ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸುಂದರ್‌ನಗರ ಉಪವಿಭಾಗದ ಜಂಗಮ್ ಬಾಗ್‌ನಲ್ಲಿ ವ್ಯಾಪಕ ಮಳೆಯಿಂದಾಗಿ ಭೂಕುಸಿತ ಸಂಭವಿಸಿ ಬಾಲಕಿ ಸೇರಿದಂತೆ ಕನಿಷ್ಠ ಆರು ಜನ ಮೃತಪಟ್ಟಿದ್ದು, ಹಲವರು ಅವಶೇಷಗಳಡಿ ಸಿಲುಕಿದ್ದಾರೆ ಎನ್ನಲಾಗಿದೆ.
ಗುಡ್ಡದ ದೊಡ್ಡ ಭಾಗ ಹಠಾತ್ತನೆ ಕುಸಿದು ಎರಡು ಮನೆಗಳು ನಜ್ಜುಗುಜ್ಜಾಗಿದ್ದು, ಕುಟುಂಬಗಳು ಒಳಗೆ ಸಿಲುಕಿಕೊಂಡಿವೆ, ಅಧಿಕಾರಿಗಳ ಪ್ರಕಾರ, ಇದುವರೆಗೆ ಆರು ಶವಗಳನ್ನು ಹೊರತೆಗೆಯಲಾಗಿದ್ದು, ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಭೂಕುಸಿತದ ಮಾಹಿತಿ ಪಡೆದ ಭಾರತೀಯ ಸೇನಾ ಸಿಬ್ಬಂದಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ಜಿಲ್ಲಾ ಪೊಲೀಸರು ಮತ್ತು ಗೃಹರಕ್ಷಕ ದಳದ ತಂಡಗಳೊಂದಿಗೆ ಮೂರು ಜೆಸಿಬಿ ಯಂತ್ರಗಳ ಸಹಾಯದಿಂದ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.
ಗುಡ್ಡ ಬಿರುಕು ಬಿಟ್ಟ ಪ್ರದೇಶದಲ್ಲಿ ಭೀತಿ ಆವರಿಸಿ ಜನರು ಪ್ರಾಣ ಉಳಿಸಿಕೊಳ್ಳಲು ಓಡುತ್ತಿದ್ದಂತೆ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಇಬ್ಬರು ಮಹಿಳೆಯರನ್ನು ಜೀವಂತವಾಗಿ ಹೊರತೆಗೆದು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆಯ ಸಮಯದಲ್ಲಿ ಇಬ್ಬರೂ ಅಸು ನೀಗಿದ್ದಾರೆ.
ಛತ್ತೀಸ್‌ಗಢದ ಬಲರಾಂಪುರ ಜಿಲ್ಲೆಯಲ್ಲಿ ಮಳೆಗೆ ಸಣ್ಣ ಅಣೆಕಟ್ಟಿನ ಒಂದು ಭಾಗ ಕುಸಿದು ಪ್ರವಾಹ ಉಂಟಾಗಿ ನಾಲ್ವರು ಮೃತಪಟ್ಟಿದ್ದು, ಮೂವರು ನಾಪತ್ತೆಯಾಗಿದ್ದಾರೆ. ನಾಲ್ವರು ಮನೆಗಳಲ್ಲಿ ಮಲಗಿದ್ದಾಗ ಮೃತರಾಗಿದ್ದು, ಮೂವರು ನಾಪತ್ತೆಯಾಗಿದ್ದು ಶೋಧ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಅಧಿಕಾರಿ ತಿಳಿಸಿದ್ದಾರೆ.
ಮಳೆಯಿಂದಾಗಿ ಸೆಪ್ಟೆಂಬರ್ 30 ರವರೆಗೆ ಜಮ್ಮು ಮತ್ತು ಕತ್ರಾ ನಿಲ್ದಾಣಗಳಿಂದ ಬರುವ 68 ಒಳಬರುವ ಮತ್ತು ಹೊರಹೋಗುವ ರೈಲುಗಳನ್ನು ರದ್ದುಗೊಳಿಸಲಾಗಿದೆ. ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಕಳೆದ ಎಂಟು ದಿನಗಳಿಂದ ಪಠಾಣ್‌ಕೋಟ್-ಜಮ್ಮು ವಿಭಾಗದಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಕತ್ರಾದ ಮಾತಾ ವೈಷ್ಣೋದೇವಿ ದೇಗುಲದ ಬಳಿ ಸಂಭವಿಸಿದ ಭೂಕುಸಿತದಲ್ಲಿ 34 ಜನರು ಪ್ರಾಣ ಕಳೆದುಕೊಂಡಿದ್ದಾರೆ.