ಬೆಂಗಳೂರು, ಮೈಸೂರು, ಬಾಗಲಕೋಟೆ, ಮಂಡ್ಯ, ಧಾರವಾಡ, ಹಾಸನ, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಸರ್ಕಾರಿ ಇಲಾಖೆಗಳ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ.
ಬೆಂಗಳೂರಿನಲ್ಲಿ ಹೆಬ್ಬಾಳ ಪಶುವೈದ್ಯಕೀಯ ಕಾಲೇಜು ಅಸಿಸ್ಟೆಂಟ್ ಪ್ರೊಫೆಸರ್ ಇಂದರೇಶ್ ಹಾಗೂ ಸಿಂಗನಾಯಕನಹಳ್ಳಿ ಕೋ-ಆಪರೇಟಿವ್ ಸೊಸೈಟಿಯ ಸಿಇಒ ಶಶಿಧರ್ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿಯಾಗಿದೆ.
ಯಾದಗಿರಿಯಲ್ಲಿ ಎಲೆಕ್ಟ್ರಿಕಲ್ ಇಲಾಖೆ ಡೆಪ್ಯುಟಿ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ವಿರೇಶ್ ಹಿರೇಮಠ್ ನಿವಾಸ, ಮಂಡ್ಯದಲ್ಲಿ ಸಾರ್ವಜನಿಕ ಕಾಮಗಾರಿಗಳ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್. ಸತೀಶ್ ಮನೆ ಮತ್ತು ಕಚೇರಿ, ಧಾರವಾಡದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಎಂ.ಕೆ. ಸುರಕೋಡಗೆ ಸೇರಿದ ಕಟ್ಟಡಗಳ ಮೇಲೆ ದಾಳಿ ನಡೆಸಿದ ಲೋಕಾತುಕ್ತ ಅಧಿಖಾರಿಗಳು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಹಾಸನ ಮಹಾನಗರ ಪಾಲಿಕೆಯ ಎಇಇ ಎಂ.ಸಿ. ಸತ್ಯನಾರಾಯಣ ಅವರ ಮನೆ ಮೇಲೆ ದಾಳಿ ವೇಳೆ ಬಾಗಿಲು ತೆರೆಯದೆ ಒಂದು ಗಂಟೆಗೂ ಹೆಚ್ಚು ಸಮಯ ಅಧಿಕಾರಿಗಳ ತಂಡ ಮನೆ ಮುಂದೆ ಕಾಯುವಂತಾಗಿತ್ತು, ಲೋಕಾಯುಕ್ತ ಡಿವೈಎಸ್ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಮೈಸೂರಿನಲ್ಲಿ ಜಲಮಂಡಳಿಯ ಎಇಇ ಹಾಗೂ ಇಇ (ಇನ್ಚಾರ್ಜ್) ಆಶಿಫ್ ಇಕ್ಬಾಲ್ ನಿವಾಸ, ವಿಜಯಪುರದಲ್ಲಿ ಕೃಷ್ಣಭಾಗ್ಯ ಜಲ ನಿಗಮದ ಜೂನಿಯರ್ ಇಂಜಿನಿಯರ್ ಪ್ರಕಾಶ್ ಪಿ.ಜಿ. ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡಸಿದ್ದಾರೆ.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಇಂಜಿನಿಯರ್ ವಸಂತ್ ವಾಲಪ್ಪ ನಾಯಕ್ ಅವರ ಬೆಂಗಳೂರು ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಅವರ ಮನೆಗಳ ಜೊತೆಗೆ ಬಾಗಲಕೋಟೆ ಪೋಸ್ಟಲ್ ಕಾಲೋನಿಯಲ್ಲಿರುವ ಅವರ ಸಹೋದರ ಭೀಮಸಿಂಗ್ ನಾಯಕ್ ಮನೆ ಮೇಲೆ ದಾಳಿ ನಡೆದಿದೆ. ಭೀಮಸಿಂಗ್ ನಾಯಕ್ ಬಾಗಲಕೋಟೆ ಡಿಎಆರ್ನಲ್ಲಿ ಎಎಸ್ಐ ಆಗಿದ್ದು, ಬಿಲ್ ಕೆರೂರು ಗ್ರಾಮದಲ್ಲಿರುವ ಅವರ ನಿವಾಸದಲ್ಲಿಯೂ ಪರಿಶೀಲನೆ ನಡೆಸಲಾಗಿದೆ.
ಬಾಗಲಕೋಟೆಯ ಪೋಸ್ಟಲ್ ಕಾಲೋನಿಯೊಂದರಲ್ಲಿ ದಾಳಿ ನಡೆಯುವಾಗ ಮನೆಯ ಕೆಳಭಾಗದಲ್ಲಿ ಹಾವು ಕಾಣಿಸಿಕೊಂಡಿದೆ. ಎಂಟು ಜಿಲ್ಲೆಗಳಲ್ಲಿ ನಡೆದ ದಾಳಿ ವೇಳೆ ಅಧಿಕಾರಿಗಳು ದಾಖಲೆಗಳು ಹಾಗೂ ಆಸ್ತಿ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.


