Menu

ಕುಷ್ಠ ರೋಗ ದೀರ್ಘಕಾಲ ಬಾಧಿಸುವ ವಾಸಿ ಮಾಡಬಹುದಾದ ಸಾಂಕ್ರಾಮಿಕ ಕಾಯಿಲೆ

ಕುಷ್ಠ ರೋಗ ದೀರ್ಘಕಾಲ ಬಾಧಿಸುವ ಒಂದು ಸಾಂಕ್ರಾಮಿಕ ಕಾಯಿಲೆ. ಇದು ಸದ್ದಿಲ್ಲದೆ ಬಂದು ಸೇರಿ ಗೊತ್ತಿಲ್ಲದಂತೆ ಬೆಳೆದು ಕೈಕಾಲುಗಳನ್ನು, ಮೂಗನ್ನು ಮೊಂಡು ಮಾಡಿ, ವಿಕಾರ ರೂಪಗಳನ್ನು ಬಳುವಳಿ ಕೊಟ್ಟು, ಮಾನಸಿಕ ಯಾತನೆಯಲ್ಲಿ ಸಿಲುಕಿಸಿ, ಸಮಾಜದ ಬಹಿಷ್ಕಾರಕ್ಕೆ ತುತ್ತಾಗಿ ತತ್ತರಿಸುವಂತೆ ಮಾಡುವ ಸಾಮರ್ಥ್ಯ ಹೊಂದಿದೆ. ಇದು ಉಳಿದ ಯಾವ ಸಾಂಕ್ರಾಮಿಕ ರೋಗಗಳಲ್ಲೂ ಕಂಡು ಬರುವುದಿಲ್ಲ. ಇದು ಪೂರ್ವಜನ್ಮದ ಪಾಪದ ಕೊಡುಗೆ ಎಂಬ ಗಾಢವಾದ ಮೂಢನಂಬಿಕೆ ನಮ್ಮಲ್ಲಿ ಆಳವಾಗಿ ಬೇರುಬಿಟ್ಟಿದೆ…

ಲೆಪ್ರೊಸಿ ಶಬ್ದ ಪುರಾತನ ಗ್ರೀಕ್‌ನ ಲೆಪ್ರಾದಿಂದ ಬಂದಿದೆ. ಚರ್ಮವನ್ನು ಪದರು ಪದರಾಗಿಸುವ ಕಾಯಿಲೆ. ದಿ ಆಕ್ಸ್‌ಫರ್ಡ್ ಇಲಸ್ಟ್ರೇಟೆಡ್ ಕಂಪಾನಿಯನ್ ಟು ಮೆಡಿಸಿನ್‌ನಲ್ಲಿ ಇದು ನಮೂದಿಸಲ್ಪಟ್ಟಿದೆ. ನಾರ್ವೆಯ ವೈದ್ಯ ಹ್ಯಾನ್ಸನ್ ೧೮೭೩ರಲ್ಲಿ ಕುಷ್ಠರೋಗಕ್ಕೆ ಕಾರಣವಾದ ರೋಗಾಣುವನ್ನು ಕಂಡು ಹಿಡಿದ. ಹೀಗಾಗಿ, ಇದಕ್ಕೆ ಹ್ಯಾನ್ಸನ್ ರೋಗ ಎಂದು ಕರೆಯುವರು. ಪ್ರತಿ ವರ್ಷ ಜನವರಿ ೩೦ರಂದು ವಿಶ್ವ ಕುಷ್ಠರೋಗ ದಿನ ಆಚರಿಸಿಕೊಂಡು ಬರಲಾಗುತ್ತಿದೆ. ಕುಷ್ಠರೋಗದಿಂದ ತತ್ತರಿಸಿದ ಜನರಿಗೆ ಆರೈಕೆ, ಸಹಾಯ ಮಾಡಿದ ಮಹಾತ್ಮ ಗಾಂಧೀಜಿ ಅವರಿಗೆ ಗೌರವವಾಗಿ ಈ ದಿನವನ್ನು ಫ್ರೆಂಚ್‌ನ ರೌಲ್ ಪೋಲೆರಿಯೊ ಆಯ್ಕೆ ಮಾಡಿದರು.

ಕುಷ್ಠರೋಗದ ಹಾವಳಿ ಹಾಹಾಕಾರ ನಾವು ಅಂಕಿ ಸಂಖ್ಯೆಗಳಿಂದ ತಿಳಿದುಕೊಂಡಿರುವುದಕ್ಕಿಂತಲೂ ಬಹಳ ಹೆಚ್ಚಿದೆ. ಭಾರತದಲ್ಲಿ ಕುಷ್ಠರೋಗದ ಹಾವಳಿ ೨೦೧೬ ಮಾರ್ಚ್ ಕೊನೆಗೆ ೧/೧೦೦೦೦ರಷ್ಟಿತ್ತು. ಇದು ಸಾರ್ವಜನಿಕ ಆರೋಗ್ಯ ಸಮಸ್ಯೆ ಅಲ್ಲ ಎಂದು ಪರಿಗಣಿಸಲು ಜಾಗತಿಕ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಗುರಿಯಾಗಿತ್ತು. ಭಾರತದ ೬೬೯ ಜಿಗಳ ಪೈಕಿ ೫೫೧ಜಿಗಳ ವರದಿಯನ್ನು ಇದು ಒಳಗೊಂಡಿತ್ತು. ರೋಗದ ಹಾವಳಿ ೧ರಿಂದ ೨/೧೦೦೦೦ ರಷ್ಟು ೭೬ ಜಿಗಳಲ್ಲೂ, ೨ರಿಂದ ೫/೧೦೦೦೦ರಷ್ಟು ೩೯ ಜಿಗಳಲ್ಲೂ, ೫ರಿಂದ ೧೦/೧೦೦೦೦ರಷ್ಟು ೨ ಜಿಗಳಲ್ಲೂ ಇತ್ತು. ಪ್ರಪಂಚದ ಒಟ್ಟು ರೋಗಿಗಳ ಶೇ.೬೦ ರೋಗಿಗಳು ಭಾರತದಲ್ಲಿ  ಇದ್ದಾರೆ.

ಕುಷ್ಠರೋಗದ ಸಮಸ್ಯೆಯನ್ನು ಬರೀ ಅಂಕಿ ಅಂಶಗಳ ಆಧಾರದ ಮೇಲೆ ನಿರೂಪಿಸಲಾಗುವುದಿಲ್ಲ. ಈ ರೋಗಕ್ಕೆ ತುತ್ತಾದವರನ್ನು ಸಾಮಾಜಿಕವಾಗಿ ದೂರವಿಡುವ ಕಾರಣ ಕುಟುಂಬಗಳೂ ಒಡೆಯುತ್ತವೆ. ಹೊಲ, ಕಾರ್ಖಾನೆ ಮುಂತಾದವುಗಳಲ್ಲಿ ದುಡಿಮೆಯಿಂದ ರೋಗಿಗಳು ವಂಚಿತರಾಗುವ ಕಾರಣ ಆಗುವ ಆರ್ಥಿಕ ನಷ್ಟು ಎಷ್ಟೆಂದು ಸುಲಭವಾಗಿ ಅಂದಾಜು ಮಾಡಲು ಸಾಧ್ಯವಾಗುವುದಿಲ್ಲ.

ಮೈಕೋಬ್ಯಾಕ್ಟೀರಿಯಮ್ ಲೆಪ್ರೈಯ್ ಎಂಬ ರೋಗಾಣು ಈ ರೋಗಕ್ಕೆ ಕಾರಣ.  ರೋಗಾಣುಗಳು ಸಾಮಾನ್ಯವಾಗಿ ಗುಂಪು ಗುಂಪಾಗಿ ಇದ್ದು, ಸಿಗರೇಟಿನ ಗುಂಪಿನಂತೆ ಕಾಣುವವು.  ರೋಗ ಪ್ರಸಾರಕ್ಕೆ ದೀರ್ಘಕಾಲಿಕ ನಿಕಟ ಸಂಪರ್ಕ ಬೇಕು ಎಂಬುದು ಕಡ್ಡಾಯವೇನಿಲ್ಲ. ವ್ಯಕ್ತಿಯ ರೋಗಪ್ರತಿರೋಧಕ ಶಕ್ತಿ ಇಲ್ಲಿ ಪ್ರಮುಖ ಪಾತ್ರ ವಹಿಸುವುದು. ಮೂಗಿನ ಸ್ರವಿಕೆಗಳ ಮುಖಾಂತರ ರೋಗಾಣುಗಳು ವಿಸರ್ಜಿಸಲ್ಪಡುತ್ತವೆ. ಹೊರಗಿನ ಪರಿಸರದಲ್ಲಿ ೪೮ – ೭೨ ಗಂಟೆ ಜೀವಂತವಾಗಿರಬಲ್ಲವು. ಈ ರೋಗಿಯು ಉಪಯೋಗಿಸಿದ ವಸ್ತ್ರ ಒಡವೆಗಳನ್ನು, ಪಾತ್ರೆ ಪಗಡಿಗಳನ್ನು ಬಳಸುವುದರಿಂದಲೂ ರೋಗ ಹರಡುವುದು.

ರೋಗದ ಲಕ್ಷಣಗಳು:  ಕುಷ್ಠರೋಗ ಮಂದಗತಿ. ತೀವ್ರ ಪರಿಣಾಮದ ಅಂಟುರೋಗ. ರೋಗದ ಅದಿಶಯನ ಕಾಲ ೨ರಿಂದ ೫ವರ್ಷ.  ಗಂಡಸರಲ್ಲಿ ಇದರ ಹಾವಳಿ ಹೆಂಗಸರಿಗಿಂತ ಹೆಚ್ಚು. ೫ ರಿಂದ ೧೫ವರ್ಷ ಮತ್ತು ೨೫ – ೩೦ ವರ್ಷದ ಗುಂಪಿನವರಲ್ಲಿ ಈ ರೋಗದ ಕಾಟ ಹೆಚ್ಚು ಎಂಬುದು ಇತ್ತೀಚಿನ ಅಧ್ಯಯನಗಳಿಂದ ಸಾಬೀತಾಗಿದೆ. ಹೆಚ್ಚು ಮಳೆ ಬೀಳುವ ಉಷ್ಣವಲಯದಲ್ಲಿ ಈ ರೋಗದ ಉಪಟಳ ಜಾಸ್ತಿ. ಬಡತನ, ನ್ಯೂನಪೋಷಣೆ, ಜನ ಸಾಂದ್ರತೆ, ಅನಾರೋಗ್ಯಕರ ಪರಿಸರ, ಮೂಢನಂಬಿಕೆ ಈ ರೋಗದ ಚಟವಟಿಕೆಗಳಿಗೆ ಚೇತನ ನೀಡುವವು.

ರೋಗ ಲಕ್ಷಣಗಳು ನಿಧಾನವಾಗಿ ಪ್ರಾರಂಭವಾಗುವವು. ಮೈಕೈನೋವು, ಆಲಸ್ಯತನ, ಅನಿಶ್ಚಿತ ಅನಾರೋಗ್ಯ, ಹಸಿವಾಗದಿರುವಿಕೆ ಹಣಕಿ ಹಾಕುವವು. ಮೇಲಿಂದ ಮೇಲೆ ಸೋಂಕಿನ ಸುಳಿಯಲ್ಲಿ ಗಿರಕಿ ಹೊಡೆಯುವುದರ ಪ್ರಯುಕ್ತ ಜ್ವರದಿಂದ ಬಸವಳಿಯಬಹುದು. ಕುಷ್ಠರೋಗದ ಒಂದು ಅಥವಾ ಎರಡು ಪ್ರಮುಖ ಕುರುಹುಗಳು ಕಾಣಿಸಿಕೊಳ್ಳಬಹುದು. ಅವು ಯಾವವೆಂದರೆ- ಬಿಳಿಯ ತದ್ದು, ಅರಿವಳಿಯುವುದು, ಬೆವರು ಬಾರದಿರುವುದು, ಕೂದಲು ಉದುರುವುದು, ನರಗಳು ದಪ್ಪಗಾಗುವುದು… ಇತ್ಯಾದಿ. ಚರ್ಮದ ಮೇಲೆ ಕಾಣುವ ಸ್ಪರ್ಶ ವಿಲ್ಲದ ತಿಳಿ ಬಿಳಿ ಇಲ್ಲವೇ ತಾಮ್ರದ ವರ್ಣದ ಕಲೆಗಳು ಕುಷ್ಠರೋಗದ ಪ್ರಾರಂಭಿಕ ಲಕ್ಷಣಗಳಾಗಿವೆ. ಈ ಕಲೆಗಳಲ್ಲಿ ಸ್ಪರ್ಶ, ಸಂವೇದನೆಯ ಅರಿವೇ ಇಲ್ಲದಿರುವುದರಿಂದ ಶಾಖ, ಸ್ಪರ್ಶ, ನೋವುಗಳು ಗೊತ್ತಾಗುವುದಿಲ್ಲ.

ಪ್ರಾರಂಭದ ಹಂತದಲ್ಲಿ ಈ ರೋಗ ನಿರ್ಧರಿಸುವುದು ಕಷ್ಟ ಸಾಧ್ಯ. ರೋಗಾಣುಗಳನ್ನು ಕಂಡು ಹಿಡಿಯುವುದು ನಿರ್ದಿಷ್ಟವಾಗಿ ರೋಗ ನಿರ್ಣಯ ಮಾಡಲು ಸಹಾಯಕ. ಚರ್ಮದ ಮಾದರಿ ತೆಗೆದುಕೊಂಡು ಸೂಕ್ಷ್ಮದರ್ಶಕದಡಿ ಪರೀಕ್ಷಿಸಿ, ಬ್ಯಾಕ್ಟೀರಿಯಾ ಹುಡುಕುವ ಮೂಲಕ ರೋಗ ನಿದಾನ ನಿರ್ಣಯ ಮಾಡಲಾಗುತ್ತದೆ. ರೋಗ ನಿರ್ಣಯಕ್ಕೆ ಬಳಸಬಹುದಾದ ಮತ್ತೊಂದು ಪರೀಕ್ಷೆ ಚರ್ಮದ ಸ್ಮೀಯರ್ ಆಗಿದೆ. ಎಲಿಸಾ ಮತ್ತಿತರ ಪರೀಕ್ಷೆಗಳಿಂದ ಕುಷ್ಠರೋಗ ನಿರ್ಣಯ ಮಾಡಬಹುದಾಗಿದೆ. ಲೆಪ್ರೊಮಿನ್ ಪರೀಕ್ಷೆ ರೋಗಿಯು ರೋಗದ ಯಾವ ಹಂತದಲ್ಲಿದೆ ಎಂದು ತಿಳಿಯಲು ಉಪಯುಕ್ತ.

ಚಿಕಿತ್ಸೆ ಹೇಗೆ:  ವೈದ್ಯರು ಕುಷ್ಠರೋಗದ ರೋಗಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಸತತ ಪ್ರಯತ್ನದಿಂದ ಬಹು ಔಷಧ ಚಿಕಿತ್ಸೆ ನೀಡಬೇಕು. ರೋಗಿಯ ಸಾಮಾನ್ಯ ಆರೋಗ್ಯ ಮತ್ತು ಆಹಾರದತ್ತ ಗಮನ ಕೊಡಬೇಕು. ಸೋಂಕು ಕಾರಕ ರೋಗಿಗಳು ಇತರರ ಸಂಪರ್ಕಕ್ಕೆ ಬರದಂತೆ ಪ್ರತ್ಯೇಕಿಸಬೇಕು. ಜೀವಸತ್ವಗಳ, ಕಬ್ಬಿಣಾಂಶಗಳ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು. ದ್ವಿತೀಯ ಸೋಂಕಿನ ಸುಳಿಗೆ ಸಿಕ್ಕಾಗ ಸೂಕ್ತ ಜೀವಿನಿರೋಧಕದಿಂದ ಚಿಕಿತ್ಸೆ ನೀಡಬೇಕು. ರೋಗಿಗಳಲ್ಲಿ ಸೋಂಕು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸುವವರೆಗೆ ನಿಶ್ಚಿತ ಚಿಕಿತ್ಸೆ ಮುಂದುವರೆಸಬೇಕು. ನಿಷ್ಕ್ರಿಯತೆ ರುಜುವಾತಾದ ಮೇಲೂ ಚಿಕಿತ್ಸೆಯನ್ನು ಒಂದು ವರ್ಷಕಾಲ ಮುಂದುವರೆಸಿ ನಂತರವೇ ಹತೋಟಿಯಿಂದ ಬಿಟ್ಟುಕೊಡಬೇಕು.

ಔಷಧ ಚಿಕಿತ್ಸೆ ಯಶಸ್ವಿಯಾಗಬೇಕಾದರೆ ನಿಯಮಿತ ಔಷಧ ಸೇವನೆ ಅತೀ ಮುಖ್ಯ. ಔಷಧಿ ತೆಗೆದುಕೊಳ್ಳುವುದರಲ್ಲಿ ನಿರ್ಲಕ್ಷ್ಯ ತೋರಿದವರನ್ನು ಬೇಗ ಪತ್ತೆ ಹಚ್ಚಿ ಪುನಃ ಅವರು ಚಿಕಿತ್ಸಾಕ್ರಮ ಆರಂಭಿಸುವಂತೆ ಮಾಡದಿದ್ದರೆ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ವಿಫಲವಾಗುತ್ತದೆ. ಕುಷ್ಠರೋಗಿಗಳನ್ನು ಪ್ರೀತಿ, ವಿಶ್ವಾಸದಿಂದ ನೋಡಿಕೊಂಡು, ಆತ್ಮ ಗೌರವಕ್ಕೆ ಧಕ್ಕೆ ಬರದಂತೆ ನಡೆದುಕೊಳ್ಳುತ್ತೇನೆ.ಅಂಟಿಕೊಂಡಿರುವ ಕಳಂಕ ಹಾಗೂ ತಾರತಮ್ಯ ಹೋಗಲಾಡಿಸಲು ಬದ್ಧನಾಗಿರುತ್ತೇನೆ. ಮಾಜದ ಮುಖ್ಯವಾಹಿನಿಯಲ್ಲಿ ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಡುತ್ತೇನೆ. ಸಂಪೂರ್ಣ ಗುಣಪಡಿಸಬಹುದಾದ ರೋಗ ಎಂಬ ಮಾಹಿತಿಯನ್ನು ಸಮಾಜಕ್ಕೆ ನೀಡುತ್ತೇನೆ. ಮಹಾತ್ಮ ಗಾಂಧೀಜಿ ಅವರ ಕನಸಾದ ಕುಷ್ಠರೋಗ ಮುಕ್ತ ಭಾರತ ಕಟ್ಟಲು ಕಾಯಾ, ವಾಚಾ, ಮನಸಾ ಶ್ರಮಿಸುತ್ತೇನೆ ಎಂದು ಪ್ರತಿಜ್ಞೆ ಮಾಡೋಣ. ಅದರಂತೆ ನಡೆದುಕೊಳ್ಳೋಣ.

ಡಾ.ಕರವೀರಪ್ರಭು ಕ್ಯಾಲಕೊಂಡ
ಲೇಖಕ, ವಿಶ್ರಾಂತ ಜಿ ಶಸ್ತ್ರಚಿಕಿತ್ಸಕ
ಮೊ: 9448036207 

Related Posts

Leave a Reply

Your email address will not be published. Required fields are marked *