Menu

ನಾಳೆಯಿಂದ ರಾಜ್ಯದಲ್ಲಿ ಯೆಲ್ಲೋ ಬೋರ್ಡ್ ವಾಹನಗಳಿಗೆ ದುಬಾರಿ ಲೈಫ್ ಟೈಮ್ ಟ್ಯಾಕ್ಸ್

ನಾಳೆಯಿಂದ ಅಂದರೆ ಮೇ ತಿಂಗಳ ಆರಂಭದಿಂದ ರಾಜ್ಯದಲ್ಲಿ ಸಣ್ಣ ಗೂಡ್ಸ್, ಟ್ಯಾಕ್ಸಿ, ಎಲೆಕ್ಟ್ರಿಕ್ ವಾಹನ ಸೇರಿದಂತೆ ಯೆಲ್ಲೋ ಬೋರ್ಡ್ ವಾಹನ ಖರೀದಿಸಿದವರಿಗೆ ಬಲು ದುಬಾರಿಯಾಗಿ ಪರಿಣಮಿಸಲಿದೆ.

ಮೇ.1 ರಿಂದ ಕರ್ನಾಟಕದಲ್ಲಿ ಯೆಲ್ಲೋ ಬೋರ್ಡ್ ವಾಹನಗಳಿಗೆ ಲೈಫ್ ಟೈಮ್ ಟ್ಯಾಕ್ಸ್ ಅಥವಾ ಜೀವಿತಾವಧಿ ತೆರಿಗೆ ಪಾವತಿಸಬೇಕು. ‘ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕ- 2025’ಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ಪಡೆಯಲಾಗಿದೆ. ತೆರಿಗೆ ತಿದ್ದುಪಡಿ ವಿಧೇಯಕಕ್ಕೆ ರಾಜ್ಯ ಪಾಲರು ಅಂಕಿತ ಹಾಕಿದ್ದಾರೆ. ಹೀಗಾಗಿ ನಾಳೆಯಿಂದ ಹೊಸ ತೆರಿಗೆ ನೀತಿ ಜಾರಿಯಾಗುತ್ತಿದೆ. 10 ಲಕ್ಷ ರೂಪಾಯಿ ಒಳಗಿನ ಯೆಲ್ಲೋ ಬೋರ್ಡ್ ವಾಹನ ಖರೀದಿ ಸುವ ಪ್ರತಿಯೊಬ್ಬರು ಜೀವಿತಾವಧಿ ತೆರಿಗೆ ಪಾವತಿಸಬೇಕು. ಕಟ್ಟಡ ಸಾಮಾಗ್ರಿ ಕೊಂಡೊಯ್ಯುವ ವಾಹನಗಳು, ವಾಣಿಜ್ಯ ಬಳಕೆ ವಾಹನಗಳು, ಎಲೆಕ್ಟ್ರಿಕ್ ಕಾರುಗಳಿಗೆ ದುಬಾರಿ ತೆರಿಗೆ ಪಾವತಿಸಬೇಕು. ಶೇಕಡಾ 5 ರಷ್ಟು ಲೈಫ್ ಟೈಮ್ ಟ್ಯಾಕ್ಸ್ ವಿಧಿಸಲಾಗುತ್ತದೆ.

ಹಿಂದೆ ಹತ್ತು ಲಕ್ಷ ರೂಪಾಯಿಯ ಯೆಲ್ಲೋ ಬೋರ್ಡ್ ವಾಹನಗಳಿಗೆ ಪ್ರತಿ ಸೀಟ್‌ಗೆ 100 ರೂಪಾಯಿಯಂತೆ ಪ್ರತಿ ಮೂರು ತಿಂಗಳಿಗೊಮ್ಮೆ ತೆರಿಗೆ ಪಾವತಿ ಮಾಡಬೇಕು. 4 ಸೀಟರ್ ವಾಹನಕ್ಕೆ 400 ರೂಪಾಯಿ ಪಾವತಿ ಮಾಡಬೇಕಿತ್ತು. ಪರಿಷ್ಕೃತ ತೆರಿಗೆ ನೀತಿಯಲ್ಲಿ 10 ಲಕ್ಷ ರೂಪಾಯಿ ಒಳಗಿನ ಯೆಲ್ಲೋ ಬೋರ್ಡ್ ವಾಹನಗಳಿಗೆ ಶೇಕಡಾ 5 ರಷ್ಟು ಲೈಫ್ ಟೈಮ್ ಟ್ಯಾಕ್ಸ್ ವಿಧಿಸಲಾಗಿದೆ. ನಾಳೆಯಿಂದ 10 ಲಕ್ಷ ರೂಪಾಯಿಯ ಯೆಲ್ಲೋ ಬೋರ್ಡ್ ವಾಹನ ಖರೀದಿ ಮಾಡಿದರೆ ಜೀವಿತಾವಧಿ ಟ್ಯಾಕ್ಸ್ ಎಂದು 50,000 ರೂಪಾಯಿ ತೆರಿಗೆ ಪಾವತಿಸಬೇಕು. ರಸ್ತೆ ತೆರಿಗೆ, ಇತರ ಎಲ್ಲಾ ತೆರಿಗೆ, ವಿಮೆ ಸೇರಿ ವಾಹನದ ಆನ್‌ರೋಡ್ ಬೆಲೆ ದುಪ್ಪಟ್ಟಾಗಲಿದೆ.

ಹೊಸ ತೆರಿಗೆ ನೀತಿಯಲ್ಲಿ 25 ಲಕ್ಷ ರೂಪಾಯಿ ಮೇಲ್ಪಟ್ಟ ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ವಾಹನಗಳಿಗೆ ಶೇಕಡಾ 10 ತೆರಿಗೆ ಪಾವತಿ ಮಾಡಬೇಕು. ಹಿಂದೆ 25 ಲಕ್ಷ ರೂಪಾಯಿಗಿಂತ ಅಧಿಕ ಮೊತ್ತದ ಎಲೆಕ್ಟ್ರಿಕ್ ವಾಣಿಜ್ಯ ಕಾರುಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿತ್ತು. ತಿದ್ದುಪಡಿ ವಿಧೇಯಕದಿಂದ ರಾಜ್ಯದಲ್ಲಿ ಇನ್ಮುಂದೆ ನೋಂದಣಿಯಾಗುವ 25 ಲಕ್ಷಕ್ಕೂ ಹೆಚ್ಚು ಮೌಲ್ಯದ ಇವಿ-ಕ್ಯಾಬ್‌ಗಳಿಗೆ ಶೇ.10ರಷ್ಟು ಅಂದರೆ, ಎರಡೂವರೆ ಲಕ್ಷ ರೂ..ತೆರಿಗೆ ವಿಧಿಸಲಾಗುತ್ತದೆ. ಇದು ಜೀವತಾ ವಧಿ ತೆರಿಗೆ. ಈ ತಿದ್ದುಪಡಿ ವಿಧೇಯಕದ ಮೂಲಕ ವಾರ್ಷಿಕ 112.5 ಕೋಟಿ ರೂ. ಹೆಚ್ಚುವರಿ ಆದಾಯ ಹರಿದು ಬರುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಹೊಸದಾಗಿ ರಸ್ತೆಗಿಳಿಯುವ ಹತ್ತು ಲಕ್ಷ ರೂ.ವರೆಗಿನ ಮೌಲ್ಯದ ಬಾಡಿಗೆ ಮೋಟಾರು ವಾಹನ (ಹಳದಿ ನಾಮಫಲಕ ಹೊಂದಿರುವ ಕ್ಯಾಬ್)ಗಳಿಗೆ ಶೇ.5 ತೆರಿಗೆ ವಿಧಿಸಲಾಗುತ್ತದೆ. ನಿರ್ಮಾಣ ವಲಯದ ಉಪಕರಣಗಳನ್ನು ಸಾಗಿಸುವ ವಾಹನಗಳಿಗೆ ಜೀವಿತಾವಧಿ ತೆರಿಗೆಯನ್ನು ಶೇ. 6ರಿಂದ ಶೇ.8ಕ್ಕೆ ಹೆಚ್ಚಿಸಲಾಗಿದೆ.

Related Posts

Leave a Reply

Your email address will not be published. Required fields are marked *