ಮಾಜಿ ಬಿಗ್ಬಾಸ್ ಸ್ಪರ್ಧಿ, ವಕೀಲ ಜಗದೀಶ್ 93 ದಿನಗಳ ಜೈಲುವಾಸದ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿರುವ ಜಗದೀಶ್, ತಮ್ಮ ಬಂಧನಕ್ಕೆ ಸರ್ಕಾರ ಹಾಗೂ ಪೊಲೀಸ್ ವ್ಯವಸ್ಥೆಯನ್ನು ನೇರ ಹೊಣೆ ಮಾಡಿದ್ದಾರೆ. ಜಗದೀಶ್ ಅವರನ್ನು ಜನವರಿ 24ರಂದು ಪೊಲೀಸರು ಬಂಧಿಸಿದ್ದರು.
ಫೇಸ್ಬುಕ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಜಗದೀಶ್, ನಾನು ಹಲವು ವರ್ಷಗಳಿಂದ ಭ್ರಷ್ಟಾಚಾರದ ವಿರುದ್ಧ ಧೀರ ಹೋರಾಟ ನಡೆಸುತ್ತಿರುವ ಹೋರಾಟಗಾರ, PSI ಹಗರಣ ಬಯಲು ಮಾಡಿದ್ದು , ADGP ಅಮೃತಪಾಲ್ ಅವರನ್ನು ಜೈಲಿಗೆ ಕಳಿಸಿದ್ದು ನಮ್ಮ ತಂಡ. ದೊಡ್ಡ ರಾಜಕಾರಣಿಗಳ ಸೆಕ್ಸ್ ಸ್ಕ್ಯಾಂಡಲ್ ಅನ್ನು ಬಹಿರಂಗಪಡಿಸಿದ್ದು , ರವಿ ಚೆನ್ನಣ್ಣನವರ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದು , ಟ್ರಾಫಿಕ್ ಟೋಯಿಂಗ್ ಸಿಸ್ಟಂ ನಿಲ್ಲಿಸಿದ್ದು , ಕೊಡಿಗೇಹಳ್ಳಿ ಸುತ್ತಮುತ್ತ ಡ್ರಗ್ಸ್ ವಿರುದ್ಧ ಹೋರಾಟ ಇವೆಲ್ಲವೂ ನನ್ನ ಹೋರಾಟದ ಭಾಗ ಎಂದಿದ್ದಾರೆ.
ಭ್ರಷ್ಟ ರಾಜಕೀಯ ಮತ್ತು ಪೊಲೀಸ್ ವ್ಯವಸ್ಥೆ, ನನ್ನ ಮತ್ತು ನನ್ನ ಮಗನ ವಿರುದ್ಧ ಸಂಚು ರೂಪಿಸಿ, 25/01/2025 ರಂದು ಪುಂಡರಿಂದ ನನಗೆ ಮಾರಣಾಂತಿಕ ಹಲ್ಲೆ ನಡೆಸಿ, ಅಕ್ರಮವಾಗಿ ಜೈಲಿಗೆ ಕಳುಹಿಸಿತ್ತು. 93 ದಿನಗಳ ನಂತರ ನನಗೆ ನ್ಯಾಯ ಸಿಕ್ಕಿದೆ. ನ್ಯಾಯಕ್ಕಾಗಿ ನನ್ನ ಹೋರಾಟ ಇನ್ನೂ ಜೀವಂತವಿದೆ ಎಂದು ಬರೆದುಕೊಂಡಿದ್ದಾರೆ.
ಕೊಡಿಗೇಹಳ್ಳಿಯಲ್ಲಿ ಅಣ್ಣಮ್ಮ ದೇವಿ ಉತ್ಸವದ ವಿಚಾರವಾಗಿ ಲಾಯರ್ ಜಗದೀಶ್ ಹಾಗೂ ಸ್ಥಳೀಯರ ನಡುವೆ ದೊಡ್ಡ ಗಲಾಟೆ ನಡೆದಿತ್ತು. ಈ ವೇಳೆ ಕಾನೂನು ಬಾಹಿರವಾಗಿ ಬಂದೂಕು ಬಳಕೆ ಮಾಡಿದ ಆರೋಪದ ಮೇಲೆ ಜಗದೀಶ್ ಹಾಗೂ ಅವರ ಗನ್ಮ್ಯಾನ್ ಅನ್ನು ಪೊಲೀಸರು ಬಂಧಿಸಿದ್ದರು.