“ಜಾತಿ ಆಧಾರಿತ ರಾಜಕಾರಣ ಬಿಡಿ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಮುಂದಿನ ಚುನಾವಣೆಯಲ್ಲಿ ಉಡುಪಿ, ಮಂಗಳೂರು ಜಿಲ್ಲೆಗಳಿಂದ 8-9 ಶಾಸಕರು ಆಯ್ಕೆಯಾಗಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, “ಕಾಂಗ್ರೆಸ್ ಪಕ್ಷದಲ್ಲಿ ನಾವು ಎಷ್ಟೇ ದೊಡ್ಡ ನಾಯಕರಾದರೂ ನಮ್ಮ ಪಾಲಿಗೆ ಕಾಂಗ್ರೆಸ್ ಕಚೇರಿ ದೇವಾಲಯವಿದ್ದಂತೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬಬೇಕು ಎಂಬ ಕಾರಣಕ್ಕೆ ನಾನು ಇಂದು ಕಾರ್ಕಳಕ್ಕೆ ಆಗಮಿಸಿದ್ದೇನೆ. ಈ ಹಿಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲಾ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಿಂದ ಹೆಚ್ಚು ಕಾಂಗ್ರೆಸ್ ಶಾಸಕರು ಆಯ್ಕೆಯಾಗಿ ಬರುತ್ತಿದ್ದರು. ಚಿಕ್ಕಮಗಳೂರಿನಲ್ಲಿ ಐದಕ್ಕೆ ಐದೂ ಕ್ಷೇತ್ರಗಳಲ್ಲಿ ಗೆದ್ದಿದ್ದೇವೆ, ಉತ್ತರ ಕನ್ನಡ, ಕೊಡಗಿನಲ್ಲೂ ಗೆದ್ದಿದ್ದೇವೆ. ಆದರೆ ಉಡುಪಿ, ಮಂಗಳೂರಿನಲ್ಲಿ ಇದು ಸಾಧ್ಯವಾಗಿಲ್ಲ ಏಕೆ? ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ” ಎಂದು ಹೇಳಿದರು.
“ನಮ್ಮ ಅಭ್ಯರ್ಥಿ ಸರಿ ಇರಲಿಲ್ಲವೋ ಅಥವಾ ನಮ್ಮ ಆಚಾರ ವಿಚಾರ ಜನರಿಗೆ ತಲುಪಿಸಲು ಆಗಲಿಲ್ಲವೋ? ಈ ಬಗ್ಗೆ ಸ್ಥಳೀಯ ನಾಯಕರು, ಕಾರ್ಯಕರ್ತರೆ ಸಮಾಲೋಚನೆ ಮಾಡಬೇಕು. ನಮ್ಮ ಅಭ್ಯರ್ಥಿಗಳು ಕಳೆದ ಚುನಾವಣೆಯಲ್ಲಿ ಸೋತಿದ್ದಾರೆ. ನಾನು ಇತ್ತೀಚೆಗೆ ನಡೆಸಿದ ಸಣ್ಣ ಸಮೀಕ್ಷೆ ಮಾಡಿದ್ದೇನೆ. ಅದರಲ್ಲಿ ನಾವು ಸೋತಿರುವ ಕ್ಷೇತ್ರಗಳ ಪೈಕಿ 60 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಕೆಲವು ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನು ಹುಡುಕಲು ಮುಂದಾಗಿದ್ದೇವೆ” ಎಂದರು.
ವ್ಯಕ್ತಿ ಪೂಜೆ ಬಿಟ್ಟು, ಪಕ್ಷ ಪೂಜೆ ಮಾಡಿ “ಉಡುಪಿ ಹಾಗೂ ಮಂಗಳೂರಿನಲ್ಲಿ 8-9 ಕ್ಷೇತ್ರಗಳನ್ನು ಗೆಲ್ಲಲು ಅವಕಾಶವಿದೆ. ಕಳೆದ ಚುನಾವಣೆಯಲ್ಲಿ ಈ ಜಿಲ್ಲೆಯಿಂದ ಕನಿಷ್ಠ ನಾಲ್ಕು ಕ್ಷೇತ್ರ ಗೆಲ್ಲುವ ಆತ್ಮ ವಿಶ್ವಾಸವಿತ್ತು. ಆದರೆ ಕಾರಣಾಂತರಗಳಿಂದ ಸೋಲಾಗಿದೆ. ಈಗಲೂ ನಾನು ಈ ಭಾಗದ ಪರಾಜಿತ ಅಭ್ಯರ್ಥಿಗಳು, ಅಭ್ಯರ್ಥಿ ಆಕಾಂಕ್ಷಿಗಳಿಗೆ ಹೇಳುವ ಸಲಹೆ, ನೀವು ವ್ಯಕ್ತಿ ಪೂಜೆ ಬಿಟ್ಟು, ಪಕ್ಷ ಪೂಜೆ ಮಾಡಬೇಕು. ಜಾತಿ ಆಧಾರದ ಮೇಲೆ ರಾಜಕಾರಣ ಬಿಡಬೇಕು. ನಮಗೆ ಎಲ್ಲಾ ವರ್ಗದ ಜನರು ಬೇಕು” ಎಂದು ಸೂಚಿಸಿದರು.
“ನನ್ನ ಕ್ಷೇತ್ರವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಅಲ್ಲಿರುವ 99%-100% ಬ್ರಾಹ್ಮಣ ಸಮುದಾಯದವರು ನನಗೆ ಮತ ಹಾಕುತ್ತಾರೆ. ನಿಮಗೆ ಯಾಕೆ ಹಾಕುವುದಿಲ್ಲ. ನೀವು ಅವರ ವಿಶ್ವಾಸವನ್ನು ಗಳಿಸಬೇಕು. ಬ್ರಾಹ್ಮಣರು, ಲಿಂಗಾಯತರು ಎಂದರೆ ಬೇರೆ ಪಕ್ಷಕ್ಕೆ ಬೆಂಬಲ ನೀಡುತ್ತಾರೆ ಎಂದು ನೀವೇ ನಿರ್ಧಾರ ಮಾಡಬೇಡಿ” ಎಂದರು.
“ಸಂಸತ್ ಚುನಾವಣೆಯಲ್ಲಿ ನನ್ನ ಸಹೋದರ ಸೋತ ನಂತರ ಚನ್ನಪಟ್ಟಣ ಉಪ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದೆ. ಲೋಕಸಭೆ ಚುನಾವಣೆಯಲ್ಲಿ ಸೋತ ಮರುದಿನದಿಂದಲೇ ಚನ್ನಪಟ್ಟಣದಲ್ಲಿ ನನ್ನ ಕೆಲಸ ಆರಂಭಿಸಿದೆ. ಚನ್ನಪಟ್ಟಣ, ಶಿಗ್ಗಾವಿ ಕ್ಷೇತ್ರಗಳಲ್ಲಿ ಮಾಜಿ ಸಿಎಂ ಮಕ್ಕಳ ವಿರುದ್ಧ ಹಾಗೂ ಸಂಡೂರಿನಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ” ಎಂದು ತಿಳಿಸಿದರು.
ಸರ್ಕಾರದ ಕಾರ್ಯಕ್ರಮಗಳ ಪ್ರಚಾರ ಮಾಡಿ: ಈಗ ನಮ್ಮ ಸರ್ಕಾರ ಅಧಿಕಾರದಲ್ಲಿದೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಕೊಟ್ಟ ಮಾತುಗಳೇನು, ಅಧಿಕಾರಕ್ಕೆ ಬಂದ ನಂತರ ಅನುಷ್ಠಾನಕ್ಕೆ ತಂದಿರುವ ಕಾರ್ಯಕ್ರಮಗಳ ಬಗ್ಗೆ ಪ್ರಚಾರ ಮಾಡಬೇಕು. ಬಿಜೆಪಿಯವರು ಜನರ ಬದುಕು ಕಟ್ಟಿಕೊಡುವ ಇಂತಹ ಒಂದಾದರೂ ಯೋಜನೆಗಳನ್ನು ಕೊಟ್ಟಿದ್ದಾರಾ? ಎಷ್ಟೇ ಕಷ್ಟವಾದರೂ ನಮ್ಮ ಸರ್ಕಾರ ಈ ಯೋಜನೆಗಳನ್ನು ಜಾರಿ ಮಾಡಿದೆ.
ಮುಂಬರುವ ಮೇ ತಿಂಗಳಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು 22 ವರ್ಷಗಳು ಪೂರ್ಣಗೊಳ್ಳಲಿವೆ. ನಾನು ಪಕ್ಷದ ಕೋರ್ ಸಮಿತಿ ಜತೆ ಸಭೆ ಮಾಡಿ ಕೆಲವು ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ನಾವು ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ನೆನಪು ಮಾಡುತ್ತಿರಬೇಕು. ಬಹುತೇಕ ಜನ ಉಪಕಾರ ಸ್ಮರಣೆ ಇಟ್ಟುಕೊಂಡರೆ, ಕೆಲವರಲ್ಲಿ ಅದು ಇರುವುದಿಲ್ಲ. ಹೀಗಾಗಿ ಪಕ್ಷ ಹಾಗೂ ಸರ್ಕಾರ ಒಟ್ಟಿಗೆ ಕೆಲಸ ಮಾಡಲು ಸಮಿತಿ ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ನಾವು ಹೇಗೆ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಘೋಷಣೆ ಮಾಡಲಾಗುವುದು” ಎಂದು ತಿಳಿಸಿದರು.
“ಪಕ್ಷವು ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಎಂಬ ಎಐಸಿಸಿ ಕಾರ್ಯಕ್ರಮ ಮಾಡಿದ್ದೇವೆ. ನಮ್ಮ ಬದುಕು, ಸಂವಿಧಾನದ ತತ್ವ, ಗಾಂಧೀಜಿ ಅವರ ಆದರ್ಶ, ಅಂಬೇಡ್ಕರ್ ಅವರ ಸಿದ್ಧಾಂತದ ಮೇಲೆ ನಡೆಯುತ್ತಿದೆ. ಹೀಗಾಗಿ ಈ ಸಮಾವೇಶವನ್ನು ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಲು ಕಾರ್ಯಕ್ರಮ ರೂಪಿಸಬೇಕು. ಇದರ ಜತೆಗೆ ಸರ್ಕಾರ 2 ವರ್ಷ ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ನಿಮಗೆ ಪ್ರತ್ಯೇಕ ಕಾರ್ಯಕ್ರಮ ನೀಡಲಿದ್ದೇನೆ” ಎಂದು ತಿಳಿಸಿದರು.
“ರಾಜ್ಯದಲ್ಲಿ ಎಲ್ಲೆಲ್ಲಿ ಕಾಂಗ್ರೆಸ್ ಕಚೇರಿ ಇಲ್ಲ, ಅಂತಹ ನೂರು ಕಡೆಗಳಲ್ಲಿ ಪಕ್ಷದ ಕಚೇರಿ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಪಕ್ಷದ ಕಚೇರಿ ಕಟ್ಟಲು ನೀವು ನಿಮ್ಮ ಕೈಲಾದ ಹಣಕಾಸಿನ ನೆರವು ನೀಡಿ, ನಾನು ಕೂಡ ಕೆಪಿಸಿಸಿ ವತಿಯಿಂದ ದೇಣಿಗೆ ಸಂಗ್ರಹಿಸಿ ಆರ್ಥಿಕ ನೆರವು ನೀಡುವುದಾಗಿ ಹೇಳಿದರು.
ಪಂಚಾಯ್ತಿ ಚುನಾವಣೆಗೆ ಸಜ್ಜಾಗಿ: “ಇನ್ನು ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಈ ಅಧಿವೇಶನ ಸಂದರ್ಭದಲ್ಲಿ ಪರಾಜಿತ ಅಭ್ಯರ್ಥಿಗಳನ್ನು ಕರೆದು ಸಭೆ ಮಾಡಲಾಗುವುದು. ಯುವ ಕಾಂಗ್ರೆಸ್ ಚುನಾವಣೆಯಲ್ಲಿ ನೀವು ಗೆದ್ದಿರುವುದು ನಮ್ಮ ಪಕ್ಷದವರ ವಿರುದ್ಧವೇ ಹೊರತು ಬಿಜೆಪಿಯವರ ಮೇಲಲ್ಲ. ಯುವ ಕಾಂಗ್ರೆಸ್ ಸದಸ್ಯರಾಗಿರುವವರನ್ನು ಗೆದ್ದವರು ಹಾಗೂ ಸೋತವರು ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಇಲ್ಲಿ ಯಾವ ಗುಂಪು ಇರಬಾರದು. ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಮಾಡಿದವರೆಲ್ಲಾ ಹೀರೋಗಳಿಂದ ಜೀರೋಗಳಾಗಿದ್ದಾರೆ” ಎಂದು ಎಚ್ಚರಿಕೆ ನೀಡಿದರು.
“ಮುಂದಿನ ಚುನಾವಣೆಯಲ್ಲಿ ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳಿಂದ ಕನಿಷ್ಠ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಬೇಕು. ನಾವು ಮುಂದಿನ ಮೂರರಿಂದ ಆರು ತಿಂಗಳು ನೋಡುತ್ತೇವೆ. ಇಲ್ಲವಾದರೆ ನಾವು ಹೊಸ ಅಭ್ಯರ್ಥಿಗಳನ್ನು ಹುಡುಕಿಕೊಳ್ಳುತ್ತೇವೆ. ನಮಗೆ ನಮ್ಮ ಅಭ್ಯರ್ಥಿ ಗೆಲ್ಲುವುದು ಮುಖ್ಯವೇ ಹೊರತು ವ್ಯಕ್ತಿಗಳಲ್ಲ” ಎಂದು ತಿಳಿಸಿದರು.