ಮಾಧ್ಯಮಗಳು ಮನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ಕಾಯ್ದೆ ಮತ್ತು ವಿಬಿ ಜಿ ರಾಮ್ ಜಿ ಕಾಯ್ದೆ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಜನರಿಗೆ ತಿಳಿಸುವ ಕೆಲಸವನ್ನು ಮಾಡಲಿ. ನರೇಗಾ ಕೂಲಿ ಕಾರ್ಮಿಕರು, ರೈತರು, ಸೇರಿದಂತೆ ಸಮಸ್ತ ಗ್ರಾಮೀಣ ಪ್ರದೇಶಗಳ ಜನರು ಮೋದಿ ಸರ್ಕಾರದ ದುಷ್ಟತನವನ್ನು ಅರ್ಥಮಾಡಿಕೊಂಡು ಅದನ್ನು ಸೋಲಿಸಬೇಕಿದೆ. ಮಾಧ್ಯಮಗಳು ಈ ವಿವರಗಳನ್ನು ಜನರಿಗೆ ವಿವರವಾಗಿ ತಿಳಿಸಿಕೊಡುವ ಕೆಲಸ ಮಾಡಬೇಕಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮನರೇಗಾ ಕಾಯ್ದೆ ರದ್ದು ವಿರೋಧಿಸಿ ಪತ್ರಿಕಾ ಗೋಷ್ಠಿಯಲ್ಲಿ ಸಿಎಂ ಮಾತನಾಡಿದರು. ಮೋದಿ ಸರ್ಕಾರ 2005 ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಜಾರಿಗೊಳಿಸಿದ್ದ ಮನರೇಗಾ ಕಾಯ್ದೆಯನ್ನು ಬುಡಮೇಲು ಮಾಡಿ ʼVB G RAM Gʼ ಕಾಯ್ದೆ ಎಂದು ಬದಲಾಯಿಸಿದ್ದಾರೆ. 20 ವರ್ಷಗಳಿಂದ ದೇಶದ ಗ್ರಾಮೀಣ ಕೂಲಿಕಾರರು ಉದ್ಯೋಗವನ್ನು ಸ್ಥಳೀಯವಾಗಿಯೇ ಕೇಳಿ ಪಡೆಯುವ ಹಕ್ಕು ನೀಡಿದ್ದ ಮನರೇಗಾ ಕಾಯ್ದೆಯನ್ನು ಮೋದಿ ಸರ್ಕಾರವು ಜನರ ಜೊತೆ ಚರ್ಚೆ ಮಾಡದೆ, ರಾಜ್ಯಗಳ ಜೊತೆ ಸಮಾಲೋಚನೆ ಮಾಡದೆ, ಅಭಿಪ್ರಾಯವನ್ನೂ ಪಡೆಯದೆ ಸರ್ವಾಧಿಕಾರಿ ಧೋರಣೆಯ ಮೂಲಕ ಧ್ವಂಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಸರ್ಕಾರವು ಈ ಮನೆಹಾಳು ಕಾಯ್ದೆಯನ್ನು ಪಾಸ್ ಮಾಡಿಕೊಂಡು ದೇಶದ 12.16 ಕೋಟಿ ಕಾರ್ಮಿಕರ, ಅವರಲ್ಲಿ ಶೇ.53.61 ರಷ್ಟು ಸಂಖ್ಯೆಯಲ್ಲಿದ್ದ 6.21 ಕೋಟಿ ಮಹಿಳೆಯರ ಬದುಕು, ಶೇ.17 ರಷ್ಟು ಪರಿಶಿಷ್ಟ ಜಾತಿ ಹಾಗೂ ಶೇ.11 ರಷ್ಟು ಪರಿಶಿಷ್ಟ ಪಂಗಡದ ಕೂಲಿ ಕಾರ್ಮಿಕರ ಬದುಕಿಗೆ ಬೆಂಕಿ ಇಟ್ಟಿದೆ. ಕರ್ನಾಟಕದಲ್ಲಿ 2025-26 ರಲ್ಲಿ ಉತ್ತಮ ಮಳೆಯಾದರೂ 71.18 ಲಕ್ಷ ಸಕ್ರಿಯ ನರೇಗಾ ಕೂಲಿ ಕಾರ್ಮಿಕರಿದ್ದಾರೆ. ಅದರಲ್ಲಿ 36.75 ಲಕ್ಷ (ಶೇ.51.6) ಮಹಿಳೆಯರು ಇದ್ದಾರೆ. ಈ ಎಲ್ಲರ ಉದ್ಯೋಗದ ಹಕ್ಕನ್ನು ಮೋದಿ ಸರ್ಕಾರ ನೀರು ಪಾಲು ಮಾಡಿದೆ ಎಂದರು.
ಜನರು ನೆಮ್ಮದಿಯಿಂದ ಜೀವಿಸುವ ಯಾವುದೇ ಕಾನೂನು ಆಗಲಿ, ಕಾರ್ಯಕ್ರಮವಾಗಲಿ, ಯೋಜನೆಯಾಗಲಿ ಅದನ್ನು ಹೇಗೆ ನಾಶ ಮಾಡಬೇಕು ಎಂಬುದನ್ನು ಅಧ್ಯಯನ ಮಾಡಿ ಕೊಡುವುದೆಆರ್.ಎಸ್.ಎಸ್ಸಂ ಸೇರಿದಂತೆ ಬಿಜೆಪಿಯ ಮಾರ್ಗದರ್ಶಕ ರಾಗಿರುವ ಘಟನೆಗಳ ಕೆಲಸವೂ ಆಗಿರುವಂತಿದೆ. ಮೋದಿಯವರ ನೇತೃತ್ವದ ಜನವಿರೋಧಿ ಕೇಂದ್ರ ಸರ್ಕಾರವು ನಿರಂತರವಾಗಿ ಕಾರ್ಪೋರೇಟ್ ಕಂಪನಿಗಳ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತಿದೆ. ದೇಶದ ಕೂಲಿ ಕಾರ್ಮಿಕರು ತಾವು ವಾಸಿಸುವ ಜಾಗದಲ್ಲಿದ್ದುಕೊಂಡು ಸಮೀಪದ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸಿ ಕುಟುಂಬ ಹಾಗೂ ಗ್ರಾಮಗಳ ಆರ್ಥಿಕತೆಯನ್ನು ಬೆಳೆಸುತ್ತಿದ್ದರು. ಅವುಗಳನ್ನೆಲ್ಲ ಧ್ವಂಸ ಮಾಡಿರುವ ಮೋದಿ ಸರ್ಕಾರವು ಕಾರ್ಪೊರೇಟ್ ಕೃಷಿ ಕಂಪನಿಗಳಿಗೆ ಅಗ್ಗದ ಕೂಲಿ ಆಳುಗಳನ್ನು ಒದಗಿಸಲು ಸಂಚು ರೂಪಿಸಿದೆ. ಅದರ ಪ್ರತಿ ಫಲವೆ ಈ ಹೊಸ ಕಾಯ್ದೆ ಎಂದು ಕಿಡಿ ಕಾರಿದರು.
ಹಿಂದಿನ ಸರ್ಕಾರಗಳು ರೂಪಿಸಿದ್ದ ಬಹುಪಾಲು ಜನಪರ ಯೋಜನೆಗಳನ್ನು ಬುಡಮೇಲು ಮಾಡಿ ಅವುಗಳನ್ನು ಹಾಳು ಮಾಡಿದ್ದೆ ಮೋದಿ ಸರ್ಕಾರ ಕಳೆದ ಹನ್ನೊಂದುವರೆ ವರ್ಷಗಳಲ್ಲಿ ಮಾಡಿದ್ದ ದೊಡ್ಡ ಸಾಧನೆ. ದೇಶದಲ್ಲಿ ಬರಗಾಲವಿದ್ದ ವರ್ಷವಾದ 2024-25 ರಲ್ಲಿ 19.28 ಕೋಟಿ ಜನ ನರೇಗಾ ಯೋಜನೆಯಲ್ಲಿ ಕೆಲಸ ಮಾಡುವ ಮೂಲಕ ಜೀವನ ಕಟ್ಟಿಕೊಂಡಿದ್ದರು. ಕರ್ನಾಟಕದಲ್ಲಿ 1.35 ಕೋಟಿ ಕಾರ್ಮಿಕರು ಬದುಕು ನೋಡಿಕೊಂಡಿದ್ದರು. ವರೆಲ್ಲರ ಮೇಲೆ ಮೋದಿ ಸರ್ಕಾರ ಕ್ರೂರ ಕಣ್ಣುಗಳನ್ನು ಹಾಕಿದೆ. ಜನರು ಎಲ್ಲಿ ದಂಗೆ ಏಳುತ್ತಾರೋ ಎಂದು ಹೆದರಿ ಪ್ರತಿ ದಿನವೂ ಹೊಸ ಸುಳ್ಳುಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಿ ಬಿಡುತ್ತಿದೆ ಎಂದರು.
ವೋಟ್ ಚೋರಿಯ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ಕಾಂಗ್ರೆಸ್ ಪಕ್ಷ ಅಭಿಯಾನ ಹಮ್ಮಿಕೊಂಡಿದ್ದಾಗ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಸರ್ಕಾರ ಕುತಂತ್ರ ಮಾಡಿದಂತಿದೆ. ಈ ಹೊಸ ಕಾಯ್ದೆಯ ಹೆಸರಿನಲ್ಲಿ ರಾಮನ ಹೆಸರನ್ನು ಬಳಸಿಕೊಳ್ಳುವ ಪ್ರಯತ್ನವಿದೆ. ರಾಮನ ಹೆಸರು ಹೇಳುತ್ತಲೇ ಇಡೀ ದೆಹಲಿಯಿಂದ ಹಿಡಿದು ಗುಜರಾತ್ ವರೆಗೆ ಹಬ್ಬಿದ್ದ ಅರಾವಳಿ ಪರ್ವತದ ಸಂಪತ್ತನ್ನು ದೋಚಲು ಹುನ್ನಾರ ನಡೆಸಿದ್ದಾರೆ. ಗಣಿಗಾರಿಕೆ ಮಾಡಲು ಅದಾನಿ-ಅಂಬಾನಿಯವರ ಕಾರ್ಪೊರೇಟ್ ಕಂಪನಿಗಳಿಗೆ ವಹಿಸಿಕೊಡಲು ಹೊರಟಿದ್ದಾರೆ. ಹಾಗಾಗಿ ಯಾವ ಕಾರಣಕ್ಕೂ ಇವರು ಜನಪರವಾದ ಆಡಳಿತ ಕೊಡಲು ಸಾಧ್ಯವೇ ಇಲ್ಲ ಎಂದು ದೂರಿದರು.


