Menu

ಕುಮಾರಸ್ವಾಮಿ  ಬಿಡದಿ ಟೌನ್ ಶಿಪ್ ಯೋಜನೆ ಚರ್ಚೆಗೆ ಬರಲಿ: ಡಿಕೆ ಶಿವಕುಮಾರ್ 

ಬಿಡದಿ ಟೌನ್ ಶಿಪ್ ಯೋಜನೆ ಬಗ್ಗೆ ಕುಮಾರಸ್ವಾಮಿ ಜತೆ ಚರ್ಚೆಗೆ ಸಿದ್ಧನಿದ್ದೇನೆ. ಈ ವಿಚಾರವನ್ನು ಎಲ್ಲಾ ಮಾಧ್ಯಮಗಳು ಕುಮಾರಸ್ವಾಮಿ ಅವರಿಗೆ ತಿಳಿಸಿ. ಅವರು ಮುಖ್ಯಮಂತ್ರಿಯಾಗಿ ದ್ದಾಲೇ ಅವರ ಸವಾಲನ್ನು ಸ್ವೀಕಾರ ಮಾಡಿದ್ದೇನೆ. ಈಗಲೂ  ಬಹಳ ನಮ್ರತೆಯಿಂದ ಸವಾಲು ಸ್ವೀಕಾರ ಮಾಡುತ್ತೇನೆ, ಚರ್ಚೆಗೆ ಬರಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್  ಪ್ರತಿಸವಾಲು ಎಸೆದರು.

ಕನಕಪುರದ ದೊಡ್ಡ ಆಲಹಳ್ಳಿಯಲ್ಲಿ ನಿರ್ಮಾಣವಾಗಿರುವ ನೂತನ ರಾಮಮಂದಿರದ ಉದ್ಘಾಟನಾ ಸಮಾರಂಭದ ಬಳಿಕ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಬಿಡದಿ ಟೌನ್ ಶಿಪ್ ಯೋಜನೆ ವಿಚಾರವಾಗಿ ಡಿ.ಕೆ. ಸಹೋದರರು ನನ್ನ ಜೊತೆ ಚರ್ಚೆ ಬರಲಿ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಗಮನ ಸೆಳೆದಾಗ, ಕುಮಾರಸ್ವಾಮಿ ಅವರು ಯಾವತ್ತು ಚರ್ಚೆಗೆ ಸಿದ್ಧ ಎಂದು ಹೇಳುವರೋ ಅಂದು ಚರ್ಚೆ ಮಾಡಲು ನಾನು ತಯಾರಿದ್ದೇನೆ. ಮಾಧ್ಯಮಗಳೇ ದಿನಾಂಕ ನಿಗದಿ ಮಾಡಲಿ. ರಾಮಮಂದಿರದ ಮುಂದೆ ಪ್ರಶ್ನೆ ಕೇಳಿದ್ದೀರಿ. ನಾನು ಇದೇ ರಾಮ ಮಂದಿರದಲ್ಲಿ ಕುಳಿತು, ನುಡಿದಂತೆ ನಡೆಯುತ್ತೇನೆ. ಪೂರ್ವನಿಯೋಜಿತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಈ ಚರ್ಚೆಯ ದಿನಾಂಕದ ಬಗ್ಗೆ ಮೂರು ದಿನ ಮುಂಚಿತವಾಗಿ ತಿಳಿಸಿ, ನಾನು ಚರ್ಚೆಗೆ ಬರುತ್ತೇನೆ ಎಂದರು.

ಬಿಡದಿ ಯೋಜನೆ ಅನುಷ್ಠಾನಕ್ಕೆ ಬಿಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿರುವ ಬಗ್ಗೆ ಕೇಳಿದಾಗ,”ಅವರು ರಾಜಕಾರಣ ಮಾಡಬೇಕು ಮಾಡುತ್ತಿದ್ದಾರೆ. ಯೋಜನೆಯನ್ನು ನಾನು ಮಾಡಿದ್ದಲ್ಲ, ಅವರೇ ಮಾಡಿದ್ದು. ರೈತರಿಗೆ 800 ಅಡಿ ಭೂಮಿಯನ್ನು ನೀಡುತ್ತೇನೆ ಎಂದು ಭರವಸೆ ಕೊಟ್ಟಿದ್ದೆ ಎಂದು ಅವರೇ ಹೇಳಿದ್ದಾರೆ. ಅವರು ಹೇಳಿದ್ದನ್ನು ನಾವು ಈಗ ಮುಂದುವರಿಸುತ್ತಿದ್ದೇವೆ ಅಷ್ಟೇ ಎಂದು ಉತ್ತರಿಸಿದರು.

ನಾನು ಹಾಗೂ ಕುಮಾರಸ್ವಾಮಿ ಶಾಶ್ವತವಲ್ಲ.  ನಾವು ತೆಗೆದುಕೊಂಡ ತೀರ್ಮಾನ ಶಾಶ್ವತವಾಗಿ ಉಳಿಯುತ್ತದೆ. ನಾನು ಹಾಗೂ ಅವರು ಇಲ್ಲದೇ ಹೋದರೂ ಯೋಜನೆಯಿಂದ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ. ಮುಂದಿನ ಜನಾಂಗ ನಮ್ಮನ್ನು ನೆನಪಿಸಿಕೊಳ್ಳಲಿದೆ. ನನ್ನ‌ ಕ್ಷೇತ್ರದ ರಸ್ತೆಗಳ ಅಗಲೀಕರಣ ಮಾಡಲಾಗಿದೆ. ಇದಕ್ಕೆ ಎಷ್ಟು ಪರಿಹಾರ ದೊರಕಿದೆ ಎಂದು ದೊಡ್ಡ ಆಲಹಳ್ಳಿ, ಸಾತನೂರು, ಕನಕಪುರದವರನ್ನು ಕೇಳಿ. ದೊಡ್ಡ ಆಲಹಳ್ಳಿಯಲ್ಲಿ ಅಡಿಗೆ 1,500 ರೂಪಾಯಿ ಪರಿಹಾರ ಕೊಡಿಸಿದ್ದೇನೆ. ನಗರ ಭಾಗದ ಸೌಲಭ್ಯಗಳನ್ನು ಇಲ್ಲಿ ಮಾಡಿಕೊಡ ಲಾಗಿದೆ. ನಾನು ಮಾಧ್ಯಮಗಳಿಗೆ ಉತ್ತರಿಸುವ ಬದಲು ನೇರವಾಗಿ ಕುಮಾರಸ್ವಾಮಿ ಅವರಿಗೇ ಉತ್ತರ ನೀಡುತ್ತೇನೆ ಎಂದರು.

ರಾಜ್ಯ ರಾಜಕಾರಣಕ್ಕೆ ಬನ್ನಿ ಎಂದು ಜನ ಅಪೇಕ್ಷಿಸುತ್ತಿದ್ದಾರೆ ಎನ್ನುವ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, ಬರುವವರನ್ನು ಬೇಡ ಎನ್ನಲು ಆಗುತ್ತದೆಯೇ. ಈಗಲೂ ರಾಜಕಾರಣದಲ್ಲಿ ಇದ್ದಾರೆ ಅಲ್ಲವೇ. ರಾಷ್ಟ್ರ ಏನು, ರಾಜ್ಯ ಏನು ಎಂದು ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.

500 ಕ್ಕೂ ಹೆಚ್ಚು ದೇವಾಲಯಗಳ ನಿರ್ಮಾಣ

ನಮ್ಮ ಕ್ಷೇತ್ರದಲ್ಲಿ  500ಕ್ಕೂ ಹೆಚ್ಚು ದೇವಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ದೊಡ್ಡ ಆಲಹಳ್ಳಿಯಲ್ಲಿ ಏಳೆಂಟು ದೇವಾಲಯಗಳನ್ನು ನಿರ್ಮಿಸಲಾಗಿದೆ. ಪಟ್ಟಲದಮ್ಮ ದೇವಸ್ಥಾನವನ್ನು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ‌. ನಮ್ಮ ತಂದೆಯವರು ಅವರ ಕಾಲದಲ್ಲಿ ಶಂಕರೇಶ್ವರ ದೇವಾಲಯ ಕಟ್ಟಿಸಿದರು. ಈ ಮೊದಲಿದ್ದ ರಾಮ ಮಂದಿರದಲ್ಲಿ ಭಜನೆ ಮಾಡಲಾಗು ತ್ತಿತ್ತು. ಎಲ್ಲರ ಸಹಕಾರದಿಂದ ಇಡೀ ಕ್ಷೇತ್ರದಲ್ಲಿ ಉತ್ತಮ ದೇವಾಲಯಗಳ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಎಲ್ಲಾ ಧರ್ಮದವರಿಗೂ ನಾವು ಸಹಾಯ ಮಾಡುತ್ತಿದ್ದೇವೆ. ಮುಸ್ಲಿಮರಿಗೆ ಮಸೀದಿ, ಕ್ರೈಸ್ತರ ಚರ್ಚ್ ನಿರ್ಮಾಣಕ್ಕೆ ಸಹಾಯ ಮಾಡಿದ್ದೇವೆ. ಜೊತೆಗೆ ಎಲ್ಲಾ ಸಮುದಾಯದವರ ಅವಶ್ಯಕತೆ ಸ್ಪಂದಿಸಲಾಗಿದೆ. ರಾಮ ಮಂದಿರವನ್ನು ಒಂದು ಪಂಗಡ ನೋಡಿಕೊಳ್ಳುತ್ತದೆ. ತಿಗಳ ಸಮುದಾಯದವರು ಇನ್ನೊಂದು ದೇವಸ್ಥಾ‌ನ ನೋಡಿಕೊಳ್ಳುವರು. ಊರಿನ ಎಲ್ಲರೂ ಸೇರಿ ಊರಿನ ದೇವಸ್ಥಾನ ನೋಡಿಕೊಳ್ಳುವರು ಎಂದು ಡಿಸಿಎಂ ಹೇಳಿದರು.

ರಾಮಮಂದಿರ ಶಕ್ತಿ ನೀಡಲಿ ಎನ್ನುವ ಮನವಿಯ ಬಗ್ಗೆ ಕೇಳಿದಾಗ, “ನಾನು ಜೈಲಿಗೆ ಹೋದಾಗ ನನ್ನ ಕ್ಷೇತ್ರದ ಜನ ಬರಿಗಾಲಿನಲ್ಲಿ ಕಾಲಿಗೆ ಚಪ್ಪಲಿ ಇಲ್ಲದೇ ದೆಹಲಿಯವರೆಗೆ ಬಂದಿದ್ದಾರೆ. ನನಗೆ ಜಾಮೀನು ನೀಡಬಾರದು ಎಂದಿತ್ತು. ಆದರೆ ಕ್ಷೇತ್ರದ ಜನರ ಪ್ರಯತ್ನ ಹಾಗೂ ಪ್ರಾರ್ಥನೆಯಿಂದಾಗಿಯೇ 48 ದಿನಗಳಲ್ಲಿ ಜೈಲಿನಿಂದ ಬಿಡುಗಡೆಯಾದೆ‌. ನನಗೆ ನನ್ನ ಕ್ಷೇತ್ರದ ಜನರೇ ಆಸ್ತಿ. ಈ ಊರಿನಲ್ಲಿದ್ದ ಅನೇಕ ಆಸ್ತಿಯನ್ನು ಜನರಿಗೆ ಬಿಟ್ಟಿದ್ದೇನೆ. ತಾತ, ಮುತ್ತಾತರ ಕಾಲದ ಆಸ್ತಿಗಳನ್ನು ಶಾಲೆ, ಹಾಸ್ಟಲ್ ಗಾಗಿ ದಾನ ಮಾಡಿದ್ದೇನೆ. ಮಾರಾಟ ಮಾಡಲು ಹೋದರೆ ಯಾರಾದರೂ ತೆಗೆದುಕೊಳ್ಳುವರೇ,  ಕ್ಷೇತ್ರದ ಜನ ನಮ್ಮನ್ನು ಬೆಳೆಸಿದ್ದಾರೆ, ಸಾಕಿದ್ದಾರೆ‌ ಅವರುಗಳೇ ಅವುಗಳನ್ನು ಉಪಯೋಗಿಸಿಕೊಳ್ಳಲಿ ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *