Menu

ನವೀಕೃತ ಸಂಪನ್ಮೂಲ ಬಳಸಿ ಭೂಮಿ ಉಳಿಸೋಣ

ನವೀಕರಿಸಬಹುದಾದ ಶಕ್ತಿಯು ಭೂಮಿಗೆ ಗೇಮ್-ಚೇಂಜರ್ ಆಗಿದ್ದು, ಅದು ಅಗ್ಗದ ಮತ್ತು ಹೆಚ್ಚು ಸುಸ್ಥಿರ ಶಕ್ತಿಯನ್ನು ಒದಗಿಸಬಹುದು. ಪಳೆಯುಳಿಕೆ ಇಂಧನ ಬಳಕೆ ಬಿಟ್ಟು, ೨೦೩೦ ರ ಹೊತ್ತಿಗೆ ಶೇ. ೬೦ ಕ್ಕಿಂತ ಹೆಚ್ಚು ನವೀಕರಿಸಬಹುದಾದ ಇಂಧನವನ್ನು ಜಗತ್ತಿನ ಎಲ್ಲ ದೇಶಗಳು ಉತ್ಪಾದಿಸಲು ಮತ್ತು ಕಡ್ಡಾಯವಾಗಿ ಬಳಸಲು ಪಣ ತೊಡಬೇಕಿದೆ. ಅದರಲ್ಲೂ ಭೂಮಿಯ ಮೇಲಿನ ಅತಿದೊಡ್ಡ ವಿದ್ಯುತ್ ಉತ್ಪಾದನೆಯ ಮೂಲ ಸೌರಶಕ್ತಿಯಾಗಿಸಬೇಕಿದೆ.  ಇದು ಅಮೂಲ್ಯ ಭೂಮಿ ಉಳಿಸುವ ಉತ್ತಮವಾದ ದಾರಿಯಾಗಿದೆ.
ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉಂಟಾಗಿರುವ ಕ್ರಾಂತಿಯಿಂದಾಗಿ ಮಾನವನ ಬಹುಮುಖ ಬೇಡಿಕೆಗಳು ಸರಳವಾಗಿ ಈಡೇರುತ್ತಿವೆ. ಆಧುನಿಕ ಜೀವನ ಶೈಲಿ ಹಾಗೂ ಜನಸಂಖ್ಯೆ ಹೆಚ್ಚಳದಿಂದ ಜೀವನಾನುಕೂಲಗಳನ್ನು ಒದಗಿಸಿಕೊಳ್ಳಲು ಕೃಷಿ, ಹಳ್ಳಿ, ನಗರಗಳ ವಿಸ್ತರಣೆ, ನೀರಾವರಿ-ಆಣೆಕಟ್ಟು, ಕಾರ್ಖಾನೆ, ಸಂಪನ್ಮೂಲಗಳ ಬರಿದಾಗುವಿಕೆ, ಅಪಾರ ಪ್ರಮಾಣದ ಕಲ್ಲಿದ್ದಲು ಮತ್ತು ಪೆಟ್ರೋಲ್ ಬಳಕೆ, ವಿದ್ಯುತ್ ಘಟಕಗಳ ಸ್ಥಾಪನೆಗಾಗಿ ಹೆಚ್ಚು ಅರಣ್ಯಗಳನ್ನು ತೆರವುಗೊಳಿಸಿ ಕಾಡು-ನಾಡಾಗಿ ಪರಿವರ್ತನೆ ಹೊಂದುತ್ತಿರುವ ಫಲದಿಂದ ಭೂಮಂಡಲದ ತಾಪಮಾನ ಹೆಚ್ಚಾಗುತ್ತಿರುವುದರ ಜೊತೆಗೆ ಭೂಮಿ ಮರುಭೂಮೀ ಕರಣಗೊಳ್ಳುತ್ತಿದೆ.
 ಈಗ ಭೂಮಿ ಮೇಲಿನ ಜನಸಂಖ್ಯೆ ಸುಮಾರು ೮೦೦ ಕೋಟಿಯ ಗೆರೆ ದಾಟಿದೆ. ದುರಾಸೆ ಕೇಂದ್ರಿಕೃತವಾಗಿ ಈಗಿನ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ನಮಗೆ ಇದೊಂದೇ ಭೂಮಿ ಸಾಲದು. ಇನ್ನೂ ೫ ಭೂಮಿಗಳ ತುರ್ತು ಅಗತ್ಯವಿದೆ ಎಂದು ಪೌಲ್ ಎರ್ಲಿಚ್ ನೀಡಿದ ಎಚ್ಚರಿಕೆ ನೆನಪಿಗೆ ಬರುತ್ತದೆ. ಆದರೆ ಅದು ಸಾಧ್ಯವಾಗದ ಮಾತು. ಭೂಮಿಯ ಮೇಲೆ ಜೀವಾಣು ಉಗಮದಿಂದ ಇಲ್ಲಿಯವರೆಗೆ ಸುಮಾರು ೩೦ ಶತಕೋಟಿ ಜೀವ ಪ್ರಭೇದಗಳು ಈ ಪ್ರಕೃತಿಯ ಮಡಿಲಲ್ಲಿ ಆಟವಾಡಿವೆ. ಆದರೆ ಪರಿಸರದ ವಿರುದ್ಧದ ಅಭಿವೃದ್ಧಿ ಕಾರ್ಯಗಳ ಹಿಂದೆ ಬಿದ್ದಿರುವ ಮಾನವನು ಮಾತ್ರ ಸ್ವಾರ್ಥ ಸಾಧನೆಗೆ ಮುಂದಾಗಿ ಭೂಮಿಯನ್ನು ಅಪಾಯ ದಂಚಿಗೆ ತಳ್ಳಿದ್ದಾನೆ. ಈ ಮೂಲಕ ಪ್ರಕೃತಿಗೆ ವಿರುದ್ಧವಾದ ಯೋಜನೆಗಳಿಂದ ಹಲವಾರು ಪ್ರಾಕೃತಿಕ ಸಮಸ್ಯೆಗಳು ಎದುರಾಗಿವೆ.
ಹಿಂದೆಲ್ಲ ಪರಿಸರದ ಮೇಲೆ ಮಾನವ ಹಸ್ತಕ್ಷೇಪ ಅಷ್ಟಾಗಿರದ ಕಾಲದಲ್ಲಿ ನೈಸರ್ಗಿಕ ಕಾರಣಕ್ಕಾಗಿ ಜೀವಿಗಳು ಅಳಿದು ಹೋಗುತ್ತಿದ್ದವು. ಆದರೆ ೧೯೫೦ ರಿಂದ ಈಚೆಗೆ ಭೂ ಪರಿಸರ ವ್ಯವಸ್ಥೆಯಲ್ಲಿ ಅಭಿವೃದ್ಧಿ ಕೇಂದ್ರಿಕೃತವಾದ ಮಾನವ ಹಸ್ತಕ್ಷೇಪ ಮಿತಿಮೀರುತ್ತಿದೆ. ನಾವು ಹಂಚಿಕೊಂಡಿರುವ ಈ ದೊಡ್ಡ ಅದ್ಭುತ ಗ್ರಹವು ಕೆಲವು ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ನವೀಕರಿಸಲಾಗದ ಸಂಪನ್ಮೂಲಗಳು ಮುಗಿಯುವ ಭೀತಿ ಉಂಟಾಗಿದೆ. ಜೀವಿ ಪ್ರಭೇದಗಳು ಕಣ್ಮರೆ ಯಾಗುತ್ತಿವೆ. ಹವಾಮಾನ ಬದಲಾವಣೆಯು ಪ್ರತಿದಿನ ಹೆಚ್ಚು ಆತಂಕಕಾರಿಯಾಗುತ್ತಿದೆ. ದಿನದಿಂದ ದಿನಕ್ಕೆ ಅರಣ್ಯಗಳ ನಾಶ, ಪಳೆಯುಳಿಕೆ ಇಂಧನಗಳಿಂದ ಹೆಚ್ಚು ಪ್ರಮಾಣದಲ್ಲಿ ಉತ್ಪತ್ತಿಯಾಗುವ ಇಂಗಾಲದ ಡೈಆಕ್ಸೈಡ್ ಹಾಗೂ ಇತರ ಚಟುವಟಿಕೆಗಳಿಂದ ಬಿಡುಗಡೆಯಾಗುವ ನೈಟ್ರೇಟ್ ಆಕ್ಸೈಡ್, ಗಂಧಕದ ಆಕ್ಸೈಡ್, ಮಿಥೇನ್, ಕ್ಲೋರೋಪ್ಲೋರೋಕಾರ್ಬನ್ಸ್ ಅನಿಲಗಳ ಹೆಚ್ಚುವಿಕೆಯಿಂದ ಹಸಿರುಮನೆ ಪರಿಣಾಮದಿಂದಾಗಿ ವಾತಾವರಣದಲ್ಲಿ ಉಷತೆಯ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತದೆ ಮತ್ತು ಓಝೋನ್ ಹಾಳಾಗುತ್ತಿರುವುದರಿಂದ ಜಾಗತಿಕ ತಾಪಮಾನದಲ್ಲಿ ಏರಿಕೆಯಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.
ಭೂಮಿಯು ಶೇ.೭೧ ರಷ ಭಾಗ ನೀರಿನಿಂದ ಆವೃತವಾಗಿದ್ದರೂ ಕುಡಿಯುವ ನೀರಿನ ಅಭಾವ ನಮ್ಮ ಅನುಭವಕ್ಕೆ ಬರುತ್ತಿದೆ. ಪ್ಲಾಸ್ಟಿಕ್ ಮಾಲಿನ್ಯವು ಇಂದು ನಮ್ಮ ಭೂ ಗ್ರಹದ ಮೇಲೆ ಪರಿಣಾಮ ಬೀರುವ ಪ್ರಮುಖ ಪರಿಸರ ಸಮಸ್ಯೆಗಳಲ್ಲಿ ಒಂದಾಗಿದೆ. ಇಡೀ ಭೂಮಿಯೆಂಬ ಗ್ರಹವೇ ಪ್ಲಾಸಿಕ್ ತುಂಬಿಸುವ ಗಾಡಿ ಯಂತಾಗಿದೆ. ರೋಗ ರುಜಿನಗಳ ಗೂಡಾಗುತ್ತಿದೆ.
ನಾವೆಲ್ಲರೂ ಒಟ್ಟಾಗಿ ಭೂಮಿಯ ಮೇಲಿವೆ. ನಮ್ಮದು ಒಂದೇ ಗ್ರಹ. ವಾಸಯೋಗ್ಯ ಹವಾಮಾನ, ಆರೋಗ್ಯಕರ ಸಮುದಾಯಗಳು ಮತ್ತು ಅಭಿವೃದ್ಧಿ ಹೊಂದು ತ್ತಿರುವ ಭೂ-ಪ್ರಕೃತಿಯೊಂದಿಗೆ ಭವಿಷವನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಭೂ ಮಾಸದಲ್ಲಿ   ಪ್ರತಿ ದಿನ ನಮ್ಮ ತಲೆ, ಕೈ ಮತ್ತು ಹೃದಯ ಗಳನ್ನು ಒಟ್ಟಿಗೆ ಸೇರಿಸಿ, ಮುಂದಿನ ಪೀಳಿಗೆಗೆ ನೈಸರ್ಗಿಕ ಜಗತ್ತನ್ನು ಸುರಕ್ಷಿತವಾಗಿಸಲು ಸಿದ್ಧರಾಗಬೇಕಿದೆ.
ಭೂ ದಿನಾಚರಣೆಯ ಈ ೫೫ ನೇ ವಾರ್ಷಿಕೋತ್ಸವ ವಷವಾದ ೨೦೨೫ಕ್ಕೆ ನವೀಕರಿಸಬಹುದಾದ ಇಂಧನದ ವ್ಯಾಪಕ ಅಳವಡಿಕೆಗೆ ಸಾಮೂಹಿಕ ಬೆಂಬಲವನ್ನು ಒಟ್ಟುಗೂಡಿಸುವುದು ಮತ್ತು ೨೦೩೦ರ ವೇಳೆಗೆ ಜಾಗತಿಕ ಶುದ್ಧ ಇಂಧನ ಉತ್ಪಾದನೆಯನ್ನು ಹೆಚ್ಚಿಸುವುದು ಈ ಭೂ ದಿನಾಚರಣೆಯ ಮತ್ತೊಂದು ಗುರಿಯಾಗಿದೆ. ಭೂಮಿಯ ಮೇಲಿನ ಎಲ್ಲ ಜೀವಿಗಳ ಮೇಲೆ ಪರಿಣಾಮ ಬೀರುವ ಮಾನವ ಜನಸಂಖ್ಯೆಯು ನೈಸರ್ಗಿಕ ಸಂಪನ್ಮೂಲಗಳನ್ನು ಶೇ.೧೭೫ ರಷ್ಟು ವೇಗದಲ್ಲಿ ಬಳಸು ತ್ತಿದೆ. ವಿಜ್ಞಾನಿಗಳ ಅಂದಾಜಿನ ಪ್ರಕಾರ ೨೦೫೦ರ ವೇಳೆಗೆ ಈ ಭೂಮಿಯು ಮನುಷನ ದುರಾಸೆಗಳನ್ನು ಪೂರೈಸುವ ಶಕ್ತಿಯನ್ನೇ ಕಳೆದುಕೊಳ್ಳಲಿದೆ. ಆದ್ದರಿಂದ ಸೌರ, ಪವನ, ಜಲವಿದ್ಯುತ್, ಭೂಶಾಖ, ಮತ್ತು ಉಬ್ಬರವಿಳಿತದ ಮೂಲಕ ಉತ್ಪಾದಿಸುವ ಶಕ್ತಿಯನ್ನು ಬೆಂಬಲಿಸುವ ನಮ್ಮ ಶಕ್ತಿ, ನಮ್ಮ ಗ್ರಹ ಎಂಬ ಧ್ಯೇಯ ದೊಂದಿಗೆ ೨೦೩೦ ರ ವೇಳೆಗೆ ನವೀಕರಿಸಬಹುದಾದ ಇಂಧನವನ್ನು ಮೂರು ಪಟ್ಟು ಹೆಚ್ಚಿಸುವತ್ತ ಗಮನಹರಿಸಬೇಕಿದೆ.
 ಜಗತ್ತಿನ ಬಹುತೇಕ ರಾಷಗಳು ಸೌರ ವಿದ್ಯುತ್ ಶಕ್ತಿ ಮತ್ತು ಪವನ ಶಕ್ತಿಯಿಂದ ಅಗ್ಗದ ಹೊಸ ನಿರ್ಮಿತ ಶಕ್ತಿಯನ್ನು ಉತ್ಪಾದಿಸುತ್ತವೆ. ೨೦೧೧ ರಿಂದ ೨೦೨೧ರವರೆಗೆ ಜಾಗತಿಕ ವಿದ್ಯುತ್ ಪೂರೈಕೆಯಲ್ಲಿ ಶೇ.೨೦ರಿಂದ ಶೇ. ೨೮ಕ್ಕೆ ಏರಿಸಲಾಯಿತು. ಆಗ ಪಳೆಯುಳಿಕೆ ಶಕ್ತಿಯ ಬಳಕೆ ಶೇ. ೮೦ ರಿಂದ ೭೨ ಕ್ಕೆ ಇಳಿಯಿತು. ೨೦೨೪ ರಲ್ಲಿ ನವೀಕರಿಸಬಹುದಾದ ಇಂಧನ ಶೇ. ೩೦ಕ್ಕಿಂತ ಹೆಚ್ಚು ಇತ್ತು. ಚೀನಾ, ಉರುಗ್ವೆ ಮತ್ತು ಆಸ್ಟ್ರೇಲಿಯಾದಂತ ದೇಶಗಳು ಈಗಾಗಲೇ ಶೇ. ೫೦ ಕ್ಕಿಂತ ಹೆಚ್ಚು ಆಂತರಿಕ ವಿದ್ಯುತ್ ಮತ್ತು ಇಂದನಗಳನ್ನು ನವೀಕರಿಸಬಹುದಾದ ಸಂಪನ್ಮೂಲಗಳನ್ನು ಬಳಕೆ ಮಾಡಿ ಭೂಮಿಯ ಸುಸ್ಥಿರತೆಗೆ ಅಡಿಪಾಯ ಹಾಕಿವೆ. ಆದರೆ ಭಾರತ ಶೇ.೧೬ ಕ್ಕಿಂತ ಕಡಿಮೆ ಇದೆ. ನವೀಕರಿಸಬಹುದಾದ ಶಕ್ತಿಯು ಭೂಮಿಗೆ ಗೇಮ್-ಚೇಂಜರ್ ಆಗಿದ್ದು, ಅದು ಅಗ್ಗದ ಮತ್ತು ಹೆಚ್ಚು ಸುಸ್ಥಿರ ಶಕ್ತಿಯನ್ನು ಒದಗಿಸಬಹುದು. ಪಳೆಯುಳಿಕೆ ಇಂಧನ ಬಳಕೆ ಬಿಟ್ಟು, ೨೦೩೦ ರ ಹೊತ್ತಿಗೆ ಶೇ. ೬೦ ಕ್ಕಿಂತ ಹೆಚ್ಚು ನವೀಕರಿಸಬಹುದಾದ ಇಂಧನವನ್ನು ಜಗತ್ತಿನ ಎಲ್ಲ ದೇಶಗಳು ಉತ್ಪಾಸಲು ಮತ್ತು ಕಡ್ಡಾಯವಾಗಿ ಬಳಸಲು ಪಣ ತೊಡಬೇಕಿದೆ. ಅದರಲ್ಲೂ ಭೂಮಿಯ ಮೇಲಿನ ಅತಿದೊಡ್ಡ ವಿದ್ಯುತ್ ಉತ್ಪಾದನೆಯ ಮೂಲ ಸೌರಶಕ್ತಿಯಾಗಿಸಬೇಕಿದೆ.  ಇದು ಅಮೂಲ್ಯ ಭೂಮಿ ಉಳಿಸುವ ಉತ್ತಮವಾದ ದಾರಿಯಾಗಿದೆ.
-ಡಾ. ಪ್ರಕಾಶ ಬಿ. ಹೊಳೇರ
ಭೂಗೋಳಶಾಸ್ತ್ರ ಪ್ರಾಧ್ಯಾಪಕರು
ಹಾನಗಲ್ಲ- ಹಾವೇರಿ.

Related Posts

Leave a Reply

Your email address will not be published. Required fields are marked *