Menu

ಭೂಮಿ ಉಳಿದರೆ ಮಾತ್ರ ಬದುಕಿನ ಭರವಸೆ

ಚೀನಾ ದೇಶವು ವಿಶ್ವದಲ್ಲಿಯೇ ಅತಿಹೆಚ್ಚು ಪವನ ಮತ್ತು ಸೌರ ವಿದ್ಯುತ್ ಅನ್ನು ಉತ್ಪಾದಿಸುವ ದೇಶವಾಗಿ ಹೊರಹೊಮ್ಮಿದೆ. ಉರುಗ್ವೆ ದೇಶವು ಆಂತರಿಕ ಬಳಕೆಯ ೯೮% ವಿದ್ಯುತ್ ಅನ್ನು ನವೀಕರಿಸಬಹುದಾದ ಇಂಧನಗಳಿಂದಲೇ ಉತ್ಪಾದಿಸಿ ಜಗತ್ತಿಗೆ ಮಾದರಿಯಾಗಿದೆ. ಕೀನ್ಯಾ ದೇಶವು ಬೇಡಿಕೆಯ ಸುಮಾರು ಅರ್ಧದಷ್ಟು ವಿದ್ಯುತ್ ಅನ್ನು ಭೂಶಾಖದ ಮೂಲಕ ಉತ್ಪಾದಿಸುತ್ತಿದೆ. ಆಸ್ಟ್ರೇಲಿಯಾ ಪ್ರತಿಯೊಂದು ಮನೆಗಳಲ್ಲಿ ಸೌರವಿದ್ಯುತ್ ಅನ್ನು ಕಡ್ಡಾಯಗೊಳಿಸಿ ಜನತೆಯಲ್ಲಿ ಜಾಗೃತಿ ಮೂಡಿಸಿದೆ.

೧೯೬೯ರಲ್ಲಿ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಡೆದ ವಿಶ್ವಸಂಸ್ಥೆಯ ಮಹಾಸಮ್ಮೇಳನದಲ್ಲಿ ಶಾಂತಿ ಕಾರ್ಯಕರ್ತರಾದ ಜಾನ್ ಮೆಕ್‌ಕಾನ್ನೆಲ್‌ರವರು ಭೂಮಿ ಮತ್ತು ಶಾಂತಿಯ ಪರಿಕಲ್ಪನೆಯನ್ನು ಗೌರವಿಸಲು ಪ್ರಸ್ತಾಪಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಮ್ಮೇಳನವು ೧೯೭೦ ಏಪ್ರಿಲ್ ೨೨ರಿಂದ ವಿಶ್ವ ಭೂಮಿ ದಿನವನ್ನಾಗಿ ಆಚರಿಸಲು ಪ್ರಾರಂಭಿಸಿತು. ನಮ್ಮ ಶಕ್ತಿ ನಮ್ಮ ಗ್ರಹ ಎಂಬುದು ೨೦೨೫ರ ಶೀರ್ಷಿಕೆಯಾಗಿದೆ. ಅಂದರೆ ಭೂಮಿಯಲ್ಲಿ ಪರಿಸರಸ್ನೇಹಿ ಮತ್ತು ನವೀಕರಿಸಬಹುದಾದ ಶುದ್ಧ ಇಂಧನಗಳನ್ನು ಉತ್ಪಾದಿಸುವ ಅದ್ಭುತ ಶಕ್ತಿ ಅಡಗಿದೆ. ಇದರ ಸದ್ಬಳಕೆಯಿಂದ ಹೆಚ್ಚುತ್ತಿರುವ ಭೂಮಿಯ ತಾಪಮಾನ ನಿಯಂತ್ರಣವಾಗುವುದಲ್ಲದೆ ಮನುಕುಲದ ಆರೋಗ್ಯದೊಂದಿಗೆ ಸ್ವಚ್ಛ ಪರಿಸರ ನಿರ್ಮಾಣವಾಗುತ್ತದೆ.

ಭೂಮಿ ಎನ್ನುವುದು ಸಕಲ ಜೀವಜಂತುಗಳಿಗೆ ಆರೋಗ್ಯವಂತ ಬದುಕು ಕಟ್ಟಿಕೊಳ್ಳಲು ಭಗವಂತನು ಕೊಟ್ಟ ಬಳುವಳಿಯಾಗಿದೆ. ವೇದ, ಉಪನಿಷತ್ತು, ಪುರಾಣ ಹಾಗೂ ಪುಣ್ಯಕಥೆಗಳಲ್ಲಿ ಉಲ್ಲೇಖವಾಗಿರುವಂತೆ ಭೂಮಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಸಕಲ ಜೀವರಾಶಿಗಳ ಹುಟ್ಟು, ಬದುಕು ಹಾಗೂ ಸಾವುಗಳು ಭೂಮಿ ತಾಯಿಯ ಮಡಿಲಲ್ಲಿಯೆ ನಡೆಯುತ್ತವೆ. ಪ್ರಸ್ತುತ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳು ಸಾಕಷ್ಟು ಮುಂದುವರೆದಿದ್ದರೂ ಜೀವಸಂಕುಲದ ವಾಸಸ್ಥಾನ ಕ್ಕಾಗಿ ಮತ್ತೊಂದು ಪವಿತ್ರ ಧರಿತ್ರಿಯನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಭೂಮಿಯನ್ನು ಫಲವತ್ತಾದ ಸ್ಥಿತಿಯಲ್ಲಿಯೇ ಮುಂದುವರಿಸುವುದು ಮನುಕುಲದ ಪ್ರಮುಖ ಜವಾಬ್ದಾರಿಯಾಗಿದೆ. ಆದರೆ ಜೀವಸಂಕುಲದಲ್ಲಿಯೆ ಜ್ಞಾನಿಯೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಮಾನವರು ಸ್ವಾರ್ಥಕ್ಕಾಗಿ ಮನಸೋ ಇಚ್ಛೆ ಭೂಮಿಯ ಆರೋಗ್ಯವನ್ನು ಹದಗೆಡಿಸುವಂತಹ ಹೇಯ ಕೃತ್ಯಗಳಲ್ಲಿ ತೊಡಗಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ.

ರಾಸಾಯನಿಕಗಳ ಬಳಕೆಯಿಂದ ಭೂಮಿಯು ನಾಶವಾಗುತ್ತಿರುವುದು ಸುಳ್ಳೇನಲ್ಲ. ಅನಿವಾರ್ಯವೆಂಬಂತೆ ವಿಶ್ವವು ಇಂದು ರಾಸಾಯನಿಕಗಳ ಕಪಿಮುಷ್ಠಿಯಲ್ಲಿ ಸಿಲುಕಿ ನಲುಗುತ್ತಿದೆ. ಪ್ರತಿಯೊಂದು ಆಹಾರ, ವಿಹಾರ ಮತ್ತು ದಿನಬಳಕೆಯ ವಸ್ತುಗಳಲ್ಲಿ ರಾಸಾಯನಿಕಗಳು ಪ್ರಾಬಲ್ಯ ಮೆರೆಯುತ್ತಿವೆ. ಅದರಂತೆ ಇಂಧನಗಳು ಸಹ ಮಾನವನ ಬದುಕಿನ ಅವಿಭಾಜ್ಯ ಅಂಗಗಳಾಗಿ ಪರಿವರ್ತನೆಯಾಗಿವೆ. ಇಂಧನಗಳಿಲ್ಲದೆ ಬದುಕು ಅಸಾಧ್ಯವೆಂಬ ಪರಿಸ್ಥಿತಿ ನಿರ್ಮಾಣವಾಗಿರುವಾಗ ಪರಿಸರ ಸಂರಕ್ಷಣೆಯ ಅರಿವಿಲ್ಲದೆ ವಿವಿಧ ನಮೂನೆಯ ಇಂಧನಗಳ ಉತ್ಪಾದನೆಯು ಅಧಿಕವಾಗುತ್ತಿದೆ. ಆದ್ದರಿಂದ ಶುದ್ಧ ಇಂಧನದ ಉತ್ಪಾದನೆಯೊಂದಿಗೆ ಪರಿಶುದ್ಧವಾಗಿ ಇಂಧನದ ಬಳಕೆಯು ಸಧ್ಯದ ಅವಶ್ಯಕತೆಯಾಗಿದೆ. ಇಂತಹ ಸನ್ನಿವೇಶದಲ್ಲಿ ನವೀಕರಿಸಬಹುದಾದ ಮತ್ತು ಪರಿಸರಸ್ನೇಹಿ ಇಂಧನದ ಉತ್ಪಾದನೆ ಮತ್ತು ಉಪಯೋಗ ಬಹಳ ಮಹತ್ವವೆನಿಸಿದೆ.

ಜಾಗತಿಕವಾಗಿ ಜನಸಂಖ್ಯೆ ಮತ್ತು ತಾಪಮಾನದ ಏರಿಕೆಯಿಂದಾಗಿ ಹವಾಮಾನಗಳಲ್ಲಿ ಬದಲಾವಣೆಯಾಗುತ್ತಿರುವುದನ್ನು ಕಾಣುತ್ತಿzವೆ. ಇದರಿಂದ ಸಮುದ್ರ ಮಟ್ಟ ಏರಿಕೆಯಾಗಿ ನೈಸರ್ಗಿಕ ವಿಕೋಪಗಳು ಹೆಚ್ಚುತ್ತಿವೆ. ಆದ್ದರಿಂದ ವಿಶ್ವಸಂಸ್ಥೆಯಿಂದ ಪ್ರಸಕ್ತ ವರ್ಷ ಪರಿಸರ ಸಂರಕ್ಷಣೆಯೊಂದಿಗೆ ಹವಾಮಾನ ಬಿಕ್ಕಟ್ಟಿನ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮನುಕುಲದ ಆರೋಗ್ಯ ಸುಧಾರಣೆಗೆ ಹೆಚ್ಚು ಒತ್ತು ಕೊಡಲಾಗಿದೆ. ಇದಕ್ಕಾಗಿ ಶುದ್ಧ ಇಂಧನದ ಕುರಿತು ಜಾಗೃತಿ, ವೈಜ್ಞಾನಿಕ ಕಸ ವಿಲೇವಾರಿ ಮತ್ತು ಗಿಡ-ಮರ ನೆಡುವುದು ಪ್ರಮುಖವಾಗಿದೆ. ಇವುಗಳಿಂದ ಆರ್ಥಿಕ ಮಿತವ್ಯಯದ ಇಂಧನ ಉತ್ಪಾದನೆಯಾಗುವುದರಿಂದ ಸಶಕ್ತ ರಾಷ್ಟ್ರ ನಿರ್ಮಾಣವಾಗುತ್ತದೆ.

ಪ್ರಸ್ತುತ ವಿದ್ಯುತ್ ಬಳಕೆಯು ಅನಿವಾರ್ಯವಾಗಿರುವುದರಿಂದ, ೨೦೨೫ರ ಶೀರ್ಷಿಕೆಯಂತೆ ಪರಿಸರಸ್ನೇಹಿ ವಿದ್ಯುತ್‌ನ ಉತ್ಪಾದನೆಯತ್ತ ಗಮನ ಕೇಂದ್ರೀಕರಿಸ ಲಾಗಿದೆ. ವಿಶ್ವವು ೨೦೩೦ರ ಅವಧಿಗೆ ಸೌರಶಕ್ತಿ, ಪವನಶಕ್ತಿ, ಜಲವಿದ್ಯುತ್, ಭೂಶಾಖ ಸೇರಿದಂತೆ ವಿವಿಧ ನಮೂನೆಯ ಶುದ್ಧ ವಿದ್ಯುತ್ ಮೂಲಗಳ ಸಧ್ಯದ ಉತ್ಪಾದನೆಯನ್ನು ಮೂರುಪಟ್ಟು ಹೆಚ್ಚಿಸಲು ಗುರಿ ಹಾಕಿಕೊಳ್ಳಲಾಗಿದೆ. ಸಧ್ಯದ ವಿದ್ಯುತ್‌ನ ಬೇಡಿಕೆಯನ್ನು ಪರಿಗಣಿಸಿ ಈ ನಿರ್ಧಾರ ಮಾಡಲಾಗಿದೆ.

೨೦೨೩ರಲ್ಲಿ ಅಮೇರಿಕೆಯ ಕ್ಯಾಲಿಫೋರ್ನಿಯಾ, ಟೆಕ್ಸಾಸ್, ಫ್ಲೋರಿಡಾ, ಉತ್ತರ ಕೆರೋಲಿನಾ, ನೆವಾಡಾ ಮತ್ತು ಅರಿಜೋನಾ ರಾಷ್ಟ್ರಗಳು ಅತಿ ಅಗ್ಗದ ದರದಲ್ಲಿ ಸೌರ ಇಂಧನ ಉತ್ಪಾದನೆ ಮಾಡಿ ತಮ್ಮ ದೇಶಗಳ ಪರಿಸರ ಸಂರಕ್ಷಣೆಗೆ ಕಟಿಬದ್ಧವಾದವು. ಅದರಂತೆ ಚೀನಾ ದೇಶವು ವಿಶ್ವದಲ್ಲಿಯೇ ಅತಿಹೆಚ್ಚು ಪವನ ಮತ್ತು ಸೌರ ವಿದ್ಯುತ್ ಅನ್ನು ಉತ್ಪಾದಿಸುವ ದೇಶವಾಗಿ ಹೊರಹೊಮ್ಮಿದೆ. ಉರುಗ್ವೆ ದೇಶವು ಆಂತರಿಕ ಬಳಕೆಯ ೯೮% ವಿದ್ಯುತ್ ಅನ್ನು ನವೀಕರಿಸಬಹುದಾದ ಇಂಧನಗಳಿಂದಲೆ ಉತ್ಪಾದಿಸಿ ಜಗತ್ತಿಗೆ ಮಾದರಿಯಾಗಿದೆ. ಕೀನ್ಯಾ ದೇಶವು ಬೇಡಿಕೆಯ ಸುಮಾರು ಅರ್ಧದಷ್ಟು ವಿದ್ಯುತ್ ಅನ್ನು ಭೂಶಾಖದ ಮೂಲಕ ಉತ್ಪಾದಿಸುತ್ತಿದೆ. ಆಸ್ಟ್ರೇಲಿಯಾದಲ್ಲಿ ಪ್ರತಿಯೊಂದು ಮನೆಗಳಲ್ಲಿ ಸೌರವಿದ್ಯುತ್ ಅನ್ನು ಕಡ್ಡಾಯಗೊಳಿಸಿ ಜನತೆಯಲ್ಲಿ ಜಾಗೃತಿ ಮೂಡಿಸಿದೆ.

ಬ್ರೆಜಿಲ್‌ನಲ್ಲಿ ೬೮%, ಇಟಲಿಯಲ್ಲಿ ೨೩% ಮತ್ತು ನೆದರ್ಲ್ಯಾಂಡಿನಲ್ಲಿ ೧೬%ನಷ್ಟು ಜಲವಿದ್ಯುತ್ ಬಳಸಲಾಗುತ್ತಿದೆ. ಡೆನ್ಮಾರ್ಕ್‌ನಲ್ಲಿ ೫೦%, ಸ್ಪೇನ್ ೩೦%, ನೆದರ್ಲ್ಯಾಂಡ್‌ನಲ್ಲಿ ೧೭% ಮತ್ತು ಜರ್ಮನಿಯಲ್ಲಿ ೨೩%ನಷ್ಟು ಪವನ ವಿದ್ಯುತ್ ಬಳಸಲಾಗುತ್ತಿದೆ. ಭಾರತವು ಸಹ ಈ ನಿಟ್ಟಿನಲ್ಲಿ ೨೦೩೦ರ ವೇಳೆಗೆ ೫೦% ನವೀಕರಿಸಬಹುದಾದ ಇಂಧನವನ್ನು ಉತ್ಪಾದಿಸಲು ಗುರಿ ಹಾಕಿಕೊಂಡಿದೆ. ಪ್ರಸ್ತುತ ೨೦೨೪ರಲ್ಲಿ ಭಾರತದಲ್ಲಿ ನವೀಕರಿಸಬಹುದಾದ ಇಂಧನದ ಉತ್ಪಾದನೆ ೧೫.೮೪%ನಷ್ಟಿದೆ. ಇಷ್ಟೆಲ್ಲಾ ಅದ್ಭುತ ಶಕ್ತಿಗಳು ಭೂಮಿಯಲ್ಲಿ ಅಡಗಿರುವಾಗ ಪರಿಸರ ಮಾಲಿನ್ಯದಂತಹ ಪ್ರಕ್ರಿಯೆಗಳ ಮೂಲಕ ಇಂಧನಗಳ ಉತ್ಪಾದನೆ ಯಾಕೆ? -ಎಂಬುದು ೨೦೨೫ರ ವಿಶ್ವ ಭೂಮಿ ದಿನದ ಶೀರ್ಷಿಕೆಯಾಗಿದೆ. ಭೂಮಿಯ ಒಡಲಾಳದಲ್ಲಿರುವ ವಿದ್ಯುತ್ ಉತ್ಪಾದನೆಗೆ ಪೂರಕವಾದ ಸಂಪತ್ತನ್ನು ಹೆಕ್ಕಿ ತೆಗೆದು ಇಂದಿನ ಕಾಲಘಟ್ಟಕ್ಕೆ ಅತೀ ಅವಶ್ಯವಿರುವ ಶುದ್ಧ ವಿದ್ಯುತ್ ಅನ್ನು ಉತ್ಪಾದಿಸುವ ಮೂಲಕ ಭೂಮಿ ತಾಯಿಯ ಮಡಿಲು ಮತ್ತು ಒಡಲನ್ನು ಸಂರಕ್ಷಿಸ ಬೇಕಾಗಿದೆ. ಭೂಮಿ ಉಳಿದಾಗ ಮಾತ್ರ ಭರವಸೆಯ ಬದುಕು ನಿರ್ಮಾಣವಾಗುತ್ತದೆ.

-ಬಸವರಾಜ ಶಿವಪ್ಪ ಗಿರಗಾಂವಿ
ಲೇಖಕರು, ಮೊ: ೯೯೮೦೩೨೪೪೧೦

Related Posts

Leave a Reply

Your email address will not be published. Required fields are marked *