Menu

ಕಿಮ್ಸ್ ಅಧಿಕಾರಿ ಕಲ್ಲೇಶ್ ನಿವಾಸ, ಕಾಲೇಜ್ ಸೇರಿ ಆರು ಕಡೆ ಲೋಕಾಯುಕ್ತ ದಾಳಿ

ಕೊಪ್ಪಳ: ವಾಲ್ಮೀಕಿ‌ ನಿಗಮದ ಹಗರಣದಲ್ಲಿ ಸುದ್ದಿಯಾಗಿದ್ದ ಪ್ರಸ್ತುತ ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಆಡಳಿತಾಧಿಕಾರಿ ಬಿ.ಕಲ್ಲೇಶ್ ಅವರ ಮನೆ ಹಾಗೂ ಭಾಗ್ಯನಗರದ ಯತ್ನಟ್ಟಿ ರಸ್ತೆಯ ನವಚೇತನ ಪಿಯು ವಿಜ್ಞಾನ ಕಾಲೇಜು ಸೇರಿದಂತೆ ಆರು ಕಡೆ ಲೋಕಾಯುಕ್ತ ದಾಳಿ ನಡೆದಿದೆ.

ಶುಕ್ರವಾರ ಬೆಳ್ಳಂಬೆಳಗ್ಗೆ 30 ಜನರ ಲೋಕಾಯುಕ್ತ ತಂಡ ಏಕಕಾಲಕ್ಕೆ ಕಲ್ಲೇಶ್ ಅವರಿಗೆ ಸಂಬಂಧಿಸಿದ ಆರು ಕಡೆ ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ ನಡೆಸುತ್ತಿದೆ. ಹಾವೇರಿ, ರಾಯಚೂರು, ಗದಗ ಜಿಲ್ಲೆಯಿಂದ 7 ವಾಹನಗಳಲ್ಲಿ ಲೋಕಾಯುಕ್ತ‌ ತಂಡ ಆಗಮಿಸಿ ದಾಳಿ ನಡೆಸಿದೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.

ಅವರ ಅತ್ತೆಯ ಮನೆ, ನವಚೇತನ ಶಾಲೆ, ವಿಜ್ಞಾನ ಕಾಲೇಜು ಹಾಗೂ ಯಲಬುರ್ಗಾ ಚಿಕ್ಕಮನ್ನಾಪುರ ಗ್ರಾಮದಲ್ಲಿರುವ ಕಲ್ಲೇಶ್ ಸ್ವಗ್ರಾಮದ ಮನೆ ಮೇಲೂ ದಾಳಿ ನಡೆದಿದೆ. 30ಕ್ಕೂ ಹೆಚ್ಚು ಅಧಿಕಾರಿಗಳನ್ನೊಳಗೊಂಡ ಲೋಕಾಯುಕ್ತ ತಂಡ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ.

ಕೊಪ್ಪಳ ಲೋಕಾಯುಕ್ತ ಡಿವೈಎಸ್‌ಪಿ ಲೋಕೇಶ್ ನೇತೃತ್ವದಲ್ಲಿ ಗದಗ, ಹಾವೇರಿ ಮತ್ತು ರಾಯಚೂರು ಜಿಲ್ಲೆಗಳ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳು, ಆಸ್ತಿ ವಿವರಗಳು ಮತ್ತು ಹಣಕಾಸು ವ್ಯವಹಾರಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಈ ಹಿಂದೆ ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿಲುಕಿ ಅಮಾನತುಗೊಂಡಿದ್ದ ಬಿ.ಕಲ್ಲೇಶ್ ಹಗರಣದ ವೇಳೆ ಸಿಎಂ ಹೆಸರು ಹೇಳುವಂತೆ ಇಡಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಭ್ರಷ್ಟಾಚಾರ ಹಾಗೂ ಅಕ್ರಮ ಆಸ್ತಿ ಸಂಪಾದನೆ ಸೇರಿ ಹಲವು ಆರೋಪ ಹಿನ್ನೆಲೆಯಲ್ಲಿ ಲೋಕಾಯುಕ್ತ ದಾಳಿ ನಡೆದಿದೆ ಎನ್ನಲಾಗಿದೆ.

Related Posts

Leave a Reply

Your email address will not be published. Required fields are marked *