ಬೆಂಗಳೂರು, ಬಾಗಲಕೋಟೆ, ರಾಯಚೂರು, ಬೆಳಗಾವಿ ಸೇರಿದಂತೆ ರಾಜ್ಯದ ಹಲವೆಡೆ ಶುಕ್ರವಾರ ಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರ ನಿವಾಸ, ಕಚೇರಿಗಳಿಗೆ ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಇಬ್ಬರು ಅಧಿಕಾರಿಗಳು, ಬಾಗಲಕೋಟೆಯ ಗ್ರಾಮ ಪಂಚಾಯತ್ ಪಿಡಿಒ, ರಾಯಚೂರಿನಲ್ಲಿ ಜಿಲ್ಲಾ ಪಂಚಾಯತ್ ಲೆಕ್ಕಪತ್ರ ಅಧಿಕಾರಿಗಳ ಮನೆ, ಬೆಂಗಳೂರಿನಲ್ಲಿ ಬಿಬಿಎಂಪಿ ಎಇಇ ಮಾಧವ ರಾವ್ ಮನೆ ಮೇಲೆ ದಾಳಿ ನಡೆದಿದೆ. ಎಂಜಿನಿಯರಿಂಗ್ ವಿಭಾಗದ ಎಇಇ ಮಾಧವರಾವ್ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಬೆಳಗಾವಿ ನಗರದ ಅನಗೋಳದಲ್ಲಿರುವ, ಬೆಳಗಾವಿ ಪ್ರಭಾರಿ ಸಬ್ ರಿಜಿಸ್ಟರ್ ಸಚಿನ್ ಮಂಡೇದ್ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಮನೆ, ಕಚೇರಿ ಸೇರಿ 3 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಹಾರೂಗೇರಿ ವೆಟರ್ನರಿ ಇನ್ಸ್ಪೆಕ್ಟರ್ ಸಂಜಯ್ ಮನೆ ಮೇಲೂ ದಾಳಿ ನಡೆದಿದೆ. ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ನಿವಾಸದ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಬಾಗಲಕೋಟೆಯ ವಿದ್ಯಾಗಿರಿಯ 22ನೇ ಕ್ರಾಸ್ನಲ್ಲಿರುವ ಗ್ರಾಮ ಪಂಚಾಯತ್ ಪಿಡಿಒ ಎಸ್.ಪಿ.ಹಿರೇಮಠ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಬಾಗಲಕೋಟೆ ಲೋಕಾಯುಕ್ತ ಡಿವೈಎಸ್ಪಿ ಸಿದ್ದೇಶ್ ನೇತೃತ್ವದಲ್ಲಿ ದಾಳಿ ನಡೆದಿದೆ. ಹಿರೇಮಠ ಅವರ ನರಗುಂದದ ನಿವಾಸದ ಮೇಲೂ ದಾಳಿ ನಡೆದಿದೆ. ಹಿರೇಮಠ ಐಷಾರಾಮಿ ಮನೆ ಹೊಂದಿದ್ದು, ಮನೆಯಲ್ಲಿ ಪತ್ತೆಯಾಗಿರುವ ನಗದು ಎಣಿಸಲು ಅಧಿಕಾರಿಗಳು ಮನೆಯೊಳಗೆ ಹಣ ಎಣಿಸುವ ಮಷಿನ್ ತೆಗೆದುಕೊಂಡು ಹೋಗಿದ್ದಾರೆ.
ಜಿ.ಪಂ. ಲೆಕ್ಕಪತ್ರ ಸಹಾಯಕ ಅಧಿಕಾರಿ ನರಸಿಂಗ್ ರಾವ್ ಅವರ ರಾಯಚೂರು ನಗರದ ಜವಾರ್ ಕಾಲೊನಿಯಲ್ಲಿರುವ ಮನೆ ಮೇಲೆ ದಾಳಿ ನಡೆದಿದೆ. ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಕೈಗೊಂಡಿದ್ದಾರೆ.