ಬೆಂಗಳೂರು: ಕರ್ನಾಟಕ ಸರ್ಕಾರವು ಅನುಷ್ಠಾನಕ್ಕೆ ತರುತ್ತಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ 2025 ಅನ್ನು ಯಾವುದೇ ಕಾರಣಕ್ಕೆ ಅಂಗೀಕರಿಸದಂತೆ ಬಿಜೆಪಿ ವತಿಯಿಂದ ನಾಡಿದ್ದು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ ಅವರು ತಿಳಿಸಿದ್ದಾರೆ.
ನಗರದಲ್ಲಿ ಇಂದು ಕೆ.ಜಿ. ರಸ್ತೆ ಬಳಿ ಇರುವ ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ನಾಡಿದ್ದು ಮಾನ್ಯ ರಾಜ್ಯಪಾಲರಿಗೆ ಮನವಿ ಕೊಡಲಿದ್ದು, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಅವರು ನೇತೃತ್ವ ವಹಿಸುವರು. ಎಲ್ಲ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಭಾಗವಹಿಸುತ್ತಾರೆ ಎಂದು ತಿಳಿಸಿದರು.
ಈ ವಿಧೇಯಕದ ವಿರುದ್ಧ ಇವತ್ತು ಇಲ್ಲಿ ಸಾಂಕೇತಿಕವಾಗಿ ಮೌನ ಪ್ರತಿಭಟನೆ ಮಾಡುತ್ತಿದ್ದೇವೆ. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಇವತ್ತು ಹೋರಾಟ ನಡೆಸಲಾಗುತ್ತಿದೆ ಎಂದು ವಿವರಿಸಿದರು. ಮಸೂದೆ ವಾಪಸ್ ಪಡೆಯುವಂತೆ ಕಾನೂನು ರೀತಿಯ ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು.
ಕೇಂದ್ರಕ್ಕೆ ಪತ್ರ ಬರೆಯಲಿದ್ದೇವೆ. ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಹಾಗೂ ಜೈಲಿಗೆ ಕಳಿಸುವ ಕೆಲಸ ಮಾಡುತ್ತಿದ್ದಾರೆ. ಇದರ ಕುರಿತು ಗೌರವಾನ್ವಿತ ರಾಷ್ಟ್ರಪತಿಗಳ ಗಮನ ಸೆಳೆಯಲಿದ್ದೇವೆ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.
ಮತ್ತೊಮ್ಮೆ ತುರ್ತು ಪರಿಸ್ಥಿತಿ: ಎಸ್.ಹರೀಶ್
ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಮಾತನಾಡಿ, ಬಾಬಾ ಸಾಹೇಬ ಡಾ.ಅಂಬೇಡ್ಕರರ ಸಂವಿಧಾನದಲ್ಲಿ ಈ ದೇಶದಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಎಂಬ 3 ಹಂತಗಳಿವೆ. ಇದೀಗ ಮಾತಿನ ಸ್ವಾತಂತ್ರ್ಯದ ವಿರುದ್ಧವಾಗಿ ಹೊಸ ಕಾಯ್ದೆ ತಂದಿದ್ದಾರೆ. ನ್ಯಾಯಾಂಗದ ಅಧಿಕಾರವನ್ನು ಉಲ್ಲಂಘಿಸಿ ಡಿವೈಎಸ್ಪಿ ಮೇಲ್ಪಟ್ಟ ಅಧಿಕಾರಿ ಯಾರನ್ನಾದರೂ ಏಕಾಏಕಿ ಜೈಲಿಗೆ ಹಾಕುವ ಕಾನೂನು ತಂದಿದ್ದಾರೆ. ಈ ಮೂಲಕ ಮತ್ತೊಮ್ಮೆ ತುರ್ತು ಪರಿಸ್ಥಿತಿ ತಂದಿದ್ದಾರೆ ಎಂದು ಆಕ್ಷೇಪಿಸಿದರು.
ತೆಲಂಗಾಣ, ಇತರ ಕಾಂಗ್ರೆಸ್ ಆಳ್ವಿಕೆಯ ರಾಜ್ಯಗಳು, ಇಂಡಿ ಒಕ್ಕೂಟದ ಆಡಳಿತ ಇರುವ ರಾಜ್ಯಗಳಲ್ಲಿ ಇಂಥ ಕಾನೂನು ತರಲು ಹೊರಟಿದ್ದಾರೆ. ವ್ಯಕ್ತಿ ಸ್ವಾತಂತ್ರ್ಯ ಕಿತ್ತುಕೊಳ್ಳುವ ಈ ಕ್ರಮವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ತಿಳಿಸಿದರು.
ನಮ್ಮೆಲ್ಲ ಸಂಸದರು, ಕೇಂದ್ರ ಸಚಿವರು ಇದರ ಕುರಿತು ಗೌರವಾನ್ವಿತ ರಾಷ್ಟ್ರಪತಿಗಳನ್ನು ಭೇಟಿ ಮಾಡಲಿದ್ದಾರೆ. ಇದಕ್ಕೆ ಅಂಕಿತ ಹಾಕದಂತೆ ಮನವಿ ನೀಡಲಿದ್ದಾರೆ ಎಂದು ಹೇಳಿದರು. ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ಉತ್ತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ. ರಂಗಸ್ವಾಮಿ, ಬೆಂಗಳೂರು ಕೇಂದ್ರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್. ರಾಘವೇಂದ್ರ ರಾವ್, ಬೆಂಗಳೂರು ದಕ್ಷಿಣ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ, ಬೆಂಗಳೂರು ಉತ್ತರ ಜಿಲ್ಲಾ ಉಪಾಧ್ಯಕ್ಷೆ ಆಶಾ ಎಸ್. ರಾವ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.


