ಬೆಂಗಳೂರು ನಗರದ ಕುರುಬರಹಳ್ಳಿ ಪ್ರದೇಶದಲ್ಲಿ ತಡರಾತ್ರಿ ನಿಯಂತ್ರಣ ತಪ್ಪಿದ ಲಾರಿಯೊಂದು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನಗೊಂಡಿದ್ದಾರೆ.
ಆಂಧ್ರ ಪ್ರದೇಶದಿಂದ ಸುಂಕದಕಟ್ಟೆ ಕಡೆಗೆ ಕಬ್ಬಿಣ ತುಂಬಿಕೊಂಡು ಬರುತ್ತಿದ್ದ ಲಾರಿ, ಗೂಗಲ್ ಮ್ಯಾಪ್ ಅನುಸರಿಸಿ ಕುರುಬರಹಳ್ಳಿ ಮಾರ್ಗವಾಗಿ ಸಂಚರಿಸುತ್ತಿತ್ತು, ಈ ಮಾರ್ಗದಲ್ಲಿ ಇಳಿಜಾರು ರಸ್ತೆ ಇದ್ದ ಕಾರಣ ಓವರ್ಲೋಡ್ ಆಗಿದ್ದ ಲಾರಿ ನಿಯಂತ್ರಣ ತಪ್ಪಿದೆ ಅನಾಹುತ ಸಂಭವಿಸಿದೆ.
ಇಳಿಜಾರಿನಲ್ಲಿ ಲೋಡ್ ತುಂಬಿದ ಲಾರಿ ನಿಯಂತ್ರಣ ತಪ್ಪಿ ಮನೆ ಮುಂದೆ ನಿಲ್ಲಿಸಲಾಗಿದ್ದ ಕಾರಿಗೆ ಡಿಕ್ಕಿ ಹೊಡೆದು ಕಾರನ್ನು 50ರಿಂದ 100 ಮೀಟರ್ ದೂರವರೆಗೆ ಎಳೆದೊಯ್ದಿದೆ. ಕಾರು ಸಮೀಪದಲ್ಲಿದ್ದ ಸ್ಕ್ರಾಪ್ ಗೋಡೌನ್ಗೆ ನುಗ್ಗಿದ್ದು, ಡಿಕ್ಕಿಯಿಂದ ಉಂಟಾದ ಕಿಡಿಯಿಂದ ಕಾರು ಹಾಗೂ ಸ್ಕ್ರಾಪ್ ಸಾಮಗ್ರಿಗಳಿಗೆ ಬೆಂಕಿ ಹೊತ್ತಿಕೊಂಡು ಕಾರು ಮತ್ತು ಲಾರಿ ಹೊತ್ತಿ ಉರಿದಿವೆ.
ಕಾರಿನೊಳಗೆ ಮಲಗಿದ್ದ ಕಲಬುರಗಿ ಮೂಲದ ಅಂಬದಾಸ್ (23) ಎಂಬ ಯುವಕ ಬೆಂಕಿಯಲ್ಲಿ ಕರಕಲಾಗಿ ಹೋಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಹೊರತೆಗೆದಿದ್ದಾರೆ. ಲಾರಿ ಚಾಲಕ ಶರ್ಮಾ ಅಪಘಾತ ಸಂಭವಿಸುತ್ತಿದ್ದಂತೆಯೇ ಲಾರಿಯಿಂದ ಜಿಗಿದು ರಾಜಾಕಾಲುವೆಗೆ ಹಾರಿ ಜೀವ ಉಳಿಸಿಕೊಂಡಿದ್ದಾನೆ. ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜಾಜಿನಗರ ಸಂಚಾರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮೃತ ಅಂಬದಾಸ್ ಕುರುಬರಹಳ್ಳಿಯಲ್ಲೇ ಕುಟುಂಬ ಸಮೇತ ವಾಸವಾಗಿದ್ದು, ಮೊದಲು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಬಳಿಕ ಸ್ವಂತವಾಗಿ ಕ್ಯಾಬ್ ಖರೀದಿಸಿ ಡ್ರೈವಿಂಗ್ ವೃತ್ತಿ ಮಾಡುತ್ತಿದ್ದರು. ಲೋನ್ ಪಡೆದು ಕಾರು ಖರೀದಿಸಿದ್ದರಿಂದ ಪ್ರತಿ ತಿಂಗಳು ₹25 ಸಾವಿರ ಇಎಮ್ಐ ಕಟ್ಟಬೇಕಾಗಿತ್ತು.
ರಾತ್ರಿ ಕೂಡ ಒಂದು ಡ್ಯೂಟಿ ಮುಗಿಸಿ ಮತ್ತೊಂದು ಡ್ಯೂಟಿಗಾಗಿ ಕಾಯುತ್ತಾ ಕಾರಿನಲ್ಲೇ ಮಲಗಿದ್ದಾಗ ಈ ದುರಂತ ನಡೆದುಹೋಗಿದೆ. ಮನೆಯ ಬಳಿಯೇ ಕಾರು ನಿಲ್ಲಿಸಿಕೊಂಡು ಏರ್ಪೋರ್ಟ್ ಡ್ಯೂಟಿ ಬರಬಹುದು ಎಂಬ ನಿರೀಕ್ಷೆಯಲ್ಲಿ ಕಾರಿನಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಸ್ಥಳಕ್ಕೆ ಮಹಾಲಕ್ಷ್ಮೀ ಲೇಔಟ್ ಶಾಸಕ ಗೋಪಾಲಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿಷೇಧಿತ ಮಾರ್ಗಗಳಲ್ಲಿ ಓವರ್ಲೋಡ್ ವಾಹನಗಳ ಸಂಚಾರದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಸ್ಥಳೀಯರಿಂದ ಕೇಳಿಬರುತ್ತಿದೆ.


