10 ವರ್ಷಗಳ ಬಳಿಕ ರಾಜ್ಯದಲ್ಲಿ ಬಸ್ ಪ್ರಯಾಣದರವನ್ನು ರಾಜ್ಯ ಸರ್ಕಾರ ಹೆಚ್ಚಳ ಮಾಡಿದ್ದು ಜ.5 ರ ಭಾನುವಾರದಿಂದಲೇ ಹೆಚ್ಚಳವಾಗಿರುವ ಶೇ 15 ರಷ್ಟು ಟಿಕೆಟ್ ದರವು ಜಾರಿಗೆ ಬರಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾರಿಗೆ ಬಸ್ ಪ್ರಯಾಣದರ ಶೇ 15 ರಷ್ಟು ಹೆಚ್ಚಳಕ್ಕೆ ತೀರ್ಮಾನಿಸಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು ಸೇರಿ ನಾಲ್ಕು ನಿಗಮಗಳ ಪ್ರಯಾಣ ದರವನ್ನು ಶೇ.15ರಷ್ಟು ದರ ಪರಿಷ್ಕರಣೆ ಮಾಡಲು ನಿರ್ಧರಿಸಲಾಗಿದೆ.
ಎಲ್ಲಾ ಶ್ರೇಣಿಯ ಬಸ್ಗಳಿಗೆ 15%ರಷ್ಟು ದರ ಪರಿಷ್ಕರಣೆ ಆಗಲಿದೆ. ಈ ಹಿಂದೆ 2015ರಲ್ಲಿ ಬಸ್ ಪ್ರಯಾಣದರ ದರ ಪರಿಷ್ಕರಣೆಯಾಗಿತ್ತು. ನಾಲ್ಕು ರಸ್ತೆ ಸಾರಿಗೆ ನಿಗಮಗಳ ಡೀಸೆಲ್ ವೆಚ್ಚ 2015ರಲ್ಲಿ ನಿತ್ಯ 9.14 ಕೋಟಿ ರೂ. ಇತ್ತು, ಈಗ ಅದು 13.21 ಕೋಟಿ ರೂ.ಗೆ ಹೆಚ್ಚಳವಾಗಿದೆ. ಸಿಬ್ಬಂದಿ ವೆಚ್ಚವೂ ನಿತ್ಯ 12.85 ಕೋಟಿಯಿಂದ ಪ್ರಸ್ತುತ 18.36 ಕೋಟಿ ರೂ.ಗೆ ಏರಿಕೆ ಆಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.
ರಸ್ತೆ ಸಾರಿಗೆ ನಿಗಮಗಳಿಗೆ ನಿತ್ಯ 9.56 ಕೋಟಿ ಹೆಚ್ಚುವರಿ ಹೊರೆ ಬೀಳುತ್ತಿದೆ. ಪರಿಷ್ಕರಣೆ ಮಾಡುವುದರಿಂದ ಪ್ರತಿ ತಿಂಗಳು 74.85 ಕೋಟಿ ರೂ. ಆದಾಯ ಹೆಚ್ಚಾಗಲಿದೆ. ಶಕ್ತಿ ಯೋಜನೆಗೆ 5,015 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಶಕ್ತಿ ಯೋಜನೆಗೆ ಪ್ರತಿ ತಿಂಗಳು 417.92 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೆಚ್.ಕೆ.ಪಾಟೀಲ್ ಹೇಳಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಡೀಸೆಲ್ ದರ ಹೆಚ್ಚಳದಿಂದ ಖರ್ಚು ವೆಚ್ಚವೂ ಹೆಚ್ಚಾಗಿದೆ. ಸಿಬ್ಬಂದಿ ವೆಚ್ಚ ಕೂಡ ಶೇ.18ರಷ್ಟು ಏರಿಕೆಯಾಗಿದೆ. ಕಳೆದ 5-10 ವರ್ಷಗಳಿಂದ ಟಿಕೆಟ್ ದರ ಹೆಚ್ಚಿಸಿಲ್ಲ. ಸಂಬಳ ಮತ್ತು ಸಾರಿಗೆ ಸಂಸ್ಥೆ ಉಳಿಯಬೇಕಾಗಿರುವುದರಿಂದ ಪ್ರಯಾಣ ದರ ಪರಿಷ್ಕರಣೆ ಅನಿರ್ವಾಯ ಎಂದು ಹೇಳಿದರು.
ಸಚಿವ ಸಂಪುಟ ಸಭೆಯಲ್ಲಿ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಭವಿಷ್ಯ ನಿಧಿ ಬಾಕಿ ಹಾಗೂ ಇಂಧನ ಬಾಕಿ ಹೊಣೆಗಾರಿಕೆ ಪಾವತಿಸಲು ಒಟ್ಟು 2000 ಕೋಟಿ ರೂ.ಗಳನ್ನು ಸರ್ಕಾರದ ಖಾತರಿ/ಗ್ಯಾರಂಟಿಯೊಂದಿಗೆ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಕಳೆದ ಡಿ. 31 ರಂದು ಹೊರಡಿಸಿರುವ ಸರ್ಕಾರಿ ಆದೇಶಕ್ಕೆ ಅನುಮೋದನೆ ನೀಡಲಾಯಿತು.