‘ಎಷ್ಟೊತ್ತು ಹೆಂಡತಿಯ ಮುಖವನ್ನೆ ನೋಡುತ್ತಾ ಕೂರುತ್ತೀರಿ’ ಎಂದರೆ ಸಹಧರ್ಮಿಣಿಯನ್ನು ಅಂತರಂಗದ ಗೆಳತಿಯಾಗಿ ಕಂಡಿಲ್ಲದ ಒಡಕಿನ ಭಾವ ಪ್ರತಿಮೆಯಾಗುತ್ತದೆ. ಪಂಚೇಂದ್ರಿಯಗಳನ್ನು ಚುರುಕುಗೊಳಿಸಿಕೊಳ್ಳುವ ಮತ್ತೊಂದು ತಾಣ ಮನೆಯೆಂಬುದನ್ನು ಅರಿಯಬೇಕು. ಮುಖ್ಯವಾಗಿ ಮನೆಯೊಳಗಿನ ಅವಳ ಅಗಾಧ ದುಡಿಮೆ ತಿಳಿವಿಗೆ ತಂದುಕೊಳ್ಳುವ ಮುಕ್ತತೆ ಬೇಕು. ಮಡದಿ- ಮಕ್ಕಳು ಮುಂದುವರೆದು ಬಂಧು ಬಳಗ ನೆರೆಹೊರೆ ಸಂಬಂಧಗಳು ದಟ್ಟವಾಗಿ ಸಮಾಜವು ಅಭಿವೃದ್ಧಿಗೆ ಪೂರಕ ಪಠ್ಯವಾಗಿ ಮುಂಚಲನೆಯ ಪಥದಲ್ಲಿ ಚಲಿಸುತ್ತದೆ. ಕುಟುಂಬ ಹಾಗೂ ಉದ್ಯೋಗ ಬೆಸುಗೆಗಳನ್ನು ಉನ್ನತೀಕರಿಸುವುದು ಕೂಡ ಮಾನವ ಸಂಬಂಧಗಳ ಉತ್ಪಾದನೆಯಲ್ಲಿ ರಾಷ್ಟ್ರದ ಅಭಿವೃದ್ಧಿಯೆಂದು ಗ್ರಹಿಸಬೇಕಿದೆ.
ಇತ್ತೀಚೆಗೆ ಭಾರೀ ಸುದ್ದಿ ಮಾಡಿದ ಎಲ್ ಆಂಡ್ ಟಿ ಕಂಪನಿಯ ಅಧ್ಯಕ್ಷರಾದ ಸುಬ್ರಹ್ಮಣ್ಯನ್ ಅವರ ಸಂದರ್ಶನದಲ್ಲಿನ ಹೇಳಿಕೆಯು ಎರಡು ರೀತಿಯ ನೆಲೆಗಳನ್ನು ಗುರಿ ಮಾಡಿಕೊಂಡಂತೆ ಕಾಣುತ್ತದೆ. ಮೊದಲನೆಯದು ಉದ್ಯೋಗಿಗಳನ್ನು ಮನುಷ್ಯರಿಗಿಂತ ಯಂತ್ರಗಳನ್ನಾಗಿ ಕಂಡಿರುವುದು; ಎರಡನೆಯದು ತನ್ನ ಉದ್ಯೋಗಿಗಳ ಮಡದಿಯರನ್ನು ಕೀಳಾಗಿ, ಉಡಾಫೆಯಾಗಿ ಕಾಣಿಸಿರುವುದು. ಇದನ್ನು ಕೊಂಚ ಹಿಗ್ಗಿಸಿ ನೋಡಿದರೆ ತಮ್ಮ ಪತ್ನಿಯನ್ನು ಅಪಮಾನಿಸುವ ಅಣಕಿಸುವ ನುಡಿಗಳು ಹೇಳಿಕೆಯಲ್ಲಿ ಮಿಳಿತಗೊಂಡು ಪರೋಕ್ಷವಾಗಿ ತಮ್ಮ ಸ್ಥಾನಕ್ಕೂ ಮಸಿ ಬಳಿದುಕೊಂಡಿದ್ದಾರೆ.
ಈ ಬಗೆಯ ಮಾತುಗಳು ಗಾಳಿಗಿಂತ ವೇಗವಾಗಿ ಹರಡುವುದರ ಮೂಲಕ ಸಮಾಜದಲ್ಲಿ ತಲ್ಲಣಗಳನ್ನೆಬ್ಬಿಸುತ್ತವೆ. ಅಧ್ಯಕ್ಷರು ಈ ಹೇಳಿಕೆಯನ್ನು ಬಾಣದಂತೆ ಬಿಡುವ ಮೊದಲು ತುಸು ಆಲೋಚಿಸಬೇಕಿತ್ತು. ದೊಡ್ಡ ಕಂಪನಿಯೊಂದರ ಮುಖ್ಯ ಸ್ಥಾನದಲ್ಲಿರುವ ತನ್ನ ಈ ಹೇಳಿಕೆಯು ಯಾವ ಮಟ್ಟದ ಕ್ಷೋಭೆಯನ್ನು ಸಮಾಜದಲ್ಲಿ ಹರಡಬಲ್ಲದು ಎಂಬ ಕನಿಷ್ಟ ಎಚ್ಚರ ಇರಬೇಕಿತ್ತು. ‘ಹೆಂಡತಿಯ ಮುಖವನ್ನು ಎಷ್ಟು ಹೊತ್ತು ನೋಡುತ್ತಾ ಕೂರುತ್ತೀರಿ’ ಎಂಬ ಮಾತು ಮನೆಯೊಳಗೆ ಸಂಯಮದಿಂದ ಅವಿರತವಾಗಿ ದುಡಿಯುತ್ತಿರುವ ಸ್ತ್ರೀ ಸಂಕುಲವನ್ನು ಛೇಡಿಸಿದಂತಿದೆ. ಅಧ್ಯಕ್ಷರ ಹೆಂಡತಿಗೂ ಈ ಮಾತು ತಟ್ಟುತ್ತದಲ್ಲ, ಈ ಅಣಕ ತೇಜೋವಧೆಗೆ ಶ್ರೀಮತಿಯವರ ಪ್ರತಿಕ್ರಿಯೆ ಏನಾಗಿತ್ತು ಅಥವಾ ಏನಾಗಿದೆಯೆಂಬ ಕುತೂಹಲ ನನ್ನನ್ನು ಕಾಡಿದೆ. ವಿನೋದವಾಗಿಯೂ ಸಹ ಇಂತಹ ಹೇಳಿಕೆಯನ್ನು ಬಹಿರಂಗವಾಗಿ ಯಾರೂ ವ್ಯಕ್ತಪಡಿಸುವುದು ಸಲ್ಲದು. ರಾಷ್ಟ್ರದ ಉತ್ಪಾದಕತೆ-ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಈ ನಮೂನೆಯ ಉದ್ಯೋಗದಾತರು ಬಿಡುಬೀಸಾಗಿ ಮಾತಾಡುವುದು ಅವರ ವ್ಯಕ್ತಿತ್ವಕ್ಕೆ ಔಚಿತ್ಯ ತರದು.
ಸಕಲವನ್ನು ಉತ್ಪಾದಕತೆಯ ಮಾನದಂಡದಲ್ಲೇ ಅಳೆಯಲು ಹೊರಟರೆ ಮಾನವ ಸಂಬಂಧಗಳ ಉತ್ಪಾದಕತೆ ಅವರ ವ್ಯಕ್ತಿತ್ವಗಳ ಲಹರಿ ಏನಾಗಬೇಡ?; ವಾರಕ್ಕೆ ೯೦ ಅವಧಿಗಳ ದುಡಿಮೆಯೆಂಬುದು ಉದ್ಯಮ ರಂಗದ ಮುಖವಾಣಿಯಂತೆ ಕಾಣಿಸುತ್ತದೆ. ದುಡಿಮೆ ಬೇಕು ಅದು ಬಿಡುವಿಲ್ಲದ ದುಡಿಮೆ ಆಗಿರಬೇಕು ಎಂದಾಗ ಅಲ್ಲಿ ಸಮ ಸಂಬಂಧದ ಸಮತೋಲನ ಅವಜ್ಞೆಗೆ ಗುರಿಯಾಗುವುದಿಲ್ಲವೇ? ಯಾವುದೇ ಕಾರ್ಯ ವಲಯವಿರಲಿ ಮೇಲುಸ್ತರದವರು ತಾಯ್ತನದ ಹೃದಯದವರಾಗಿ ಸಜೀವ ಕಾಯಕ ಯೋಗಿಗಳನ್ನಾಗಿ ರೂಪಿಸಬೇಕೆ ವಿನಾಃ ಯಂತ್ರಗಳ ಸ್ವರೂಪದಂತಲ್ಲ. ಕಾರ್ಯಕ್ಷಮತೆ ಉಲ್ಭಣಿಸುವಂತೆ ನಿರ್ವಹಿಸಬೇಕು; ಹನ್ನೆರಡನೆಯ ಶತಮಾನದ ವಚನಕಾರರು ಕಾಯಕ ತತ್ವವನ್ನು ಜೀವನದ ತಾತ್ವಿಕ ಬಿತ್ತಿಯನ್ನಾಗಿ ರೂಪಿಸಿದರು.
ಕಾಯ-ಜೀವ-ತತ್ವ ಹಾಗೂ ಜೀವ ಸಮುದಾಯದ ಮೀಮಾಂಸೆಯನ್ನು ಹೊಸ ರೀತಿಯ ಪರಿಭಾಷೆಯಲ್ಲಿ ವ್ಯಾಖ್ಯಾನಿಸಿ ಎಲ್ಲಾ ಕಾಲದ ಮುಕ್ಕಾಗದ ಮೌಲ್ಯಗಳನ್ನಾಗಿ ಸಾದರಪಡಿಸಿತು ಮತ್ತು ಮಾನವ ಸಂಬಂಧಗಳನ್ನು ಸಾಪೇಕ್ಷ ರೀತಿಯಲ್ಲಿ ಸಾದ್ಯಂತವಾಗಿ ಮಂಡಿಸಿತು. ಸಂಬಂಧಗಳು ಯಾವತ್ತು ವಿಕಸನ ಪ್ರಕ್ರಿಯೆಯ ನಿರಂತರತೆಯ ಮಾಗುವಿಕೆ ಮುಖೇನ ಚಲಿಸಬೇಕು; ಕತ್ತರಿಸಬಾರದು. ಕೇವಲ ಔದ್ಯೋಗಿಕ ಮಾನದಂಡದಲ್ಲಿ ನಿರ್ವಹಿಸಲು ಹೊರಟರೆ ಮಿತಿ ಮೀರಿದ ದುಡಿಮೆಯಾಗುತ್ತದೆ. ಯಂತ್ರಗಳನ್ನೆ ಸ್ಪರ್ಶಿಸುತ್ತಿರುವ ಹಸ್ತಗಳು ಮನುಷ್ಯರ ಪರಸ್ಪರ ಸಾಹಚರ್ಯ ಸ್ಪರ್ಶತೆಯನ್ನೇ ಕಳೆದುಕೊಳ್ಳುತ್ತವೆ.
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರೂಪಾಯಿ ಎಂದು ಹಾಡಿದ ಕವಿಯ ಭಾವದ ಹಿಂದೆ ದಂಪತಿಯರ ಪರಸ್ಪರರ ಸಾನ್ನಿಧ್ಯದ ಆಪ್ತತೆ, ಭಾವತೀವ್ರತೆ, ಬಾಳಿನ ಹಂಬಲ, ಕಕ್ಕುಲತೆ ಭಾವಗಳ ಒಳಗೊಳ್ಳುವಿಕೆ ಇರುವುದನ್ನು ಗ್ರಹಿಸಬೇಕು. ಸುಕುಮಾರ ಪ್ರಜ್ಞೆಯನ್ನು ಮೀರಿದ ಕೌಟುಂಬಿಕ ಪ್ರಧಾನ ವ್ಯವಸ್ಥೆಯ ಭಾವಲೋಕಗಳನ್ನು ವಿಸ್ತರಿಸುವ ಹಾಗು ದರ್ಶಿಸುವ ಆ ಮೂಲಕ ಸಮಾಜದ ಸ್ಥಾಪಿತ ಮೌಲ್ಯಗಳನ್ನು ಎತ್ತರಿಸುವ ಕಾವ್ಯದಲ್ಲಿ ದುಡಿಮೆಯಿದೆ. ಕವಿ ಮನೆಯೊಳಗಿರುವ ಹೆಂಡತಿಯನ್ನು ಕೋಟಿ ರೂಪಾಯಿಯಾಗಿ ಕಂಡರೆ; ಅಧ್ಯಕ್ಷರು ಹೆಂಡತಿಯ ಸಾನ್ನಿಧ್ಯವನ್ನು ನಿರಾಕರಿಸಿ ಸದಾ ಕೋಟಿ ಕೋಟಿ ದುಡಿಮೆಗೆ ಆತುಕೊಂಡಿದ್ದಾರೆ. ಹೀಗೆಂದು ಸುಬ್ರಹ್ಮಣ್ಯನ್ ಅವರ ದುಡಿಮೆಯನ್ನು ಕೀಳಾಗಿ ಕಾಣುತ್ತಿಲ್ಲ. ಬದಲು ದುಡಿಮೆಯೇ ಜೀವನವೆಂದು ನಿಂತರೆ, ಮಾನವ ಸಂಬಂಧಗಳ ಉತ್ಪಾದನೆಯು ಮುಖ್ಯವಲ್ಲವೇ ಎಂಬುದು ನನ್ನ ಪ್ರಶ್ನೆ. ಕೆ.ಎಸ್.ನರಸಿಂಹಸ್ವಾಮಿ ಈ ಹೊತ್ತು ನಮ್ಮೊಡನಿದ್ದು ಶ್ರೀಯುತರ ಈ ಹೇಳಿಕೆ ಕೇಳಿದ್ದರೆ ಬಹಳ ಹರಿತವಾಗಿ ಪದ್ಯದ ಮೂಲಕವೇ ಪ್ರತಿಕ್ರಿಯಿಸುತ್ತಿದ್ದರೆನಿಸುತ್ತದೆ. ಆಫ್ರಿಕಾದ ಶ್ರೇಷ್ಠ ಲೇಖಕ ಗೂಗಿ ವಾ ಥಿಯಾಂಗೋ ‘ಡೆವಿಲ್ ಆನ್ ದ ಕ್ರಾಸ್’ ಕಾದಂಬರಿಯಲ್ಲಿ ಇಡೀ ಪ್ರಪಂಚವೇ ಒಂದು ಉದ್ಯಮ ರಂಗವಾಗಿ ಉತ್ಪಾದಕತೆ ಅಭಿವೃದ್ಧಿ ಕೇಂದ್ರ ಮಾಡಿಕೊಂಡು ವಶದಲ್ಲಿಟ್ಟುಕೊಳ್ಳುವ ಬಗ್ಗೆ ಅನೇಕ ಮಗ್ಗುಲಗಳಲ್ಲಿ ಚರ್ಚಿಸುತ್ತಾನೆ.
ವಿರಾಮ ಕಾಲದಲ್ಲಿ ಮನೆಯಲ್ಲಿ ಹೆಂಡತಿಯೊಡನೆ ಇರುವುದು ಆಕೆಯಲ್ಲಿ ಭದ್ರತೆ ಮೂಡಿಸುತ್ತದೆ ಮತ್ತು ಗಂಡಿನ ಸಹಸ್ಪಂದನ ಮನೆಯೊಳಗಿನ ಅವಳ ದುಡಿಮೆಗೆ ಸಲ್ಲುವ ಪ್ರತಿಫಲ ಎಂದು ತಿಳಿಯಬೇಕಿದೆ. ಆಕೆಯ ಕೈಬಳೆ ಸದ್ದು, ಕಾಲ್ಗೆಜ್ಜೆ ನಾದ ಅವಳ ಹಾಜರಿಯಿಂದ ಹೊರಡುವ ಮಿಡಿತವನ್ನು ಸರಿಯಾಗಿ ಆಲಿಸುವ ವ್ಯವಧಾನವಿರಬೇಕು. ಇದು ಕೇವಲ ರಮ್ಯತೆಯ ನುಡಿಗಳೆಂದು ತಿಳಿಯಬೇಕಿಲ್ಲ. ಅದನ್ನು ಮೀರಿದ ಭಾವಗಳ ಸರಪಳಿಯ ಸೂಕ್ಷ್ಮಾವಲೋಕನವನ್ನು ಒಳಗೆ ತಂದುಕೊಳ್ಳಬೇಕಿದೆ. ಹೆಂಡತಿಯೊಡನಾಟಕ್ಕಿಂತ ದುಡಿಮೆ-ಯಂತ್ರದ ಒಡನಾಟವೆ ಹೆಚ್ಚು ಸುಖಕರ ಎಂದು ತಿಳಿದರೆ ಮಾನವ ಸಂಬಂಧಗಳ ಉತ್ಪಾದನೆಯ ಹಿನ್ನೆಲೆಯಲ್ಲಿ ಅಪಾಯದ ಮಟ್ಟವನ್ನು ಮೀರಿದೆಯೆಂದರ್ಥ. ‘ಎಷ್ಟೊತ್ತು ಹೆಂಡತಿಯ ಮುಖವನ್ನೆ ನೋಡುತ್ತಾ ಕೂರುತ್ತೀರಿ’ ಎಂದರೆ ಸಹಧರ್ಮಿಣಿಯನ್ನು ಅಂತರಂಗದ ಗೆಳತಿಯಾಗಿ ಕಂಡಿಲ್ಲದ ಒಡಕಿನ ಭಾವ ಪ್ರತಿಮೆಯಾಗುತ್ತದೆ. ಪಂಚೇಂದ್ರಿಯಗಳನ್ನು ಚುರುಕುಗೊಳಿಸಿ ಕೊಳ್ಳುವ ಮತ್ತೊಂದು ತಾಣ ಮನೆಯೆಂಬುದನ್ನು ಅರಿಯಬೇಕು. ಮುಖ್ಯವಾಗಿ ಮನೆಯೊಳಗಿನ ಅವಳ ಅಗಾಧ ದುಡಿಮೆ ತಿಳಿವಿಗೆ ತಂದುಕೊಳ್ಳುವ ಮುಕ್ತತೆ ಬೇಕು. ಮಡದಿ- ಮಕ್ಕಳು ಮುಂದುವರೆದು ಬಂಧು ಬಳಗ ನೆರೆಹೊರೆ ಸಂಬಂಧಗಳು ದಟ್ಟವಾಗಿ ಸಮಾಜವು ಅಭಿವೃದ್ಧಿಗೆ ಪೂರಕ ಪಠ್ಯವಾಗಿ ಮುಂಚಲನೆಯ ಪಥದಲ್ಲಿ ಚಲಿಸುತ್ತದೆ.
ಕುಟುಂಬ ಹಾಗು ಉದ್ಯೋಗ ಬೆಸುಗೆಗಳನ್ನು ಉನ್ನತೀಕರಿಸುವುದು ಕೂಡ ಮಾನವ ಸಂಬಂಧಗಳ ಉತ್ಪಾದನೆಯಲ್ಲಿ ರಾಷ್ಟ್ರದ ಅಭಿವೃದ್ಧಿಯೆಂದು ಗ್ರಹಿಸಬೇಕಿದೆ.
ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು ಎಂಬ ಆಶಾವಾದದ ಹಿಂದೆ ಸದ್ಯದ ಉದ್ಯಮಿ ವರ್ಗದ ಇಂತಹ ಹೇಳಿಕೆಗಳ ಮನೋಗತವನ್ನು ಕೂಡಿಸಿ ನೋಡಿದರೆ ಈ ಪಥದ ಹಾದಿಗಳು ರೂಕ್ಷವಾದ ಭೂಮಿಕೆಯನ್ನು ನಿರ್ಮಿಸಿಕೊಂಡಂತೆ ಕಾಣುತ್ತಿದೆ. ನಮ್ಮ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿ.ಡಿ.ಪಿ.)ದಲ್ಲಿ ಕೂಡು ಕುಟುಂಬ ಪದ್ಧತಿಯನ್ನು ಗಣನೆಗೆ(ಮಾಪನ) ತೆಗೆದು ಕೊಳ್ಳಲಾಗುತ್ತದೆ. ಏಕಘಟಕ ಕುಟುಂಬಗಳೆಲ್ಲ ಅನೇಕಾನೇಕ ಘಟಕ ಕುಟುಂಬಗಳಾಗಿ ಒಡೆದು ಹೋಗಿರುವ ಮತ್ತು ವಿಘಟಿಸುತ್ತಿರುವ ವಾಸ್ತವ ಸನ್ನಿವೇಶದಲ್ಲಿ, ಮನೆಯಲ್ಲಿದ್ದು ತನ್ನ ಕುಟುಂಬದೊಡನಾಡಿಯಾಗಿ ಅರಿತು ಬೆರೆತು ಒಂದಾಗುವ ವಾತಾವರಣ ಕಟ್ಟುವಲ್ಲಿ ಉದ್ಯಮ ರಂಗದ ಕಾಳಜಿಯು ಮುಖ್ಯವಾಗುತ್ತದೆ. ಸ್ವಾಸ್ಥ್ಯ ಸಮಾಜ ಮತ್ತು ಕೂಡಿ ಕಟ್ಟೋಣ ಎಂಬುದು ಸಮಾಜೋ ಸಾಂಸ್ಕ ತಿಕ ಲೋಕವನ್ನು ಆರೋಗ್ಯ ಭರ್ತಿಯಾಗಿ ಬದುಕನ್ನು ಜೀವಪರವಾಗಿಡುತ್ತದೆ. ವಚನಕಾರರು ವಿಶ್ವಪ್ರಜ್ಞೆಯಿಂದ ಕೂಡಿದ ಕೂಡು ಕುಟುಂಬದ ದೇಹ ದುಡಿಮೆಯ ಮಹತ್ವನ್ನು ಸಾರಿದರು, ಅನುಷ್ಠಾನಗೊಳಿಸಿದರು ಹಾಗು ಬಾಳಿ ತೋರಿಸಿ ಸಾಕ್ಷಿಪ್ರಜ್ಞೆಯಾದರು. ಸಾಂಸ್ಕೃತಿಕ ಕ್ರಿಯಾಶೀಲ ಪ್ರಪಂಚ ನಾಡಿನ ಮನಸನ್ನು ಸೌಖ್ಯತೆಯಿಂದ ಆಪ್ತವಾಗಿಡುವುದರ ಮುಖೇನ ರಸದ ಬೀಡೊಂದನು ಕಟ್ಟುತ್ತಿರುತ್ತದೆ ಎಂಬುದನ್ನು ಮರೆಯದಿರೋಣ.
ನೆಲ ಸಂಸ್ಕ ತಿಯ ಸ್ಥಳೀಯ ಬೇರುಗಳು ಕುಟುಂಬಗಳಲ್ಲಿ ಬೀಡು ಬಿಟ್ಟಿವೆ. ಇವುಗಳ ಸರಿಯಾದ ಹೊಂದಾಣಿಕೆ ಸ್ಥಳೀಯ ಸಮಾಜ ಸಂಸ್ಕೃತಿಯಿಂದ ವಿಶ್ವ ಸಮಾಜ ಸಂಸ್ಕೃತಿಯೆಡೆಗೆ ಚಾಚಿಕೊಳ್ಳುತ್ತದೆ. ಯಾವ ರಂಗದ ಕಾರ್ಯವೈಖರಿಯೇ ಇರಲಿ ಮಾನವೀಯ ಸ್ಪರ್ಶದ ಚೌಕಟ್ಟನ್ನು ನಿರ್ಮಿಸಬೇಕು. ಮಾನವ ಪ್ರೇಮ ಸಂಬಂಧಗಳನ್ನು ಸಮೂಹದೊಳಗೆ ಪೃಥಕ್ಕರಿಸುವ ತಾತ್ವಿಕ ಭಿತ್ತಿಯ ಮೇಲೆ ಉತ್ಪಾದಕತೆ ಅಭಿವೃದ್ಧಿ ಪಥ ಸಾಗಬೇಕು. ಮಧ್ಯಪ್ರದೇಶದ ದೀನದಯಾಳ್ ರಿಸರ್ಚ್ ಇನ್ಸ್ಟಿಟ್ಯೂಟ್ ಸಂಸ್ಥೆಯ ‘ಚಿತ್ರಕೂಟ ಪುರ’ ರಚನೆಯು ಕುಟುಂಬ ಸಮಾಜ ಬಾಂಧವ್ಯದ ಬೆಸುಗೆಯ ಆಶಯಗಳ ಹಿನ್ನೆಲೆಯಲ್ಲಿ ರಾಷ್ಟ್ರಾಭಿವೃದ್ಧಿಗೆ ಪೂರಕವಾಗಿದೆ ಎಂಬ ಅಂಶ ಇಲ್ಲಿ ಉಲ್ಲೇಖಾರ್ಹ. ಒಂದರಿಂದೊಂದೊಂದು ಸಂಬಂಧಗಳ ಸರಪಳಿಗಳಿರುತ್ತವೆಂಬುದನ್ನು ಸದಾಕಾಲ ನೆನಪಿಡೋಣ.
-ಗೌರ ವೆಂಕಟೇಶ್ ಆರ್.ಡಿ.
ಉಪನ್ಯಾಸಕರು, ಅಣ್ಣೂರು- ಮದ್ದೂರು ತಾಲೂಕು