ರಾಯಚೂರಿನಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಿಂಧನೂರಿನಲ್ಲಿ ಎಇಇ ಆಗಿರುವ ಬಿ.ವಿಜಯಲಕ್ಷ್ಮಿ ಅವರಿಗೆ ಸೇರಿರುವ ರಾಯಚೂರು ನಗರದಲ್ಲಿನ ಎರಡು ಮನೆ ಸೇರಿ ಐದು ಕಡೆ ದಾಳಿ ನಡೆದಿದೆ.
ಆದಾಯಕ್ಕಿಂತ ಅಧಿಕ ಆಸ್ತಿ ಆರೋಪ ಹಿನ್ನೆಲೆ ರಾಯಚೂರು, ಕೊಪ್ಪಳ, ಬಳ್ಳಾರಿ ಮೂರು ಜಿಲ್ಲೆಯ ಐದು ತಂಡಗಳಿಂದ ರಾಯಚೂರಿನ ಐಡಿಎಸ್‌ಎಂಟಿ ಬಡಾವಣೆಯಮನೆ, ಗಂಗಾಪರಮೇಶ್ವರ ಲೇಔಟ್‌ನ ಮನೆ, ಯಾದಗಿರಿ, ಜೋಳದೆಡಗಿ ಹಾಗೂ ಸಿಂಧನೂರಿನಲ್ಲಿ ಆರ್‌ಡಬ್ಲ್ಯೂಎಸ್ ಕಚೇರಿ ಮೇಲೆ ದಾಳಿ ಆಗಿದೆ.
ಎಇಇ ಬಿ.ವಿಜಯಲಕ್ಷ್ಮಿ 49 ಕಡೆಗಳಲ್ಲಿ ಆಸ್ತಿ ಮಾಡಿದ್ದು, ನಿವೇಶನ, ಮನೆ ,ಜಮೀನು ದಾಖಲೆ, ಚಿನ್ನಾಭರಣಗಳನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ರಾಯಚೂರು ಲೋಕಾಯುಕ್ತ ಎಸ್ ಪಿ ಸತೀಶ್ ಚಿಟಗುಬ್ಬಿ ಮಾರ್ಗ ದರ್ಶನ ದಲ್ಲಿ ಅಧಿಕಾರಿಗಳ ದಾಳಿ ಮಾಡಲಾಗಿದೆ.
ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಲೋಕಾಯುಕ್ತ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೂ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಬಾಗಲಕೋಟೆ ಜಿಲ್ಲಾ ಪಂಚಾಯತ್‌ನ ಸಹಾಯಕ ಕಾರ್ಯದರ್ಶಿ ಶ್ಯಾಮಸುಂದರ್ ಕಾಂಬ್ಳೆ, ವಿಜಯಪುರದ ಬಾಗೇವಾಡಿಯ ಸಹಾಯಕ ಕೃಷಿ ನಿರ್ದೇಶಕ ಮಾಳಪ್ಪ, ಕಾರವಾರದ ಸಿದ್ದಾಪುರ ಕೋಲಾ ಶಿರಸಿ ಸಮೂಹ ಗ್ರಾಮ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರುತಿ ಯಶವಂತ್ ಮಾಳವಿ ಮನೆ, ನಿವಾಸಗಳಿಗೆ ದಾಳಿ ನಡೆದಿದೆ.
ಈ ನಡುವೆ ಚಿಕ್ಕಜಾಲ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಶಿವಣ್ಣ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕೇಸ್ ವಿಚಾರವಾಗಿ 50 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಬಂಧಿಸಲಾಗಿದೆ.


