ಇವತ್ತು ಊಹಾ ಪತ್ರಿಕೋದ್ಯಮ ವ್ಯಾಪಕವಾಗುತ್ತಿದೆ. ಇದು ಅಪಾಯಕಾರಿ. ನಾನು ಇವತ್ತಿನವರೆಗೂ ಯಾವ ಮಾಧ್ಯಮದವರಿಗೂ ಯಾಕೆ ಹೀಗೆ ಬರಿದ್ರಿ ಅಂತ ಕೇಳಿಲ್ಲ. ಆದರೆ ನೀವು ಜನರ ಧ್ವನಿಯಾಗಿ ಕೆಲಸ ಮಾಡಬೇಕು. ಸಾಧ್ಯವಾದರೆ ಸತ್ಯ ಬರೆಯೋಕೆ ಟ್ರೈ ಮಾಡಿ ನೋಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಶಸ್ತಿ ಪುರಸ್ಕೃತರು ಇನ್ನಷ್ಟು ಜನಮುಖಿಯಾಗಿ ಕರ್ತವ್ಯ ನಿರ್ವಹಿಸಿ. ಎಲ್ಲಾ ಆರೋಗ್ಯಕರ ಟೀಕೆಗಳನ್ನು ಸ್ವಾಗತಿಸುತ್ತೇನೆ. ತಿದ್ದಿಕೊಳ್ಳುತ್ತೇನೆ. ರಾಜಕೀಯ ಕಾರಣಕ್ಕೆ ಸುಳ್ಳೇ ಟೀಕಿಸಿದರೆ ಡೋಂಟ್ ಕೇರ್ ಎಂದು ಸಿಎಂ ಹೇಳಿದರು.
ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಕೊಡಮಾಡುವ 2024ನೇ ಸಾಲಿನ ವರ್ಷದ ವ್ಯಕ್ತಿ, ವಿಶೇಷ ಪ್ರಶಸ್ತಿ, ಸುವರ್ಣ ಮಹೋತ್ಸವ ಪ್ರಶಸ್ತಿ ಹಾಗೂ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದರು.
ಸುದ್ದಿಗಳನ್ನು ವೈಭವೀಕರಿಸುವುದು, ಮೂಡ ನಂಬಿಕೆಗಳನ್ನು ಬೆಂಬಲಿಸೋಕೆ ಹೋಗಬೇಡಿ. ನನ್ನ ಕಾರಿನ ಮೇಲೆ ಕಾಗೆ ಕುಳಿತಿದ್ದಕ್ಕೆ ಜ್ಯೋತಿಷಿಗಳನ್ನು ಚಾನಲ್ ಗಳಿಗೆ ಕರೆಸಿ ಏನೆಲ್ಲಾ ಹೇಳಿಸಿದಿರಿ. ನಾನು 5 ವರ್ಷ ಮುಖ್ಯಮಂತ್ರಿಯಾಗಿ ಪೂರ್ಣಗೊಳಿಸಲ್ಲ ಎಂದು ತೋರಿಸಿದಿರಿ. ಆದರೆ ನಾನು ಐದು ವರ್ಷ ಪೂರೈಸಿ ಎರಡನೇ ಬಾರಿ ಸಿಎಂ ಆದೆ. ಈಗ ಹೇಳಿ ಕಾಗೆ ಸುದ್ದಿಯಿಂದ ಮಾಧ್ಯಮಗಳ ವಿಶ್ವಾಸಾರ್ಹತೆ ಕಡಿಮೆ ಆಯ್ತೋ ಇಲ್ವೋ ಎಂದು ಪ್ರಶ್ನಿಸಿದರು.
ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದ ಬಿಜೆಪಿಯವರೇ ನಮ್ಮ ಗ್ಯಾರಂಟಿಗಳನ್ನು ಕಾಪಿ ಮಾಡಿದ್ದಾರೆ. ನಮ್ಮ ಗ್ಯಾರಂಟಿಗಳನ್ನು ಬೇರೆ ಹೆಸರಲ್ಲಿ ಅವರು ಘೋಷಿಸಿದ್ದಾರೆ. ಆದರೂ ಮಹಾರಾಷ್ಟ್ರ ಚುನಾವಣೆ ವೇಳೆ ಕರ್ನಾಟಕದಲ್ಲಿ ಗ್ಯಾರಂಟಿಗಳು ಜಾರಿಯೇ ಆಗಿಲ್ಲ ಎಂದು ಸುಳ್ಳು ಜಾಹೀರಾತು ನೀಡಿದರು ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ನಾವು ಜನಪರ ಕೆಲಸ ಮಾಡದಿದ್ದಾಗ, ಕೊಟ್ಟ ಮಾತು ಈಡೇರಿಸದಿದ್ದಾಗ ಅದನ್ನು ಬರೆದು ಜನರ ಕಣ್ಣು ತೆರೆಸುವ ಹಕ್ಕು ಜವಾಬ್ದಾರಿ ಮಾಧ್ಯಮದವರ ಮೇಲಿದೆ. ಅದನ್ನು ನಿಭಾಯಿಸಿ ಎಂದು ಕರೆ ನೀಡಿದರು. ನಾವು ಊಟಕ್ಕೆ ಸೇರಿ ಏನೋ ಮಾತಾಡಿರ್ತೀವಿ. ಆದರೆ ಮಾಧ್ಯಮಗಳೇ ಡೈಲಾಗ್ ಬರೆದು ಬಿಡ್ತಾರೆ. ನಮಗೆ ಗೊತ್ತೇ ಇರದ ವಿಷಯವನ್ನು ಅವರೇ ಡೈಲಾಗ್ ಬರೆದು ತೋರಿಸಿದ್ದಾರೆ ಎಂದು ಟೀಕಿಸಿದರು.