ಲಾರ್ಡ್ಸ್: ಮಧ್ಯಮ ಕ್ರಮಾಂಕದಲ್ಲಿ ಜೋ ರೂಟ್ ಸಿಡಿಸಿದ ಶತಕದ ಹೊರತಾಗಿಯೂ ಭಾರತದ ಮಧ್ಯಮ ವೇಗಿ ಜಸ್ ಪ್ರೀತ್ ಬುಮ್ರಾ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಬೃಹತ್ ಮೊತ್ತ ದಾಖಲಿಸುವ ಅವಕಾಶ ಕಳೆದುಕೊಂಡಿದೆ.
ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶುಕ್ರವಾರ 4 ವಿಕೆಟ್ ಗೆ 251 ರನ್ ಗಳಿಂದ ಆಟ ಮುಂದುವರಿಸಿದ ಇಂಗ್ಲೆಂಡ್ ಚಹಾ ವಿರಾಮಕ್ಕೂ ಮೊದಲೇ ಮೊದಲ ಇನಿಂಗ್ಸ್ ನಲ್ಲಿ 387 ರನ್ ಗೆ ಪತನಗೊಂಡಿದೆ.
ಮೊದಲ ದಿನ 99 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದ ಜೋ ರೂಟ್ ಶತಕ ಪೂರೈಸಿದರು. ಆದರೆ ಅದರ ಬೆನ್ನಲ್ಲೇ ಬುಮ್ರಾ ಎಸೆತದಲ್ಲಿ ಬೌಲ್ಡ್ ಆಗಿ ನಿರಾಸೆ ಮೂಡಿಸಿದರು. ರೂಟ್ ಔಟಾಗುವ ಮುನ್ನ 199 ಎಸೆತಗಳಲ್ಲಿ 10 ಬೌಂಡರಿ ಸಹಾಯದಿಂದ 104 ರನ್ ಬಾರಿಸಿದರು.
ರೂಟ್ ಗೆ ಇದು ಲಾರ್ಡ್ಸ್ ಮೈದಾನದಲ್ಲಿ 8ನೇ ಶತಕವಾಗಿದ್ದರೆ, ಭಾರತ ವಿರುದ್ಧ 11ನೇ ಶತಕ ಸಿಡಿಸಿದರು. ಈ ಮೂಲಕ ಭಾರತ ವಿರುದ್ಧ ಅತೀ ಹೆಚ್ಚು ಶತಕ ಸಿಡಿಸಿದ ಆಸ್ಟ್ರೇಲಿಯಾದ ಸ್ಟಿವನ್ ಸ್ಮಿತ್ ದಾಖಲೆಯನ್ನು ಸರಿಗಟ್ಟಿದರು.
34 ವರ್ಷದ ರೂಟ್ ಗೆ ಇದು 37ನೇ ಶತಕವಾಗಿದೆ. ಟೆಸ್ಟ್ ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ 4ನೇ ಬ್ಯಾಟರ್ ಆಗಿದ್ದಾರೆ. ಇದಕ್ಕೂ ಮುನ್ನ ಸಚಿನ್ (51), ರಿಕಿ ಪಾಂಟಿಂಗ್ (41), ಸಂಗಕ್ಕಾರ (38) ನಂತರ ರೂಟ್ ಸ್ಥಾನ ಗಳಿಸಿದ್ದಾರೆ. ಅಲ್ಲದೇ ಟೆಸ್ಟ್ ಕ್ರಿಕೆಟ್ ನಲ್ಲಿ ಸಚಿನ್ ತೆಂಡೂಲ್ಕರ್ ಅವರ 15,921 ರನ್ ದಾಖಲೆಯ ಮುರಿಯಲು ಮತ್ತಷ್ಟು ಸಮೀಪ ತಲುಪಿದ್ದಾರೆ.
ಮತ್ತೊಂದೆಡೆ ಪಂದ್ಯದ ಮೇಲೆ ಇಂಗ್ಲೆಂಡ್ ಹಿಡಿತ ಸಾಧಿಸುತ್ತಿದೆ ಎಂಬ ಹಂತದಲ್ಲಿ ಮಾರಕ ದಾಳಿ ನಡೆಸಿದ ಬುಮ್ರಾ 5 ವಿಕೆಟ್ ಗೊಂಚಲು ಪಡೆದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ 15ನೇ ಬಾರಿ 5 ವಿಕೆಟ್ ಗಿಂತ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದರು.
ಪಂದ್ಯ ಕೈ ಜಾರುತ್ತಿದೆ ಎಂಬ ಹಂತದಲ್ಲಿ ಜೆಮ್ಮಿ ಸ್ಮಿತ್ ಮತ್ತು ಬ್ರೈಡನ್ ಕಾರ್ಸೆ ವೈಯಕ್ತಿಕ ಅರ್ಧಶತಕಗಳನ್ನು ಸಿಡಿಸಿ ತಂಡವನ್ನು ಮತ್ತೆ ಹಳಿಗೆ ತಂದರು. ಜೆಮ್ಮಿ ಸ್ಮಿತ್ 56 ಎಸೆತಗಳಲ್ಲಿ 6 ಬೌಂಡರಿ ಸಹಾಯದಿಂದ 51 ರನ್ ಗಳಿಸಿದರೆ, ಬ್ರೈಡನ್ ಕಾರ್ಸೆ 83 ಎಸೆತಗಳಲ್ಲಿ 7 ಬೌಂಡರಿ ಸಹಾಯದಿಂದ ಅರ್ಧಶತಕ (56) ರನ್ ಸಿಡಿಸಿದರು. ಇವರಿಬ್ಬರು 8ನೇ ವಿಕೆಟ್ ಗೆ 84 ರನ್ ಜೊತೆಯಾಟ ನಿಭಾಯಿಸಿದರು.