ಮಲೆನಾಡು ಎಂದರೆ ಎಲ್ಲರ ಕಣ್ಣಿನ ಮುಂದೆ ಬರುವುದು ಇಲ್ಲಿನ ನೈಸರ್ಗಿಕ ವಾತಾವರಣ, ಇಲ್ಲಿನ ರೈತಾಪಿ ಜೀವನ, ಇಲ್ಲಿನ ಪ್ರೇಕ್ಷಣೀಯ ಪ್ರಸಿದ್ಧ ಸ್ಥಳಗಳ ಜೊತೆ ಜೊತೆಗೆ ಇಲ್ಲಿನ ಜನ ಅನೇಕ ಶತಮಾನಗಳಿಂದ ಆಚರಿಸಿಕೊಂಡು ಬಂದಿರುವ ವಿಭಿನ್ನ ಆಚರಣೆಗಳು, ಸಂಪ್ರದಾಯಗಳು. ಒಂದು ಬೆಳೆಯನ್ನು ಬೆಳೆಯ ಬೇಕೆಂದರೆ ಭೂಮಿತಾಯಿಗೆ ಸಲ್ಲಿಸುವ ಪೂಜೆಯಿಂದ ಬೆಳೆ ಬೆಳೆದು ನಿಂತ ಮೇಲೆ ಮೇಲೆ ಕಟಾವು ಮುಗಿಸಿ ಮನೆಗೆ ಬರುವ ತನಕವೂ ವಿವಿಧ ರೀತಿಯ ಪೂಜೆಗಳು ಸಲ್ಲಿಕೆಯಾಗುತ್ತವೆ. ಇಂತಹ ಶ್ರೇಷ್ಠ ಸಂಸ್ಕೃತಿಯನ್ನು ಹೊಂದಿರುವ ಮಲೆನಾಡಿನ ಜನ ನಾವೇ ಪುಣ್ಯವಂತರು ಎನ್ನಬಹುದು.
ಆದರೆ ಆಧುನಿಕತೆಯ ಪ್ರಭಾವ ನಮ್ಮನ್ನು ಬಿಟ್ಟಿಲ್ಲ. ನಮ್ಮ ಸಂಸ್ಕೃತಿಯ ಬೇರುಗಳನ್ನೇ ಮರೆತು ಆಧುನಿಕತೆಯ ಪ್ರಪಂಚದಲ್ಲಿ ನಾವು ಕೂಡ ಎಲ್ಲರಂತೆ ಇರಬೇಕು ಎನ್ನುವ ಮನಸ್ಥಿತಿಯಲ್ಲಿ ಅದ್ಧೂರಿತನ ಎಂಬುದು ನಮ್ಮ ದೈನಂದಿನ ಜೀವನದಲ್ಲಿ ಬೆರೆತುಹೋಗುತ್ತಿರುವುದು ವಿವಿಧ ಆಯಾಮಗಳಿಂದ ಎಲ್ಲಾ ಸಮಯದಲ್ಲೂ ಒಳ್ಳೆಯದಲ್ಲ.
ಯಾವ ವ್ಯಕಿಯು ತನ್ನ ಜೀವನದಲ್ಲಿ ಸರಿಯಾದ ಆರ್ಥಿಕ ಶಿಸ್ತನ್ನು ಅಳವಡಿಸಿಕೊಂಡು ಜೀವನದ ನಿರ್ವಹಣೆ ಮಾಡುತ್ತಾನೋ ಆತ ಯಾವಾಗಲೂ ಯಶಸ್ವಿಯಾಗು ತ್ತಾನೆ. ಅದೇ ದಾರಿಯಲ್ಲಿ ಸಾಗುತ್ತಾ ನಾವು ನಮ್ಮ ಆರ್ಥಿಕ ಶಿಸ್ತಿನ ಪರಿಮಿತಿಯನ್ನು ದಾಟದೆ ನಮ್ಮ ನಮ್ಮ ಪದ್ಧತಿ ಸಂಸ್ಕ ತಿಯ ಆಚರಣೆಯು ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ.
ಸರಳ ವಿವಾಹದಂತಹ ಮಂತ್ರ ಮಾಂಗಲ್ಯ ಪದ್ಧತಿಯನ್ನು ಜಗತ್ತಿಗೆ ಪರಿಚಯಿಸಿದ ಕುವೆಂಪುರವರು ಜನಿಸಿದ ಜಿಲ್ಲೆ ನಮ್ಮದು. ಆದರೆ ಇಂದು ಅವರ ಕರೆಕೊಟ್ಟ ಪದ್ಧತಿಗಳನ್ನು ಪಾಲಿಸಿ ಬೇರೆಯವರಿಗೆ ಪಾಲಿಸುವಂತೆ ಸಲಹೆ ನೀಡುವವರು ತೀರಾ ಕಡಿಮೆ. ದುಂದುವೆಚ್ಚದ ಮದುವೆ ಸಮಾರಂಭಗಳನ್ನು ಏರ್ಪಡಿಸದೇ ಅತ್ಯಂತ ಸರಳವಾದ ಮದುವೆ ನಡೆಸುವುದು ಅವರ ಪ್ರತಿಷ್ಠೆಗೆ, ಘನತೆಗೆ ಧಕ್ಕೆ ಉಂಟುಮಾಡುತ್ತದೆ ಎಂದು ಭಾವಿಸುವ ಜನರೇ ಜಾಸ್ತಿ.
ಆರ್ಥಿಕವಾಗಿ ಸದೃಢವಾಗಿ ಇರುವ ಊರಿನವರು ಯಾರಾದರೂ ಒಬ್ಬ ವ್ಯಕ್ತಿ ಮಗ/ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿ ಒಂದೊಳ್ಳೆ ಬೀಗರ ಔತಣ ಏರ್ಪಡಿಸಿದರೆ ಸಾಕು, ಅದು ನಮ್ಮ ಜನಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗುತ್ತದೆ. ಆದರೆ ಅವರ ಆರ್ಥಿಕ ಸ್ಥಿತಿ ಮತ್ತು ನಮ್ಮ ಆರ್ಥಿಕ ಸ್ಥಿತಿಯ ಹೋಲಿಕೆ ನಡೆಸದೇ ಅವರಿಗಿಂತ ಅದ್ಧೂರಿಯಾಗಿ ನಡೆಯಬೇಕು. ನಮ್ಮ ಮನೆ ಮದುವೆ ಎನ್ನುವುದು ಹಳ್ಳಿಯಲ್ಲಿ ಇರುವ ಮನಸ್ಥಿತಿಯಾಗಿದೆ.
ಆದರೆ ಜೀವನವಿಡೀ ದುಡಿದು ಪ್ರತಿ ಕ್ಷಣದಲ್ಲೂ ಉಳಿತಾಯ ಮಾಡಿ ಕೂಡಿಟ್ಟ ಹಣವೆಲ್ಲವೂ ಒಂದೇ ಒಂದು ಸಮಾರಂಭದಲ್ಲಿ ಪೋಲಾಗುತ್ತಿರುವುದು ಮಲೆನಾಡಿನ ಸಹೃದಯಿ ಜನರ ಗಮನಕ್ಕೆ ಬಾರದೇ ದಿನೇದಿನೇ ಈ ಅದ್ಧೂರಿತನ ವ್ಯಾಪಕಗೊಳ್ಳುತ್ತಿರುವುದು ಅತ್ಯಂತ ಕೆಟ್ಟ ಬೆಳವಣಿಗೆ ಎನ್ನಬಹುದು. ಸಮಾರಂಭಗಳು ಸಂಪ್ರದಾಯಬದ್ಧವಾಗಿ, ಅವರ ಆಚರಣೆಗಳು, ನಂಬಿಕೆಗಳಿಗೆ ಚ್ಯುತಿ ಬರದಂತೆ ನಡೆದಾಗ ಮಾತ್ರ ಅದರ ತೂಕ ಹೆಚ್ಚಾಗುತ್ತದೆ ಹೊರತು ಅದ್ಧೂರಿತನ ಯಾವತ್ತಿಗೂ ಒಂದು ಸಮಾರಂಭವನ್ನು ಅಥವಾ ಅದರ ತೂಕ ಹೆಚ್ಚಿಸುವುದಿಲ್ಲ ಎಂಬುದು ಸತ್ಯ. ಜನರ ಮುಂದೆ ದೊಡ್ಡವರು ಎನಿಸಿಕೊಳ್ಳಲು, ಸಮಾರಂಭ ಅದ್ಧೂರಿಯಾಗಿ ನಡೆಯಿತು, ಈ ಊರಲ್ಲೇ ನಿಮ್ಮ ಕುಟುಂಬದ ಅತಿ ದೊಡ್ಡ ಮದುವೆ ಎನಿಸಿಕೊಳ್ಳಲು ನಾವು ನಮ್ಮ ಆರ್ಥಿಕ ಶಿಸ್ತನ್ನು ಮೀರಿ ಮಾಡುವ ಅತಿಯಾದ ದುಂದುವೆಚ್ಚವು ಮುಂದೆ ತುಂಬಾ ಕೆಟ್ಟ ಪರಿಣಾಮ ಬೀರುವುದಂತೂ ನಿಜ.
ಜನ ಹೇಗಿದ್ದರೂ ಮಾತನಾಡಿಕೊಳ್ಳುತ್ತಾರೆ. ಅವರನ್ನು ಮೆಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಜಗತ್ತಿಗೆ ತಿಳಿದಿರುವ ಸತ್ಯ. ಆದರೆ ಜನ ಮಾತನಾಡಿ ಕೊಳ್ಳುವುದು ಕೆಲವು ದಿನ. ಆದರೆ ಸಾಲದ ಹೊರೆ ದೀರ್ಘಕಾಲ ರೈತಾಪಿ ಕುಟುಂಬವನ್ನು ಪೀಡಿಸುತ್ತದೆ. ಆದ್ದರಿಂದ ಜನರನ್ನು ಮೆಚ್ಚಿಸುವ ಬದಲು ನಮ್ಮ ಪರಿಸ್ಥಿತಿಗೆ ಅನುಗುಣವಾಗಿ ಸಮಾರಂಭ ನಡೆಸುವುದು ಸೂಕ್ತ.
ಮಲೆನಾಡ ಪರಿಸರದಲ್ಲಿ ಹಬ್ಬುತ್ತಿರುವ ಈ ಅದ್ಧೂರಿ ಮದುವೆ ಸಮಾರಂಭಗಳು, ಬೀಗರ ಔತಣಗಳು ಇನ್ನಾದರೂ ಕಡಿಮೆಯಾಗಿ ಮಲೆನಾಡಿನ ಜನರ ದುಂದು ವೆಚ್ಚಕ್ಕೆ ಕಡಿವಾಣ ಬೀಳಲಿ. ಮುಂದೆ ಮದುವೆ ಮಾಡಿಕೊಳ್ಳುವವರು ಅಗತ್ಯವಾಗಿ ಇದರ ಬಗ್ಗೆ ಗಮನಹರಿಸಿ ಅದ್ಧೂರಿತನ ಕೈಬಿಟ್ಟು ಅತ್ಯಂತ ಸರಳವಾದ ಸಂಪ್ರದಾಯಬದ್ಧವಾಗಿ ತಾವುಗಳು ಮದುವೆಯಾಗುವ ಮೂಲಕ ಇನ್ನೊಬ್ಬರಿಗೆ ಮಾದರಿಯಾದರೆ ಅದ್ಧೂರಿತನ ತೊಲಗಲು ಬಹಳ ದಿನ ಬೇಕಾಗುವುದಿಲ್ಲ.
-ವಿಕಾಸ್ ಕ್ಯಾಸನೂರು