ನವದೆಹಲಿ: ವಿಧಾನಪರಿಷತ್ ನಾಮನಿರ್ದೇಶನದ ಬಗ್ಗೆ ಕೇಳಿದಾಗ, “ಪಕ್ಷದ ಕಾರ್ಯಕರ್ತರಿಗೆ ಹಾಗೂ ಪಕ್ಷದ ಪರವಾಗಿ ದನಿ ಎತ್ತುವವರಿಗೆ ನೀಡಬೇಕು ಎಂಬುದು ನನ್ನ ಅಭಿಲಾಷೆ. ಸುಮ್ಮನೆ ಇರುವ ನಿರುದ್ಯೋಗಿಗಳಿಗೆ ಕೊಟ್ಟಂತೆ ಆಗಬಾರದು. ಉತ್ತಮವಾಗಿ ಮಾತನಾಡುವಂತಹ ಪ್ರತಿನಿಧಿಗಳಿಗೆ ಸ್ಥಾನ ನೀಡಬೇಕು ಎಂಬುದು ನನ್ನ ಪ್ರಾಶಸ್ತ್ಯ. ಇದರ ಬಗ್ಗೆ ಮುಖ್ಯಮಂತ್ರಿಗಳು ನಾನು ಹೈಕಮಾಂಡ್ ಬಳಿ ಮಾತನಾಡಿದ್ದೇವೆ. ಹೈಕಮಾಂಡ್ ಇಬ್ಬರನ್ನು ಸಂಪರ್ಕಿಸುತ್ತದೆ” ಎಂದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಹಾಗೂ ಭದ್ರಾ ಮೇಲ್ದಂಡೆ ಬಗ್ಗೆ ಪ್ರತಿ ಬಾರಿ ದೆಹಲಿಗೆ ಬಂದಾಗಲೂ ಚರ್ಚೆ ಮಾಡುವ ಬಗ್ಗೆ ಕೇಳಿದಾಗ, “ಇದು ಮೋದಿ ಅವರ ನಾಯಕತ್ವದ ಕೇಂದ್ರ ಸರ್ಕಾರದ ತೀರ್ಮಾನಕ್ಕೆ ಬಿಟ್ಟ ವಿಚಾರ. ನಿರ್ಮಲಾ ಸೀತಾರಾಮನ್ ಭದ್ರಾ ಯೋಜನೆಗೆ ರೂ.5,300 ಕೋಟಿ ಅನುದಾನ ನೀಡುವುದಾಗಿ ಹೇಳಿದ್ದರು. ನಾವು ಗುತ್ತಿಗೆದಾರರಿಗೆ ಹಣ ನೀಡಬೇಕಿದೆ” ಎಂದರು.
ಮೇಕೆದಾಟು ಬಗ್ಗೆ ಕೆಲಸಗಳೇ ನಡೆಯುತ್ತಿಲ್ಲ ಎಂದು ಕೇಳಿದಾಗ, “ಈಗಾಗಲೇ ರಾಜ್ಯದಲ್ಲಿ ಕಚೇರಿಯನ್ನೂ ತೆರೆಯಲಾಗಿದೆ. ಸ್ಥಳ ಗುರುತಿಸುವಿಕೆ ಸೇರಿದಂತೆ ಅನೇಕ ಕೆಲಸಗಳು ನಡೆಯುತ್ತಿದೆ. ದೆಹಲಿಯಲ್ಲೂ ಈ ಬಗ್ಗೆ ಕೆಲಸ ಪ್ರಾರಂಭ ಮಾಡಲಾಗುವುದು” ಎಂದರು.
ಬೆಲೆ ಏರಿಕೆ ವಿರುದ್ದ ಬಿಜೆಪಿಯವರಿಂದ ಸಿಎಂ ಮನೆ ಮುತ್ತಿಗೆ ಬಗ್ಗೆ ಕೇಳಿದಾಗ, “ಬಿಜೆಪಿಯವರ ಕಾಲದಲ್ಲಿ ಪೆಟ್ರೊಲ್, ಡೀಸೆಲ್, ಅಡುಗೆ ಎಣ್ಣೆ ಯ ಬೆಲೆ ಏರಿಕೆಯಾದಾಗ ಏಕೆ ಮನೆ ಮುತ್ತಿಗೆ ಮಾಡಿಕೊಳ್ಳಲಿಲ್ಲ? ನಾವು 100 ನಾಟ್ ಔಟ್ ಎನ್ನುವ ಹೋರಾಟ ಮಾಡಿದ್ದೆವು. ಕಬ್ಬಿಣ, ಉಕ್ಕು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಎಲ್ಲವೂ ಹೆಚ್ಚಾಯಿತು. ಕಸದ ಸಂಗ್ರಹ ಶುಲ್ಕಕ್ಕೆ ಆದೇಶ ನೀಡಿದವರೇ ಬಿಜೆಪಿಯವರು. ನಾನು ಅವರು ಮಾಡಿದ ಬೆಲೆಗಿಂತ ಕಡಿಮೆ ಮಾಡಿದ್ದೇನೆ. ದೊಡ್ಡದಾಗಿ ಹಾಕಬೇಕಾಗಿತ್ತು. ಹಳೆಯದನ್ನು ಬಿಡಿ ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ” ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಹಾಗೂ ನೀವು ವರಿಷ್ಠರನ್ನು ಭೇಟಿಯಾಗುತ್ತಾ ಇದ್ದೀರಿ. ಸಚಿವರ ದಂಡು ಸಹ ದೆಹಲಿಯಲ್ಲಿದೆ. ಸರ್ಕಾರದಲ್ಲಿ ಬದಲಾವಣೆಯಾಗಲಿದೆಯೇ ಎಂದು ಕೇಳಿದಾಗ, “ಪಕ್ಷದ ನಾಯಕರನ್ನು ನಾವು ಭೇಟಿಯಾಗುವುದು ಸಾಮಾನ್ಯ. ನಾನು ವೇಣುಗೋಪಾಲ್ ಹಾಗೂ ಸುರ್ಜೇವಾಲ ಅವರನ್ನು ಭೇಟಿಯಾಗಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಕರ್ನಾಟಕ ಭವನದಲ್ಲಿಯೇ ಭೇಟಿ ಮಾಡಲಾಯಿತು” ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ನಿಮ್ಮ ನಿಲುವೇನು ಎಂದು ಪ್ರಶ್ನಿಸಿದಾಗ, “ಪಕ್ಷ ಹೇಗೆ ಹೇಳುತ್ತದೆಯೋ ಆ ರೀತಿ ಮುನ್ನಡೆಯುವುದು. ಐದು ವರ್ಷ ಸೇವೆ ಸಲ್ಲಿಸಿದ್ದೇನೆ. ಪಕ್ಷಕ್ಕೆ ಒಳ್ಳೆಯದಾಗುವುದು ಮುಖ್ಯ. ವ್ಯಕ್ತಿಗಿಂತ ಪಕ್ಷ ಮುಖ್ಯ” ಎಂದು ಮಾರ್ಮಿಕವಾಗಿ ನುಡಿದರು.
ಕಳೆದ ಹಲವಾರು ದಿನಗಳಿಂದ ಸೋನಿಯಾ ಗಾಂಧಿ ಅವರನ್ನು ಶಿವಕುಮಾರ್ ಅವರು ಭೇಟಿಯಾಗಿಲ್ಲ. ಭೇಟಿಯಾದರೆ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ನಿಶ್ಚಿತ ಎನ್ನುವ ಮಾತುಗಳ ಬಗ್ಗೆ ಕೇಳಿದಾಗ, “ಭೇಟಿಯಾಗಿಲ್ಲ ಎಂದು ಹೇಳಿದವರು ಯಾರು? ಸಾಕ್ಷಿಗೆ ಫೋಟೊಗಳನ್ನು ತೋರಿಸಲೇ” ಎಂದಾಗ ಅಧಿಕೃತವಾಗಿ ಫೋಟೊಗಳು ದೊರೆತಿಲ್ಲ ಎಂದು ಮರುಪ್ರಶ್ನಿಸಿದಾಗ, “ನಿಮಗೆ ಏಕೆ ತೋರಿಸಬೇಕು. ನನಗೆ ಬೇಕಾಗಿದ್ದು ಬಿಡುಗಡೆ ಮಾಡಲಾಗುವುದು, ಬೇಡದ್ದು ಇಲ್ಲ” ಎಂದು ಹೇಳಿದರು.
ಡಿಎಂಕೆ ಜೊತೆ ರಾಜಕೀಯ ಉದ್ದೇಶದ ಮೈತ್ರಿ
ನೀವು ಡಿಎಂಕೆ ಜೊತೆ ಉತ್ತಮ ಸಖ್ಯ ಹೊಂದಿದ್ದೀರಿ ಎನ್ನುವ ಬಗ್ಗೆ ಕೇಳಿದಾಗ, “ಇದು ಕೇವಲ ರಾಜಕೀಯ ಉದ್ದೇಶದ ಮೈತ್ರಿ. ಒಟ್ಟಿಗೆ ಕೆಲಸ ಮಾಡುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ” ಎಂದರು.
ತಮಿಳುನಾಡಿಗೆ ಶಿವಕುಮಾರ್ ಅವರು ಹೆಚ್ಚು ಭೇಟಿ ನೀಡುತ್ತಿದ್ದಾರೆ. ಇದರಿಂದ ನೀರಿನ ಸಮಸ್ಯೆ ಬಗೆಹರಿಯಲಿದೆಯೇ ಎನ್ನುವ ಬಿಜೆಪಿಯವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರ ರಾಜಕಾರಣ ಅವರು ಮಾಡುತ್ತಾರೆ. ನಮ್ಮ ರಾಜಕಾರಣ ನಾವು ಮಾಡುತ್ತೇವೆ. ಅವರ ರಕ್ಷಣೆ ಅವರು ನೋಡಿಕೊಳ್ಳುತ್ತಾರೆ. ನಮ್ಮ ರಾಜ್ಯದ ಹಿತವನ್ನು ನಾವು ಮಾಡಿಕೊಳ್ಳುತ್ತೇವೆ” ಎಂದು ತಿಳಿಸಿದರು.
ನಿಯೋಗಕ್ಕೆ ಸಂಸದ ತುಕಾರಾಂ ನೇಮಕ
ಸಂಸತ್ ಕ್ಷೇತ್ರಗಳ ಮರುವಿಂಗಡಣೆ ವಿರುದ್ಧದ ಹೋರಾಟದ ಬೆಳವಣಿಗೆಯ ಬಗ್ಗೆ ಕೇಳಿದಾಗ, “ಕ್ಷೇತ್ರ ಮರುವಿಂಗಡಣೆ ಹೋರಾಟದ ನಿಯೋಗಕ್ಕೆ ಹೈಕಮಾಂಡ್ ಸೂಚನೆಯಂತೆ ನಮ್ಮ ಕರ್ನಾಟಕದಿಂದ ಸಂಸದರಾದ ತುಕಾರಾಂ ಅವರನ್ನು ನೇಮಿಸಲಾಗಿದೆ” ಎಂದರು.
ವಕ್ಫ್ ಬಿಲ್ ಗೆ ಜೆಡಿಎಸ್, ಟಿಡಿಪಿ, ಚಂದ್ರಬಾಬು ನಾಯ್ಡು, ದೇವೇಗೌಡರು ಬೆಂಬಲ ನೀಡಿರುವ ಬಗ್ಗೆ ಕೇಳಿದಾಗ, “ಎನ್ಡಿಎ ಮೈತ್ರಿಯಲ್ಲಿ ಇರುವ ಕಾರಣ ಒಪ್ಪಿಗೆ ನೀಡಿದ್ದಾರೆ” ಎಂದು ಹೇಳಿದರು.