ಬೆಂಗಳೂರಿನಲ್ಲಿ ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿ ಲಿವಿಂಗ್ ಟುಗೆದರ್ ಸಂಗಾತಿಗಳಾಗಿದ್ದು, ಯುವತಿಯನ್ನು ಮದುವೆಯಾಗಲು ನಿರಾಕರಿಸಿದ ಯುವಕ ಮತಾಂತರಕ್ಕೆ ಒತ್ತಾಯಿಸಿ ಕೊಲೆ ಬೆದರಿಕೆಯೊಡ್ಡಿದ್ದಾನೆ.
ಮತಾಂತರಕ್ಕೆ ಒಪ್ಪದಿದ್ದರೆ ದೆಹಲಿ ಪ್ರಕರಣದಂತೆ ಕೊಲೆಗೈದು ಪೀಸ್ ಪೀಸ್ ಮಾಡಿ ಎಸೆಯುವುದಾಗಿ ಬೆದರಿಸಿ, ಲಕ್ಷಾಂತರ ರೂ. ವಂಚಿಸಿದ್ದಾನೆಂದು ಸಂತ್ರಸ್ತೆ ದೂರು ನೀಡಿದ್ದಾಳೆ. ದೂರು ನೀಡಿದ್ದರೂ ಪೊಲೀಸರು ಸರಿಯಾದ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾಳೆ.
ಸಂತ್ರಸ್ತ ಯುವತಿ ಉಸ್ಮಾನ್ ಎಂಬ ಯುವಕನ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ಎರಡು ವರ್ಷಗಳ ಹಿಂದೆ ಸ್ನೇಹಿತರ ಮೂಲಕ ಪರಿಚಯವಾಗಿದ್ದ ಉಸ್ಮಾನ್, ಆರಂಭದಲ್ಲಿ ಯುವತಿಯು ಅನ್ಯ ಕೋಮಿನ ಕಾರಣಕ್ಕೆ ಪ್ರೀತಿಯನ್ನು ನಿರಾಕರಿಸಿದಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಮತಾಂತರವಾಗುವುದು ಬೇಡ, ಹಾಗೆಯೇ ಮದುವೆಯಾಗೋಣ ಎಂದು ನಂಬಿಸಿದ ಉಸ್ಮಾನ್ನ ಪ್ರೀತಿಯನ್ನು ಒಪ್ಪಿಕೊಂಡ ಯುವತಿ, ಒಂದೂವರೆ ವರ್ಷ ಆತನೊಂದಿಗೆ ಲಿವಿಂಗ್ ರಿಲೇಶನ್ಶಿಪ್ನಲ್ಲಿದ್ದಳು.
ಮದುವೆಯ ವಿಚಾರ ಬಂದಾಗ ತಕ್ಷಣ ಮತಾಂತರ ಆಗುವಂತೆ ಒತ್ತಾಯಿಸಿದ್ದ, ದೈಹಿಕವಾಗಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ. ಆರೋಪಿ ಸಂತ್ರಸ್ತೆಯಿಂದ ಬರೋಬ್ಬರಿ 12.20 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದ್ದಾನೆ. ಆಕೆಯ ಚಿನ್ನಾಭರಣಗಳನ್ನು ಬಲವಂತವಾಗಿ ತೆಗೆದುಕೊಂಡು ಅಡವಿಟ್ಟಿದ್ದಾನೆ. ಪ್ರೀತಿಸಿ ವಂಚನೆ ಮಾಡಿ ಹಣ ದೋಚಿದರೂ ಯುವತಿ ತನ್ನನ್ನು ಮದುವೆಯಾಗುವಂತೆ ಕುಟುಂಬದ ಮುಂದೆ ಮಾತನಾಡುವಂತೆ ಒತ್ತಾಯಿಸಿದ್ದಳು. ಒತ್ತಾಯಪೂರ್ವಕವಾಗಿ ಮದುವೆ ಮಾಡಿಕೊಂಡರೆ ದೆಹಲಿ ಮಾದರಿಯಲ್ಲಿ ಕೊಲೆ ಮಾಡಿ ದೇಹವನ್ನು 32 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿ ಇಡುತ್ತೇನೆ. ನಂತರ ಮತ್ತೊಂದು ಮದುವೆಯಾಗುತ್ತೇನೆ ಎಂದು ಬೆದರಿಕೆ ಹಾಕಿದ್ದಾಗಿ ಯುವತಿ ಆರೋಪಿಸಿದ್ದಾಳೆ.
ಉಸ್ಮಾನ್ ಡ್ರಗ್ ಅಡಿಕ್ಟ್ ಎಂಬ ವಿಚಾರ ಯುವತಿಗೆ ತಿಳಿದುಬಂದಿದೆ. ಯುವತಿಯ ಖಾಸಗಿ ಫೋಟೊಗಳನ್ನು ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿದ್ದಾನೆ, ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದೂ ಆರೋಪಿಸಲಾಗಿದೆ. ಕಿರುಕುಳಗಳನ್ನು ತಾಳಲಾರದೆ ಯುವತಿ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಹೇಳಲಾಗಿದೆ.
ಯುವತಿ ಮಾರ್ಚ್ ತಿಂಗಳಲ್ಲಿ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಉಸ್ಮಾನ್ ವಿರುದ್ಧ ದೂರು ದಾಖಲಿಸಿದ್ದಳು. ಪೊಲೀಸರು ದೂರಿನ ಗಂಭೀರತೆ ಪರಿಗಣಿಸದೆ ತಾನು ಹೇಳಿದ ರೀತಿಯಲ್ಲಿ ಎಫ್ಐಆರ್ ದಾಖಲಿಸಿಲ್ಲ ಮತ್ತು ಚಾರ್ಜ್ಶೀಟ್ ಸರಿಯಾಗಿ ಮಾಡಿಲ್ಲ ಎಂದು ಯುವತಿ ದೂರಿದ್ದಾಳೆ. ಪ್ರಕರಣ ದಾಖಲಾದ ನಂತರವೂ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆಕೆ ಆರೋಪಿಸಿದ್ದಾಳೆ.


