ಭೂ ವಿವಾದಕ್ಕೆ ಸಂಬಂಧಿಸಿದಂತೆ ಕಾನೂನು ಸಚಿವ ಹೆಚ್‌ಕೆ ಪಾಟೀಲ್ ವಿರುದ್ಧ ಹುಬ್ಬಳ್ಳಿಯ ಅಕ್ಕ-ತಂಗಿ ಸುಪ್ರೀಂ ಕೋರ್ಟ್‌ನಲ್ಲಿ ಜಯ ಗಳಿಸಿದ್ದಾರೆ. ಜಾಗ ತಮ್ಮದೆಂದು ಹೇಳಿಕೊಂಡಿದ್ದ ಸಚಿವರ ಕುಟುಂಬಕ್ಕೆ ತೀರ್ಪಿನ ಮೂಲಕ ಸರ್ವೋಚ್ಚ ನ್ಯಾಯಾಲಯ ಅಚ್ಚರಿಯುಂಟು ಮಾಡಿದೆ.
ತಮಗೆ ಸೇರಿರುವ ಹುಬ್ಬಳ್ಳಿ ನಗರದ ಪಿಂಟೋ ಸರ್ಕಲ್ ಬಳಿಯ 15 ಗುಂಟೆ ಜಾಗವನ್ನು ಕಬಳಿಸಲಾಗಿದೆ ಎಂದು ಆರೋಪಿಸಿ ಸಹೋದರಿಯರಾದ ಸಾವಕ್ಕ ಸುಳ್ಳದ, ಧಾರವಾಡದ ಜಕ್ಕವ್ವ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಹೆಚ್‌ಕೆ ಪಾಟೀಲ್ ಕುಟುಂಬ ನಮಗೆ ಸೇರಿರುವ ಆಸ್ತಿಯನ್ನು ಬಿಟ್ಟುಕೊಡ್ತಿಲ್ಲ ಎಂದು ಆರೋಪಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಆದೇಶ ನೀಡಿದ್ದು, 15 ಗುಂಟೆ ಜಾಗ ಸಾವಕ್ಕ ಮತ್ತು ಜಕ್ಕವ್ವ ಸಹೋದರಿಯರಿಗೆ ಸೇರಿದ್ದು ಎಂದು ಹೇಳಿದೆ.
ಸಾವಕ್ಕ, ಜಕ್ಕವ್ವ ಅವರ ತಂದೆ ಮರಿತಮ್ಮಪ್ಪ ಅಮರಶೆಟ್ಟಿ 1894ರಲ್ಲಿ ಇಂಡಿಯನ್ ಕಾಟನ್ ಕಂಪನಿಗೆ 5 ಎಕರೆ ಜಾಗವನ್ನು 10 ವರ್ಷ ಲೀಸ್ಗೆ ನೀಡಿದ್ದರು. ಬಳಿಕ 1941ರಲ್ಲಿ ಸಿದ್ದಲಿಂಗಪ್ಪ ಬುಳ್ಳಾ ಎಂಬವರು ಇಂಡಿಯನ್ ಕಾಟನ್ ಕಂಪನಿಯಿಂದ ಲೀಸ್ ಹೋಲ್ಡ್ ರೈಟ್ಸ್ ಖರೀದಿಸಿದ್ದರು. 1964ರಲ್ಲಿ ಬುಳ್ಳಾರಿಂದ ಹೆಚ್‌ಕೆ ಪಾಟೀಲ್ ತಂದೆ ಕೆ ಹೆಚ್ ಪಾಟೀಲರು 15 ಗುಂಟೆ ಜಾಗವನ್ನು ಸಬ್ಲೀಸ್ಗೆ ಪಡೆದಿದ್ದರು. ಲೀಸ್ಗೆ ಪಡೆದ ಜಾಗವನ್ನು ಬುಳ್ಳಾ ಕುಟುಂಬ ಮತ್ತು ಹೆಚ್‌ಕೆ ಪಾಟೀಲ್ ಕುಟುಂಬ ಬಿಟ್ಟುಕೊಡದ ಕಾರಣ ಸಹೋದರಿಯರು ಕೋರ್ಟ್‌ಗೆ ಹೋಗಿದ್ದರು. 2024ರಲ್ಲಿ ಸಾವಕ್ಕ ಮತ್ತು ಜಕ್ಕವ್ವ ಪರ ಸುಪ್ರೀಂಕೋರ್ಟ್ ಆದೇಶವಾಗಿತ್ತು.
ಮೂಲ ಬಾಡಿಗೆದಾರ ಬುಳ್ಳಾ ಜಾಗದ ಮಾಲೀಕರಲ್ಲ ಎಂದು ಹೇಳಿದ್ದ ಕಾರಣ ಅವರ ಕುಟುಂಬ ಜಾಗವನ್ನು ಮಾಲೀಕರಿಗೆ ಬಿಟ್ಟುಕೊಟ್ಟಿತ್ತು. ಆದರೆ ಹೆಚ್‌ಕೆ. ಪಾಟೀಲ್ ಕುಟುಂಬ ತಕರಾರು ತೆಗೆದ ಕಾರಣ ಸಹೋದರಿಯರು ಮತ್ತೆ ಸುಪ್ರೀಂಕೋರ್ಟ್‌ಗೆ ಹೋಗಿದ್ದರು. ಸುಪ್ರೀಂಕೋರ್ಟ್ ಆದೇಶದಿಂದ 135 ವರ್ಷಗಳ ನಂತರ ನಮ್ಮ ಆಸ್ತಿ ನಮಗೆ ಸಿಕ್ಕಿದೆ ಎಂದು ಸೋದರಿಯರು ಸಂತಸ ವ್ಯಕ್ತಪಡಿಸಿದ್ದಾರೆ.


