Thursday, September 11, 2025
Menu

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3: 5.94 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ

ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-2 ರ ತೀರ್ಪಿನ ಅನ್ವಯ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಅನುಷ್ಠಾನಕ್ಕಾಗಿ 130 ಟಿಎಂಸಿ ನೀರಿನ ಹಂಚಿಕೆ ಮಾಡಿದ್ದು, ಇದರಿಂದ 5.94 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಾಧ್ಯವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ  ವಿಧಾನಸೌಧ ಸಭಾಂಗಣದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ -3 ರ ಅನುಷ್ಠಾನ ಕುರಿತಾದ ಸಭೆ ನಡೆದಿದ್ದು, ಮುಖ್ಯಾಂಶಗಳು ಹೀಗಿವೆ

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ -3ರಲ್ಲಿ ನೀರಿನ ಬಳಕೆಗಾಗಿ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹಣಾ ಮಟ್ಟ 519 ಮೀಟರ್ ನಿಂದ 524 ಮೀಟರ್ ಗೆ ಎತ್ತರಿಸುವುದರಿಂದ ಹೆಚ್ಚುವರಿಯಾಗಿ 100 ಟಿ ಎಂ ಸಿ. ನೀರಿನ ಪ್ರಮಾಣ ಸಂಗ್ರಹ ಅಂದಾಜಿಸಲಾಗಿದೆ

ಯೋಜನೆ ಅನುಷ್ಠಾನಕ್ಕೆ ಒಟ್ಟು 1,33,867 ಎಕ್ರೆ ಜಮೀನು ಭೂಸ್ವಾಧೀನ ಅಗತ್ಯವಿದ್ದು, ಇದರಲ್ಲಿ 75,563 ಎಕ್ರೆ ಹಿನ್ನೀರಿನಲ್ಲಿ ಮುಳುಗಡೆಯಾಗುವ ಜಮೀನು ಸೇರಿದೆ. ಇದುವರೆಗೆ 29,566ಎಕ್ರೆ ಭೂಸ್ವಾಧೀನ ಐತೀರ್ಪು ಹೊರಡಿಸಲಾಗಿದೆ. 59,354 ಎಕ್ರೆ ಜಮೀನು ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕಿದೆ.

ಮುಳುಗಡೆ ಹೊಂದಲಿರುವ ಜಮೀನನ್ನು 2ಹಂತದಲ್ಲಿ ಭೂಸ್ವಾಧೀನಕ್ಕೆ ಒಳಪಡಿಸುವ ಬದಲು ಒಂದೇ ಹಂತದಲ್ಲಿ ಭೂಸ್ವಾಧೀನಪಡಿಸಲು ಈಗಾಗಲೇ ತೀರ್ಮಾನಿಸಲಾಗಿದೆ.  ಜಮೀನು ಕಳೆದುಕೊಳ್ಳುವ ರೈತರಿಗೆ ನ್ಯಾಯಯುತವಾದ ಪರಿಹಾರ ಒದಗಿಸಲು ಸರ್ಕಾರ ಬದ್ಧವಾಗಿದೆ. ಸಂತ್ರಸ್ತರಿಗೆ ಸೂಕ್ತ ಪುನರ್ವಸತಿಯನ್ನು ಸಹ ಕಲ್ಪಿಸಲಾಗುವುದು. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು .

ಯೋಜನೆ ಅನುಷ್ಠಾನಕ್ಕೆ ಆರಂಭದಲ್ಲಿ ರೂ. 51,148 ಕೋಟಿ ಯೋಜನಾ ಮೊತ್ತ ಅಂದಾಜಿಸಲಾಗಿತ್ತು. ಈಗ ಪರಿಷ್ಕೃತ ರೂ. 87,818ಕೋಟಿ ಅಂದಾಜಿಸಲಾಗಿದೆ. ಇದರಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ರೂ. 17,627 ಕೋಟಿ ಆರಂಭದಲ್ಲಿ ಅಂದಾಜಿಸಲಾಗಿತ್ತು. ಪ್ರಸ್ತುತ ಪರಿಷ್ಕೃತ ಮೊತ್ತ ರೂ. 40,557.09 ಕೋಟಿ ರೂಪಾಯಿ ಅಂದಾಜಿಸಲಾಗಿದೆ.

ಯೋಜನೆಗೆ ಸಂಬಂಧಿಸಿದಂತೆ 9 ಉಪ ಯೋಜನಾ ಸಿವಿಲ್ ಕಾಮಗಾರಿಗಳಿಗೆ ಪರಿಷ್ಕೃತ ಅಂದಾಜು ಮೊತ್ತ 25,122.53 ಕೋಟಿ ರೂಪಾಯಿ ಅಂದಾಜಿಸಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸುವುದು ನಮ್ಮ ಸರ್ಕಾರದ ವಾಗ್ದಾನವಾಗಿದೆ.

Related Posts

Leave a Reply

Your email address will not be published. Required fields are marked *