ಸಾಫ್ಟ್‌ವೇರ್ ಉದ್ಯೋಗದಲ್ಲಿ ವರ್ಷಪೂರಾ ದುಡಿದು ಹಣ ಗಳಿಸಿಯೂ ನೆಮ್ಮದಿಯಿಂದ ಇರಲಾಗದು, ಆದರೆ ಜಾನ್‌ರವರು ವರ್ಷದಲ್ಲಿ ಕೆಲವು ತಿಂಗಳು ಮಾತ್ರ ಹಾಗೂ ದಿನದಲ್ಲಿ ಕೆಲವು ಗಂಟೆ ಮಾತ್ರ ಕೆಲಸ ಮಾಡಿ ಸ್ವಾವಲಂಬಿ ಹಾಗೂ ನೆಮ್ಮದಿಯಾಗಿ ಇದ್ದಾರೆ, ತಾವು ಮಾತ್ರ ಇರದೆ ಇತರರಿಗೂ ತರಬೇತಿ ನೀಡುತ್ತಿ ದ್ದಾರೆ. ಪರೀಕ್ಷೆಗಳಲ್ಲಿ ಫೇಲಾಗುವ ಕಾಲೇಜು ವಿದ್ಯಾರ್ಥಿಗಳಿಗೆ ಇವರ ಬದುಕು ಮಾದರಿಯಾಗುತ್ತದೆ. ಯಾಂತ್ರಿಕ ಬದುಕಿನಲ್ಲಿ ಎಲ್ಲವೂ ಇದ್ದು ಏನನ್ನೂ ಅನುಭವಿಸಲು ಆಗದ ಅನಾರೋಗ್ಯ ಸ್ಥಿತಿಯಲ್ಲಿ ಇರುವ ಸಮಾಜಕ್ಕೆ ಜಾನ್ ಜಂಡೈರವರ ಸ್ವಾವಲಂಬಿ ಬದುಕು ಬೇಕಾಗಿದೆ.
ಅನ್ನದಾತನು ವೃತ್ತಿಯಲ್ಲಿ ದೇಶ ಕಾಯುವ ಸೈನಿಕನಿಗಿಂತಲೂ ಉತ್ತಮನು, ರೈತ ಸ್ವಾವಲಂಬಿ. ಯಾರ ಮುಲಾಜಿಗೂ ಒಳಗಾಗದಿರುವ ಸರ್ವಸ್ವತಂತ್ರನು. ಇತರೆಲ್ಲಾ ವೃತ್ತಿಗಳಿಗಿಂತಲೂ ಶ್ರೇಷ್ಟ ಹಾಗೂ ಉತ್ತಮ. ಏಕೆಂದರೆ ರೈತ ಬೆವರು ಸುರಿಸಿ ಬೆಳೆದು ಕೊಡುವ ಅನ್ನವನ್ನು ತಿಂದು ವಿಶ್ವವೇ ಬದುಕುತ್ತಿರುವುದು, ನಿತ್ಯವೂ ಇವನ ನೆನೆಯದೆ ಬದುಕಿಲ್ಲ, ಆದರೂ ಈ ಸ್ವಾವಲಂಬಿಯು ಕೃಷಿಯನ್ನು ಮಾಡುವುದು ಬೇಡ, ನಮ್ಮ ತಲೆಗೇ ಸಾಕು ಎನ್ನುವ ಮಟ್ಟಕ್ಕೆ ವ್ಯವಸ್ಥೆಯು ತಂದು ನಿಲ್ಲಿಸಿದೆ. ಅಡೆತಡೆಗಳು ಇದ್ದಾಗ್ಯೂ ಕೃಷಿಯಲ್ಲಿ ತನ್ನ ಸುಖ ಹಾಗೂ ಬದುಕು ಕಟ್ಟಿಕೊಂಡಿರುವ ಜಾನ್ ಜಂಡೈ ಎಂಬ ಸ್ವಾವಲಂಬಿಯ ಸಾಧನೆಯನ್ನು ತಿಳಿಯುವುದರಿಂದ ಆತನಂತೆ ನಾವೂ ಕೂಡ ಜೀವಿಸುವುದಕ್ಕೆ ಪ್ರಯತ್ನಿಸಲು ಪ್ರೇರಣೆ ಆಗಬಹುದು. ಅನ್ನದೇವರಿಗಿಂತ ಅನ್ಯ ದೇವರಿಲ್ಲ ಎಂಬ ಮಾತೊಂದಿದೆ, ಅನ್ನದೇವರನ್ನೇ ಸೃಷ್ಟಿಸುವ ರೈತ ತಾನು ನೆಮ್ಮದಿಯಿಂದ ಇದ್ದಾನೆಯೇ ಅಥವಾ ಇರುವುದಕ್ಕೆ ವ್ಯವಸ್ಥೆಯು ಬಿಟ್ಟಿದೆಯೇ?
ಸ್ವಾವಲಂಬಿ ಆಗುವುದನ್ನು ಜಾನ್ ಜಂಡೈಗೆ ಯಾರೂ ಹೇಳಿಕೊಡಲಿಲ್ಲ, ಸ್ವಾವಲಂಬಿ ಆಗುವುದು ಹೇಗೆ ಎಂಬುದನ್ನು ಕಂಡುಕೊಂಡ ಜಾಣನಿವನು, ಎಲ್ಲದಕ್ಕೂ ಅನ್ಯರನ್ನು ಆಶ್ರಯಿಸದೆ ತಾನೇ ಉತ್ಪತ್ತಿ ಮಾಡಿಕೊಳ್ಳುವುದನ್ನು ಸ್ವತಃ ಕಲಿತು, ಬೇರೆಯವರಿಗೂ ಪ್ರೇರಣೆಯಾಗಿರುವ ಸಾಧಕ. ತನ್ನ ಆಹಾರವನ್ನು ತಾನೇ ಬೆಳೆಯುವುದು, ತನ್ನ ಆಹಾರವನ್ನು ತಾನೇ ಬೇಯಿಸಿಕೊಳ್ಳುವುದು, ತನ್ನ ಮನೆಯನ್ನು ತಾನೇ ನಿರ್ಮಿಸಿಕೊಳ್ಳುವುದು ಜೊತೆಗೆ ಪರಿಸರ ಹಾಗೂ ಹಸಿರುಸ್ನೇಹಿ ಯಾಗಿ ಇರುವ ಹಾಗೆ ಕಟ್ಟಿಕೊಂಡಿರುವುದು ವಿಶೇಷ. ಸೋಪು, ಶಾಂಪು, ಸಾಸ್‌ಗಳನ್ನು ತಯಾರಿಸುವುದು ಹಾಗೂ ವೈದ್ಯರ ಬಳಿ ಹೋಗದಿರಲು ಹಲವು ಔಷಧಗಳನ್ನು ರೋಗಗಳಿಗೆ ಕಂಡುಕೊಂಡಿದ್ದಾನೆ. ಇವನ ಜೀವನಶೈಲಿಯು, ಪ್ರಾಣಿಗಳಿಂದ ಪ್ರಕೃತಿಗೆ ಯಾವುದೇ ವಿಧವಾದ ಹಾನಿ ಆಗುವುದಿಲ್ಲವೋ ಹಾಗೆ ಪೂರಕವಾಗಿದೆ. ಜಾನ್‌ನಂತೆ ಒಂದೊಂದೇ ಕಲಿತು ಅಳವಡಿಸಿಕೊಂಡ ಸ್ವಾವಲಂಬಿ ವಿದ್ಯೆಯಿಂದಾಗಿ ಬದುಕನ್ನು ಸಂತೋಷವಾಗಿ ಸಾಗಿಸಿಕೊಂಡು ಹೋಗುವುದು ಸುಲಭವೇನಲ್ಲ ಹಾಗೂ ಕಷ್ಟವೂ ಅಲ್ಲ, ಮನಸ್ಸು ಮಾಡಬೇಕಷ್ಟೆ.
ಜಾನ್ ಜಂಡೈ ಹುಟ್ಟಿದ್ದು ಬಡತನವನ್ನೇ ಹೊದ್ದಿದ್ದಂತಹ ಈಶಾನ್ಯ ಥೈಲ್ಯಾಂಡನ ಒಂದು ಪುಟ್ಟ ಹಳ್ಳಿಯಲ್ಲಿ, ಅಷ್ಟಾಗಿ ಹಣಕಾಸು ವ್ಯವಹಾರಗಳಿಲ್ಲದ ಹಳ್ಳಿ ಅದು, ಜನರು ತಾವು ತಯಾರಿಸುತ್ತಿದ್ದ ವಸ್ತುಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಅಗತ್ಯ ವಸ್ತುಗಳನ್ನು ಪಡೆದು ಪ್ರಕೃತಿಗೆ ಸಹವರ್ತಿಯಾಗಿ ಜೀವನ ನಡೆಸುತ್ತಿದ್ದರು, ಹೆಚ್ಚು ವಸ್ತುಗಳನ್ನು ಉತ್ಪಾದಿಸುವುದು ಮತ್ತೊಬ್ಬರಿಗೆ ಕೊಡುವುದು. ಅವರಿಂದ ಇವರಿಗೆ ಹೆಚ್ಚಾದುದ್ದನ್ನು ಕೊಟ್ಟು ಪಡೆಯುವ ಜೊತೆಗೆ ಉಳಿದವರಿಗೂ ಸಾಮರ್ಥ್ಯಕ್ಕೆ ಅನುಸಾರ ಸಹಾಯ ಮಾಡಿ ಸಂತೋಷ ಕಾಣುತ್ತಿದ್ದರು, ಒಟ್ಟಿನಲ್ಲಿ ಸಹಬಾಳ್ವೆ ಹಾಗೂ ನೆಮ್ಮದಿ ತಾಂಡವವಾಡುತ್ತಿತ್ತು.
ಬಡತನ ಇದ್ದರೂ ಕಷ್ಟಪಟ್ಟು ದುಡಿಯುವುದರಲ್ಲಿ ಸುಖಶಾಂತಿ ನೆಮ್ಮದಿಯನ್ನು ಕಾಣುತ್ತಿದ್ದರು. ಹಳ್ಳಿಯು ಕ್ರಮೇಣ ಅಭಿವೃದ್ಧಿಯನ್ನು ಕಾಣತೊಡಗಿತು, ಊರಿಗೆ ವಿದ್ಯುತ್ ಹಾಗೂ ಟಿವಿ ಬಂತು, ಪರಿಸ್ಥಿತಿಯು ಬದಲಾಗತೊಡಗಿತು, ಕೆಲವರು ಕೊಂಡರು, ಇಲ್ಲದವರು ಕೊಳ್ಳಲು ಹೆಚ್ಚೆಚ್ಚು ದುಡಿಯಲು ಪ್ರಾರಂಭಿಸಿದರು. ಟಿವಿ ಬಂದ ನಂತರ ಇತರೆ ಐಷಾರಾಮಿ ವಸ್ತುಗಳು ಬರದೆ ಇರುತ್ತದೆಯೇ, ಟಿವಿ, ಮೋಟಾರ್ ಸೈಕಲ್, ಫ್ರಿಡ್ಜು, ಸೋಫಾ, ಮಿಕ್ಸಿ ಮುಂತಾದವುಗಳನ್ನು ಕೊಳ್ಳಲು ಬಡತನದಿಂದ ಹೊರಬರಬೇಕು, ಜಾಸ್ತಿ ದುಡಿಯಬೇಕು ಹಣ ಸಂಪಾದಿಸಬೇಕು. ಒಂದೊಂದೇ ಪದಾರ್ಥಗಳು ಮನೆಗೆ ಬಂದವು. ಹಾಗೆಯೇ ಕೊಳ್ಳುಬಾಕ ಮನಸ್ಥಿತಿಯನ್ನು ಕ್ಯಾಷ್ ಮಾಡಿಕೊಳ್ಳಲು, ಸಾಲವನ್ನು ಕೊಡುವುದಕ್ಕೆ ಹಲವು ಕಂಪನಿಗಳು ಪೈಪೋಟಿಯಲ್ಲಿ ನಿಂತವು, ಸುಂದರ ಬದುಕು ಕಟ್ಟಿಕೊಳ್ಳುವ ಉzಶದಿಂದ ಸಾಲವನ್ನು ಮಾಡತೊಡಗಿದರು, ಸಾಲದ ಹೊರೆ ಹೆಚ್ಚಾಯಿತು. ಹೆಚ್ಚು ದುಡಿದರೂ ಸಾಲದ ಹೊರೆ ಕಮ್ಮಿ ಆಗದೆ ಬಡ್ಡಿಗೆಬಡ್ಡಿ ಸೇರಿ ಹೆಚ್ಚಾಗುತ್ತಲೇ ಇತ್ತು. ಸಾಲದ ಹೊರೆಯಿಂದ ಶ್ರೀಮಂತರಾಗಿರುವುದಕ್ಕಿಂತ ಸಾಲವಿಲ್ಲದೆ ಬಡವರಾಗಿ ಇದ್ದಾಗಿನ ನೆಮ್ಮದಿಯನ್ನು ಕಳೆದುಕೊಂಡರು. ಸ್ವಾಭಿಮಾನದ ಬದುಕಿಗೆ ಕೊಳ್ಳಿ ಇಟ್ಟ ಶ್ರೀಮಂತಿಕೆಯ ಬದುಕಿನ ದೀರ್ಘಕಾಲದ ನೋವು ಹಳ್ಳಿಯ ಜನರಲ್ಲಿ ಮನೆಮಾಡಿತು.
ಬಡತನದಿಂದ ದೂರವಿರಲು ಶ್ರಮವಹಿಸಿ ದುಡಿದವರಲ್ಲಿ ಜಾನ್ ಜಂಡೈಯವರು ಒಬ್ಬರು. ನಗರಕ್ಕೆ ವಲಸೆ ಬಂದು ಹಲವು ವೃತ್ತಿಗಳನ್ನು ಕೈಗೊಂಡರೂ ಯಾವುದೂ ಯಶಸ್ವಿಯಾಗಲಿಲ್ಲ, ದುಡಿದರೂ ಉಳಿತಾಯವಿಲ್ಲ, ಚಿಂತಾಕ್ರಾಂತನಾಗಿ ವಿಫಲನಾಗಿಬಿಟ್ಟೆ ಎಂದು ಭಾವಿಸಿದ ಜಾನ್ ಜಂಡೈ, ಪ್ರತೀ ವಿಫಲತೆಗೂ ಒಂದು ಕಾರಣವಿರುತ್ತದೆ ಹಾಗೆಯೇ ಯಶಸ್ಸಿಗೆ ದಾರಿಯೂ ಇರುತ್ತದೆ ಎಂದು ನಂಬಿದ್ದರು. ಜಾನ್ ನಗರದ ಜೀವನದಿಂದ ನಿರಾಶೆಗೊಂಡು ಹಳ್ಳಿಗೆ ಹಿಂತಿರುಗಿ ದರು. ಮನಸ್ಸಿನ ಮೂಲೆಯಲ್ಲಿ ನಂಬಿಕೆ ಇತ್ತು, ಬಡತನದ ಸಮಸ್ಯೆಯಿಂದ ಹೊರಬರುತ್ತೇನೆ, ನಕರಾತ್ಮಕ ಚಿಂತನೆಯನ್ನು ಮಾಡುವುದಿಲ್ಲವೆಂದು ತೀರ್ಮಾನಿಸಿ ಆತ್ಮವಿಶ್ವಾಸದಿಂದ ಕೃಷಿಕ್ಷೇತ್ರಕ್ಕೆ ಪ್ರವೇಶಿಸಿ ಯಶಸ್ವಿಯಾಗಿದ್ದು ವಿಸ್ಮಯವೇ ಸರಿ. ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಪನ್‌ಪುನ್ ಎಂಬ ಸಮುದಾಯ ವನ್ನು ಸ್ಥಾಪಿಸಿದರು, ಇದು ಸ್ವಾವಲಂಬನೆಯಿಂದ ಬದುಕುವ ಕಲಿಕಾ ಕೇಂದ್ರ. ಜಮೀನನ್ನು ಸುಸ್ಥಿರವಾಗಿ ಹೇಗೆ ವಿನ್ಯಾಸಗೊಳಿಸಬಹುದು ಎಂಬುದರ ಬಗ್ಗೆ ನಿರ್ಭಯವಾಗಿ ಆತ್ಮವಿಶ್ವಾಸದಿಂದ ಕೆಲಸ ಮಾಡಲಾರಂಭಿಸಿದರು. ಪೂರ್ಣಪ್ರಮಾಣದಲ್ಲಿ ತನ್ನ ಜೀವನವನ್ನು ಜಮೀನಿನಲ್ಲಿ ಕಳೆಯಲಾರಂಭಿಸಿ ಆನಂದವನ್ನು ಕಂಡುಕೊಂಡರು. ತಾನೊಬ್ಬನೇ ಆನಂದಿಸದೇ ಬೇರೆಯವರಿಗೂ ಆ ಖುಷಿಯನ್ನು ಕಂಡುಕೊಳ್ಳುವ ಮಾರ್ಗವನ್ನು ತಿಳಿಸತೊಡಗಿದರು.
ಇವರ ಯೋಜನೆಯ ಮುಖ್ಯ ಉzಶವು ಪರಂಪರೆಯಿಂದ ಬಂದ ಬೀಜಗಳನ್ನು ಸಂರಕ್ಷಿಸುವುದು ಅವುಗಳನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವುದಾಗಿದೆ. ಈ ಕುರಿತಾಗಿ ಹಲವು ಕಾರ್ಯಾಗಾರಗಳನ್ನು ಮಾಡಿ ಆಸಕ್ತರಿಗೆ ಸ್ವಾವಲಂಬಿ ಆಗುವ ಕುರಿತು ತಿಳುವಳಿಕೆಯನ್ನು ನೀಡುತ್ತಾ ಬರುತ್ತಿದ್ದಾರೆ. ಜಾನ್ ಜಂಡೈಯವರ ಟ್ಯಾಗ್ ಲೈನ್ ತುಂಬಾ ಆಕರ್ಷಕ ಹಾಗೂ ಅರ್ಥಗರ್ಭಿತವಾಗಿದೆ. ಜೀವನ ಸುಲಭ, ನಾವೇಕೆ ಅದನ್ನು ಇಷ್ಟೊಂದು ಕಠಿಣಗೊಳಿಸುತ್ತೇವೆ? ಜನರಿಗೆ ಬಾಹ್ಯ ಪ್ರಪಂಚದ ಸಂಪರ್ಕವನ್ನು ಕಡಿತಗೊಳಿಸಿಕೊಂಡು ಸ್ವತಂತ್ರರಾಗಿರಲು ಕಲಿಸಲಾಗುತ್ತಿದೆ, ನಾವು ಹಣವನ್ನು ಮಾತ್ರ ಅವಲಂಬಿಸಬಹುದು, ಅಲ್ಲಿ ಪರಸ್ಪರ ಅವಲಂಬನೆಯ ಸಹಬಾಳ್ವೆ ಇರುವುದಿಲ್ಲ. ಆದರೆ ಇವನ ಸೂತ್ರದ ಪರಿಣಾಮವಾಗಿ ಸಂತೋಷವಾಗಿರಲು ಜನರೊಟ್ಟಿಗೆ ಬೆರೆತು ಸಹಬಾಳ್ವೆ ಮಾಡುವುದು. ಕಾರ್ಯಾಗಾರಗಳನ್ನು ಏರ್ಪಡಿಸಿ ಮಣ್ಣನ್ನು ಫಲವತ್ತವಾಗಿ ಮಾಡುವ ಬಗೆ, ನೈಸರ್ಗಿಕ ವ್ಯವಸಾಯದ ಅರಿವು ಮುಂತಾದವುಗಳನ್ನು ಮನಮುಟ್ಟುವಂತೆ ಕಲಿಸುತ್ತಿದ್ದಾರೆ. ಇವನ ಸ್ವಾವಲಂಬಿ ಬದುಕನ್ನು ಕಂಡ ಜನರು, ಸ್ವಾವಲಂಬಿ ಕೇಂದ್ರದ ಸ್ಥಾಪಕ ಜಾನ್ ಜಂಡೈಯನ್ನು ‘ನೈಸರ್ಗಿಕ ಜೀವನದ ಗುರು’ ಎಂದು ಕರೆಯುತ್ತಿದ್ದಾರೆ.
ಜಾನ್ ಜಂಡೈರವರ ಭಾಷಣಗಳ ವಿಡಿಯೋಗಳನ್ನು ಲಕ್ಷಾಂತರ ಜನರು ನೋಡಿ ಪ್ರೇರಣೆಗೊಂಡಿದ್ದಾರೆ, ಪ್ರೇರಣೆ ನೀಡಬಲ್ಲ ಭಾಷಣಗಳ ಜೊತೆಗೆ ಅವರು ಬರೆದಿರುವ ಪುಸ್ತಕಗಳಲ್ಲಿ ಮಣ್ಣಿನೊಂದಿಗೆ ಜೀವಿಸುವ ಬದುಕು, ಬೇಸಾಯ ಹಾಗೂ ಮನೆಯ ನಿರ್ಮಾಣದಲ್ಲಿ ಪ್ರಾಚೀನ ವಿಧಾನವನ್ನು ನವೀಕೃತಗೊಳಿಸಿ ಸರಳವಾಗಿ ಜೀವಿಸುವುದನ್ನು ತಿಳಿಸಿಕೊಟ್ಟಿದ್ದಾರೆ.
ಸಾಫ್ಟ್‌ವೇರ್ ಉದ್ಯೋಗದಲ್ಲಿ ದಿನವೆಲ್ಲಾ ಹಾಗೂ ವರ್ಷಪೂರಾ ದುಡಿದು ಹಣ ಗಳಿಸಿಯೂ ನೆಮ್ಮದಿಯಿಂದ ಇರಲಾಗದು, ಆದರೆ ಜಾನ್‌ರವರು ವರ್ಷದಲ್ಲಿ ಕೆಲವು ತಿಂಗಳು ಮಾತ್ರ ಹಾಗೂ ದಿನದಲ್ಲಿ ಕೆಲವು ಗಂಟೆ ಮಾತ್ರ ಕೆಲಸ ಮಾಡಿ ಸ್ವಾವಲಂಬಿ ಹಾಗೂ ನೆಮ್ಮದಿಯಾಗಿ ಇದ್ದಾರೆ, ತಾವು ಮಾತ್ರ ಇರದೆ ಇತರರಿಗೂ ತರಬೇತಿ ನೀಡುತ್ತಿದ್ದಾರೆ. ಪರೀಕ್ಷೆಗಳಲ್ಲಿ ಫೇಲಾಗುವ ಕಾಲೇಜು ವಿದ್ಯಾರ್ಥಿಗಳಿಗೆ ಇವರ ಬದುಕು ಮಾದರಿಯಾಗುತ್ತದೆ. ವಿಶ್ವವಿದ್ಯಾಲಯಗಳಲ್ಲಿ ಡಿಗ್ರಿಗಳ ಸರ್ಟಿಫಿಕೇಟ್ ಪಡೆಯದೆ ಸಂತೃಪ್ತ ಜೀವನ ನಡೆಸಲಿಕ್ಕೆ ಸಾಧ್ಯವಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ, ಇವತ್ತಿನ ಯಾಂತ್ರಿಕ ಬದುಕಿನಲ್ಲಿ ಎಲ್ಲವೂ ಇದ್ದು ಏನನ್ನೂ ಅನುಭವಿಸಲು ಆಗದ ಅನಾರೋಗ್ಯ ಸ್ಥಿತಿಯಲ್ಲಿ ಇರುವ ಸಮಾಜಕ್ಕೆ ಜಾನ್ ಜಂಡೈರವರ ಸ್ವಾವಲಂಬಿ ಬದುಕು ಬೇಕಾಗಿದೆ, ಹೌದು ಪ್ರತಿಯೊಂದು ವಸ್ತುಗಳ ಬೆಲೆ ಹಾಗೂ ಸೇವೆಯ ಶುಲ್ಕಗಳು ತುಟ್ಟಿಯಾಗುತ್ತಿರುವ ಇವತ್ತಿನ ಸಂದಿಗ್ಧ ಪರಿಸ್ಥಿತಿಯಲ್ಲಿ ತೀರಾ ಅಗತ್ಯವಾಗಿ ಬೇಕಾಗಿದೆ!
-ಮಿರ್ಲೆ ಚಂದ್ರಶೇಖರ
ಲೇಖಕರು -ಮೈಸೂರು
ಫೋ: ೯೯೧೬೧೨೯೬೫೪