Menu

ಸುಳ್ಳಿಗೆ ಮತ್ತೊಂದು ಹೆಸರು ಕುಮಾರಸ್ವಾಮಿ: ಡಿಕೆ ಶಿವಕುಮಾರ್ ಕಿಡಿ

dk shivakumar

ಸುಳ್ಳಿಗೆ ಮತ್ತೊಂದು ಹೆಸರು ಕುಮಾರಸ್ವಾಮಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್  ಕಿಡಿಕಾರಿದ್ದಾರೆ. ವಿಜಯ ಪುರ ಜಿಲ್ಲೆಯ ಕೊಲ್ಹಾರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಚಿನ್ನ ಕಳ್ಳಸಾಗಣೆಯ ರನ್ಯಾ ರಾವ್ ಪ್ರಕರಣದ ಮಾಹಿತಿಯನ್ನು ನೀವೇ ನೀಡಿದ್ದೀರಿ ಎನ್ನುವ ಕುಮಾರಸ್ವಾಮಿ ಆರೋಪದ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಒಬ್ಬ ಮೆಂಟಲ್. ಅವರ ಮಾನಸಿಕ ಆರೋಗ್ಯ ಹದಗೆಟ್ಟಿರ ಬೇಕು. ತಲೆ ಕೆಟ್ಟು ಹೋಗಿದೆ” ಎಂದು ಜರಿದರು.

ರಾಮನಗರದ ನಾಮಫಲಕಕ್ಕೆ ಚಿನ್ನದ ತಗಡು ಹೊಡೆಯಲಾಗುತ್ತದೆಯೇ ಎನ್ನುವ ಕುಮಾರಸ್ವಾಮಿ ಅವರ ಸರಣಿ ಟೀಕೆಗಳ ಕುರಿತು ಕೇಳಿದಾಗ, “ಕುಮಾರಸ್ವಾಮಿ ರಾಜಕೀಯ ಮಾಡಲು ರಾಮನಗರಕ್ಕೆ ಏಕೆ ಬಂದರು? ಹಾಸನದಲ್ಲಿಯೇ ಏಕೆ ರಾಜಕೀಯ ಮಾಡಲಿಲ್ಲ. ಮೊದಲು ಎಚ್.ಡಿ.ಕುಮಾರಸ್ವಾಮಿ ಎನ್ನುವ ಹೆಸರಿನಲ್ಲಿರುವ ಅವರ ಊರಿನ ಹೆಸರು ಹಾಗೂ ತಂದೆಯ ಹೆಸರನ್ನು ಏಕೆ ಇನ್ನು ಇಟ್ಟುಕೊಂಡಿದ್ದಾರೆ. ಮೊದಲು ಅದನ್ನು ಬದಲಾವಣೆ ಮಾಡಿಕೊಳ್ಳಲಿ” ಎಂದು ತಿರುಗೇಟು ನೀಡಿದರು.

“ನಾವು ಬೆಂಗಳೂರು ಜಿಲ್ಲೆಯವರು. ಒಂದೊಂದು ಊರಿನ ಹೆಸರಿಗೆ ತನ್ನದೇ ಆದ ಇತಿಹಾಸವಿರುತ್ತದೆ. ಮದ್ರಾಸ್ ಅನ್ನು ಮತ್ತೆ ಏಕೆ ಚೆನ್ನೈ ಎಂದು ಕರೆದರು‌. ಗುಲ್ಬರ್ಗಾವನ್ನು ಕಲಬುರ್ಗಿ ಎಂದು ಮರುನಾಮಕರಣ ಮಾಡಲಾಗಿದೆ. ನಮಗೂ ನಮ್ಮದೇ ಆದಂತಹ ಆಸೆ ಇರುತ್ತದೆ. ಅವರಿಗೆ ಏನು ತೊಂದರೆಯಾಗಿದೆ” ಎಂದು ಪ್ರಶ್ನಿಸಿದರು.

ರಿಯಲ್ ಎಸ್ಟೇಟ್ ಗಾಗಿ ಹೆಸರು ಬದಲಾವಣೆ ಮಾಡಲಾಗಿದೆ ಎನ್ನುವ ಆರೋಪದ ಬಗ್ಗೆ ಕೇಳಿದಾಗ, “ಹೌದು, ನಮ್ಮ ಹಳ್ಳಿಯ ಜನ ಉದ್ದಾರವಾಗಬೇಕು. ಎಲ್ಲರಿಗೂ ಉದ್ಯೋಗ ಸಿಗಬೇಕು. ನಮ್ಮ ಜನರ ಆಸ್ತಿ ಮೌಲ್ಯ ಜಾಸ್ತಿಯಾಗಬೇಕು. ಪ್ರತಿಯೊಬ್ಬ ರೈತನಿಗೂ ಒಳ್ಳೆಯದಾಗಬೇಕು. ಹೊರಗಡೆ ದೇಶದಿಂದ ಜನರು ಬಂದು ಬಂಡವಾಳ ಹೂಡಿಕೆ ಮಾಡಬೇಕು. ಅಭಿವೃದ್ಧಿ ಆಗಬೇಕು ಎಂಬುದು ನಮ್ಮ ಆಸೆ” ಎಂದರು.

“ಸಂಸತ್ ಕ್ಷೇತ್ರವನ್ನು ಮೊದಲು ಕನಕಪುರ ಎಂದು ಕರೆಯಲಾಗುತ್ತಿತ್ತು. ಅದನ್ನು ಬೆಂಗಳೂರು ಗ್ರಾಮಾಂತರ ಎಂದು ಆನಂತರ ಏಕೆ ಮಾಡಿದರು? ರಾಮನಗರದ ಹೆಸರು ಬದಲಾವಣೆ ಮಾಡುತ್ತಿಲ್ಲ. ಜತೆಗೆ ರಾಮ ನಗರವೇ ಜಿಲ್ಲಾ ಕೇಂದ್ರವಾಗಿರುತ್ತದೆ. ನಾವು ಕೇವಲ ಜಿಲ್ಲೆಯ ಹೆಸರನ್ನು ಬದಲಾವಣೆ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

ನ್ಯಾಷನಲ್ ಹೆರಾಲ್ಡ್ ಗೆ ರಾಜಾರೋಷವಾಗಿ 25 ಲಕ್ಷ‌ ಕೊಟ್ಟಿದ್ದೇವೆ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನಿಮ್ಮ ಹೆಸರು ಡಿ.ಕೆ.ಸುರೇಶ್ ಅವರ ಹಾಗೂ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರ ಹೆಸರು ಇರುವುದರ ಬಗ್ಗೆ ಕೇಳಿದಾಗ, “ನಮ್ಮ ಪಕ್ಷ ನಡೆಸುವಂತಹ ಪತ್ರಿಕೆ‌. ಅದಕ್ಕೆ ನಾನು ಹಾಗೂ ಸುರೇಶ್ 25 ಲಕ್ಷ ದುಡ್ಡು ಕೊಟ್ಟಿದ್ದೇವೆ. ‌ನಮ್ಮ ಟ್ರಸ್ಟ್‌ ನಿಂದಲೂ ದೇಣಿಗೆ ನೀಡಿದ್ದೇವೆ” ಎಂದರು.

ದೇಣಿಗೆ ನೀಡಿರುವುದರಿಂದ ನಿಮಗೆ ತೊಂದರೆಯಾಗುತ್ತದೆಯೇ ಎಂದಾಗ, “ನಾವು ದುಡಿದಂತಹ ಆಸ್ತಿಯಿಂದ ರಾಜರೋಷವಾಗಿ ಹಣ ನೀಡಿದ್ದೇವೆ. ನಾವು ಕದ್ದುಮುಚ್ಚಿ ಹಣ ನೀಡಿಲ್ಲ” ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *