ಅರ್ಜೆಂಟೀನಾದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ನೋಡುವ ಅವಕಾಶ ಸಿಗದೇ ರೊಚ್ಚಿಗೆದ್ದ ಅಭಿಮಾನಿಗಳು ಕೋಲ್ಕತಾದಲ್ಲಿ ದಾಂಧಲೆ ನಡೆಸಿದ್ದಾರೆ.
ಶನಿವಾರ ಮುಂಜಾನೆ ಕೋಲ್ಕತ್ತಾಗೆ ಆಗಮಿಸಿದ ಮೆಸ್ಸಿ ‘ಗೋಟ್ ಟೂರ್ ಆಫ್ ಇಂಡಿಯಾ’ ಆರಂಭಿಸಿದರು. ಮೆಸ್ಸಿ ಜೊತೆಗೆ ಅವರ ಇಂಟರ್ ಮಿಯಾಮಿ ತಂಡದ ಆಟಗಾರರಾದ ರೊಡ್ರಿಗೋ ಡಿ ಪಾಲ್ ಮತ್ತು ಲೂಯಿಸ್ ಸುವಾರೆಜ್ ಸಹ ಭಾರತಕ್ಕೆ ಆಗಮಿಸಿದ್ದಾರೆ.
14 ವರ್ಷಗಳ ನಂತರ ಭಾರತಕ್ಕೆ ಮರಳಿದ ಮೆಸ್ಸಿಯನ್ನು ನೋಡಲು ಸಾವಿರಾರು ಅಭಿಮಾನಿಗಳು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದರು. ಅವರು ಅರ್ಜೆಂಟೀನಾದ ಧ್ವಜಗಳನ್ನು ಬೀಸುತ್ತಾ ‘ಮೆಸ್ಸಿ ಮೆಸ್ಸಿ’ ಎಂದು ಘೋಷಣೆ ಕೂಗುತ್ತಾ ಭವ್ಯ ಸ್ವಾಗತ ನೀಡಿದರು.
ಮೆಸ್ಸಿ ಮೈದಾನಕ್ಕೆ ಕೆಲವೇ ನಿಮಿಷಗಳ ಕಾಲ ಭೇಟಿ ನೀಡಿದ್ದೂ ಅಲ್ಲದೇ ಅಭಿಮಾನಿಗಳಿಗೆ ದರ್ಶನ ನೀಡದೇ ತೆರಳಿದರು. 70 ಅಡಿ ಎತ್ತರದ ಪ್ರತಿಮೆಯನ್ನು ವರ್ಚೂವಲ್ ಆಗಿ ಅನಾವರಣಗೊಳಿಸಿದರು.
ಮೆಸ್ಸಿ 11.15ಕ್ಕೆ ಮೈದಾನಕ್ಕೆ ಆಗಮಿಸಿದ್ದು, ಅರ್ಧಗಂಟೆಯಲ್ಲಿ ಕಾರ್ಯಕ್ರಮ ಮುಗಿಸಿ ಮರಳಿದರು. ಮೆಸ್ಸಿ ಮೈದಾನಕ್ಕೆ ಒಂದು ಸುತ್ತು ಬರುತ್ತಾರೆ. ಹತ್ತಿರದಿಂದ ನೋಡಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಮೆಸ್ಸಿ ಮೈದಾನಕ್ಕೆ ಬಾರದೇ ಇರುವುದು ಅಭಿಮಾನಿಗಳು ತೀವ್ರ ನಿರಾಸೆ ಉಂಟು ಮಾಡಿತು.
5 ರಿಂದ 25 ಸಾವಿರ ರೂ.ವರೆಗೂ ಹಣ ನೀಡಿ ಟಿಕೆಟ್ ಪಡೆದಿದ್ದ ಅಭಿಮಾನಿಗಳು ಮೆಸ್ಸಿಗೆ ದರ್ಶನ ಆಗದೇ ಅಸಮಾಧಾನಗೊಂಡಿದ್ದು, ಬಾಟಲಿ, ಪೇಪರ್ ಸೇರಿದಂತೆ ಕೈಗೆ ಸಿಕ್ಕಿದ ವಸ್ತುಗಳನ್ನು ಎಸೆದು ದಾಂಧಲೆ ಮಾಡಿದ್ದಾರೆ. ಅಲ್ಲದೇ ಮೈದಾನದ ವಸ್ತುಗಳನ್ನು ಜಖಂಗೊಳಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿದ್ದಾರೆ.


