Tuesday, February 03, 2026
Menu

ಅನುದಾನ ಲಭ್ಯತೆ ಅನುಸಾರ ಯಗಚಿ ಎಡದಂಡೆ ನಾಲೆಗಳಿಗೆ ಭೂಸ್ವಾಧೀನ: ಡಿಕೆ ಶಿವಕುಮಾರ್

ಅನುದಾನ ಲಭ್ಯತೆ ಅನುಸಾರ ಯಗಚಿ ಎಡದಂಡೆ ನಾಲೆಗಳ ಭೂಸ್ವಾಧೀನ ಪ್ರಕ್ರಿಯೆಯನ್ನು ಹಂತ ಹಂತವಾಗಿ ಮಾಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ವಿಧಾನಸಭೆ ಗಮನ ಸೆಳೆವ ಸೂಚನೆ ವೇಳೆ ಬಿಜೆಪಿ ಶಾಸಕರಾದ ಸಿಮೆಂಟ್ ಮಂಜು ಅವರು ಯಗಚಿ ಜಲಾಶಯದ ಎಡದಂಡೆ ನಾಲೆಗಳ ಲ್ಯಾಟರಲ್, ಮೈನರ್ ಗಳು ಹಾಗೂ ಮೊಸಳೆ ಶಾಖಾ ನಾಲೆಯ ಭೂಸ್ವಾಧೀನ ಕೈಗೊಳ್ಳದಿರುವ ಬಗ್ಗೆ ಪ್ರಸ್ತಾಪ ಮಾಡಿದಾಗ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಉತ್ತರ ನೀಡಿದರು.

ಬೇಲೂರು, ಹಾಸನ, ಆಲೂರು ತಾಲೂಕುಗಳ 37 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಕಲ್ಪಿಸಲು ಯಗಚಿ ಎಡದಂಡೆ ಯೋಜನೆ ಮಾಡಲಾಗಿದೆ. ಯಗಚಿ ಮುಖ್ಯ ನಾಲೆಯ 54 ರಿಂದ 84ರ ವ್ಯಾಪ್ತಿಯಲ್ಲಿ 12,427 ಎಕರೆ ಅಚ್ಚುಕಟ್ಟು ಪ್ರದೇಶವಿದ್ದು, 262 ಎಕರೆ 28 ಗುಂಟೆ ಜಮೀನು ಭೂಸ್ವಾಧೀನವಾಗಿದ್ದು, ಭೂಮಾಲೀಕರಿಗೆ ಪರಿಹಾರ ನೀಡಲಾಗಿದೆ. ಯಗಚಿ ಎಡ ದಂಡೆ ಮುಖ್ಯ ನಾಲೆ ಮತ್ತು ವಿತರಣ ನಾಲೆ ಸಂಖ್ಯೆ 71ರಿಂದ 84ರವರೆಗೆ ಹಾಗೂ ಮೊಸಳೆ ನಾಲೆಗಳಿಗೆ ಸಂಬಂಧಿಸಿದಂತೆ ಒಟ್ಟು 286 ಎಕರೆ 22.5 ಗುಂಟೆ ಜಮೀನುಗಳಿಗೆ ಭೂಪರಿಹಾರ ನೀಡಲು 60 ಕೋಟಿ ಅನುದಾನ ಅಗತ್ಯವಿದ್ದು, ಅನುದಾನ ಲಭ್ಯತೆ ಅನುಗುಣವಾಗಿ ಹಣ ಬಿಡುಗಡೆ ಮಾಡಲು ಕ್ರಮವಹಿಸಲಾಗಿದೆ ಎಂದು ವಿವರವಾದ ಮಾಹಿತಿ ನೀಡಿದರು.

ಈ ವೇಳೆ ಮಾತನಾಡಿದ ರೇವಣ್ಣ , ಈ ನಾಲೆಯಲ್ಲಿ ಆರಂಭಿಕ 5 ಕಿ.ಮೀವರೆಗೂ ನಾಲೆ ಆಗಿಲ್ಲ ಆದಷ್ಟು ಬೇಗ ಅನುದಾನ ಕೊಡಿಸಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್  “ಈ ಭೂಸ್ವಾಧೀನ ಪ್ರಕ್ರಿಯೆ ಶುರುವಾಗಿದ್ದು ಯಾವಾಗ,  ಸಿಮೆಂಟ್ ಮಂಜು ಅವರ ಮನವಿ ಆದ್ಯತೆ ಮೇರೆಗೆ ಕೈಗೊಳ್ಳುತ್ತೇವೆ. ರೇವಣ್ಣ  ಐದಾರು ಬಾರಿ ಶಾಸಕರಾಗಿ, ಮಂತ್ರಿಯಾಗಿದ್ದಾರೆ. ಅವರ ತಂದೆ ನೀರಾವರಿ ಸಚಿವರಾಗಿದ್ದರು, ಪಿಡಬ್ಲ್ಯೂಡಿ ಸಚಿವರಾಗಿದ್ದರು. ಅವರು ಇಡೀ ಜಿಲ್ಲೆ ನಡೆಸಿದ್ದಾರೆ. ಮಂಜು ಅವರು ಹೊಸದಾಗಿ ಬಂದಿದ್ದು, ಅವರ ಧ್ವನಿಗೆ ನಾನು ಬೆಂಬಲ ನೀಡುತ್ತೇನೆ ಎಂದು ತಿಳಿಸಿದರು.

ಬಿಜೆಪಿ ಶಾಸಕರಾದ ದುರ್ಯೋಧನ ಐಹೊಳಿ ಅವರು, ರಾಯಭಾಗ ಕ್ಷೇತ್ರದ ಚಿಕ್ಕೋಡಿ ತಾಲೂಕು  ವ್ಯಾಪ್ತಿಯ ಹನುಮಾನ ಏತ ನೀರಾವರಿ ಯೋಜನೆ, ಬೆಂಡವಾಡ ಏತ ನೀರಾವರಿ ಯೋಜನೆ ಅಂದಾಜು ವೆಚ್ಚಕ್ಕೆ ಕಾಲಮಿತಿ ಅನುಮತಿ ನೀಡಿರುವ ಬಗ್ಗೆ ಕೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ರಾಯಭಾಗ 14 ಗ್ರಾಮಗಳ 9650 ಹೆಕ್ಟೇರ್ ಜಮೀನುಗಳಿಗೆ ನೀರಾವರಿ ಆಗ ಬೇಕು ಎಂದು ಕೃಷ್ಣಾ ನದಿಯಿಂದ ಮುಂಗಾರು ಹಂಗಾಮಿನಲ್ಲಿ ಹರಿಯುವ 1.7 ಟಿಎಂಸಿ ನೀರನ್ನು ಬಳಸಿಕೊಳ್ಳಲು ಈ ಯೋಜನೆಯಾಗಿದೆ. ಇದು 796 ಕೋಟಿ ಮೊತ್ತದ ಯೋಜನೆ. ಇಲ್ಲಿ  ಹಂಚಿಕೆ ಯಾಗಿರುವ ಕೃಷ್ಣಾ ನೀರಿನ ಪ್ರಮಾಣದ ಬಗ್ಗೆ ಲೆಕ್ಕ ಹಾಕುವ ಅಗತ್ಯವಿದೆ. ನಂತರ ನೀರಿನ ಲಭ್ಯತೆ ಇದೆಯೇ ಇಲ್ಲವೋ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಈಗಾಗಲೇ ಅಂದಾಜು ಮೊತ್ತ ಪ್ರಸ್ತಾಪಿಸಲಾಗಿದೆ. ನೀರಿನ ಪ್ರಮಾಣ ಪರಿಶೀಲಿಸಿದ ಬಳಿಕ ಇದನ್ನು ಆದ್ಯತೆ ಮೇರೆಗೆ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಾರಾಹಿ ಏತನೀರಾವರಿ ತಾಂತ್ರಿಕ ಸಮಸ್ಯೆ ಖುದ್ದಾಗಿ ಪರಿಶೀಲನೆ

ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ವಾರಾಹಿ ಏತ ನೀರಾವರಿ ಯೋಜನೆ ಬಗ್ಗೆ ಕೇಳಿದಾಗ, ಈ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್  ಚರ್ಚೆ ಮಾಡಿದ್ದಾರೆ. ಇಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಇದನ್ನು ನಾನೇ ಖುದ್ದಾಗಿ ಪರಿಶೀಲನೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕೆಆರ್ ಎಸ್ ಅಣೆಕಟ್ಟಿನ ಬೃಂದಾವನ ಪ್ರವೇಶಿಸಲು ಹಾಗೂ ಹಳ್ಳಿಗಳ ಸಂಪರ್ಕ ಕಲ್ಪಿಸಲು ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಂಡಿರುವ ಸೇತುವೆಯ ಶುಲ್ಕವನ್ನು ಬೃಂದಾವನ ಪ್ರವೇಶದ ಬಳಿ ವಸೂಲಿ ಮಾಡಿ, ಗ್ರಾಮಸ್ಥರಿಗೆ ಉಚಿತವಾಗಿ ಸಂಚಾರ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಉತ್ತರಿಸಿದ ಶಿವಕುಮಾರ್ , ಈ ಹಿಂದಿನಿಂದಲೂ ಶುಲ್ಕ ವಸೂಲಾತಿ ಮಾಡಲಾಗುತ್ತಿದೆ. ಇಲ್ಲಿ ಟೆಂಡರ್ ಕರೆದು ಬಿಡ್ ಮಾಡಲಾಗಿದೆ. ಈ ವಿಚಾರದಲ್ಲಿ ರೈತರಿಗೆ ತೊಂದರೆಯಾಗುವುದು ಬೇಡ. ನಾನು ಆ ಜಾಗಕ್ಕೆ ಬಂದು ಪರಿಶೀಲನೆ ಮಾಡುತ್ತೇನೆ. ಗ್ರಾಮಸ್ಥರಿಗೆ ಉಚಿತವಾಗಿ ಸಂಚಾರಕ್ಕೆ ಅವಕಾಶ ನೀಡಬೇಕು ಎಂಬ ನಿಮ್ಮ ಸಲಹೆಗಳನ್ನು ಸ್ವೀಕರಿಸಲಾಗುವುದು ಎಂದು ಭರವಸೆ ನೀಡಿದರು.

ಬಿಜೆಪಿ ಶಾಸಕ ಮುನಿರತ್ನ ಅವರು ನಗರದಲ್ಲಿ ಕಾರ್ಯನಿರ್ವಹಿಸದ ಬೀದಿ ದೀಪಗಳ ವಿಚಾರವಾಗಿ ಕೇಳಿದಾಗ, ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್  ಉತ್ತರಿಸಿದರು.  “ನಿಮ್ಮನ್ನು ಕರೆಸಿ ಮಾತನಾಡಲು ಮುಂದಾದರೆ ನೀವು ಧರಣಿ ಮಾಡುತ್ತೀರಿ. ನಾವೇನು ಮಾಡೋಣ ಹೇಳಿ.  ನಿಮ್ಮನ್ನು ಕರೆಸಿದ್ದು ನಿಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆ ಚರ್ಚೆ ಮಾಡಲು. ಆದರೆ ನಿಮ್ಮ ಕ್ಷೇತ್ರದ ನೋವು ಹೇಳಿಕೊಳ್ಳುವಷ್ಟು ಧೈರ್ಯ ತೋರಲಿಲ್ಲ.  ಜನಪ್ರತಿನಿಧಿಯಾಗಿ ಪ್ರಶ್ನೆ ಕೇಳಿದ್ದೀರಿ, ನಿಮ್ಮ ಕ್ಷೇತ್ರದಲ್ಲಿ ಬೀದಿ ದೀಪಗಳ ಬಗ್ಗೆ ಮತ್ತೊಮ್ಮೆ ಪರಿಶೀಲಿಸುತ್ತೇವೆ. ನಿಮ್ಮನ್ನು ಮತ್ತೊಮ್ಮೆ ಚರ್ಚೆಗೆ ಆಹ್ವಾನಿಸುತ್ತೇನೆ. ನೀವು ನಿಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಬನ್ನಿ, ಅದನ್ನು ಪರಿಹರಿಸೋಣ ಎಂದು ಭರವಸೆ ನೀಡಿದರು.

ಬಿಜೆಪಿ ಶಾಸಕರಾದ ಕೃಷ್ಣಪ್ಪ , ಬಿಡಿಎ ವತಿಯಿಂದ ಪೂರ್ಣಪ್ರಜ್ಞಾ ಬಡಾವಣೆ ಮಂಜೂರಾಗಿದ್ದು, ಸಣ್ಣ ಪ್ರಮಾಣದ ಶೆಡ್ ತೆರವುಗೊಳಿಸಿ ಪಾರ್ಕ್ ಮಾಡಲು ಅನುಕೂಲ ಮಾಡಿಕೊಳ್ಳಬೇಕು ಎಂದು ಕೇಳಿದರು.  ಪ್ರತಿಕ್ರಿಯೆ ನೀಡಿದ ಶಿವಕುಮಾರ್ ,“ಇತ್ತೀಚೆಗೆ ಬಿಡಿಎ ಎಲ್ಲಾ ಬಡಾವಣೆಗಳು ಮತ್ತು ಸೊಸೈಟಿ ಬಡಾವಣೆಗಳನ್ನು ಪಾಲಿಕೆಗಳಿಗೆ ಹಸ್ತಾಂತರಿಸಲು ಮುಂದಾಗಿದ್ದೇವೆ. ಈ ರೀತಿ ಅನಧಿ ಕೃತವಾಗಿ ನಿರ್ಮಾಣವನ್ನು ತೆರವುಗೊಳಿಸಲಾಗುವುದು. ಈ ಪ್ರಕರಣವನ್ನು ಆದ್ಯತೆ ಮೇರೆಗೆ ಪರಿಗಣಿಸಿ, ಅಲ್ಲಿ ತೆರವುಗೊಳಿಸಿ ಪಾರ್ಕ್ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.

Related Posts

Leave a Reply

Your email address will not be published. Required fields are marked *