ಕುಂದಾನಗರಿ ಬೆಳಗಾವಿ ಎಲ್ಲಾ ಕ್ಷೇತ್ರಗಳಲ್ಲಿ ಕ್ಷಿಪ್ರ ಗತಿಯಲ್ಲಿ ಬೆಳೆಯುತ್ತಿದ್ದು, ಬೆಂಗಳೂರಿನಂತೆ ಉನ್ನತ ಮಟ್ಟಕ್ಕೆ ಏರುವತ್ತ ದಾಪುಗಾಲು ಇಟ್ಟಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಅವರು ಹೇಳಿದ್ದಾರೆ.
ಬೆಳಗಾವಿಯಲ್ಲಿ ಬುಧವಾರ ನಗರಾಭಿವೃದ್ಧಿ ಇಲಾಖೆ ಮತ್ತು ಪೌರಾಡಳಿತ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಸ್ವಚ್ಛತಾ ಓಟ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ನಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿರಬೇಕೆಂಬುದು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಕನಸಾಗಿತ್ತು. ಅವರ ಕನಸನ್ನು ನನಸು ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ . ನಮ್ಮ ಸರ್ಕಾರ ನಗರ ಪ್ರದೇಶಗಳು ಸೇರಿದಂತೆ ಪ್ರತಿಯೊಂದು ಪ್ರದೇಶದ ಸ್ವಚ್ಛತೆಗೆ ಆದ್ಯತೆ ನೀಡಿದೆ. ನಗರಗಳಲ್ಲಿ ತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡಲಾಗುತ್ತಿದೆ ಎಂದರು.
ದೇಶದ ಸ್ವಚ್ಛ ನಗರಗಳ ಅಗ್ರ ಪಟ್ಟಿಯಲ್ಲಿ ನಮ್ಮ ರಾಜ್ಯದ ನಗರಗಳೂ ಸ್ಥಾನ ಪಡೆಯುತ್ತಿರುವುದು ಸಂತಸದ ವಿಚಾರ. ಮುಂಬರುವ ದಿನಗಳಲ್ಲಿ ಬೆಳಗಾವಿ ಸೇರಿ ಇನ್ನೂ ಹೆಚ್ಚಿನ ನಗರಗಳು ಈ ಪಟ್ಟಿಯಲ್ಲಿ ಸೇರುವಂತೆ ಮಾಡಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.
ನಮ್ಮೆಲ್ಲರ ನೆಚ್ಚಿನ ನಗರವಾಗಿರುವ ಬೆಳಗಾವಿ ಅಭಿವೃದ್ಧಿ ಪಥದತ್ತ ಸಾಗಿದ್ದು, ಬೆಂಗಳೂರಿನ ಮಾದರಿಯಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದುವ ಎಲ್ಲಾ ಲಕ್ಷಣಗಳಿವೆ ಎಂದು ಬೈರತಿ ಸುರೇಶ್ ಅಭಿಪ್ರಾಯಪಟ್ಟರು.


