ಬೆಂಗಳೂರು:ಭೋವಿ ಅಭಿವೃದ್ಧಿ ನಿಗಮದ ಅವ್ಯವಹಾರ ಸಂಬಂಧ ವಕೀಲೆ ಜೀವಾ ಅವರ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಬಹುತೇಕ ಪೂರ್ಣಗೊಳಿಸಿರುವ ವಿಶೇಷ ತನಿಖಾ ತಂಡ(ಎಸ್ಐಟಿ)ದ ಅಧಿಕಾರಿಗಳು 2,300 ಪುಟಗಳ ಅಂತಿಮ ವರದಿಯನ್ನು ಸಿದ್ಧಪಡಿಸಿ ಹೈಕೋರ್ಟ್ಗೆ ಸಲ್ಲಿಸಿದ್ದಾರೆ.
ಸಾಕ್ಷಿದಾರರ ಹೇಳಿಕೆ, ವಿಡಿಯೋ ಸಾಕ್ಷ್ಯಗಳ ಸಮೇತ ಐಪಿಎಸ್ ಅಧಿಕಾರಿಗಳಾದ ವಿನಾಯಕ್ ವರ್ಮಾ, ಅಕ್ಷಯ್ ಮಚೀಂದ್ರ, ನಿಶಾ ಜೇಮ್ಸ್ ನೇತೃತ್ವದ ವಿಶೇಷ ತನಿಖಾ ತಂಡವು ಸಲ್ಲಿಸಿರುವ ವರದಿಯಲ್ಲಿ ಜೀವಾಗೆ ಡಿವೈಎಸ್‌ಪಿ ಕನಕಲಕ್ಷ್ಮೀ ಕಿರುಕುಳ, ಹಿಂಸೆ ನೀಡಿರುವುದನ್ನು ಉಲ್ಲೇಖಿಸಲಾಗಿದೆ.
ಕಳೆದ ಡಿಸೆಂಬರ್ನಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಹೈಕೋರ್ಟ್ ಸೂಚಿಸಿತ್ತು. ಸದ್ಯ ಹೈಕೋರ್ಟ್ ಸೂಚನೆಯಂತೆ ಎಸ್ಐಟಿಯಿಂದ ವರದಿ ಸಲ್ಲಿಕೆಯಾಗಿದ್ದು, ತನಿಖಾ ತಂಡದ ವರದಿಗೆ ಹೈಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿದೆ.
ಎಸ್ಐಟಿ ವರದಿಯಲ್ಲಿ ಏನಿದೆ:
ಜೀವಾ ವಿಚಾರಣೆ ವೇಳೆ ಚಿತ್ರೀಕರಿಸಲಾಗಿದ್ದ ಕೆಲವು ವಿಡಿಯೋ ಡಿಲೀಟ್ ಆಗಿದ್ದವು. ಜೀವಾರನ್ನು ವಿವಸ್ತ್ರಗೊಳಿಸಿರುವುದು, ಇತರೆ ಕೆಲ ವಿಡಿಯೋಗಳು ಎಫ್ಎಸ್ಎಲ್ ಮೂಲಕ ಮರು ಸಂಗ್ರಹಿಸಿದಾಗ ಪತ್ತೆಯಾಗಿವೆ. ಡೆತ್ನೋಟ್ನಲ್ಲಿ ಜೀವಾ ಮಾಡಿದ್ದ ಬಹುತೇಕ ಆರೋಪಗಳು ಸಾಬೀತಾಗಿದೆ.
ಕಳೆದ ನ.22ರಂದು ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ವಕೀಲೆ ಜೀವಾ ಆತ್ಮಹತ್ಯೆ ನಡೆದಿತ್ತು. ಡಿವೈಎಸ್‌ಪಿ ಕನಕಲಕ್ಷ್ಮೀ ಕಿರುಕುಳದ ಬಗ್ಗೆ 13 ಪುಟಗಳ ಡೆತ್ನೋಟ್ನಲ್ಲಿ ಜೀವಾ ಬರೆದಿದ್ದರು. ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತುದ್ದಂತೆ ಬನಶಂಕರಿ ಠಾಣೆಯಿಂದ ಪ್ರಕರಣ ಎಸ್ಐಟಿಗೆ ವರ್ಗಾವಣೆಯಾಗಿತ್ತು. ಬಳಿಕ ಹೈಕೋರ್ಟ್ ಸಿಬಿಐ ಅಧಿಕಾರಿಗಳನ್ನೂ ಒಳಗೊಂಡಂತೆ ಎಸ್ ಐಟಿ ರಚಿಸಿತ್ತು.
ಪ್ರಾಸಿಕ್ಯೂಷನ್ ಗೆ ಅನುಮತಿ:
ಕಳೆದ ಮಾ.11ರಂದು ಡಿವೈಎಸ್‌ಪಿ ಕನಕಲಕ್ಷ್ಮೀ ಬಂಧಿಸಿ ವಿಚಾರಣೆ ಮಾಡಿದ್ದ ಎಸ್ ಐಟಿ ಅಧಿಕಾರಿಗಳು ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸಲಾಗಿದೆ. ಆದರೆ ವಿಚಾರಣಾಧೀನ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸುವುದು ಬಾಕಿ ಇದೆ. ಏಕೆಂದರೆ ಕನಕಲಕ್ಷ್ಮೀ ಸರ್ಕಾರಿ ಅಧಿಕಾರಿ ಆಗಿರುವುದರಿಂದ ಪ್ರಕರಣದ ಚಾರ್ಜ್ಶೀಟ್ ಸಲ್ಲಿಸಲು ಪ್ರಾಸಿಕ್ಯೂಷನ್ ಅನುಮತಿ ಬೇಕಾಗಿದ್ದು, ಪ್ರಾಸಿಕ್ಯೂಷನ್ ಅನುಮತಿಗಾಗಿ ಎಸ್ ಐಟಿ ಅಧಿಕಾರಿಗಳು ಕಾಯುತ್ತಿದ್ದಾರೆ.
ಇನ್ನು ಇದೇ ಪ್ರಕರಣದಲ್ಲಿ ಇತ್ತೀಚೆಗೆ ಮಾಜಿ ವ್ಯವಸ್ಥಾಪಕ ನಿರ್ದೇಶಕ ಬಿಕೆ ನಾಗರಾಜಪ್ಪರನ್ನು ಬಂಧಿಸಲಾಗಿತ್ತು. 14 ದಿನಗಳ ಕಾಲ ಇಡಿ ಕಸ್ಟಡಿಗೆ ಪಡೆದುಕೊಂಡಿತ್ತು. ಇಡಿ ತನಿಖೆ ವೇಳೆ ಭೋವಿ ಸಮುದಾಯದ ಏಜೆಂಟರ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಿರುವ ಮಹತ್ವದ ದಾಲೆಗಳನ್ನು ಪತ್ತೆ ಹಚ್ಚಿದ್ದರು.