Menu

ಸಾವಿರ ಜನ ವಿರೋಧ ಮಾಡಲಿ, ನನ್ನ ನಂಬಿಕೆ ನನಗೆ: ಡಿ.ಕೆ. ಶಿವಕುಮಾರ್

ಸಾವಿರ ಜನ ವಿರೋಧ ಮಾಡಲಿ, ನನ್ನ ನಂಬಿಕೆ ನನಗೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಆಯೋಜಿಸಿರುವ ಪುಸ್ತಕ ಮೇಳ ಉದ್ಘಾಟನಾ ಕಾರ್ಯಕ್ರಮದ ನಂತರ ಶಿವಕುಮಾರ್  ಮಾಧ್ಯಮಗಳ ಪ್ರಶ್ನೆಗಳಿಗೆ  ಪ್ರತಿಕ್ರಿಯೆ ನೀಡಿದರು.

ಕುಂಭಮೇಳ ಹಾಗೂ ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಿಮ್ಮ ನಿಲುವಿನ ಬಗ್ಗೆ ಚರ್ಚೆಯಾಗುತ್ತಿದೆಯಲ್ಲಾ ಎಂದು ಕೇಳಿದಾಗ, ನಾನು ನೊಣವಿನಕೆರೆ ಮಠಕ್ಕೆ ಹೋಗುತ್ತೇನೆ. ಅದಕ್ಕೆ ನಮ್ಮವರು, ‘ನೀವು ನಮ್ಮ ಮಠಕ್ಕೆ ಬರುವುದಿಲ್ಲ, ಅಲ್ಲಿಗೆ ಹೋಗುತ್ತೀರಲ್ಲಾ’ ಎಂದು ಕೇಳುತ್ತಾರೆ. ನನ್ನ ನಂಬಿಕೆ ಇದ್ದ ಕಡೆ ನಾನು ಹೋಗುತ್ತೇನೆ. ನನಗೆ ಎಲ್ಲಿ ಒಳ್ಳೆಯದಾಗುತ್ತದೆ ಎಂದು ಅನಿಸುತ್ತದೆಯೋ ಅಲ್ಲಿಗೆ ಹೋಗುತ್ತೇನೆ. ನನ್ನ ನಂಬಿಕೆ ನನ್ನದು’  ಎಂದು ಹೇಳಿದರು.

“ನನ್ನ ಕ್ಷೇತ್ರದಲ್ಲಿ ನನಗೆ ಮತ ಹಾಕಿರುವವರಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಹೆಚ್ಚಾಗಿದ್ದಾರೆ. ನನ್ನ ಕ್ಷೇತ್ರದಲ್ಲಿ ಶೇಕಡಾ 99 ರಷ್ಟು ಬ್ರಾಹ್ಮಣ ಸಮುದಾಯದವರು ನನಗೆ ಮತ ಹಾಕುತ್ತಾರೆ. ಹೀಗಾಗಿ ಬ್ರಾಹ್ಮಣರೆಲ್ಲರೂ ಬಿಜೆಪಿಗೇ ಮತ ಹಾಕುತ್ತಾರೆ ಎಂದು ಹೇಳಲು ಸಾಧ್ಯವೇ, ನಾನು ಎಂದಿಗೂ ಜಾತಿ ಮೇಲೆ ರಾಜಕಾರಣ ಮಾಡುವುದಿಲ್ಲ. ನೀತಿ ಮೇಲೆ ರಾಜಕಾರಣ ಮಾಡುತ್ತೇನೆ” ಎಂದರು.

“ಕಾಂಗ್ರೆಸ್ ಪಕ್ಷ ಎಂದರೆ ಎಲ್ಲಾ ಧರ್ಮಗಳ ಸಮಾಗಮ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವುದು ನಮ್ಮ ಪಕ್ಷದ ಸಿದ್ಧಾಂತ. ನಾವು ಅಧಿಕಾರ, ಸ್ಥಾನಮಾನ ನೀಡುವಾಗ ಎಲ್ಲರನ್ನು ಪರಿಗಣಿಸಿಯೇ ನೀಡುತ್ತೇವೆ. ನಾವು ಧಾರ್ಮಿಕ ದತ್ತಿ ಇಲಾಖೆ ಮುಚ್ಚಿದ್ದೇವೆಯೇ,  ಬಿಜೆಪಿ ಅಧಿಕಾರದಲ್ಲಿ ಇದ್ದಾಗ ವಕ್ಫ್ ಬೋರ್ಡ್ ಮುಚ್ಚಲಿಲ್ಲ ಯಾಕೆ ಇದಕ್ಕೆ ಕಾರಣ ನಮ್ಮ ಸಂವಿಧಾನ.  ಈ ಭೂಮಿಗೆ, ಗಾಳಿಗೆ ಜಾತಿ, ಧರ್ಮದ ತಾರತಮ್ಯ ಇದೆಯೇ ಎಂದು ಪ್ರತಿ ಪ್ರಶ್ನೆ ಹಾಕಿದರು.

ರಾಹುಲ್ ಗಾಂಧಿ ದೊಡ್ಡ ಶಿವಭಕ್ತರು: ಈ ಹಿಂದೆ ಎಸ್ ಎಂ ಕೃಷ್ಣ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿದಾಗ ಚುನಾವಣೆ ಯಾತ್ರೆಗೆ ‘ಪಾಂಚಜನ್ಯ’ ಎಂದು ಹೆಸರು ಇಟ್ಟಿದ್ದೆವು. ಕೆಲವರು ಸೋನಿಯಾ ಗಾಂಧಿ ಬಳಿ ದೂರು ಕೊಟ್ಟರು. ಆದರೆ ಅವರು ಅದಕ್ಕೆ ತಡೆ ನೀಡಲಿಲ್ಲ. ಹಿಂದೂಗಳನ್ನು ಬಿಜೆಪಿ ಹಾಗೂ ಆರ್ ಎಸ್ ಎಸ್ ನವರಿಗೆ ಬಿಟ್ಟುಕೊಟ್ಟಿದ್ದೇವಾ,  ದೇವರ ಹೆಸರು ಇದೆ ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ ಹಾಗೂ ನನ್ನ ಹೆಸರು ಬದಲಿಸಲು ಆಗುತ್ತದೆಯೇ, ನಮ್ಮ ನಾಯಕ ರಾಹುಲ್ ಗಾಂಧಿ ಶಿವಭಕ್ತರು. ಮುರುಘಾ ಮಠದಲ್ಲಿ ಅವರು ಲಿಂಗ ದೀಕ್ಷೆ ಸ್ವೀಕರಿಸಿದರು ಎಂದು ವಿವರಿಸಿದರು.

ಧರ್ಮ, ನಂಬಿಕೆ ವಿಚಾರದಲ್ಲಿ ರಾಜಕೀಯ ಬೇಡ: ಕುಂಭಮೇಳಕ್ಕೂ ಇದಕ್ಕೂ ಏನು ಸಂಬಂಧ,  ನೀರಿಗೆ ಜಾತಿ, ಧರ್ಮ ಇದೆಯಾ, ಇದರಲ್ಲಿ ಯಾವುದೇ ರಾಜಕಾರಣ ಇಲ್ಲ. ಧರ್ಮ, ನಂಬಿಕೆ ವಿಚಾರದಲ್ಲಿ ರಾಜಕೀಯ ಬೆರೆಸುವುದು ಬೇಡ ಎಂದರು. ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ವಿರೋಧ ವ್ಯಕ್ತವಾಗಿದೆ ಎಂದು ಕೇಳಿದಾಗ,  ಶಿವರಾತ್ರಿ ಹಬ್ಬದ ಪ್ರಯುಕ್ತ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಇದು ನನ್ನ ಸ್ವಂತ ನಂಬಿಕೆ. ಯಾರೋ ಟ್ವೀಟ್ ಮಾಡುತ್ತಾರೆ, ಯಾರೋ ಮಾತನಾಡುತ್ತಾರೆ ಎಂದು ನಾನು ಎಲ್ಲದಕ್ಕೂ ಉತ್ತರ ನೀಡಲು ಆಗುವುದಿಲ್ಲ ಎಂದು ತಿಳಿಸಿದರು.

ನಿಮ್ಮ ಈ ನಡೆಯನ್ನು ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ ಎಂದು ಹೇಳಿದಾಗ, ಬಿಜೆಪಿಯವರು ಸ್ವಾಗತಿಸುವುದೂ ಬೇಡ, ಬೇರೆ ಯಾರೂ ಸ್ವಾಗತಿಸುವುದು ಬೇಡ. ಮಾಧ್ಯಮಗಳು ಇದನ್ನು ಹೆಚ್ಚು ಚರ್ಚೆ ಮಾಡುವುದೂ ಬೇಡ. ಇದು ನನ್ನ ವೈಯಕ್ತಿಕ ವಿಚಾರ. ಸದ್ಗುರು ಮನೆಗೆ ಬಂದು ಆಹ್ವಾನ ನೀಡಿದರು. ರಾಹುಲ್ ಗಾಂಧಿ ನಮ್ಮ ನಾಯಕರು. ನಮ್ಮ ಎದುರು ಯಾರಾದರೂ ಅವರ ಬಗ್ಗೆ ಮಾತನಾಡಿದರೆ ನಾವು ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದರು.

ಟೀಕೆ ಮಾಡುವವರು ಅಧಿವೇಶನದಲ್ಲಿ ಮಾತನಾಡಲಿ: ಬೆಂಗಳೂರನ್ನು ನೀವು ಚೂರು ಚೂರು ಮಾಡಲು ಹೊರಟಿದ್ದೀರಿ ಎಂದು ಟೀಕೆ ಮಾಡಲಾಗುತ್ತಿದೆಯಲ್ಲ  ಎಂದಾಗ, ಟೀಕೆ ಮಾಡುವವರು ವಿಧಾನ ಮಂಡಲ ಅಧಿವೇಶನದಲ್ಲಿ ಬಂದು ಮಾತನಾಡಲಿ, ಉತ್ತರ ಕೊಡುತ್ತೇನೆ ಎಂದು ಸವಾಲು ಹಾಕಿದರು. ಅಮಿತ್ ಶಾ ಅವರು ಕ್ಷೇತ್ರ ಮರುವಿಂಗಡಣೆ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ಕೇಳಿದಾಗ, ನಮ್ಮ ಪಕ್ಷ ಒಂದು ದೇಶ, ಒಂದು ಚುನಾವಣೆಯನ್ನು ವಿರೋಧಿಸಿದ್ದು, ನಾವು ಅದಕ್ಕೆ ಬದ್ಧ. ಮಹಿಳಾ ಮೀಸಲಾತಿ ವಿಚಾರದಲ್ಲಿ ನಮ್ಮ ಬೆಂಬಲ ಇದೆ. ಸರ್ಕಾರಕ್ಕೆ ಮೂರನೇ ಎರಡರಷ್ಟು ಬಹುಮತ ಇದ್ದಾಗ ಮರುವಿಂಗಡಣೆ ಮಾಡಬಹುದು. ಆದರೆ ಅಷ್ಟು ಸಂಖ್ಯಾಬಲ ಸರ್ಕಾರಕ್ಕೆ ಇಲ್ಲ ಎಂದು ಹೇಳಿದರು.

ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳ ಆಯೋಜಿಸುವ ಮೂಲಕ ವಿಧಾನಸಭೆ ಸ್ಪೀಕರ್ ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳು ಸೇರಿ ಹೊಸ ಅಧ್ಯಾಯ ಆರಂಭಿಸಿದ್ದಾರೆ ಎಂದು ಶಿವಕುಮಾರ್‌ ಹೇಳಿದರು.

ಅವಕಾಶ ಸಿಕ್ಕಾಗ  ಹೇಗೆ ಬಳಸಿಕೊಳ್ಳಬೇಕು ಎಂದುಸ್ಪೀಕರ್ ಯು.ಟಿ ಖಾದರ್ ಹಾಗೂ ಸಭಾಪತಿ ಹೊರಟ್ಟಿ ಅವರನ್ನು ನೋಡಿ ಕಲಿಯಬೇಕು. ಇವರಿಬ್ಬರೂ ಅನೇಕ ಬದಲಾವಣೆ ತಂದಿದ್ದು, ಸುವರ್ಣಸೌಧಕ್ಕೂ ಹೊಸ ರೂಪ ನೀಡುವ ಪ್ರಯತ್ನ ಮಾಡಿದ್ದಾರೆ. ಸರ್ಕಾರದ ಪರವಾಗಿ ಇಬ್ಬರಿಗೂ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ ಎಂದರು.

ಒಬ್ಬ ಓದುಗ, ನಾಯಕನಾಗುತ್ತಾನೆ ಎಂದು ನಮ್ಮ ಗುರುಗಳು ಹೇಳುತ್ತಿದ್ದರು. ಹೀಗಾಗಿ ಪುಸ್ತಕ ಓದುವ ಹವ್ಯಾಸಕ್ಕೆ ಪುಷ್ಟಿ ನೀಡುವ ಕೆಲಸ ನಡೆಯುತ್ತಿದೆ. ಪ್ರತಿ ವರ್ಷ ಇದನ್ನು ಮುಂದುವರಿಸಿಕೊಂಡು ಹೋಗಲು ಸರ್ಕಾರ ಆದೇಶ ಮಾಡಲಿದೆ ಎಂದು ಸಿಎಂ ಹೇಳಿದ್ದಾರೆ. ಇಲ್ಲಿ ಪುಸ್ತಕ ಹಾಗೂ ಮಸ್ತಕದ ಜಾತ್ರೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

 

Related Posts

Leave a Reply

Your email address will not be published. Required fields are marked *