Menu

ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಅಕ್ಕ ಪಡೆ ತಡೆಯಾಗಲಿ

*ಡಾ.ಕರವೀರಪ್ರಭು ಕ್ಯಾಲಕೊಂಡ

” ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ:” ಎಂದು ಅಮೃತವಾಣಿಯಲ್ಲಿ ಮಹಿಳೆಯನ್ನು ವರ್ಣಿಸಿದ್ದೇವೆ. ಕವಿ ಪುಂಗವರಿಂದ ಶ್ಲೋಕಗಳನ್ನು ರಚಿಸಿ ಉಚ್ಛರಿಸಿದ್ದೇವೆ. ಕಲಾವಿದರ ಕುಂಚದ ಕೈ ಚಳಕದಲ್ಲಿ ರಂಗುರಂಗಿನ ರಂಜಿಸುವ ಬಣ್ಣಗಳಲ್ಲಿ ಅವರನ್ನು ಸೆರೆಹಿಡಿದು, ಕಟ್ಟು ಹಾಕಿಸಿ, ಗೋಡೆಗೆ ತೂಗುಬಿಟ್ಟು ಹೂವಿನ ಹಾರ ಹಾಕಿ, ಧೂಪದ ಹೊಗೆ ಹಿಡಿದು, ಕಾಯಿಕರ್ಪುರ ಸಲ್ಲಿಸಿ, ಅಡ್ಡ ಬಿದ್ದು ದೀರ್ಘದಂಡ ನಮಸ್ಕಾರ ಹಾಕುವ ನಾವು ವಾಸ್ತವದಲ್ಲಿ ” ನ ಸ್ತ್ರೀ ಸ್ವಾತಂತ್ರ್ಯ ಮರ್ಹತಿ ” ಎಂಬ ಮನು ವಾಕ್ಯಕ್ಕೆ ಜೋತು ಬಿದ್ದು ಅವರನ್ನು ಪಂಜರದ ಪಕ್ಷಿಯಂತೆ ಬಂಧನದಲ್ಲಿ ಇಟ್ಟಿದ್ದೇವೆ. ಅವರ ಹಸಿರು ಹಂಬಲಗಳಿಗೆ ಕೆಸರು ಬಳಿದು ಕೊಳೆಯುವಂತೆ ಮಾಡಿದ್ದೇವೆ. ಸ್ತ್ರೀಯ ಮೇಲೆ ಎಲ್ಲ ಸ್ತರಗಳಲ್ಲೂ ಶೋಷಣೆ ಮಾಡುತ್ತಲೇ ಬಂದಿದ್ದೇವೆ.

ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ವಿವಿಧ ದೌರ್ಜನ್ಯ ಬಗ್ಗೆ ನೋಡುತ್ತೇವೆ. ಕೇಳುತ್ತೇವೆ. ಅದು ಮಾಧ್ಯಮಗಳಲ್ಲಿ ವೈಭವೀಕರಣಗೊಳ್ಳುತ್ತಿರುವುದು ದುರ್ದೈವ. ಯಾವುದೇ ವಯಸ್ಸಿನ ಹೆಣ್ಣು ಮಕ್ಕಳಿಗೂ ಇಂದು ಭದ್ರತೆಯೇ ಇಲ್ಲದಾ ಗಿದೆ. ಭ್ರೂಣ ಹತ್ಯೆ , ಬಾಲ್ಯವಿವಾಹ, ಮರ್ಯಾದಾ ಹತ್ಯೆ ,ಅತ್ಯಾಚಾರ, ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯಂತಹ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ನಮ್ಮ ರಾಜ್ಯದಲ್ಲಿ ಕಳೆದ ಎರಡು ವರ್ಷ ಏಳು ತಿಂಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 80,313 ಬಾಲಕಿಯರು ಗರ್ಭಿಣಿಯಾಗಿರುವ ಆಘಾತಕಾರಿ ಸುದ್ದಿ ಇತ್ತೀಚಿಗೆ ಬೆಳಕಿಗೆ ಬಂದಿದೆ. ಇಷ್ಟಾದರೂ ಇದು ಮಂಜುಗಡ್ಡೆಯ ಮೇಲ್ನೋಟ ಅಷ್ಟೇ! ಏಕಂದರೆ ಇದು ಅಧೀಕೃತವಾಗಿ ದಾಖಲಾದ ಅಂಕಿ ಸಂಖ್ಯೆ. ಅನಧಿಕೃತ ಸಂಖ್ಯೆ ಇನ್ನೂ ಅಪಾರ !! ಇದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರವೇ ಸೈ !!!

ಆರ್ ಸಿ ಎಚ್ ಮಾಹಿತಿ 

ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ( ಆರ್ ಸಿ ಎಚ್ ) ಪೋರ್ಟಲ್ ಮಾಹಿತಿ ಪ್ರಕಾರ ಬೆಂಗಳೂರು (8,891 ),ಬೆಳಗಾವಿ ( 8,169 ),ವಿಜಯಪುರ (6,229 ), ತುಮಕೂರು (4,282 ) ಜಿಲ್ಲೆಗಳಲ್ಲಿ ಅತಿ ಹೆಚ್ಚು ಬಾಲ ಗರ್ಭಿಣಿಯರಿದ್ದರೆ, ಉಡುಪಿಯಲ್ಲಿ (182 ) ಬಾಲ ಗರ್ಭಿಣಿಯರಿದ್ದಾರೆ. ಶಾಲೆ ಬಿಟ್ಟ ಮಕ್ಕಳು, ಬಾಲ್ಯವಿವಾಹ, ಮೊಬೈಲ್ ಮತ್ತಿತರ ವಸ್ತುಗಳ ಆಸೆ ಆಮಿಷ, ಸಾಮಾಜಿಕ ಮಾಧ್ಯಮಗಳ ಬಳಕೆ, ಪ್ರೀತಿಯ ನೆಪದಲ್ಲಿ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಳ್ಳುವುದು ಹೆಚ್ಚಾಗಿ ಕಂಡು ಬಂದಿದೆ. ಇದರಲ್ಲಿ ಪೋಕ್ಸೊ ಪ್ರಕರಣಗಳ ಸಂಖ್ಯೆಯೇ ಅಧಿಕವಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಸುದ್ದಿಗೋಷ್ಠಿಯಲ್ಲಿ ಹೇಳಿರುವರು .

ತಲೆ ತಗ್ಗಿಸುವ ಸುದ್ದಿ

ಬಾಲಗರ್ಭಿಣಿಯರ ಪ್ರಕರಣಗಳು ಹೆಚ್ಚುತ್ತಿರುವ ವರದಿ ಪ್ರಕಟಗೊಂಡಿರುವ ಸಂದರ್ಭದಲ್ಲೇ, ಯಾದಗಿರಿ ಜಿಲ್ಲೆಯ ಶಹಾಪುರದ ವಸತಿ ಶಾಲೆಯೊಂದರ ಶೌಚಾಲಯದಲ್ಲಿ ಒಂಭತ್ತನೆಯ ತರಗತಿಯ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ್ದಾಳೆ. ಸ್ವತ: ಸಹೋದರನಿಂದಲೇ ಗರ್ಭವತಿಯಾದ ಬಾಲಕಿ ಮನೆಯ ಶೌಚಾಲಯದಲ್ಲಿ ಜನ್ಮ ನೀಡಿರುವ ಸುದ್ದಿ ಶಿವಮೊಗ್ಗದಿಂದ ವರದಿಯಾಗಿದೆ. ಈ ಘಟನೆಗಳು ಸಮಾಜವೇ ತಲೆ ತಗ್ಗಿಸುವಂತೆ ಮಾಡಿವೆ. ಹೆಣ್ಣನ್ನು ಕೇವಲ ಸುಖಿಸುವ ಮತ್ತು ಮಗು ಹೆರುವ ವಸ್ತುವನ್ನಾಗಿ ನೋಡುವುದರ ಸ್ಥಿತಿಯ ಪರಿಣಾಮ ಇದು. ಈ ತರದ ಘಟನೆಗಳು ಬೆಳಕಿಗೆ ಬಂದಾಗೆಲ್ಲಾ ಹಾಗೆ ಮಾಡಬೇಕು, ಹೀಗೆ ಮಾಡಬೇಕು ಎಂದು ಹಾರಾಡುತ್ತೇವೆ. ಹೋರಾಡುತ್ತೇವೆ. ಬೀದಿಗಿಳಿಯುತ್ತೇವೆ .ಕೂಗುತ್ತೇವೆ .ಮಾತಿನ ಮಂಟಪ ಕಟ್ಟುತ್ತೇವೆ. ನಮ್ಮನ್ನಾಳುವ ಪ್ರಭುಗಳು ಆಶ್ವಾಸನೆಗಳ ಸುರಿಮಳೆಯನ್ನೇ ಸುರಿಸುತ್ತಾರೆ. ಕಟ್ಟು ನಿಟ್ಟಿನ ಆದೇಶಗಳೂ ಹೊರಬರುತ್ತವೆ. ಕಾಲಾಂತರದಲ್ಲಿ ಕಸದಬುಟ್ಟಿ ಸೇರುತ್ತವೆ. ಹೀಗಾಗಿ ನಡೆಯುವುದು ಮಾತ್ರ ಎಗ್ಗಿಲ್ಲದೆ ನಡೆಯುತ್ತಲೇ ಇರುತ್ತವೆ.

ನರ್ತನಗೈಯುತ್ತಿರುವ ನಿರ್ಲಕ್ಷ್ಯ 

ಬಾಲಕಿಯರ ಸುರಕ್ಷತೆಗೆ ಸಂಬಂಧಿಸಿದಂತೆ ಶಾಲೆ ಮತ್ತು ಮನೆಯಲ್ಲಿ ನಿರ್ಲಕ್ಷದ ನರ್ತನ ಎದ್ದು ಕಾಣುತ್ತಿದೆ. ಶಾಲಾ ಪರಿಸರದಲ್ಲಿ ಬಾಲಕಿಯರ ಸುರಕ್ಷತೆಯ ಕಾಳಜಿ ಶಿಕ್ಷಣ ಸಂಸ್ಥೆ, ,ಅಲ್ಲಿಯ ಸಿಬ್ಬಂದಿಗಳದ್ದಾಗಿದ್ದರೆ, ಮನೆಯಲ್ಲಿ ಈ ಜವಾಬ್ದಾರಿಯನ್ನು ಪೋಷಕರೇ ನಿರ್ವಹಿಸಬೇಕು. ವಲಸೆ ಕಾರ್ಮಿಕರ ಬಹಳಷ್ಪು ಮಕ್ಕಳಿಗೆ ಊರಿನಲ್ಲಿ ಸಿಗುವ ಸುರಕ್ಷಿತೆ, ವಲಸೆ ಬಂದ ನಗರ ಪ್ರದೇಶಗಳಲ್ಲಿ ದೊರೆಯುವುದಿಲ್ಲ. ಹತ್ತಾರು ಕಾರಣಗಳಿಂದಾಗಿ ಎಳೆಯ ಮನಸ್ಸಿನಲ್ಲಿ ತಾಯ್ತನದ ಹೊರೆಯನ್ನು ಹೊರಬೇಕಾ ಗಿದೆ. ಆಡುವ ಕೂಸಿಗೊಂದು ಕಾಡುವ ಕೂಸೊಂದು ಎನ್ನುವಂತಾಗಿದೆ. ಕಾರಣ ಯಾವುದೇ ಆದರೂ, ಬಾಲ ಗರ್ಭಿಣಿಯರ ಪ್ರಕರಣಗಳು ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯವೇ ಆಗಿದೆ.

ಹದಿನೆಂಟು ವರ್ಷದೊಳಗೆ ಗರ್ಭ ಧರಿಸುವುದು ಹೆಣ್ಣು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ. ಹದಿಹರೆಯದವರಲ್ಲಿ ಮನಸ್ಸು ಬಹಳ ಸೂಕ್ಷ್ಮವಾಗಿದ್ದು ,ಕುತೂಹಲದಿಂದ ಇಲ್ಲ ಸಲ್ಲದ ಕುತೂಹಲಗಳಿಗೆ ಕೈ ಹಾಕುವುದೂ ಇದೆ. ಹೊಣೆಗೇಡಿ ಮಾಧ್ಯಮಗಳು ಕೂಡ ಹದಿಹರೆಯದವರ ಮನಸ್ಸು ಚಂಚಲವಾಗಲು ಪ್ರೇರೆಪಿಸುವವು. ಮಕ್ಕಳ ಮನಸ್ಸು ಸ್ವಸ್ಥ ಇರುವಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಪಾಲಕರು, ಪೋಷಕರು, ಶಿಕ್ಷಕರು ಅಂತಿಮವಾಗಿ ಸಮಾಜ ನಿರ್ವಹಿಸ ಬೇಕಾಗಿರುವುದು ಇಂದಿನ ಅವಶ್ಯಕತೆ.

ಆರೋಗ್ಯದ ಮೇಲಾಗುವ ಪರಿಣಾಮ

ಬಾಲಗರ್ಭಿಣಿಯರಿಗೆ ಸೂಕ್ತ ಸಮಯಕ್ಕೆ ವೈದ್ಯಕೀಯ ನೆರವು ಸಿಗುವುದಿಲ್ಲ. ಅವರು ಸೂಕ್ತ ರೀತಿಯ ಆರೈಕೆಯಿಂದಲೂ ವಂಚಿತರಾಗುತ್ತಾರೆ.ಬಾಲ್ಯದಲ್ಲಿಯೇ ಗರ್ಭ ಧರಿಸಿದರೆ ಬಾಲಕಿಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಉಂಟಾಗು ತ್ತವೆ. ಬಾಲಕಿಯರು ಗರ್ಭ ಧರಿಸಿದ ಮೇಲೆ ಗರ್ಭಪಾತ, ಅವಧಿ ಪೂರ್ವ ಪ್ರಸವ, ದೈಹಿಕ ನ್ಯೂನತೆ ಹೊಂದಿರುವ ಶಿಶು ಜನನ, ಕಡಿಮೆ ತೂಕ ಹೊಂದಿರುವ ಶಿಶುಗಳು ಹುಟ್ಟುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬಾಲಗರ್ಭಿಣಿಯರು ಮಾನಸಿಕ ಮತ್ತು ದೈಹಿಕ ಆಘಾತಕ್ಕೆ ತುತ್ತಾಗುತ್ತಾರೆ. ಬಾಲಗರ್ಭಿಣಿಯರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಮಗು ಜನಿಸಿದ ಬಳಿಕ ಬಾಲಗರ್ಭಿಣಿಯರು ರಕ್ತಹೀನತೆ, ಅಧಿಕ ರಕ್ತದೊತ್ತಡ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವರು.

ಸರಕಾರ ಕೈ ಕಟ್ಟಿ ಕೂತಿಲ್ಲ 

ಬಾಲ್ಯವಿವಾಹ ತಡೆಯುವ ದಿಶೆಯಲ್ಲಿ ಜಿಲ್ಲಾಧಿಕಾರಿ ಹಂತದಲ್ಲಿಯೇ ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲನಾ ಸಭೆ ನಡೆಸಲಾಗುತ್ತಿದೆ. ಸರಕಾರ ಈ ಅನಿಷ್ಠ ಪಿಡುಗನ್ನು ತಡೆಗಟ್ಟಲು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಹೀಗಿದ್ದರೂ ರಾಜ್ಯದಲ್ಲಿ ಬಾಲ್ಯವಿವಾಹಗಳು ಕ್ಷೀಣಿಸಿಲ್ಲ ಎಂಬುದಕ್ಕೆ ಇಷ್ಟೊಂದು ಬಾಲಕಿಯರು ಗರ್ಭಿಣಿಯಾಗಿರುವುದೇ ಸಾಕ್ಷಿಯಾಗಿದೆ. ಆಡಳಿತ ಯಂತ್ರ ಎಚ್ಛೆತ್ತುಕೊಳ್ಳಲು ಇದು ಸಕಾಲ. ಕಾಟಾಚಾರದ ಪರಿಶೀಲನಾ ಸಭೆಗೆ ವಿದಾಯ ಹೇಳಿ, ಪ್ರಾಮಾಣಿಕತೆಗೆ ಒತ್ತು ಕೊಟ್ಟಲ್ಲಿ ಸಭೆ ಸಾರ್ಥಕತೆ ಪಡೆದೀತು !

ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಮಕ್ಕಳು ಮತ್ತು ಮಹಿಳೆಯರ ರಕ್ಷಷಣೆಗೆ ಕಾವಲು ಸಮಿತಿಗಳನ್ನು ರಚಿಸಲಾಗಿದೆ. ಇದು ಮಕ್ಕಳು ಮತ್ತು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ಆಗದಂತೆ ಜಾಗೃತಿ ವಹಿಸಬೇಕು. ಈ ಸಮಿತಿಯಲ್ಲಿ ಶಿಕ್ಷಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ,ಗ್ರಾಮ ಲೆಕ್ಕಾಧಿಕಾರಿ, ಪೋಲಿಸ್ ಇನ್ ಸ್ಪೇಕ್ಟರ್ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇರುತ್ತಾರೆ. ವಾರದಲ್ಲಿ ಒಂದು ಬಾರಿಯಾದರೂ ಕಾವಲು ಸಮಿತಿಯು ಸಭೆಯನ್ನು ನಡೆಸಿ, ಬಾಲ್ಯವಿವಾಹ, ಬಾಲಗರ್ಭಿಣಿಯರ ಪ್ರಕರಣಗಳು, ಮಕ್ಕಳು ಹಾಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯದಂತೆ ಎಚ್ಚರ ವಹಿಸಬೇಕು. ಆದರೆ, ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚುತ್ತಿರುವುದು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಗಟ್ಟುವ ಕಾರ್ಯಕ್ರಮಗಳ ವೈಫಲ್ಯವನ್ನು ಸೂಚಿಸುವಂತಿದೆ.

ಅಕ್ಕ ಪಡೆ 

ಮಹಿಳೆ ಮತ್ತು ಮಕ್ಕಳು ಇಂದು ಎಲ್ಲ ಸ್ಥಳಗಳಲ್ಲಿ ಒಂದಿಲ್ಲ ಒಂದು ರೀತಿಯ ಪೀಡನಗೆ ಒಳಗಾಗುತ್ತಿದ್ದಾರೆ. ಜನನಿಬಿಡ ಸ್ಥಳಗಳಾದ ಬಜಾರ, ಜಾತ್ರೆ, ಉತ್ಸವ, ಉರುಸು, ಶಾಲಾ – ಕಾಲೇಜುಗಳಲ್ಲಿ ಹೆಣ್ಣು ಮಕ್ಕಳಿಗೆ ಚುಡಾಯಿಸುವುದು, ಕೀಟಲೆ ಕೊಡುವುದು, ಅಸಭ್ಯ ವರ್ತನೆಗಳನ್ನು ತೋರಿ ಮಿಂಚಿನಂತೆ ಮಾಯವಾಗಿ ಬಿಡುತ್ತಾರೆ. ಇದರಿಂದ ಹೆಣ್ಣು ಮಕ್ಕಳು ಅಸಹನೀಯವಾದ ಹಿಂಸೆಯನ್ನು ಅನುಭವಿಸುತ್ತಾರೆ. ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ರಾಜ್ಯ ಸರಕಾರ ಅಕ್ಕ ಪಡೆಯನ್ನು ಆರಂಭಿಸಿರುವುದು ಸ್ವಾಗತಾರ್ಹ ಯೋಜನೆ. ಸಂಕಷ್ಟದಲ್ಲಿರುವ ಮಹಿಳೆ ಮತ್ತು ಮಕ್ಕಳಿಗೆ ತಕ್ಷಣ ರಕ್ಷಣೆ ನೀಡುವ ಉದ್ದೇಶದಿಂದ ಅಕ್ಕ ಪಡೆಯನ್ನು ರಚಿಸಲಾಗಿದೆ.

ಅಕ್ಕ ಪಡೆಯವರು ಸಮವಸ್ತ್ರ ಧರಿಸಿ ಕೈಯಲ್ಲಿ ಲಾಠಿ ಹಿಡಿದು ನಿಂತರೆ ಸಾಲದು. ದುರ್ನಡತೆ ತೋರುವ ಪುಂಡ ಪೋಕರಿಗಳು ಸಿಕ್ಕು ಬಿದ್ದಾಗ ಸೊಕ್ಕು ಮುರಿಯುವಂತೆ ನಿರ್ದಾಕ್ಷಿಣ್ಯವಾಗಿ ಬಂಧಿಸಿ ಕಾನೂನಿನ ಕೈಗೆ ಒಪ್ಪಿಸಿದಾಗ ಮಾತ್ರ ಈ ಯೋಜನೆಯ ಉದ್ದೇಶ ಸಫಲವಾಗಲು ಸಾಧ್ಯ. ಈ ಹಿಂದೆ ಅಕ್ಕ ಪಡೆಯನ್ನೇ ಹೋಲುವ ಓಬವ್ವ, ರಾಣಿ ಅಬ್ಬಕ್ಕ ಹಾಗೂ ಚೆನ್ನಮ್ಮ ಪಡೆಗಳು ಆಯ್ದ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಹೆಣ್ಣು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಗಳನ್ನು ನಿಯಂತ್ರಿಸುವಲ್ಲಿ ಅಥವಾ ದುರುಳರಿಗೆ ಬುದ್ದಿ ಕಲಿಸುಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿವೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಹೊಸ ಹೊಸ ಯೋಜನೆಗಳನ್ನು ಹೊಸ ಹೊಸ ಹೆಸರುಗಳಿಂದ ಹುಟ್ಟು ಹಾಕುವ ಬದಲು ಇರುವ ಯೋಜನೆಗಳಿಗೆ ಅವಶ್ಯವಿರುವ ಬದಲಾವಣೆ ತಂದು, ಬಲಪಡಿಸಿ, ತಿದ್ದುಪಡಿ ಮಾಡುವ ಅಗತ್ಯವಿದೆ. ಇಲ್ಲದಿದ್ದಲ್ಲಿ ಹತ್ತರಕೂಡ ಹನ್ನೊಂದಾಗಿ ಹೇಳಹೆಸರಿಲ್ಲದೇ ಉಸಿರು ಚೆಲ್ಲುವುದರಲ್ಲಿ ಸಂಶಯವಿಲ್ಲ.

ಇಂಥ ಯೋಜನೆಗಳ ಬಗ್ಗೆ ಸಿರ್ವಜನಿಕರಲ್ಲಿ ಅರಿವು ಮೂಡಿಸಿ, ಜಾಗೃತಿ ಉಂಟುಮಾಡುವ ಅಗತ್ಯವಿದೆ. ಮಹಿಳೆಯರು ಕೂಡ ಈ ಯೋಜನೆಯ ಪ್ರಯೋಜನ ಪಡೆಯಲು ಸಜ್ಜಾಗುವ ಅವಶ್ಯವೂ ಇದೆ. ಬಾಲಗರ್ಭಿಣಿಯರಾಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಕಾನೂನು ಸೇವಾ ಪ್ರಾಧಿಕಾರ, ಆರೋಗ್ಯ ಇಲಾಖೆ ಮೂಲಕ ಜಾಗೃತಿ ಮೂಡಿಸಬೇಕು. ಮಧ್ಯದಲ್ಲಿ ಶಾಲೆ ಬಿಡುವ ಮಕ್ಕಳನ್ನು ಗುರುತಿಸಿ, ಮತ್ತೆ ಸೇರಿಸಲು ಕ್ರಮ ಕೈಕೊಳ್ಳಬೇಕು. ವಿದ್ಯಾದೇವತೆ ಸರಸ್ವತಿ, ಧನ ಕನಕ ಕೊಡುವವಳು ಲಕ್ಷ್ಮಿ ,ದುಷ್ಟರ ಸಂಹಾರ, ಶಿಷ್ಟರ ರಕ್ಷಣೆ ಮಾಡುವವಳು ದೇವಿ, ದೇಶವನ್ನು ಮಾತೆ, ನಾಡನ್ನು ತಾಯಿ, ನೆಲವೂ ಹೆಣ್ಣು, ನದಿಯೂ ಹೆಣ್ಣು ಎಂದು ಸ್ತ್ರೀಯನ್ನು ಸರ್ವ ಶ್ರೇಷ್ಠ ಶಕ್ತಿಯನ್ನಾಗಿಸಿ ” ಮಾತೃ ದೇವೋಭವ “ಎಂದು ಹಾಡಿ ಹರಸುವ ನಾವು ವಾಸ್ತವದಲ್ಲಿ ಹೆಣ್ಣಿನ ಮೇಲೆ ಗೌರವ ಯಾಕಿಲ್ಲ ? ಈ ಪ್ರಶ್ನೆಗೆ ಪ್ರಾಮಾಣಿಕ ಉತ್ತರ ಸಿಕ್ಕಾಗ ಮಾತ್ರ ಇಂಥ ಅಸಹ್ಯ ಘಟನೆಗಳು ನಿಲ್ಲುತ್ತವೆ. ಇದಕ್ಕೆ ನೀವೆನಂತೀರಿ ?

ವಿಳಾಸ : ಡಾ.ಕರವೀರಪ್ರಭು ಕ್ಯಾಲಕೊಂಡ
ವಿಶ್ರಾಂತ ಜಿಲ್ಲಾ ಶಸ್ತ್ರಚಿಕಿತ್ಸಕರು
ಕ್ಯಾಲಕೊಂಡ ಆಸ್ಪತ್ರೆ
ಬಾದಾಮಿ .587201
ಜಿಲ್ಲಾ : ಬಾಗಲಕೋಟೆ
ಮೊ : 9448036207

Related Posts

Leave a Reply

Your email address will not be published. Required fields are marked *