ಚಿರತೆಯೊಂದು ಮನೆಯೊಳಗೆ ನುಗ್ಗಿದ್ದು, ಮನೆ ಸದಸ್ಯರ ಸಮಯಪ್ರಜ್ಞೆಯಿಂದ ಪಾರಾದ ಘಟನೆ ಬೆಂಗಳೂರಿನ ಆನೇಕಲ್ ಬಳಿಯ ಜಿಗಣಿಯಲ್ಲಿ ನಡೆದಿದೆ.
ಬುಧವಾರ ರಾತ್ರಿಯೀಡಿ ಮನೆಯ ಸುತ್ತಮುತ್ತ ಅಲೆದಾಡುತ್ತಿದ್ದ ಚಿರತೆ ಗುರುವಾರ ಬೆಳಿಗ್ಗೆ ಮನೆಯ ಬಾಗಿಲು ತೆಗೆಯುತ್ತಿದ್ದಂತೆ ಒಳಗೆ ಪ್ರವೇಶಿಸಿದೆ. ಮನೆಯೊಳಗೆ ಹೋದ ಚಿರತೆ ಕೊಠಡಿ ಪ್ರವೇಶಿಸುತ್ತಿದ್ದಂತೆ ಕುಟುಂಬದ ಸದಸ್ಯರು ಹೊರಗಿನಿಂದ ಚಿಲಕ ಹಾಕಿ ಚಿರತೆಯನ್ನು ಕೂಡಿ ಹಾಕಿದ್ದಾರೆ.
ಮನೆಯಲ್ಲಿ ವೆಂಕಟೇಶ್ ಮತ್ತವರ ಪತ್ನಿ ವೆಂಕಟಲಕ್ಷ್ಮೀ ಮತ್ತು ಪುತ್ರ ನಿಖಿಲ್ ವಾಸವಿದ್ದರು. ಇವತ್ತು ಬೆಳಗ್ಗೆ 8 ಗಂಟೆ ಸುಮಾರಿಗೆ ವೆಂಕಟೇಶ್ ಪತ್ನಿ ಜೊತೆ ಇರುವಾಗಲೇ ಚಿರತೆ ಪ್ರವೇಶಿಸಿತ್ತು. ಚಿರತೆ ಬಂದಿದ್ದನ್ನು ಗಮನಿಸಿದ ವೆಂಕಟೇಶ್ ವಿಚಲಿತರಾಗದೇ ಸಮಯಪ್ರಜ್ಞೆ ತೋರಿ ಮನೆಯಿಂದ ಪತ್ನಿಯನ್ನ ಹೊರಗೆ ಕರೆತಂದಿದ್ದಾರೆ. ನಂತರ ಮನೆ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿದ್ದಾರೆ.
ನಂತರ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಮನೆಯೊಳಗೆ ಸೇರಿದ ಚಿರತೆ ಭಯದಲ್ಲಿ ಬೆಡ್ ರೂಮ್‌ಗೆ ಹೋಗಿ ಬಚ್ಚಿಟ್ಟುಕೊಂಡಿತ್ತು. ಅರಣ್ಯ ಸಿಬ್ಬಂದಿ ಹೆಲ್ಮೆಟ್ ಧರಿಸಿ ಅರವಳಿಕೆ ಇಂಜೆಕ್ಷನ್ ಕೊಡಲು ಸಾಕಷ್ಟು ಶ್ರಮಿಸಿದ್ದಾರೆ.
ತಜ್ಞ ವೈದ್ಯ ಕಿರಣ್ ಅವರು ಚಿರತೆಗೆ ಅರವಳಿಕೆ ಇಂಜೆಕ್ಷನ್ ಡಾಟ್ ನೀಡಿದರು. ಚಿರತೆ ಪ್ರಜ್ಞೆ ತಪ್ಪಿದ ಬಳಿಕ ಬೋನಿಗೆ ಶಿಫ್ಟ್ ಮಾಡಲಾಗಿದೆ. ಮಳೆ ಅಡ್ಡಿಪಡಿಸುತ್ತಿದ್ದಾರೂ ಸಹ ಸತತ ನಾಲ್ಕು ಗಂಟೆಗಳ ಆಮರೇಷನ್ ಚಿರತೆ ಸಕ್ಸಸ್ ಆಗಿದೆ.
5 ಗಂಟೆಗಳ ಕಾಲ ಸತತ ಕಾರ್ಯಾಚರಣೆ ಬಳಿಕ ಕಡೆಗೂ ಚಿರತೆ ಬೋನಿಗೆ ಬಿದ್ದಿದೆ. ಆಪರೇಷನ್ ಚಿರತೆ ಹಿನ್ನೆಲೆಯಲ್ಲಿ ಕುಂಟ್ಲುರೆಡ್ಡಿ ಲೇಔಟ್ನಲ್ಲಿ ಭಾರೀ ಜನ ಸೇರಿದ್ದರು. ಮನೆಯ ಸುತ್ತಮುತ್ತ ಪೊಲೀಸರು ಭದ್ರತೆ ಕೈಗೊಂಡು ಹೊರಗಡೆ ನಿಂತ ಜನರನ್ನು ಚದುರಿಸಿದರು. ಅರಣ್ಯ ಇಲಾಖೆ, ವೈದ್ಯರು ಮತ್ತು ಪೊಲೀಸರ ಕಾರ್ಯಾಚರಣೆಯಿಂದ ಸತತ 4 ಗಂಟೆಗಳ ಆಪರೇಷನ್ ಯಶಸ್ವಿಯಾಗಿದೆ.