ದಕ್ಷಿಣ ಭಾರತದ ಕುಂಭಮೇಳಕ್ಕೆ ಟಿ. ನರಸೀಪುರ ಸಜ್ಜುಗೊಂಡಿದ್ದು, ಇಂದಿನಿಂದ ಮೇಳ ಆರಂಭಗೊಳ್ಳುತ್ತಿದೆ. ಕಾವೇರಿ, ಕಪಿಲ ಹಾಗೂ ಸ್ಫಟಿಕ ಸರೋವರಗಳು ಸೇರುವ ಮೈಸೂರು ಜಿಲ್ಲೆಯ ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಇಂದಿನಿಂದ 3 ದಿನ 13ನೇ ಕುಂಭಮೇಳ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ ಕುಂಭಮೇಳದ ಉದ್ಘಾಟನೆ ಮಾಡಲಿದ್ದಾರೆ.
ಬೆಳಗ್ಗೆ 10 ಗಂಟೆಗೆ ಅಗಸ್ತೇಶ್ವರ ದೇವಸ್ಥಾನದಲ್ಲಿ ತ್ರಯೋದಶಿ, ಪುಷ್ಯ ಪ್ರಾತಃಕಾಲ 9 ಗಂಟೆಗೆ ಸನ್ನಿಧಿಯಲ್ಲಿ, ಅನುಜ್ಞೆ, ಪುಣ್ಯಾಹ, ಗಣಹೋಮ, ಪೂರ್ಣಾಹುತಿ, ಅಭಿಷೇಕ, ಮಹಾಮಂಗಳಾರತಿ ನೆರವೇರಿಸಲಾಗುತ್ತದೆ. ಸಂಜೆ 5 ಗಂಟೆಗೆ ಧರ್ಮಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಅಥಿತಿ ಗಣ್ಯರಿಂದ ಉದ್ಘಾಟನೆ ಮತ್ತು ಧ್ವಜಾರೋಹಣ ನೆರವೇರಲಿದೆ.
ಟಿ. ನರಸೀಪುರದ ತ್ರಿವೇಣಿ ಸಂಗಮದಲ್ಲಿ ಆರು ವರ್ಷಗಳ ನಂತರ ನಡೆಯುತ್ತಿರುವ ಕುಂಭಮೇಳದಲ್ಲಿ ಸಾವಿರಾರು ಭಕ್ತರುಪಾಲ್ಗೊಳ್ಳಲಿದ್ದಾರೆ. ಫೆ.12ರಂದು ಪವಿತ್ರ ಕುಂಭಸ್ನಾನ ನಡೆಯಲಿದೆ. ಅಂದು ಬೆಳಗ್ಗೆ 9ರಿಂದ 9:30ರೊಳಗೆ ಶುಭ ಮೀನ ಲಗ್ನ ಮತ್ತು ಮಧ್ಯಾಹ್ನ 12ರಿಂದ 1 ಗಂಟೆಯವರೆಗೆ ವೃಷಭ ಲಗ್ನದಲ್ಲಿ ಕುಂಭಮೇಳದ ಪುಣ್ಯಸ್ನಾನ ಮಾಡಲು ಮುಹೂರ್ತ ನಿಗದಿ ಮಾಡಲಾಗಿದೆ. ಸರ್ಕಾರ ಇದಕ್ಕಾಗಿ 6 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.
ಫೆ.11ರಂದು, ಚತುರ್ದಶಿ, ಆಶ್ಲೇಷ, ಪ್ರಾತಃ ಪುಣ್ಯಾಹ, ನವಗ್ರಹ ಹೋಮ, ಸುದರ್ಶನ ಹೋಮ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಧರ್ಮಸಭೆ, ಸಂಜೆ 4ಕ್ಕೆ ಮಹಾತ್ಮರ, ಸಂತರ, ಮಹಾ ಮಂಡಲೇಶ್ವರರ ತ್ರಿವೇಣಿ ಸಂಗಮ ಕ್ಷೇತ್ರ ಪ್ರವೇಶ, ಗುಂಜಾ ನರಸಿಂಹ ಸ್ವಾಮಿ ದೇವಸ್ಥಾನದಿಂದ ಟಿ.ನರಸೀಪುರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ಸಂಜೆ 6 ಗಂಟೆಗೆ ರುದ್ರ ಹೋಮ, ಪೂರ್ಣಾಹುತಿ, ರಾತ್ರಿ 7 ಗಂಟೆಗೆ ನಡೆಯುವ ಗಂಗಾ ಪೂಜೆಯ ವೇಳೆ ವಾರಾಣಸಿ ಗಂಗಾರತಿ ಮಾದರಿಯಲ್ಲಿ ದೀಪಾರತಿ ನಡೆಯಲಿದೆ.
ಮಠಾಧೀಶರು, ರಾಜಕೀಯ ಗಣ್ಯರು ಭಾಗವಹಿಸಲಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಕುಮಾರಸ್ವಾಮಿ, ಸಚಿವರಾದ ಕೆ.ವೆಂಕಟೇಶ್, ರಾಮಲಿಂಗಾರೆಡ್ಡಿ, ವಿಪಕ್ಷ ನಾಯಕ ಆರ್.ಅಶೋಕ್, ಸಂಸದ ಯದುವೀರ್ ಒಡೆಯರ್, ಸ್ಥಳೀಯ ಶಾಸಕರು ಕುಂಭಮೇಳದಲ್ಲಿ ಭಾಗಿಯಾಗಲಿದ್ದಾರೆ.