ಯಲಬುರ್ಗಾ ತಾಲೂಕಿನ ಚಿಕ್ಕಬನ್ನಿಗೋಳ ಗ್ರಾಮದಲ್ಲಿ ಗುರುವಾರ ಹಲ್ಲಿ ಬಿದ್ದಿದ್ದ ಬಿಸಿಯೂಟ ಸೇವಿಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ ಗೊಂಡಿದ್ದಾರೆ.
ಶಾಲೆ ಮುಗಿಸಿ ವಿದ್ಯಾರ್ಥಿಗಳು ಮನೆಗೆ ಬರುತ್ತಿದ್ದಂತೆ ಸುಸ್ತಾಗಿದ್ದನ್ನು ಗಮನಿಸಿ ಕೇಳಿದಾಗ ವಿದ್ಯಾರ್ಥಿಗಳು ಪಾಲಕರ ಬಳಿ ಹೇಳಿದ್ದಾರೆ, ಮಧ್ಯಾಹ್ನ ಶಾಲೆಯಲ್ಲಿ ಶಿಕ್ಷಕರು ಗದರಿಸಿ ಮನೆಯಲ್ಲಿ ಹೇಳದಂತೆ ಸೂಚನೆ ನೀಡಿದ್ದಾರೆ ಎಂದು ವಿದ್ಯಾರ್ಥಿಗಳು ಪಾಲಕರ ಬಳಿ ಹೇಳಿಕೊಂಡಿದ್ದಾರೆ.
ಗ್ರಾಮಕ್ಕೆ ವಜ್ರಬಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ತಂಡ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ಪರಿಶೀಲನೆ ನಡೆಸಿದೆ. ತೀವ್ರ ಹೊಟ್ಟೆ ನೋವು, ವಾಂತಿ, ಭೇದಿ ಕಾಣಿಸಿಕೊಂಡ 25 ವಿದ್ಯಾರ್ಥಿಗಳನ್ನು ಆಂಬುಲೆನ್ಸ್ ಮೂಲಕ ಯಲಬುರ್ಗಾ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸ್ಥಳಕ್ಕೆ ಅಕ್ಷರ ದಾಸೋಹ ಅಧಿಕಾರಿ, ಬಿಅರ್‌ಸಿಗಳು ಭೇಟಿ ನೀಡಿ ಪರಿಶೀಲಿಸಿ ದ್ದಾರೆ.
ಗ್ರಾಮದ ಮಕ್ಕಳು ಅಸ್ವಸ್ಥ ಗೊಂಡಿದ್ದಕ್ಕೆ ಗ್ರಾಮಸ್ಥರು, ಪಾಲಕರು ಶಿಕ್ಷಕರ ಮೇಲೆ ಅಡುಗೆ ಸಿಬ್ಬಂದಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರಿ 10 ಗಂಟೆಯಾದರೂ ಮುಖ್ಯಶಿಕ್ಷಕ ಗ್ರಾಮಕ್ಕೆ ಬರದೆ, ಫೋನ್ ರಿಸೀವ್ ಮಾಡದೆ ಇರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿತ್ತು.
ಚಿಕ್ಕಬನ್ನಿಗೋಳ ಶಾಲೆಯ ಮಕ್ಕಳು ಅಸ್ವಸ್ಥಗೊಂಡಿದ್ದು ಗಮನಕ್ಕೆ ಬಂದಿದೆ. ಸ್ಥಳಕ್ಕೆ ವೈದ್ಯರನ್ನು ಕಳುಹಿಸಲಾಗಿದೆ. ಚಿಕಿತ್ಸೆ ನೀಡಲಾಗುತ್ತದೆ. ಯಾವುದೇ ಅಪಾಯವಿಲ್ಲ, ಘಟನೆಗೆ ತನಿಖೆ ನಡೆಸಲು ತಂಡ ರಚಿಸಿ ಕ್ರಮಕ್ಕೆ ಮುಂದಾಗಲಾಗುವುದು ಎಂದು ಯಲಬುರ್ಗಾ ಬಿಇಒ ಅಶೋಕ ಗೌಡರ್ ತಿಳಿಸಿದ್ದಾರೆ.


