Menu

ಭೂಮಿಯ ಜೀವನಾಡಿ ಹಿಮನದಿಗಳನ್ನು ರಕ್ಷಿಸೋಣ

ನಾವು ವಾಸಿಸುವ ಭೂಮಿ ತುಂಬಾ ಅಮೂಲ್ಯವಾದುದು. ಮನುಷ್ಯನು ಸೇರಿದಂತೆ ಪ್ರಾಣಿ, ಪಕ್ಷಿ ಮತ್ತು ಇನ್ನಿತರ ಜೀವ ಸಂಕುಲಗಳನ್ನು ಕೋಟ್ಯಂತರ ವರ್ಷಗಳಿಂದ ಸಲಹುತ್ತಿರುವ ಭೂಮಿಯ ಅಗಾಧತೆ ಅನನ್ಯ. ಕೋಟ್ಯಂತರ ಜನರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಶಕ್ತಿ ಭೂಮಿಗಿದೆ. ನಮ್ಮ ಬದುಕಿಗೆ ಅಗತ್ಯವಿರುವ ಗಾಳಿ ನೀರು ಆಹಾರಗಳೆಲ್ಲವನ್ನೂ ಭೂಮಿ ನಮಗೆ ನೀಡಿದೆ.

ನೀರು ಭೂಮಿಯ ಮೇಲಿನ ಪ್ರಮುಖ ಸಂಪನ್ಮೂಲಗಳಲ್ಲಿ ಒಂದಾಗಿದೆ. ನೀರಿಲ್ಲದೆ ಜೀವಿಗಳ ಜೀವ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಭೂಮಿಯು ಶೇ.೭೧ ರಷ್ಟು ಭಾಗ ನೀರಿನಿಂದ ಆವೃತವಾಗಿದ್ದರೂ, ಇದರಲ್ಲಿ ಶೇ.೯೭ ರಷ್ಟು ನೀರು ಸಾಗರ-ಸಮುದ್ರಗಳಲ್ಲಿ ಉಪ್ಪಿನಿಂದ ಕೂಡಿ ಬಳಕೆಗೆ ಯೋಗ್ಯವಾಗಿಲ್ಲ. ಉಳಿದ ಶೇ.೩ ರಷ್ಟು ಮಾತ್ರ ಶುದ್ಧ ನೀರನ್ನು ಭೂಮಿ ಹೊಂದಿದೆ. ಈ ಶೇ.೩ರ ಶುದ್ಧ ನೀರಿನಲ್ಲಿ ಶೇ.೨.೦೬೧ ರಷ್ಟು ನೀರು ಹಿಮರೂಪದಲ್ಲಿದ್ದರೆ, ಶೇ.೦.೯೦೩ ರಷ್ಟು ಶುದ್ಧ ನೀರು ಅಂತರ್ ಜಲದ ರೂಪದಲ್ಲಿದೆ. ಶೇ. ೦.೦೦೯ ರಷ್ಟು ನೀರು ಭೂ ಮೇಲ್ಮೆಮೇಲೆ ಸರೋವರ, ಕೆರೆ, ನದಿ, ಬಾವಿಯಲ್ಲಿ ಲಭ್ಯವಿದೆ. ಶೇ.೦.೦೨೭ ರಷ್ಟು ನೀರು ಬಾಷ್ಪೀಕರಣ ಮತ್ತು ಗಾಳಿ ರೂಪದಲ್ಲಿದೆ. ಅಂದರೆ ಕೇವಲ ಶೇ.೦.೩ರಷ್ಟು ಮಾತ್ರ ಬಳಕೆಗೆ ಸಿಗುವ ಶುದ್ಧ ನೀರನ್ನು ಉಳಿಸಿಕೊಳ್ಳುವುದು ಸದ್ಯದ ಸವಾಲಾಗಿ ಪರಿಣಮಿಸಿದೆ. ಆದ್ದರಿಂದ ಬಿದ್ದ ನೀರನ್ನು ನಿಲ್ಲಿಸಬೇಕು, ನಿಂತ ನೀರನ್ನು ಇಂಗಿಸಬೇಕು, ಇಂಗಿಸಿದ ನೀರನ್ನು ಮಿತವಾಗಿ ಬಳಸ ಬೇಕು  ಹಾಗೂ ಜೀವಜಲ ಸಂರಕ್ಷಿಸಬೇಕು.

ಈ ವರ್ಷ ವಿಶ್ವಸಂಸ್ಥೆಯು ನಮ್ಮ ಹಿಮನದಿಗಳನ್ನು ಸಂರಕ್ಷಿಸಿ ಎಂಬ ಘೋಷ ವ್ಯಾಖೆಯ ಮುಖೇನ ಎಲ್ಲ ದೇಶಗಳಿಗೆ ಮನವಿ ಮಾಡಿಕೊಂಡಿದೆ. ಹಿಮನದಿಗಳು ಎಂದಿಗಿಂತಲೂ ವೇಗವಾಗಿ ಕರಗುತ್ತಿವೆ. ಭೂಮಿಯ ಮೇಲೆ ಶೇ ೯೯ ರಷ್ಟು  ಹಿಮನದಿಗಳು ಧ್ರುವ ಪ್ರದೇಶಗಳಲ್ಲಿ ಹಂಚಿಕೆಯಾಗಿವೆ. ಹಿಮದ ಶೇಖರಣೆಯು ಸಾಮಾನ್ಯವಾಗಿ ಶತಮಾನ ಗಳ ಕಾಲ ಅದರ ಕ್ಷಯಿಸುವಿಕೆಯನ್ನು ಮೀರಿದಾಗ ಹಿಮನದಿ ರೂಪುಗೊಳ್ಳುತ್ತದೆ. ಇವು ಭೂ ಮೇಲ್ಮೆಯ ಸುಮಾರು ಶೇ. ೧೦ ರಷ್ಟು ಆವರಿಸಿವೆ. ಅಂಟಾರ್ಕ್ಟಿಕ್ ಮತ್ತು ಗ್ರೀನ್‌ಲ್ಯಾಂಡ್‌ಗಳಲ್ಲಿ ಮಂಜುಗಡ್ಡೆ ಸಂಗ್ರಹವಾಗಿರುವ ಶುದ್ಧ ನೀರಿನ ಪ್ರಮಾಣವು ಭೂಮಿಯ ಮೇಲಿನ ಎಲ್ಲಾ ಶುದ್ಧ ನೀರಿನ ಶೇ. ೬೮ಕ್ಕಿಂತ ಹೆಚ್ಚು. ಮಂಜುಗಡ್ಡೆಗಳಿಂದ ಭಿನ್ನ ವಾಗಿರುವ ೨೦೦,೦೦೦ ಕ್ಕೂ ಹೆಚ್ಚು ಹಿಮನದಿಗಳಿವೆ. ಇವುಗಳ ದ್ರವ್ಯರಾಶಿಯು ದೀರ್ಘಕಾಲಿನ ಹವಾಮಾನ ಬದಲಾವಣೆಗಳಿಂದ ಪ್ರಭಾವಿತವಾಗಿರುವುದರಿಂದ ಮಳೆ, ಸರಾಸರಿ ತಾಪಮಾನ, ಮೋಡದ ಹೊದಿಕೆಗಳ ಮೇಲೆ ಪ್ರಭಾವಿತವಾಗಿದ್ದು, ಸಮುದ್ರ ಮಟ್ಟದಲ್ಲಿನ ವ್ಯತ್ಯಾಸಗಳ ಪ್ರಮುಖ ಮೂಲವಾಗಿದೆ.

ವೇಗವಾಗಿ ಕರಗುತ್ತಿರುವ ಹಿಮದರಾಶಿ ಹಿಮನದಿಗಳ ನೀರಿನ ಹರಿವಿನಲ್ಲಿ ಅನಿಶ್ಚಿತತೆಯನ್ನು ಉಂಟುಮಾಡುತ್ತಿದ್ದು ಮಾನವನ ಚಟುವಟಿಕೆಗಳ ಮೇಲೆ ಆಳವಾದ ಪರಿಣಾಮ ಬೀರುತ್ತಿವೆ. ಗಿಡ-ಮರಗಳನ್ನು ನಾಶ ಮಾಡುವುದರಿಂದ ೯೦ ರಿಂದ ೧೮೦ ಬಿಲಿಯನ ಟನ್‌ಗಳಷ್ಟು ಇಂಗಾಲದ ಡೈ ಆಕ್ಸೈಡ್ ವಾತಾವರಣವನ್ನು ಸೇರುತ್ತದೆ. ಇದರಿಂದ ವಾತಾವರಣದಲ್ಲಿ ಉಷ್ಣಾಂಶದ ಪ್ರಮಾಣ ಅಧಿಕವಾಗುತ್ತದೆ. ಈ ಒಂದು ಅನಿಲ ಶೇ.೭೨ ರಷ್ಟು ಭೂಮಂಡಲವನ್ನು ಬೆಚ್ಚಗಾಗಿಸುತ್ತದೆ. ಹಿಮನದಿಗಳ ಹಿಮ್ಮೆಟ್ಟುವಿಕೆಯನ್ನು ನಿಧಾನಗೊಳಿಸಲು ಹಸಿರುಮನೆ ಅನಿಲಗಳಲ್ಲಿ ಪ್ರಮುಖ ವಾದ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡಬೇಕು ಮತ್ತು ಕರಗಿದ ನೀರನ್ನು ಹೆಚ್ಚು ಸುಸ್ಥಿರವಾಗಿ ನಿರ್ವಹಿಸಬೇಕು.

ಈ ವಿಶ್ವ ಜಲ ದಿನದಂದು ಹವಾಮಾನ ಬದಲಾವಣೆ ಮತ್ತು ಜಾಗತಿಕ ನೀರಿನ ಬಿಕ್ಕಟ್ಟನ್ನು ನಿಭಾಯಿಸುವ ಯೋಜನೆ ಗಳ ಮೂಲಕ ಹಿಮನದಿಗಳನ್ನು ಸಂರಕ್ಷಣೆ ಮಾಡುವುದು ಅನಿವಾರ್ಯವಾಗಿದೆ. ೨೦೨೩ ರಲ್ಲಿ ಹಿಮನದಿಗಳು ೬೦೦ ಗಿಗಾಟನ್‌ಗಳಿಗಿಂತಲೂ ಹೆಚ್ಚು ನೀರನ್ನು ಕಳೆದುಕೊಂಡವು ಇದು ೫೦ ವರ್ಷಗಳಲ್ಲಿ ದಾಖಲಾದ ಅತಿ ದೊಡ್ಡ ಸಾಮೂಹಿಕ ನೈಸರ್ಗಿಕ ನಷ್ಟವಾಗಿದೆ. ಭೂಮಿಯ ಮೇಲಿನ ಸುಮಾರು ಶೇ. ೭೦ ರಷ್ಟು ಸಿಹಿ ನೀರು ಮಂಜುಗಡ್ಡೆಯ ರೂಪದಲ್ಲಿದೆ. ಕುಡಿಯಲು ಕೃಷಿ ಮಾಡಲು ಮತ್ತು ಇಂಧನ ಉತ್ಪ್ಪಾದನೆಗೆ ಸುಮಾರು ೨ ಬಿಲಿಯನ್ ಜನರು ಹಿಮನದಿಗಳು ಕರಗುವ ಮತ್ತು ಪರ್ವತಗಳಿಂದ ಹರಿಯುವ ನೀರನ್ನು ಅವಲಂಬಿಸಿದ್ದಾರೆ. ಭೂ ಹವಾಮಾನದ ಉಷ್ಣತೆ ಪ್ರತೀ ವರ್ಷ ಹೆಚ್ಚಾಗುತ್ತಾ ಹೋಗುವುದನ್ನು ನೋಡಿದರೆ ೨೦೫೦ನೇ ಇಸವಿಗೆ ಇನ್ನೂ ೩ ರಿಂದ ೫ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಾಗಬಹುದೆಂದು ಅಂದಾಜು ಮಾಡಲಾಗಿದೆ. ಈ ಕಾರಣದಿಂದ ಧ್ರುವಗಳಲ್ಲಿನ ಹಿಮಗಡ್ಡೆ ಕರಗುತ್ತಿರುವುದರಿಂದ ಹಿಮನದಿಗಳ ಅಸ್ತಿತ್ವ ನಶಿಸುತ್ತಿದೆ ಹಾಗೂ ಸಮುದ್ರದ ನೀರಿನ ಮಟ್ಟ ಹೆಚ್ಚಳವಾಗಿ ತಗ್ಗು ಭೂಪ್ರದೇಶಗಳು ಮುಳುಗುವ ಭೀತಿ ಹೆಚ್ಚಿದೆ. ಈಗಾಗಲೇ ಪ್ರತೀ ವರ್ಷ ೧.೭೦ ಮಿ.ಮೀ. ಸಮುದ್ರದ ನೀರಿನ ಮಟ್ಟ ಹೆಚ್ಚುತ್ತಿರುವ ಅಂದಾಜಿದೆ. ಇಂದಿನ ಸಮುದ್ರ ಮಟ್ಟವು ೧೯೦೦ ಕ್ಕಿಂತ ಸುಮಾರು ೨೦ ಸೆಂ.ಮೀ. ಹೆಚ್ಚಾಗಿದೆ. ಜಾಗತಿಕ ತಾಪಮಾನ ಏರಿಕೆಯನ್ನು ೧.೫ಲಿಅ ಗೆ ಸೀಮಿತಗೊಳಿಸುವುದರಿಂದ ಮೂರನೇ ಎರಡರಷ್ಟು ವಿಶ್ವ ಪರಂಪರೆಯ ತಾಣಗಳಲ್ಲಿ ಹಿಮನದಿಗಳನ್ನು ಉಳಿಸಬಹುದು. ವಿಶ್ವ ಜಲ ದಿನದಂದು ನೀರು ಮತ್ತು ನೈರ್ಮಲ್ಯದ ಕುರಿತಾಗಿ ಯೋಚಿಸಿ ಉತ್ತಮ ಅಭ್ಯಾಸಗಳ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಪ್ರಮುಖವಾವಾಗಿದೆ.

ಹಿಮನದಿಗಳನ್ನು ಉಳಿಸುವುದು ಭೂಮಿಯ ಮೇಲಿನ ಜನರನ್ನೂ ಸೇರಿದಂತೆ ಉಳಿದ ಜೀವರಾಶಿಯನ್ನು ಹಾಗೂ ಭೂಮಿ ಎಂಬ ಗ್ರಹವನ್ನು ಉಳಿಸಲು ಹೆಪ್ಪುಗಟ್ಟಿದ ಜಲ ಸಂಪನ್ಮೂಲಗಳನ್ನು ರಕ್ಷಿಸುವುದು ಅವಶ್ಯವಿದೆ. ಇದರಿಂದ ಹವಾಮಾನ ಬದಲಾವಣೆ ಜಲಚಕ್ರ ಮತ್ತು ಪರಿಸರದ ಜೀವಿ ಸಮುದಾಯಗಳ ನಡುವಿನ ಸಂಪರ್ಕಗಳ ಹಾದಿ ಸುಗಮವಾಗುತ್ತದೆ, ಭೂಮಿ ಸುಸ್ಥಿರವಾಗುತ್ತದೆ.

-ಡಾ. ಪ್ರಕಾಶ ಬಿ. ಹೊಳೇರ
ಲೇಖಕರು, ಹಾನಗಲ್ಲ 

Related Posts

Leave a Reply

Your email address will not be published. Required fields are marked *