ಸಚಿವ ಜಮೀರ್ ಅಹ್ಮದ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸಂಬಂಧ ಲೋಕಾಯುಕ್ತ ನಟಿ ರಾಧಿಕಾ ಕುಮಾರಸ್ವಾಮಿ ಅವರನ್ನು ವಿಚಾರಣೆ ನಡೆಸಿದ ಬಳಿಕ ಜಮೀರ್‌ಗೆ ಸಾಲ ನೀಡಿರುವ ಕೆಜಿಎಫ್ ಬಾಬು ಅವರನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ನಟಿ ರಾಧಿಕಾ ಕುಮಾರಸ್ವಾಮಿ ಅವರು ಜಮೀರ್‌ಗೆ ಎರಡು ಕೋಟಿ ರೂ. ಸಾಲ ನೀಡಿರುವುದಕ್ಕೆ ಸಂಬಂಧಿಸಿದಂತೆ ಕಳೆದ ವಾರ ವಿಚಾರಣೆ ಎದುರಿಸಿದ್ದರು.
ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆ ವೇಳೆ ಕೆಜಿಎಫ್ ಬಾಬು ಮತ್ತು ಜಮೀರ್ ಅಹ್ಮದ್ ನಡುವೆ ಹಣದ ವ್ಯವಹಾರ ನಡೆದಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೆಜಿಎಫ್ ಬಾಬು ಅವರಿಗೆ ನೋಟಿಸ್ ನೀಡಿರುವ ಲೋಕಾಯುಕ್ತ ಅಧಿಕಾರಿಗಳು, ಏಳು ದಿನಗಳ ಒಳಗೆ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ.
ಜಮೀರ್ ಅಹ್ಮದ್‌ಗೆ ಕೆಜಿಎಫ್ ಬಾಬು ಅವರು 2013ರಲ್ಲಿ ಮನೆ ಖರೀದಿಗೆ 3.70 ಕೋಟಿ ರೂ. ಸಾಲ ನೀಡಿದ್ದು, ಇಬ್ಬರ ನಡುವಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ದಾಖಲೆಗಳ ಸಹಿತ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಸೂಚಿಸಿದೆ.
ರಾಧಿಕಾ 2012ರಲ್ಲಿ ತಾವು ನಿರ್ಮಾಣ ಮಾಡಿದ ‘ಲಕ್ಕಿ’ ಚಿತ್ರದಿಂದ ಬಂದ ಹಣದ ಮೂಲಕ ಜಮೀರ್ ಖಾನ್ ಅವರಿಗೆ ₹2 ಕೋಟಿ ಸಾಲ ನೀಡಿದ್ದಾರೆ ಎಂಬುದು ತಿಳಿದುಬಂದಿದೆ. ಈ ವ್ಯವಹಾರವನ್ನು ರಾಧಿಕಾ ಒಪ್ಪಿಕೊಂಡಿದ್ದು, ಸೂಕ್ತ ದಾಖಲೆಗಳನ್ನು ಒದಗಿಸುವಂತೆ ಲೋಕಾಯುಕ್ತ ಪೊಲೀಸ್ ಸೂಚಿಸಿದೆ.
2019ರಲ್ಲಿ ಐ ಮಾನಿಟರಿ ಅಡ್ಡೆಸರಿ ಕಂಪನಿಯ ಬಹುಕೋಟಿ ವಂಚನೆ ಹಗರಣದಿಂದ ಆರಂಭವಾಯಿತು. ಆಗ ಜಮೀರ್ ಖಾನ್ ಅವರ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸಿತ್ತು. ಇ.ಡಿ ವರದಿಯ ಆಧಾರದ ಮೇಲೆ, ಆಗಿನ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಜಮೀರ್ ಖಾನ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಪ್ರಕರಣ ದಾಖಲಿಸಿತ್ತು. ಎಸಿಬಿ ರದ್ದಾದ ಬಳಿಕ, ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸರು ವಹಿಸಿಕೊಂಡರು.