ಕುಮಾರಸ್ವಾಮಿ ಬರೀ ರಾಜಕೀಯ ಮಾಡುತ್ತಾರೆ. ಕುಮಾರಸ್ವಾಮಿ ಅವರ ಕಾಲದಲ್ಲಿ ಏನು ಮಾಡಿದ್ದಾರೆ? ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನಿಸಿದರು.
ಬೆಂಗಳೂರಿನ ಸದಾಶಿವನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೃಷ್ಣಾ ಅವರ ಕಾಲದಲ್ಲಿ ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಂಗಳೂರು ಪಾಲಿಕೆ ವ್ಯಾಪ್ತಿ ಹೆಬ್ಬಾಳ, ಆರ್ ಆರ್ ನಗರ ಮುಖ್ಯದ್ವಾರ, ಬನಶಂಕರಿ, ಕೆ.ಆರ್ ಪುರಂದವರೆಗೂ ಮಾತ್ರ ಇತ್ತು. ಅವರ ಸರ್ಕಾರ ಬಂದ ನಂತರ ಇದನ್ನು ವಿಸ್ತರಣೆ ಮಾಡಿದ್ದು ಯಾಕೆ? ಬೆಂಗಳೂರು ವಿಸ್ತರಣೆಯಾಗುತ್ತಿದೆ. ಎಲೆಕ್ಟಾನಿಕ್ ಸಿಟಿಯೋ ಪ್ರತ್ಯೇಕ ಬೆಂಗಳೂರು ಆಗಿದೆ. ಅಲ್ಲಿನ ಆದಾಯ, ಯೋಜನೆ ಏನಾಗಬೇಕು? ಎಂದರು.
ಬೆಂಗಳೂರು ಎಂದರೆ, ಸದಾಶಿವನಗರ, ವಿಧಾನಸೌಧ ಸುತ್ತಮುತ್ತಲಿನ ಪ್ರದೇಶ ಮಾತ್ರವಲ್ಲ. 2023 ಮಾರ್ಚ್ ತಿಂಗಳಲ್ಲಿ ಬಿಜೆಪಿ ಸರ್ಕಾರ ಒಂದು ನೋಟಿಫಿಕೇಶನ್ ಮಾಡಿ ವೈಟ್ ಫೀಲ್ಡ್ ಭಾಗದಲ್ಲಿ 90 ಮೀಟರ್ ರಸ್ತೆ (ಐಆರ್ ಆರ್) ಮಾಡಬೇಕು ಎಂದು ಹೇಳಿದ್ದಾರೆ. ಬೆಂಗಳೂರಿನ ಒಳಗೆ 19 ಕಿ.ಮೀ ಉದ್ದದ ರಸ್ತೆ ಮಾಡಲು ಭೂಸ್ವಾಧಿನಕ್ಕಾಗಿಯೇ 25 ಸಾವಿರ ಕೋಟಿ ಅಗತ್ಯವಿದೆ. ಇದನ್ನು ಯಾರಿಗಾಗಿ ಮಾಡಿದ್ದಾರೋ ಗೊತ್ತಿಲ್ಲ. ಈ ಭಾಗದಲ್ಲಿ ದೊಡ್ಡ ದೊಡ್ಡ ಕಟ್ಟಡ ಕಟ್ಟಲಾಗಿದೆ. ಇದನ್ನು ನೋಡದೇ ಅವರು ನೋಟಿಫಿಕೇಶನ್ ಹೊರಡಿಸಿದ್ದರು. ಟೀಕೆ ಮಾಡುವವರು ಮಾಡಲಿ. ನಾನು ಪ್ರಗತಿ ಮಾರ್ಗದಲ್ಲಿ ಮುನ್ನಡೆಯಲು ಬಯಸುತ್ತೇವೆ” ಎಂದು ತಿಳಿಸಿದರು.
ನಮ್ಮ ಊರಿನ ಹೆಸರು ಹೇಗೆ ಇಟ್ಟುಕೊಳ್ಳಬೇಕು ಎಂದು ಗೊತ್ತಿದೆ
ಕೆಂಪೇಗೌಡರ ಹೆಸರು ಬಳಸಿಕೊಂಡು ಈಗ ಹಾಳು ಮಾಡುತ್ತಿದ್ದಾರೆ ಎಂಬ ಕುಮಾರಸ್ವಾಮಿ ಅವರ ಟೀಕೆ ಬಗ್ಗೆ ಕೇಳಿದಾಗ, “ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ಎಲ್ಲಾ ಸಮಿತಿ ಶಿಫಾರಸ್ಸು ಮಾಡಿವೆ. ಆದರೆ ಇವರು ಕೇಂದ್ರ ಗೃಹ ಸಚಿವರ ಬಳಿ ಹೋಗಿ ಕಾನೂನು ಸುವ್ಯವಸ್ಥೆ ಹದಗೆಡಲಿದೆ ಎಂದು ಹೇಳಿದ್ದಾರೆ. ಇದಕ್ಕಾಗಿ ಕೇಂದ್ರ ಗೃಹ ಸಚಿವರು ಇದು ಕಾರ್ಯಸಾಧುವಲ್ಲ ಎಂದು ಬರೆದಿದ್ದಾರೆ. ಈ ಜಿಲ್ಲೆಯನ್ನು ಹೇಗೆ ಬೆಂಗಳೂರು ದಕ್ಷಿಣ ಎಂದು ಮಾಡಬೇಕು, ನಮ್ಮ ಊರಿನ ಹೆಸರನ್ನು ನಾವು ಹೇಗೆ ಇಟ್ಟುಕೊಳ್ಳಬೇಕು ಎಂದು ನಮಗೆ ಗೊತ್ತಿದೆ. ಈಗ ಆ ವಿಚಾರವಾಗಿ ಮಾತನಾಡುವುದಿಲ್ಲ. ಕುಮಾರಸ್ವಾಮಿ ಮಾತಿಗೆ ಕಿಮ್ಮತ್ತು ನೀಡುವ ಅಗತ್ಯವಿಲ್ಲ. ಅವರು ಮಾತನಾಡುತ್ತಾರೆ ಹೋಗುತ್ತಾರೆ. ಅವರ ವಿಚಾರ ಏನೇ ಇದ್ದರೂ ಅಧಿವೇಶನದಲ್ಲಿ ಅವರ ಶಾಸಕರ ಮೂಲಕ ಚರ್ಚೆ ಮಾಡಲಿ” ಎಂದು ತಿಳಿಸಿದರು.
ಬೆಂಗಳೂರು ಅಭಿವೃದ್ಧಿ ಮಾಡಲಾಗದಿದ್ದರೆ ಶಿವಕುಮಾರ್ ಅವರು ರಾಜೀನಾಮೆ ಕೊಟ್ಟು ಹೋಗಲಿ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ನನ್ನ ರಾಜೀನಾಮೆಗಾಗಿ ಕಾಯುತ್ತಿರಲಿ” ಎಂದು ತಿಳಿಸಿದರು.
ಮೋಹನ್ ದಾಸ್ ಪೈ ರಾಜಕೀಯ ಪ್ರವೇಶಿಸಲಿ:
ಮೋಹನ್ ದಾಸ್ ಪೈ ಅವರು ನಿರಂತರವಾಗಿ ನಿಮ್ಮ ಹಾಗೂ ಬಿಬಿಎಂಪಿ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ಮೋಹನ್ ದಾಸ್ ಪೈ ಹಿರಿಯರು, ಅವರ ಬಗ್ಗೆ ನಮಗೆ ಗೌರವವಿದೆ. ಅವರು ಕೂಡ ರಾಜಕೀಯಕ್ಕೆ ಬರಲಿ. ರಾಜಕೀಯದ ಪ್ರಕ್ರಿಯೆಯಲ್ಲಿ ಭಾಗಿಯಾಗಲಿ, ಚುನಾವಣೆಯಲ್ಲಿ ಸ್ಪರ್ಧಿಸಿ ಸಚಿವರಾಗಲಿ, ಸಂಸದರಾಗಲಿ. ಆಗ ಅವರಿಗೆ ಇಲ್ಲಿನ ಕಷ್ಟಗಲು ಅರ್ಥವಾಗುತ್ತದೆ. ಸಲಹೆ ನೀಡುವವರು ನಮ್ಮಲ್ಲಿ ಬಹಳಷ್ಟು ಜನರಿದ್ದಾರೆ. ಅವರು ಬೆಂಗಳೂರಿಗೆ ಕೊಡುಗೆ ನೀಡಿದ್ದಾರೆ. ಚುನಾವಣೆ ರಾಜಕೀಯಕ್ಕೂ ಬರಲಿ, ಆಗ ಅವರಿಗೆ ವ್ಯವಸ್ಥೆ ಅರಿವಾಗುತ್ತದೆ. ಈಗ ಪಾಲಿಕೆಗೆ 50-60 ಸಾವಿರ ಕೋಟಿಯಷ್ಟು ಬ್ಯಾಂಕ್ ಗ್ಯಾರಂಟಿ ನೀಡಲಾಗಿದೆ. ಈ ಹಿಂದೆ ಯಾವಾಗ ಕೊಟ್ಟಿದ್ದರು? ಒಂದು ಒಳ್ಳೆಯ ಕೆಲಸ ಮಾಡುವಾಗ ವಿರೋಧ, ಟೀಕೆ ಇದ್ದೇ ಇರುತ್ತದೆ. ಇನ್ನು ಕಸದ ವಿಚಾರವಾಗಿ ಕೋರ್ಟ್ ನಲ್ಲಿ ನಮಗೆ ಅವಕಾಶವನ್ನೇ ಕೊಟ್ಟಿಲ್ಲ. ಆದರೂ ಶಿವಕುಮಾರ್ 15 ಸಾವಿರ ಕೋಟಿ ಹೊಡೆದಿದ್ದಾರೆ ಎಂದು ಕುಮಾರಸ್ವಾಮಿ ಸುಳ್ಳು ಆರೋಪ ಮಾಡುತ್ತಾರೆ. ನಾನು ಅದನ್ನೆಲ್ಲಾ ನೋಡಿಕೊಂಡು ಸುಮ್ಮನೆ ಇರಲಾ? ಇಲ್ಲಿ ಯಾರು ಕಿಕ್ ಬ್ಯಾಕ್ ಕೊಟ್ಟಿದ್ದಾರೆ ಎಂಬುದು ಗೊತ್ತಾಗಬೇಕಲ್ಲವೇ? ಕೊಡಲಿ ಸಿಬಿಐಗೆ. ಕುಮಾರಸ್ವಾಮಿ ಸಂಸದರಾಗುವ ಮುನ್ನ ಕಸ ಹೊಡೆದು ಅಭ್ಯಾಸವಿದೆ. ಹಿಂದೆ ಕಸದ ಲಾರಿ ಇಟ್ಟುಕೊಂಡಿದ್ದರು” ಎಂದು ಕಿಡಿಕಾರಿದರು.