ಳು, ಇದನ್ನು ಯಾರೂ ನಂಬಬೇಡಿ. ದಯವಿಟ್ಟು ನಮ್ಮಿಬ್ಬರನ್ನು ಬದುಕಲು ಬಿಡಿ’ ಎಂದು ಮುಕಳೆಪ್ಪ ಪತ್ನಿ ಗಾಯತ್ರಿ ಮನವಿ ಮಾಡಿಕೊಂಡಿದ್ದಾರೆ.