ಭೋವಿ ನಿಗಮದಲ್ಲಿ ನಡೆದ ಅಕ್ರಮ ತನಿಖೆ ಎದುರಿಸಿದ್ದ ವಕೀಲೆ ಹಾಗೂ ಉದ್ಯಮಿ ಜೀವಾ ಆತ್ಮಹತ್ಯೆ ಪ್ರಕರಣದಲ್ಲಿ ಸಿಐಡಿ ಡಿವೈಎಸ್ ಪಿ ಕನಕಲಕ್ಷ್ಮೀ ಅವರನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವಕೀಲೆ ಜೀವಾ ೧೩ ಪುಟಗಳ ಡೆತ್ ನೋಟ್ ನಲ್ಲಿ ನನ್ನ ಆತ್ಮಹತ್ಯೆಗೆ ಡಿವೈಎಸ್ಪಿ ಕನಕಲಕ್ಷ್ಮೀ ಕಾರಣ. ವಿಚಾರಣೆ ನೆಪದಲ್ಲಿ ನನ್ನನ್ನು ಬ್ಲಾಕ್ ಮೇಲ್ ಮಾಡಿದ್ದು, ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಅಲ್ಲದೇ ಬೆತ್ತಲೆಗೊಳಿಸಿ ವೀಡಿಯೊ ರೆಕಾರ್ಡ್ ಮಾಡಿದ್ದರು ಎಂದು ಆರೋಪಿಸಿದ್ದರು.
ಮಂಗಳವಾರ ಬೆಳಗ್ಗೆ ಕನಕಲಕ್ಷ್ಮೀ ಎಸ್ಐಟಿ ವಿಚಾರಣೆಗೆ ಹಾಜರಾಗಿದ್ದಾಗ ಬಂಧಿಸಲಾಗಿದೆ. ಈ ಹಿಂದೆ ಎರಡು ಬಾರಿ ಕನಕಲಕ್ಷ್ಮೀ ಅವರ ಹೇಳಿಕೆಯನ್ನು ಎಸ್ಐಟಿ ದಾಖಲು ಮಾಡಿತ್ತು. ಇಂದು ಬೆಳಗ್ಗೆ ವಿಚಾರಣೆಗೆ ಒಳಪಡಿಸಿ ಬಳಿಕ ಬಂಧಿಸಲಾಗಿದೆ.
ಕನಕಲಕ್ಷ್ಮೀ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಭೋವಿ ನಿಗಮ ಅಕ್ರಮ ಸಂಬಂಧ ಜೀವಾರನ್ನು ಸಿಐಡಿ ವಿಚಾರಣೆಗೆ ಒಳಪಡಿಸಿತ್ತು. ಆದರೆ ಕಿರುಕುಳದ ಆರೋಪ ಮಾಡಿ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದರು.
ಭೋವಿ ನಿಗಮದಲ್ಲಿ ಒಟ್ಟು 34 ಕೋಟಿ ರೂ. ಅಕ್ರಮ ಹಣ ವರ್ಗಾವಣೆಯಾಗಿದೆ. ಇದರಲ್ಲಿ ಜೀವಾ ಮಾಲೀಕತ್ವದ ಸಂಸ್ಥೆ ಅನ್ನಿಕಾ ಎಂಟರ್ಪ್ರೆಸಸ್ಗೆ 7.16 ಕೋಟಿ ರೂ., ಅವರ ಸಹೋದರಿ ಹೆಸರಲ್ಲಿರುವ ಹರ್ನಿತಾ ಕ್ರಿಯೇಷನ್ಸ್ಗೆ 3.79 ಕೋಟಿ ರೂ. ವರ್ಗಾವಣೆ ಆಗಿತ್ತು. ಇನ್ನುಳಿದ ಹಣ ಮಾಜಿ ಎಂಡಿಗಳ ಆಪ್ತರ ಪಾಲುದಾರಿಕೆಯ ಸಂಸ್ಥೆಗಳಿಗೆ ವರ್ಗವಾಗಿತ್ತು. ಈ ಪ್ರಕರಣದ ಬಗ್ಗೆ ಆಂತರಿಕ ತನಿಖೆ ನಡೆಸಲು ಗೃಹ ಇಲಾಖೆ ಮುಂದಾಗಿತ್ತು.