Thursday, January 22, 2026
Menu

ಖಾನಾಪುರ ಕಾಡಂಚಿನ ಸಮುದಾಯಗಳ ಬದುಕು: ‘ಉದಯಕಾಲ’ ಕಳಕಳಿಗೆ ಡಿಸಿ ಮೆಚ್ಚುಗೆ, ಜ.28ಕ್ಕೆ ವಿಶೇಷ ಸಭೆ

ಖಾನಾಪುರದ  ಕಾಡಂಚಿನ ಸಮುದಾಯಗಳ ಬದುಕಿಗೆ ಆಶಾಕಿರಣ ಗೋಚರಿಸಿದ್ದು,  ಜನೆವರಿ 28ಕ್ಕೆ ಅಧಿಕಾರಿಗಳ ವಿಶೇಷ ಸಭೆ ನಡೆಯಲಿದೆ.ಹಕ್ಕಿ-ಪಿಕ್ಕಿ, ಕಾತಕರಿ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ,  ‘ಉದಯಕಾಲ’ ದಿನಪತ್ರಿಕೆಯ ಸಾಮಾಜಿಕ ಕಳಕಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಖಾನಾಪುರ ತಾಲೂಕಿನ ನಂದಗಡ ಭಾಗದ ಕಾಡಂಚಿನಲ್ಲಿ ವಾಸಿಸುತ್ತಿರುವ ಹಕ್ಕಿ-ಪಿಕ್ಕಿ ಹಾಗೂ ಕಾತಕರಿ ಸಮುದಾಯಗಳ ದಶಕಗಳ ಕಾಲದ ಸಮಸ್ಯೆಗಳಿಗೆ ಕೊನೆಗೂ ಪರಿಹಾರ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ. ಈ ಸಮುದಾಯಗಳಿಗೆ ವಸತಿ, ಜಮೀನು ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಅವರು ಜನೆವರಿ 28ರಂದು ಖಾನಾಪುರ ತಹಶೀಲ್ದಾರ್ ಕಚೇರಿಯಲ್ಲಿ ಅಧಿಕಾರಿಗಳ ವಿಶೇಷ ಸಭೆ ಕರೆದಿದ್ದಾರೆ.

ಸತತ ಹೋರಾಟ ಮತ್ತು ಮನವಿ

ಇತ್ತೀಚೆಗೆ ಮುಖ್ಯಮಂತ್ರಿಗಳು ನಂದಗಡ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಈ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಆಗ್ರಹಿಸಿ ಮನವಿ ಸಲ್ಲಿಸಲಾಗಿತ್ತು. ಈ ಬೆನ್ನಲ್ಲೇ ಗುರುವಾರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ನಿಯೋಗವು ಸಮುದಾಯದ ಶೋಚನೀಯ ಸ್ಥಿತಿಯನ್ನು ವಿವರಿಸಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು, “ಸಮುದಾಯದ ಅಭಿವೃದ್ಧಿಗೆ ಆಡಳಿತ ಯಂತ್ರ ಸನ್ನದ್ಧವಾಗಿದೆ” ಎಂಬ ಭರವಸೆ ನೀಡಿದರು.

‘ಉದಯಕಾಲ’ ವರದಿಯ ಇಂಪ್ಯಾಕ್ಟ್
ಈ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುವುದು, ಅಲೆಮಾರಿ ಜನರಿಗೆ ಆಧಾರ್ ಕಾರ್ಡ್, ರಹವಾಸಿ ಪತ್ರದಂತಹ ಯಾವುದೇ ದಾಖಲೆಗಳು ಇಲ್ಲದಿರುವ ಬಗ್ಗೆ ‘ಉದಯಕಾಲ’ ದಿನಪತ್ರಿಕೆಯು ಅಕ್ಟೋಬರ್‌ನಿಂದ ಜನೆವರಿವರೆಗೆ  ನಿರಂತರ ಗಿ ವಿಶೇಷ ವರದಿಗಳನ್ನು ಪ್ರಕಟಿಸಿತ್ತು. ಪತ್ರಿಕೆಯ ಈ ಸಾಮಾಜಿಕ ಕಳಕಳಿಯನ್ನು ಜಿಲ್ಲಾಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿದರು. ಪತ್ರಿಕಾ ವರದಿಗಳನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ, ಈಗ ಪರಿಹಾರದ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಇಟ್ಟಿದೆ.

ಬೆಳಗಾವಿ ಜಿಲ್ಲಾ SC/ST ದೌರ್ಜನ್ಯ ತಡೆ ಸಮಿತಿ ಸದಸ್ಯ ಹಾಗೂ ಹಿರಿಯ ದಲಿತ ಮುಖಂಡರಾದ ಮಲ್ಲೇಶ್ ಚೌಗಲಾ ಮತ್ತು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹಿಂಡಲಗಿ ಅವರು ಜಿಲ್ಲಾಧಿಕಾರಿ ಗಳನ್ನು ಸತ್ಕರಿಸಿ ಗೌರವಿಸಿದರು.

ರವಿ ಮಾದರ, ರಾಘವೇಂದ್ರ ಚಲವಾದಿ, ಮಾರುತಿ ಕಾಂಬಳೆ, ಬಸು ಮಾದರ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. ಜನೆವರಿ 28ರ ಸಭೆಯು ಕಾಡಂಚಿನ ಜನರ ಬದುಕಿನಲ್ಲಿ ಹೊಸ ಬೆಳಕು ತರಲಿದೆ ಎಂಬ ಆಶಾವಾದ ಸಮುದಾಯದ ಜನರಲ್ಲಿ ಮೂಡಿದೆ.

Related Posts

Leave a Reply

Your email address will not be published. Required fields are marked *