ಲೋಕಸಭೆ ಚುನಾವಣೆಗೂ ಮುನ್ನ ಮೋದಿ ಮತ್ತು ಅಮಿತ್ ಷಾ ದಕ್ಷಿಣದಿಂದ ಬಿಜೆಪಿಯೇ ಸಿಂಗಲ್ ಪಾರ್ಟಿಯಾಗಿ ಒಟ್ಟು ೧೨೬ಕ್ಕೂ ಅಧಿಕ ಸೀಟುಗಳು ಸಂಪಾದಿಸಬೇಕೆಂದು ಇನ್ನಿಲ್ಲದ ಕಸರತ್ತು ಮಾಡಿದ್ದು ರಾಜಕೀಯ ಕಟು ಸತ್ಯ ಎಲ್ಲಿಯವರೆಗೆ ದಕ್ಷಿಣದಲ್ಲಿ ದ್ರಾವಿಡ ಪಕ್ಷಗಳ ರಾಜಕೀಯ ಬಲ ಅತಿ ಬಲಿಷ್ಠವಾಗಿರುವುದೋ ಅಲ್ಲಿಯವರೆಗೆ ಇಲ್ಲಿ ಕಮಲ ಸಂಪೂರ್ಣವಾಗಿ ಅರಳುವುದು ದುಸ್ಸಾಧ್ಯ!
ದೇಶದ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿಗೆ ದಕ್ಷಿಣ ರಾಜ್ಯಗಳ ರಾಜಕಾರಣದ್ದೇ ಚಿಂತೆ.. ! ದಿಲ್ಲಿ ರಾಜಕಾರಣಿಗಳ ಈ ಚಿಂತೆ ಇಂದು ನಿನ್ನೆಯದಲ್ಲ. ಸ್ವರಾಜ್ಯದ ಆರಂಭದ ದಿನಗಳಿಂದಲೂ ಈ ಬಗೆಯ ರಾಜಕೀಯ ಒಳಮರ್ಮ ಮತ್ತು ಮಂತ್ರಾಲೋಚನೆಯ ಹಾವು- ಏಣಿಯಾಟ ನಡೆದಿತ್ತು. ನೆಹರೂ, ಅನಂತರ ಇಂದಿರಾಗಾಂಧಿ. ತಮ್ಮ ರಾಜಕೀಯ ಚಿಂತನೆ ಮತ್ತು ಆಲೋಚನೆಗಳನ್ನು ವಿರೋಧಿಸಿದ ಕಾಮರಾಜ್, ರಾಜಾಜಿ, ಕರುಣಾನಿದಿ, ನಿಜಲಿಂಗಪ್ಪ , ಬ್ರಹ್ಮಾನಂದರೆಡ್ಡಿ, ನೀಲಂ ಸಂಜೀವರೆಡ್ಡಿ ಮೊದಲಾದವರೆಲ್ಲರನ್ನೂ ರಾಜಕೀಯವಾಗಿ ಮೂಲೆಗುಂಪು ಮಾಡಲು ಕೆಲವೊಂದು ಅಸ್ತ್ರಗಳನ್ನು ಆಗ್ಗಾಗ್ಗೆ ಬಳಸಲು ಈ ನಾಯಕರು ಲವಲೇಶವೂ ಹಿಂಜರಿಯಲಿಲ್ಲ. ಈಗ ಇದೇ ದಾರಿಯಲ್ಲಿ ಮೋದಿ ಮತ್ತು ಅಮಿತ್ ಷಾ ಸಾಗಿದ್ದಾರೆ. ಉತ್ತರ ಭಾರತದ ರಾಜಕಾರಣದ ಒಂದೊಂದು ಹೆಜ್ಜೆಯನ್ನು ನಾವಿಂದು ಸೂಕ್ಷ್ಮವಾಗಿ ಗಮನಿಸಿದಾಗ, ಇಲ್ಲಿನ ಪಾಲಕರಿಗೆ ದಕ್ಷಿಣದ ಆಧಿಪತ್ಯ ಸಾರ್ವಕಾಲಿಕ ಅಪಥ್ಯ .ಅಜೀರ್ಣ ಮತ್ತು ಅಸಹನೀಯ ! ಈ ಮಾತು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೆ ಅನ್ವಯವಾಗುವಂತಹದು.
ಎರಡೂವರೆ ವರ್ಷಗಳ ಹಿಂದೆ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಅತಿದೊಡ್ಡ ಏಟು ನೀಡಿದ್ದೇ ಆಂಧ್ರ ಪ್ರದೇಶ, ತಮಿಳುನಾಡು, ತೆಲಂಗಾಣ ಮತ್ತು ಕೇರಳ. ದೇಶದಲ್ಲಿ ನರೇಂದ್ರ ಮೋದಿ ಅಲೆ ಏನೇ ಇರಲಿ. ಕರ್ನಾಟಕ ಹೊರತುಪಡಿಸಿ ಈ ರಾಜ್ಯಗಳಲ್ಲಿ ಬಿಜೆಪಿ ತನ್ನ ಅಧಿಕ್ಯ ಸಾಧಿಸಲು ಆಗಲಿಲ್ಲ ! ಆಂಧ್ರದಲ್ಲಿ ತೆಲುಗುದೇಶಂ, ತಮಿಳುನಾಡಿನಲ್ಲಿ ಡಿಎಂಕೆ, ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು ಬಿ ಆರ್ ಎಸ್ ಮತ್ತು ಕೇರಳದಲ್ಲಿ ಎಡಪಂಥೀಯ ಮತ್ತು ಕಾಂಗ್ರೆಸ್ ಪಡೆದ ಸೀಟುಗಳಿಂದ ಬಿಜೆಪಿಯು ತನ್ನ ಆಧಿಕ್ಯ ಇಮ್ಮಡಿಗೊಳಿಸುವ ಎಲ್ಲ ಕನಸುಗಳೂ ನೀರಿನ ಗುಳ್ಳೆಯಂತೆ ಕರಗಿ ಹೋಗಿದ್ದು ನಿಜ. ಹೀಗಾಗಿ ಇಲ್ಲಿನ ರಾಜಕೀಯ ಭೂಗೋಳವನ್ನು ಬಲವಂತವಾಗಿ ಬದಲಾಯಿಸುವ ಮೂಲಕ ತನ್ನ ರಾಜಕೀಯ ಚಾಣಾಕ್ಷತೆಯನ್ನು ಮೆರೆಯಲು ಮೋದಿ ಮತ್ತು ಅಮಿತ್‌ಷಾ ಈಗ ಹೊಸ ತಂತ್ರ ರೂಪಿಸಿರುವುದು ಗಮನಾರ್ಹ.
ದೇಶದ ಮಹಿಳೆಯರಿಗೆ ಶೇ, ೫೦ ರಾಜಕೀಯವಾಗಿ ಮೀಸಲು ನೀಡುವ ತಿದ್ದುಪಡಿಯನ್ನು ಬಿಜೆಪಿ ಈಗ ಮಹಾ ಅಸ್ತ್ರವಾಗಿ ಬಳಸಲು ಮುಂದಾಗಿದೆ. ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆಗೆ ಮೋದಿ ಸರ್ಕಾರ ಈಗ ನೀಡು ಕಾರಣ ಮಹಿಳಾ ಮೀಸಲು ಹೆಚ್ಚಳ. ಆದರೆ ಇದರ ಹಿಂದಿರುವ ಬಿಜೆಪಿ ಪೊಲಿಟಿಕಲ್ ಅಜೆಂಡಾ ಬೇರೆ. ಒಟ್ಟಿನಲ್ಲಿ ಪ್ರಸಕ್ತ ಲೋಕಸಭೆಯ ಸೀಟುಗಳ ಸಂಖ್ಯೆ ೫೪೩ರಿಂದ ೮೬೬ರ ಗಡಿ ದಾಟಬೇಕು. ಬಹುಮುಖ್ಯವಾಗಿ ದಕ್ಷಿಣದಲ್ಲಿ ಲೋಕಸಭೆ ಕ್ಷೇತ್ರಗಳನ್ನು ಹೆಚ್ಚಿಸುವ ಮೂಲಕ ಲೋಕಸಭೆಯಲ್ಲಿ ಪಕ್ಷದ ಸತ್ತಾ ಸಂಖ್ಯೆಯನ್ನು ಮತ್ತು ಶಕ್ತಿಯನ್ನು ಅಧಿಕಗೊಳಿಸುವ ಏಕೈಕ ತಂತ್ರ ಎಂದರೆ ಇದು ಅತಿಶಯವಲ್ಲ. ಲೋಕಸಭೆ ಚುನಾವಣೆಗೂ ಮುನ್ನ ಮೋದಿ ಮತ್ತು ಷಾ ದಕ್ಷಿಣದಿಂದ ಬಿಜೆಪಿಯೇ ಸಿಂಗಲ್ ಪಾರ್ಟಿಯಾಗಿ ಒಟ್ಟು ೧೨೬ಕ್ಕೂ ಅಧಿಕ ಸೀಟುಗಳು ಸಂಪಾದಿಸಬೇಕೆಂದು ಇನ್ನಿಲ್ಲದ ಕಸರತ್ತು ಮಾಡಿದ್ದು ಕಟು ರಾಜಕೀಯ ಸತ್ಯ. ಎಲ್ಲಿಯವರೆಗೆ ದಕ್ಷಿಣದಲ್ಲಿ ದ್ರಾವಿಡ ಪಕ್ಷಗಳ ರಾಜಕೀಯ ಬಲ ಅತಿ ಬಲಿಷ್ಠವಾಗಿರುವುದೋ ಅಲ್ಲಿಯವರೆಗೆ ಇಲ್ಲಿ ಕಮಲ ಸಂಪೂರ್ಣವಾಗಿ ಅರಳುವುದು ದುಸ್ಸಾಧ್ಯ! ದಿಲ್ಲಿ ಕಮಲಾಧಿಪತಿಗಳ ಒಳಮರ್ಮ ದೇಶದ ಜನತೆಗೆ ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ !


