ಕುವೈತ್ ಡಿಫೆನ್ಸ್ ಆಸ್ಪತ್ರೆಯಲ್ಲಿ ಉತ್ತಮ ಸಂಬಳದ ಉದ್ಯೋಗವಿದೆ ಎಂದು ನಂಬಿಸಿ 30 ಯುವಕರಿಂದ 52 ಲಕ್ಷ ರೂಪಾಯಿ ಪಡೆದು ತಂಡವೊಂದು ವಂಚಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಬಹಿರಂಗಗೊಂಡಿದೆ.
ಹೊನ್ನಾವರ ತಾಲೂಕಿನ ಹೇರಂಗಡಿಯ ಜಾಫರ್ ಸಾದಿಕ್ ಮೋಕ್ತೆಸರ್, ನೌಶಾದ್ ಕ್ವಾಜಾ ಹಾಗೂ ಹೈದ್ರಾಬಾದ್ ಮೂಲದ ಸುಜಾತ ಜಮ್ಮಿ ವಂಚಕರು. ಇವರು ನಿರುದ್ಯೋಗಿ ಯುವಕರನ್ನು ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದ್ದರು.
ಕಳೆದ ಡಿಸೆಂಬರ್ ನಲ್ಲಿ ಕರ್ನಾಟಕ ಹಾಗೂ ಕೇರಳ ರಾಜ್ಯದ ನಿರುದ್ಯೋಗಿ ಯುವಕರಿಗೆ ಕುವೈತ್ ಡಿಫೆನ್ಸ್ ಆಸ್ಪತ್ರೆಯಲ್ಲಿ ಉದ್ಯೋಗ ಖಾಲಿ ಇದೆ ಎಂದು ಜಾಲತಾಣದ ಪ್ರಕಟಣೆ ತೋರಿಸಿ ಆಮಿಷ ಒಡ್ಡಿತ್ತು. ಅಲ್ಲಿ ಕೆಲಸ ಮಾಡಿದರೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸಬಹುದು ಎಂದು ನಂಬಿಸಿ 30 ಜನರಿಂದ 52,01,185 ರೂಪಾಯಿ ಪಡೆದಿದ್ದರು.
ಮಂಗಳೂರು ಹಾಗೂ ಕಾಸರಗೋಡಿನಲ್ಲಿ ಉತ್ತಮ ಸಂಪರ್ಕ ಹೊಂದಿದ್ದ ನೌಶಾದ್ ಎಂಬಾತನ ಜೊತೆ ಜಾಫರ್ ನಿರಂತರ ಸಂಪರ್ಕದಲ್ಲಿದ್ದ. ಕುವೈತ್ನಲ್ಲಿ ಕೆಲಸ ಕೊಡಿಸುವ ಈತನ ಭರವಸೆ ನಂಬಿದ್ದ ನೌಶಾದ್, ತನಗೆ ಪರಿಚಯ ಇರುವ ಯುವಕರಿಗೆ ವಿಷಯ ತಿಳಿಸಿದ್ದ. ಉದ್ಯೋಗದ ಆಸೆಯಿಂದ ಜಾಫರ್ ಖಾತೆಗೆ ಹಣವನ್ನೂ ವರ್ಗಾವಣೆ ಮಾಡಲಾಗಿತ್ತು. ಹಣ ಹಾಕುವ ಸಂದರ್ಭ ನೌಶಾದ್ ಜೊತೆ ನಿರಂತರ ಸಂಪರ್ಕದಲ್ಲಿರುತ್ತಿದ್ದ ಜಾಫರ್ ಕೆಲವೊಮ್ಮೆ ಮೊಬೈಲ್ ಸ್ವಿಚ್ಆಫ್ ಮಾಡುತ್ತಿದ್ದ. ಅನುಮಾನಗೊಂಡು ನೌಶಾದ್ ಪ್ರಶ್ನಿಸಿದಾಗ, ನನ್ನ ಮೇಲೆ ನಿಮಗೆ ನಂಬಿಕೆ ಇಲ್ಲದೆ ಇರಬಹುದು. ಆದರೆ ಕುವೈತ್ನ ಡಿಫೆನ್ಸ್ ವೆಬ್ಸೈಟ್ನಲ್ಲಿ ಹಾಕಿರುವ ಪ್ರಕಟಣೆ ನಂಬಿ ಎಂದು ಉತ್ತರಿಸಿದ್ದ. ಆದರೆ ಹಣ ನೀಡಿ ವರ್ಷ ಕಳೆದರೂ ಉದ್ಯೋಗದ ಬಗ್ಗೆ ಸುಳಿವಿಲ್ಲದ ಕಾರಣ ಜಾಫರ್ನನ್ನು ನೌಶಾದ್ ಮತ್ತೆ ಪ್ರಶ್ನಿಸಿದ್ದ. ಬಳಿಕ ಮೊಬೈಲ್ ಸ್ವಿಚ್ಆಫ್ ಮಾಡಿರುವ ಆತ ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ನೌಶಾದ್ ಹೇಳಿದ್ದಾನೆ.
ಆರೋಪಿ ಜಾಫರ್ ಬಗ್ಗೆ ಮಾಹಿತಿ ಲಭಿಸಿದ್ದು, ಆತನ ಜೊತೆ ಇನ್ನಿಬ್ಬರು ಇರುವುದು ಗೊತ್ತಾಗಿದೆ. ಆರೋಪಿ ನೌಶಾದ್ ಕ್ವಾಜಾ ಹೊನ್ನಾವರದಲ್ಲಿಯೇ ಇದ್ದು, ಆತನನ್ನು ವಶಕ್ಕೆ ಪಡೆದು ತನಿಖೆ ಮಾಡುವಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.