ಸುಪ್ರೀಂಕೋರ್ಟ್‌ನಲ್ಲಿ ವಕೀಲರೊಬ್ಬರು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಮೇಲೆ ಶೂ ಎಸೆದಿದ್ದು, ಆರೋಪಿಯನ್ನು ರಾಕೇಶ್ ಕಿಶೋರ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ತಕ್ಷಣವೇ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಖಜುರಾಹೊ ದೇವಾಲಯ ಸಂಕೀರ್ಣದಲ್ಲಿ ವಿಷ್ಣುವಿನ ವಿಗ್ರಹವನ್ನು ಪುನಃಸ್ಥಾಪಿಸುವ ಕುರಿತಾದ ವಿಚಾರಣೆಯ ಸಂದರ್ಭದಲ್ಲಿ ಈ ಅಹಿತಕರ ಘಟನೆ ನಡೆದಿದೆ.
ಬೆಳಿಗ್ಗೆ 11:35ಕ್ಕೆ ಸುಪ್ರೀಂ ಕೋರ್ಟ್‌ನ ನ್ಯಾಯಾಲಯ ಸಂಖ್ಯೆ 1 ರಲ್ಲಿ ವಿಚಾರಣೆ ನಡೆಯುತ್ತಿರುವಾಗ ವಕೀಲ ರಾಕೇಶ್ ಕಿಶೋರ್ ಬೂಟನ್ನು ತೆಗೆದು ಸಿಜೆಐ ಬಿ.ಆರ್. ಗವಾಯಿ ಕಡೆಗೆ ಎಸೆದಿದ್ದಾರೆ. ಈ ಅನಿರೀಕ್ಷಿತ ಕೃತ್ಯದಿಂದ ನ್ಯಾಯಾಲಯದಲ್ಲಿ ಒಂದು ಕ್ಷಣ ಗೊಂದಲ ಉಂಟಾಯಿತು. ಭದ್ರತಾ ಸಿಬ್ಬಂದಿ ತಕ್ಷಣ ಆರೋಪಿಯನ್ನು ವಶಕ್ಕೆ ಪಡೆದು ಸುಪ್ರೀಂ ಕೋರ್ಟ್‌ನ ಭದ್ರತಾ ಘಟಕಕ್ಕೆ ಹಸ್ತಾಂತರಿಸಿದರು. ಆರೋಪಿಯು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನ ನೋಂದಾಯಿತ ಸದಸ್ಯ ಮತ್ತು ಮಯೂರ್ ವಿಹಾರ್‌ನ ನಿವಾಸಿ ಎಂದು ದೆಹಲಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
“ಸನಾತನ ಧರ್ಮದ ಅವಮಾನವನ್ನು ಭಾರತ ಸಹಿಸುವುದಿಲ್ಲ” ಎಂದು ಆರೋಪಿಯು ಕೋರ್ಟ್‌ನಿಂದ ಹೊರಗಡೆ ಕರೆದೊಯ್ಯವಾಗ ಕಿರಿಚಾಡಿದ್ದಾರೆ. ಖಜುರಾಹೊ ದೇವಾಲಯದ ಜವಾರಿ ದೇವಾಲಯದಲ್ಲಿ ಶಿಥಿಲಗೊಂಡಿರುವ 7 ಅಡಿ ಎತ್ತರದ ವಿಷ್ಣು ವಿಗ್ರಹ ಮರು ನಿರ್ಮಾಣ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ.
ಸಿಜೆಐ ಗವಾಯಿ ಈ ಅರ್ಜಿಯನ್ನು ಸೆಪ್ಟೆಂಬರ್ 16 ರಂದು ವಜಾಗೊಳಿಸಿದ್ದರು. ಇದು ಸಂಪೂರ್ಣವಾಗಿ ಪ್ರಚಾರ ಹಿತಾಸಕ್ತಿಯ ಮೊಕದ್ದಮೆ. ಹೋಗಿ ದೇವರನ್ನೇ ಏನಾದರೂ ಮಾಡಲು ಕೇಳಿಕೊಳ್ಳಿ. ನೀವು ವಿಷ್ಣುವಿನ ಬಲವಾದ ಭಕ್ತ ಎಂದು ಹೇಳುತ್ತಿದ್ದರೆ ನೀವು ಪ್ರಾರ್ಥಿಸಿ ಮತ್ತು ಧ್ಯಾನ ಮಾಡಿ ಎಂದು ಅರ್ಜಿದಾರರಿಗೆ ತಿಳಿಸಿದ್ದರು.
ಶೂ ಎಸೆತದ ಘಟನೆಯ ನಂತರವೂ ಸಿಜೆಐ ಗವಾಯಿ ಶಾಂತಚಿತ್ತರಾಗಿದ್ದರು. ಈ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ. ವಿಚಾರಣೆಯನ್ನು ಮುಂದುವರಿಸಿ ಎಂದು ಅವರು ಹೇಳಿದರು. ದೆಹಲಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಖಜುರಾಹೊ ದೇವಾಲಯದ ವಿಷ್ಣು ವಿಗ್ರಹ ಪುನರ್ನಿರ್ಮಾಣದ ಕುರಿತಾದ ವಿವಾದ ಸಂಬಂಧ ಆರೋಪಿ ವಕೀಲ ಸಿಜೆಐ ಗವಾಯಿ ಅವರ ಹೇಳಿಕೆಗಳಿಂದ ಅಸಮಾಧಾನಗೊಂಡಿದ್ದರು ಎಂದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ. ಸಿಜೆಐ ಗವಾಯಿ “ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ” ಎಂದು ಸ್ಪಷ್ಟಪಡಿಸಿದ್ದರು.