ತೆಗೆದುಕೊಂಡಿರುವ ಸಾಲ ಮರು ಪಾವತಿಸಿಲ್ಲವೆಂದು ಖಾಸಗಿ ಫೈನಾನ್ಸ್ ಸಿಬ್ಬಂದಿ ಮನೆಗೆ ಬೀಗ ಜಡಿದು ವೃದ್ಧ ದಂಪತಿಯನ್ನು ಹೊರ ಹಾಕಿರುವ ಘಟನೆಯೊಂದು ಹಾಸನದ ಅರಕಲಗೂಡು ತಾಲೂಕಿನ ಕೊರಟಕೆರೆ ಗ್ರಾಮದಲ್ಲಿ ನಡೆದಿದೆ.
ಸಾಲ ಕಟ್ಟಿಲ್ಲ ಎಂದು ಸಣ್ಣಯ್ಯ(80), ಜಯಮ್ಮ(75)ಅವರನ್ನು ಫೈನಾನ್ಸ್ ಸಿಬಂದಿ ಹೊರಹಾಕಿದ್ದು, ಅವರಿಬ್ಬರೂ ಕೊರೆಯುವ ಚಳಿಯಲ್ಲೇ ಬೀದಿಯಲ್ಲಿ ವಾಸಮಾಡುವಂತಾಗಿದೆ. ಕೋರ್ಟ್ ಆದೇಶ ಎಂದು ಹೇಳಿ ಮನೆ ಮಾತ್ರವಲ್ಲದೆ ಕೊಟ್ಟಿಗೆಗೂ ಬೀಗ ಜಡಿದಿರುವುದಾಗಿ ಹೇಳಲಾಗಿದೆ.
2023ರಲ್ಲಿ ಮಗನ ಕ್ಯಾನ್ಸರ್ ಚಿಕಿತ್ಸೆಗಾಗಿ ಮನೆ ಅಡ ಇಟ್ಟು ಖಾಸಗಿ ಫೈನಾನ್ಸ್‌ನಿಂದ ದಂಪತಿ ಎರಡು ಲಕ್ಷ ರೂ. ಸಾಲ ಪಡೆದಿದ್ದರು. ಒಂದು ವರ್ಷ ಸಾಲ ಕಂತು ಕಟ್ಟಿದ್ದರು ಎನ್ನಲಾಗಿದೆ. ಈಗ ಕಂತು ಕಟ್ಟದ ಕಾರಣಕ್ಕೆ ಒಂದು ವಾರದಿಂದ ಮನೆಯಿಂದ ಹೊರಗಿದ್ದಾರೆ. ನಾವು ಸಾಲ ಕಟ್ಟುತ್ತೇವೆ ಸಮಯ ಕೊಡಿ ಎಂದುಅಂಗಲಾಚುತ್ತಿದ್ದಾರೆ. ಸಾಲ ತೀರಿಸಲು ಯಾರಾದರೂ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.
ಸಾಲದ ಹಣ ವಾಪಸ್ ಕೇಳಿದ್ದಕ್ಕೆ ಹಲ್ಲೆ
ಹುಣಸೂರು ತಾಲೂಕಿನ ಹಳೆ ವಾರಂಚಿ ಗ್ರಾಮದಲ್ಲಿ ಸಾಲ ನೀಡಿದ್ದ ಹಣ ವಾಪಸ್ ಕೇಳಿದಕ್ಕೆ ಸಂಬಂಧಿಕರು ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ. ನೀಲಮ್ಮ ಎಂಬ ಮಹಿಳೆ ಮೇಲೆ ರವಿ, ಅಂಕಿತ, ರೋಷನ್ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನೀಲಮ್ಮ ಪತಿ ಶಿವರಾಜ್ ಸೇನೆಯಲ್ಲಿದ್ದು, ಸಂಬಂಧಿ ರವಿ ಪತ್ನಿ ಲೀಲಾವತಿಗೆ 10 ಸಾವಿರ ರೂ. ನೀಡಿದ್ದರು. ಹಣ ಹಿಂತಿರುಗಿ ನೀಡುವಂತೆ ನೀಲಮ್ಮ ಕೇಳಿದಾಗ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.


