ರಾಜ್ಯದ 7 ಜಿಲ್ಲೆಗಳಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ಶನಿವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದೆ.
ಬೆಳಗಾವಿ, ಬಾಗಲಕೋಟೆ, ಬಳ್ಳಾರಿ ದಾವಣಗೆರೆ, ಉಡುಪಿ, ಗದಗ, ಧಾರವಾಡ ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ನಡೆಸಿದೆ.
ಬೆಳಗಾವಿ ಸುವರ್ಣ ಸೌಧದ ದೇವರಾಜ್ ಅರಸು ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸಿದ್ದಲಿಂಗಪ್ಪ, ಬಾಗಲಕೋಟೆಯ ಜಿಲ್ಲಾಡಳಿತ ಕಚೇರಿ ಲೆಕ್ಕಪತ್ರ ವಿಭಾಗದ ಎಫ್‌ಡಿಎ ಶೈಲ ಸುಭಾಷ್ ತತ್ರಾಣಿ, ಬಳ್ಳಾರಿಯ ಕಾರ್ಯಪಾಲಕ ಎಂಜಿನಿಯರ್ ಅಮೀನ್ ಮುಕ್ತಾರ್ ಅಹಮದ್, ದಾವಣಗೆರೆಯ ಶಿಗ್ಗಾಂವಿ ಪಂಚಾಯಿತಿ ಪಿಡಿಓ (PDO) ರಾಮಕೃಷ್ಣ, ಉಡುಪಿ ಜಿಲ್ಲೆ ಕಾರ್ಕಳದ ಮೆಸ್ಕಾಂ ಅಕೌಂಟೆಂಟ್ ಗಿರೀಶ್ ರಾವ್, ಗದಗದ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಗಂಗಾಧರ, ಧಾರವಾಡದ ಪಿಡಬ್ಲುಡಿ ಮುಖ್ಯ ಇಂಜಿನಿಯರ್ ಹೆಚ್.ಸುರೇಶ್ ಅವರ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ.
ಗದಗ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಮನೆ ಗಂಗಾಧರ ಶಿರೋಳ ಅವರ ಮನೆ, ಕಚೇರಿ ಹಾಗೂ ಅಳಿಯ, ಭಾವನ ಮನೆಗಳು ಸೇರಿ 6 ಕಡೆ ಲೋಕಾಯುಕ್ತ ತಂಡ ದಾಳಿ ನಡೆಸಿದೆ. ಗದಗ ನಗರದ ಅಳಿಯ ವಿಜಯ ಯಳಮೇಲಿ, ಭಾವ ನಾಗರಾಜ್ ಅಕ್ಕಿ ಮನೆ, ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಹಾಗೂ ಹಾವೇರಿ ಜಿಲ್ಲೆಯಲ್ಲಿ ಸಂಬಧಿಕರ ಮನೆ ಮೇಲೆ ಲೋಕಾಯುಕ್ತ ಎಸ್ಪಿ ಹಣಮಂತರಾಯ, ಡಿವೈಎಸ್ಪಿ ವಿಜಯ ಬಿರಾದಾರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ, ಬೆಳ್ಳಿ, ವಾಹನಗಳು, ಆಸ್ತಿಪತ್ರಗಳು ದೊರೆತಿದ್ದು ಶೋಧ ಕಾರ್ಯ ಮುಂದುವರಿದಿದೆ.
ಕಲಬುರಗಿ ನಗರದ ಹುಸೇನಿ ಗಾರ್ಡನ್ ಬಡಾವಣೆಯಲ್ಲಿರುವ ಬಳ್ಳಾರಿ ಲೋಕೋಪಯೋಗಿ ಇಲಾಖೆಯ ಸರ್ಕಲ್ ಆಫೀಸ್ ಅಧೀಕ್ಷಕ ಇಂಜಿನಿಯರ್ ಅಮೀನ್ ಮುಕ್ತಾರ್ ನಿವಾಸದ ಮೇಲೆ ಇಂದು ನಸುಕಿನಲ್ಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಲಬುರಗಿ ಮೂಲದವರೇ ಆಗಿರುವ ಅಮೀನ್ ಮುಕ್ತಾರ್ ಈ ಹಿಂದೆ ಇದೇ ಇಲಾಖೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ಆಗಿ ಸಹ ಸೇವೆ ಸಲ್ಲಿಸಿದ್ದಾರೆ. ಇಂದು ನಸುಕಿನಲ್ಲಿ ಮನೆಯ ಬಾಗಿಲು ತಟ್ಟಿದ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮುಂದಯವರೆಸಿದ್ದು, ಅಮೀನ್ ಅವರ ಸಹೋದರ ಡಾ.ಆರೀಫ್ ಅವರಿಗೆ ಸೇರಿದ ಏಷ್ಯನ್ ಲೈಫ್ ಸ್ಟೈಲ್ ಅಪಾರ್ಟ್‌ಮೆಂಟ್ ಮೇಲೆ ಸಹ ದಾಳಿ ನಡೆಸಿದ್ದಾರೆ. ಇದರ ಜೊತೆಗೆ, ಬಳ್ಳಾರಿ ಮತ್ತು ಬಸವಕಲ್ಯಾಣದಲ್ಲೂ ದಾಳಿ ನಡೆದಿದೆ. ಆದಾಯಕ್ಕೂ ಹೆಚ್ಚು ಆಸ್ತಿ ಗಳಿಕೆ ಆರೋಪದ ಅಡಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಕೈಗೊಂಡಿದ್ದಾರೆ.
ಇಲ್ಲಿನ ಜಿಲ್ಲಾಡಳಿತ ಕಚೇರಿ ಲೆಕ್ಕಪತ್ರ ವಿಭಾಗದ ಎಫ್‌ಡಿಎ ಶ್ರೀಶೈಲ್ ತತ್ರಾಣಿ ಅವರ ಅಮೀನಗಢ ಪಟ್ಟಣದಲ್ಲಿರುವ ಮನೆ ಹಾಗೂ ಆಭರಣ ಮಳಿಗೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಬಾಗಲಕೋಟೆ ಲೋಕಾಯುಕ್ತ ಡಿಎಸ್‌ಪಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ಮಹತ್ವದ ದಾಖಲೆಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನ ಬಾಡ ಗ್ರಾಮ ಪಂಚಾಯತಿ ಕಚೇರಿಯ ಮೇಲೆ ದಾಳಿ ಮಾಡಿದ್ದಾರೆ. ಗ್ರಾಮ ಪಂಚಾಯತಿ ಪಿಡಿಓ ರಾಮಕೃಷ್ಷಪ್ಪ ಗುಡಗೇರಿ ಎಂಬ ಪಿಡಿಓ ಸಂಬಂಧಿಸಿದ ಮನೆ ಮತ್ತು ಕಚೇರಿಯಲ್ಲಿ ದಾಖಲೆಗಳನ್ನ ಪರಿಶೀಲನೆ ನಡೆಸಿದ್ದಾರೆ. ಧಾರವಾಡದ ಮನೆ ಮತ್ತು ಬಾಡ ಗ್ರಾಮದ ಗ್ರಾಮ ಪಂಚಾಯತಿಯಲ್ಲಿ ದಾವಣಗೆರೆ ಮತ್ತು ಹಾವೇರಿ ಲೋಕಾಯುಕ್ತರ ಪೊಲೀಸ್ ಸಿಬ್ಬಂದಿ ದಾಖಲೆಗಳನ್ನ ಪರಿಶೀಲನೆ ನಡೆಸಿದ್ದಾರೆ.
ಬಳ್ಳಾರಿ, ಉಡುಪಿ, ದಾವಣಗೆರೆ ಜಿಲ್ಲೆಗಳಲ್ಲೂ ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿದ್ದು, ಅಪಾರ ಪ್ರಮಾಣದ ಚಿನ್ನಾಭರಣ, ಅಕ್ರಮ ಆಸ್ತಿ ಹಾಗೂ ಮಹತ್ವದ ದಾಖಲೆಗಳು ಪತ್ತೆಯಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.