ರಾಜ್ಯದ ನಾನಾ ಕಡೆಗಳಲ್ಲಿ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಆದಾಯಕ್ಕೂ ಮೀರಿ ಅಧಿಕ ಆಸ್ತಿ ಗಳಿಕೆ ಆರೋಪದಡಿ ರಾಜ್ಯಾದ್ಯಂತ 12 ಕಡೆ ಲೋಕಾಯುಕ್ತ ದಾಳಿಯಾಗಿದೆ. ಹಾಸನ, ಕಲಬುರ್ಗಿ, ಚಿತ್ರದುರ್ಗ, ಉಡುಪಿ, ದಾವಣಗೆರೆ, ಹಾವೇರಿ, ಬಾಗಲಕೋಟೆ ಮತ್ತು ಬೆಂಗಳೂರು ನಗರದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಮೂರು ಕಡೆ ಲೋಕಾಯುಕ್ತ ದಾಳಿ ನಡೆದಿದೆ. ಮೆಡಿಕಲ್ ಅಧಿಕಾರಿ- ಮಂಜುನಾಥ್, ಜಿ. ವಿ. ಪಿ.ಯು ಬೋರ್ಡ್ ನಿರ್ದೇಶಕಿ- ಸುಮಂಗಳ, ಸರ್ವೇಯರ್ ಅಧಿಕಾರಿ ಗಂಗಾ ಮರೀಗೌಡ ಮನೆ ಮೇಲೆ ದಾಳಿ ನಡೆಸಲಾಗಿದೆ. ಸುಮಂಗಳ ಮನೆಗೆ ನಾಲ್ಕು ವಾಹನಗಳಲ್ಲಿ ಬಂದ ಹತ್ತು ಲೋಕಾಯುಕ್ತ ಅಧಿಕಾರಿಗಳು ಸತತ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಎಸ್ಪಿ ಶಿವಪ್ರಕಾಶ್ ದೇವರಾಜ್ ಭೇಟಿ ನೀಡಿದ್ದಾರೆ.
ಎರಡು ಕೇಸ್‌ಗಳ ವಿರುದ್ಧ ದಾಳಿ ಮಾಡಲಾಗಿದೆ. ಮಂಜುನಾಥ್ ಎಂಬ ಅಧಿಕಾರಿ ಮನೆ ಹಾಗೂ ಕಚೇರಿ ಮೇಲೆ ದಾಳಿ ನಾಲ್ಕು ತಂಡಗಳಲ್ಲಿ ಮಾಡಿದ್ದೇವೆ. ಪಂಚರ ಸಮ್ಮುಖದಲ್ಲಿ ದಾಖಲೆ ಜಪ್ತಿ ಮಾಡಲಾಗುತ್ತದೆ ಎಂದು ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜ್ ಹೇಳಿದ್ದಾರೆ.
ಚಿತ್ರದುರ್ಗ ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ, ಪಿಐ ಮಂಜುನಾಥ್ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಕೃಷಿ ಇಲಾಖೆ ಎಡಿ (ಹೆಚ್ಚುವರಿ ನಿರ್ದೇಶಕ) ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಚಂದ್ರಕಾಂತ್ ಅವರಿಗೆ ಸೇರಿದ 2 ಮನೆ ಮತ್ತು ಚಿತ್ರದುರ್ಗದ ಕೃಷಿ ಇಲಾಖೆ ಕಚೇರಿ ಮೇಲೆ ಮತ್ತು ತರಳಬಾಳು ನಗರ, ಹೊಳಲ್ಕೆರೆ ತಾಲೂಕಿನ ಟಿ ನುಲೇನೂರು ಗ್ರಾಮದ ಮನೆಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಶೋಧ ನಡೆಸಿದ್ದಾರೆ.
ಬಾಗಲಕೋಟೆಯಲ್ಲಿ ಆಲಮಟ್ಟಿ ಬಲದಂಡೆ ಯೋಜನೆ ಜೂನಿಯರ್ ಇಂಜಿನಿಯರ್ ಚೇತನ್ ಮಲಜಿ ಮನೆ ಮೇಲೆ ದಾಳಿಯಾಗಿದೆ. ಬಾಗಲಕೋಟೆಯ ನವನಗರ ಸೆಕ್ಟರ್ ನಂಬರ್ 16ರಲ್ಲಿರುವ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಸಿದ್ದಾರೆ. ಲೋಕಾಯುಕ್ತ ಎಸ್ಪಿ ಟಿ ಮಲ್ಲೇಶ್ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ. ಕಮತಗಿ ಕಚೇರಿ ಮೇಲೂ ದಾಳಿಯಾಗಿದೆ. ಲೋಕಾಯುಕ್ತ ಡಿವೈಎಸ್ಪಿ ಇನ್ಸ್‌ಪೆಕ್ಟರ್ ಸೇರಿ 12 ಜನರಿಂದ ದಾಖಲೆ ಪರಿಶೀಲನೆ ನಡೆಯುತ್ತಿದೆ.
ದಾವಣಗೆರೆಯಲ್ಲಿ ಇಬ್ಬರು ಅಧಿಕಾರಿಗಳಿಗೆ ಸೇರಿದ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಆಸ್ತಿ ಪಾಸ್ತಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ಕೆಆರ್ ಐಡಿಎಲ್ ಸಹಾಯಕ ಇಂಜಿನಿಯರ್ ಜಗದೀಶ್ ನಾಯ್ಕ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಎಸ್ಡಿಎ ನಡುವಿನಮನೆ ನಿವಾಸಗಳ ಮೇಲೆ ದಾವಣಗೆರೆ ಎಸ್ಪಿ ಎಂಎಸ್ ಕೌಲಾಪುರೆ ನೇತೃತ್ವದ ತಂಡ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದೆ.
ಹಾವೇರಿಯಲ್ಲಿ ಇಬ್ಬರು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಡಿಎಸ್‌ಪಿ ಮಧುಸೂದನ್ ನೇತೃತ್ವದಲ್ಲಿ ಲೋಕಾಯುಕ್ತ ದಾಳಿ ಮಾಡಲಾಗಿದೆ. ರಾಣೇಬೆನ್ನೂರು ಕಂದಾಯ ನೀರಿಕ್ಷಕ ಅಶೋಕ್ ಅರಳೇಶ್ವರ ಮನೆ ಮತ್ತು ಕಚೇರಿ ಹಾಗೂ ಸವಣೂರು ತಾಲೂಕು ಪಂಚಾಯತಿ ಇಒ ಬಸವೇಶ್ವರ ಶಿಡೇನೂರು ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಬೀದರ್‌ನಲ್ಲಿ ಕೃಷಿ ಇಲಾಖೆಯ ಅಧಿಕಾರಿ ಧೂಳಪ್ಪ ಹೊಸಾಳೆ ಮನೆ ಮೇಲೆ ದಾಳಿ ನಡೆಸಿ, ಪರಿಶೀಲಿಸಲಾಗುತ್ತಿದೆ. ಔರಾದ್ ಕೃಷಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿರುವ ಧೂಳಪ್ಪ ಹೊಸಾಳೆ ಅವರಿಗೆ ಸೇರಿದ 3 ಮನೆ ಹಾಗು ಕಚೇರಿ ಮೇಲೆ ದಾಳಿಯಾಗಿದೆ. ಭಾಲ್ಕಿ ತಾಲೂಕಿನ ಕರಡ್ಯಾಳ ಮನೆ, ಕಮಲನಗರ ತಾಲೂಕು ಮುದೊಳ ಮನೆ, ಔರಾದ್ ಕೃಷಿ ಇಲಾಖೆ ಕಚೇರಿ, ಬೀದರ್ ನಗರದ ಗುರುನನಾಕ್ ಕಾಲೊನಿಯಲ್ಲಿರುವ ಮನೆ ಸೇರಿದಂತೆ ಒಟ್ಟು ನಾಲ್ಕು ಕಡೆ ಎಸ್‌ಪಿ ಸಿದ್ದರಾಜು ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಹನುಮಂತರಾಯ ನೇತೃತ್ವದಲ್ಲಿ ದಾಳಿ ನಡೆದಿದೆ.
ಕಾರವಾರದಲ್ಲಿ ಉಡುಪಿ RTO ಅಧಿಕಾರಿ ಎಲ್.ಪಿ ನಾಯ್ಕ್ ಮನೆ, ಮೂಲ ಮನೆ ಹಾಗೂ ಖಾಸಗಿ ಕಟ್ಟಡಗಳ ಮೇಲೆ ದಾಳಿ ಮಾಡಲಾಗಿದೆ. ಉಡುಪಿ ಮತ್ತು ಕುಮಟಾದ ಚಂದಾವರಲ್ಲಿರುವ ಮನೆಗಳ ಮೇಲೆ ಲೋಕಾಯುಕ್ತ ಇನ್ಸ್‌ಪೆಕ್ಟರ್ ವಿನಾಯಕ್ ಬಿಲ್ಲವ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಕುಮಟಾದಲ್ಲಿ ಬಿಲ್ಡಿಂಗ್‌ಗಳು ಎಲ್.ಪಿ ನಾಯ್ಕ್ ಸಂಬಂಧಿಕರ ಹೆಸರಿನಲ್ಲಿರುವುದಾಗಿ ಪತ್ತೆಯಾಗಿದೆ. ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ.