ರಾಜ್ಯದಲ್ಲಿ ಅಬಕಾರಿ ತೆರಿಗೆ ಸಂಗ್ರಹಕ್ಕೆ ಮದ್ಯದ ದರ ಏರಿಕೆ ಮಾಡುತ್ತಿದ್ದರೆ ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರವು ಇದೇ ಮೊದಲ ಬಾರಿ ಮದ್ಯದ ದರ ಇಳಿಸಿದ್ದು, ಪ್ರತಿ ಬಾಟಲ್‌ಗೆ 10 ರೂಪಾಯಿಯಿಂದ 100 ರೂ.ವರೆಗೆ ಕಡಿತಗೊಳಿಸಿದೆ. ಈ ಕ್ರಮದಿಂದ ಆ ರಾಜ್ಯದಲ್ಲಿ ಮದ್ಯ ಗ್ರಾಹಕರಿಗೆ ಪ್ರತಿ ತಿಂಗಳು 116 ಕೋಟಿ ರೂ. ಉಳಿತಾಯ ಆಗಲಿದೆ.
ಅಧಿಕಾರಿಗಳ ಜೊತೆ ಈ ಕುರಿತ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಿಎಂ ಚಂದ್ರಬಾಬು ನಾಯ್ಡು, ಮದ್ಯ ನೀತಿಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಂಡು ಕೈಗೆಟುಕುವ ದರದಲ್ಲಿ ಪೂರೈಕೆ ಮಾಡುವ ಜೊತೆಗೆ ನಕಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಸೂಚಿಸಿದ್ದಾರೆ. ಈ ಹೊಸ ನೀತಿಯಿಂದ ರಾಜ್ಯದ ಆದಾಯ ಹೆಚ್ಚುವ ನಿರೀಕ್ಷೆಯಿದೆ ಎಂದಿದ್ದಾರೆ.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದ ಬ್ರ‍್ಯಾಂಡ್‌ಗಳನ್ನು ಮಾತ್ರ ರಾಜ್ಯಕ್ಕೆ ಅನುಮತಿಸುವಂತೆ ಮತ್ತು ಸುಂಕ ಪಾವತಿಸದ ಅಕ್ರಮ ಅಥವಾ ನಕಲಿ ಮದ್ಯದ ಮಾರಾಟವನ್ನು ನಿಷೇಧಿಸುವಂತೆ ಹಾಗೂ ಸಾರ್ವಜನಿಕ ಆರೋಗ್ಯವನ್ನು ಕಾಪಾಡುವಂತೆ ನಿರ್ದೇಶನ ನೀಡಿದ್ದಾರೆ.
ಆಂಧ್ರಪ್ರದೇಶದಲ್ಲಿ 30 ಬ್ರಾಂಡ್‌ಗಳ ಬೆಲೆಯು ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡಿನ ಬೆಲೆಗಳಿಗಿಂತ ಕಡಿಮೆಯಾಗಿದೆ. ಪ್ರವಾಸಿ ತಾಣಗಳಲ್ಲಿ ದುರುಪಯೋಗವನ್ನು ತಡೆಗಟ್ಟಲು ಪರವಾನಗಿ ಇಲ್ಲದ ಅಂಗಡಿಗಳನ್ನು ನಿಷೇಧಿಸುವಂತೆ ಡಿಜಿಟಲ್ ಪಾವತಿ, ಎಐ ಆಧಾರಿತ ಟ್ರ‍್ಯಾಕಿಂಗ್ ಜಾರಿಗೊಳಿಸಲು ನಾಯ್ಡು ನಿರ್ದೇಶನ ನೀಡಿದ್ದಾರೆ.