Menu

ಕೆರೆ ಒತ್ತುವರಿ ತೆರವುಗೊಳಿಸದ ಡಿಸಿ, ಸಿಇಒ ವಿರುದ್ಧ ಕ್ರಮಕ್ಕೆ ಸಿಎಸ್‌ಗೆ ಸಿಎಂ ಸೂಚನೆ

cm siddaramaiah

ಒಂದೂ ಕೆರೆ ಒತ್ತುವರಿ ತೆರವುಗೊಳಿಸಿದ ಜಿಲ್ಲಾಧಿಕಾರಿ, ಸಿಇಒ ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ ಎನ್ನುವುದನ್ನು ಡಿಸಿ-ಸಿಒಗಳ  ಸಭೆಯಲ್ಲಿ ಪರಿಶೀಲನೆ ನಡೆಸಿದ ಬಳಿಕ ಈ ಸೂಚನೆ ನೀಡಿದ್ದಾರೆ. ಎರಡು ಮೂರು ಜಿಲ್ಲೆಗಳಲ್ಲಿ ಒಂದೂ ಕೆರೆ ಒತ್ತುವರಿ ತೆರವು ಮಾಡದಿರುವುದನ್ನು ಗಮನಿಸಿ ಗರಂ ಆದ ಮುಖ್ಯಮಂತ್ರಿ, ಆ ಬಗ್ಗೆ ವರದಿ ತರಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸಿಎಂ ಸೂಚನೆ ನೀಡಿದರು.

ರಾಜ್ಯದಲ್ಲಿ 10931 ಕೆರೆಗಳು ಒತ್ತುವರಿಯಾಗಿವೆ. ಇದುವರೆಗೆ 6065 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ. ಎಲ್ಲಾ ಕೆರೆಗಳ ಸಮೀಕ್ಷೆ ನಡೆಸಿ ಒತ್ತುವರಿ ತೆರವುಗೊಳಿಸಲು ಕಳೆದ ಸಭೆಯಲ್ಲಿ ತಿಳಿಸಿದ್ದರೂ ನಿರೀಕ್ಷಿತ ಪ್ರಗತಿಯಾಗಿಲ್ಲ. ಕೂಡಲೇ ಇದರ ಬಗ್ಗೆ ಗಮನಹರಿಸಿ, ಎಲ್ಲಾ ಕೆರೆಗಳ ಸಮೀಕ್ಷೆ ನಡೆಸಿ, ಒತ್ತುವರಿ ತೆರವುಗೊಳಿಸಿ, ಮಳೆ ನೀರು ಸರಾಗವಾಗಿ ಕೆರೆಗೆ ಹರಿದು ಬರುವಂತೆ ವ್ಯವಸ್ಥೆ ಮಾಡಬೇಕು. ಕೆರೆಗಳ ಒತ್ತುವರಿ ವಿಷಯದಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದಲ್ಲಿ ಈ ವರ್ಷ 1395 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಪೋಕ್ಸೋ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗುವಂತೆ ನೋಡಿಕೊಳ್ಳ ಬೇಕು. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸರಿಯಾದ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಸಿಂಧುತ್ವ ಪ್ರಮಾಣ ಪತ್ರವನ್ನು ನಿಗದಿತವಾಗಿ ಒಂದು ತಿಂಗಳ ಒಳಗಾಗಿ ನೀಡಬೇಕಿದ್ದರೂ, ಅದನ್ನು ಕೆಲವು ಜಿಲ್ಲೆಗಳಲ್ಲಿ ತಿಂಗಳುಗಟ್ಟಲೆ ವಿಲೇವಾರಿ ಮಾಡದೆ ಸತಾಯಿಸುವ ಬಗ್ಗೆ ದೂರುಗಳು ಬರುತ್ತಿವೆ. ಅಂತಹ ವಿಳಂಬ ಪ್ರವೃತ್ತಿಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ಸರ್ಕಾರಿ ಶಾಲೆಗಳಿಗೆ ಎಲ್ಲಾ ಸವಲತ್ತುಗಳನ್ನು ನೀಡದರೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶ ಕಳಪೆಯಾಗಿರಲು ಕಾರಣವೇನು ಎಂಬ ಬಗ್ಗೆ ಆತ್ಮಾವಲೋಕನ ನಡೆಸಬೇಕು. ಜಿಲ್ಲೆಗಳಲ್ಲಿ ಫಲಿತಾಂಶ ಸುಧಾರಿಸುವುದು ಆಯಾ ಜಿಲ್ಲಾಧಿಕಾರಿ ಹಾಗೂ ಸಿಇಒಗಳ ಜವಾಬ್ದಾರಿ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಸುಧಾರಣೆಗೆ ಹೆಚ್ಚಿನ ಅನುದಾನ ಒದಗಿಸುತ್ತಿದ್ದರೂ ಫಲಿತಾಂಶದಲ್ಲಿ ಹಿಂದಿರಲು ಕಾರಣವೇನು, ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ, ಸಿಇಒಗಳು ನಿರಂತರ ಗಮನ ಹರಿಸಬೇಕು ಎಂದರು.

ರಾಜ್ಯದಲ್ಲಿ ಕಂದಾಯ ಗ್ರಾಮಗಳ ಘೋಷಣೆ ದಾಖಲೆ ಪ್ರಮಾಣದಲ್ಲಿ ಆಗಿದೆ. ಆದರೆ ಇನ್ನೂ ಬಾಕಿಯುಳಿದಿರುವ ಕಂದಾಯ ಗ್ರಾಮಗಳನ್ನು ಘೋಷಿಸುವ ಕಾರ್ಯ ಮುಂದಿನ 6 ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು. ಬಗರ್ ಹುಕುಂ ಅರ್ಜಿಗಳ ವಿಲೇವಾರಿ ತ್ವರಿತಗೊಳಿಸಬೇಕು. ಇದು ಯಾಕೆ ಕಡಿಮೆಯಾಗುತ್ತಿದೆ? ಪೋಡಿಮುಕ್ತ ಅಭಿಯಾನ ನಿರಂತರವಾಗಿ ಮುಂದುವರೆಸಬೇಕು. ಶೇ.63 ಪೋಡಿಮುಕ್ತ ಆಗಿದ್ದು, ಇದರಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಬೇಕು. ಶಾಲೆ, ಆಸ್ಪತ್ರೆ, ಅಂಗನವಾಡಿ, ಸ್ಮಶಾನ, ಕಬರಸ್ತಾನಗಳಿಗೆ ನಿವೇಶನ ಒದಗಿಸುವುದನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ರುದ್ರಭೂಮಿ, ಕಬರಸ್ಥಾನ ಗಳಿಗೆ ಜಮೀನು ಒದಗಿಸುವುದನ್ನು ವಿಳಂಬ ಮಾಡಬಾರದು. ನಿವೇಶನಗಳು ಅಗತ್ಯವಿರುವ ಇಲಾಖೆಗಳಿಗೆ ನಿವೇಶನಗಳನ್ನು ಆದ್ಯತೆ ಮೇರೆಗೆ ಒದಗಿಸಬೇಕು. 1858 ಗ್ರಾಮೀಣ ಅಂಗನವಾಡಿಗಳಿಗೆ 5187 ನಗರ ಅಂಗನವಾಡಿಗಳಿಗೆ ನಿವೇಶನ ಅಗತ್ಯವಿದೆ. 14 ಸರ್ಕಾರಿ ಕಾಲೇಜು ನಿವೇಶನ ಹಂಚಿಕೆಯಾಗಿಲ್ಲ ಎಂದು ಹೇಳಿದರು.

ಅರಣ್ಯ ಹಕ್ಕುಗಳಿಗಾಗಿ 295176 ಅರ್ಜಿಗಳು ಸಲ್ಲಿಕೆಯಾಗಿದ್ದು, 16700 ಮಾತ್ರ ಅರಣ್ಯ ಹಕ್ಕು ಪತ್ರ ಒದಗಿಸಲಾಗಿದೆ. ಇದನ್ನು ಸರಿಯಾಗಿ ವಿಲೇವಾರಿ ಮಾಡಬೇಕು. ಜಿಲ್ಲಾಧಿಕಾರಿ, ತಹಶೀಲ್ದಾರ್, ಎಸಿ ಕೋರ್ಟ್ ಗಳಲ್ಲಿ ಪ್ರಕರಣಗಳನ್ನು ಸರಿಯಾಗಿ ವಿಲೇವಾರಿ ಮಾಡಬೇಕು. ಮೆರಿಟ್ ಮೇಲೆ ತೀರ್ಮಾನ ಮಾಡಬೇಕು. ಪ್ರಕರಣಗಳನ್ನು ಮುಂದಕ್ಕೆ ಹಾಕುವ ಪ್ರವೃತ್ತಿ ಇರಬಾರದು ಎಂದರು.

Related Posts

Leave a Reply

Your email address will not be published. Required fields are marked *